ಒಳ ಮೀಸಲಾತಿ ಒಡೆದ ಮನಸುಗಳಾಗದಿರಲಿ…

Most read

ಒಳ ಮೀಸಲಾತಿ ಜಾರಿಯಲ್ಲಿ ದಲಿತ ಸಮುದಾಯಗಳ ನಡುವೆ ಸಂಘರ್ಷಕ್ಕೆ ಬದಲು ಸೌಹಾರ್ದತೆ, ಸಹೋದರತೆ, ಸಹಕಾರ ಮತ್ತು ಸಮನ್ವಯತೆ ಇರಲಿ…..ಸದ್ಯ ಅಲೆಮಾರಿ ಸಮುದಾಯ ಹೊರತುಪಡಿಸಿ ಇತರರು ಇದನ್ನು ಸಂಪೂರ್ಣ ಒಪ್ಪಿಕೊಳ್ಳಲಿ – ವಿವೇಕಾನಂದ ಎಚ್‌ ಕೆ, ಪತ್ರಕರ್ತರು.

ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷಗಳ ನಂತರ ಕರ್ನಾಟಕದಲ್ಲಿ ಮೀಸಲಾತಿ ಮತ್ತೊಂದು ರೂಪದಲ್ಲಿ ಮಗ್ಗಲು ಬದಲಾಯಿಸಿದೆ……

ಎದೆಗೆ ಬಿದ್ದ ಅಕ್ಷರ ಪ್ರಜ್ಞೆಯಾಗಿ  ಜಾಗೃತಗೊಳ್ಳಲು ಸುಮಾರು 25 – 30 ವರ್ಷಗಳು ಉರುಳಿದವು. ಅಂದರೆ ಸ್ವಾತಂತ್ರ್ಯ ಬಂದು ಸುಮಾರು 25 – 30 ವರ್ಷಗಳ ನಂತರ ಅಂಬೇಡ್ಕರ್ ಚಿಂತನೆಗಳು ವ್ಯಾಪಕವಾಗಿ ಸಮಾಜದಲ್ಲಿ ಬಂಡಾಯ ಚಳುವಳಿಯಾಗಿ ರೂಪಗೊಂಡವು. ಎಪ್ಪತ್ತು ಎಂಬತ್ತರ ದಶಕದ ಆ ಸಂದರ್ಭದಲ್ಲಿ ಅದೇ ಜಾಗೃತ ಮನಸ್ಥಿತಿ ನಿಧಾನವಾಗಿ ಒಳ ಮೀಸಲಾತಿಯ ಅವಶ್ಯಕತೆ ಮತ್ತು ಅನಿವಾರ್ಯತೆ ಮೊಳಕೆಯೊಡೆಯಲು ಕಾರಣವಾಯಿತು. ಅದರಲ್ಲೂ ಈ ಬಂಡಾಯ ಚಳುವಳಿ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು.

ಆಂಧ್ರದ ಮಾದಿಗ ದಂಡೋರ ಹೋರಾಟ ಅತ್ಯಂತ ಪ್ರಭಾವಶಾಲಿಯಾಗಿ ತನ್ನ ಹಕ್ಕುಗಳಿಗಾಗಿ ಹೋರಾಡಿತು. ಆಗಲೇ ಕರ್ನಾಟಕದಲ್ಲೂ ನಿಧಾನವಾಗಿ ಚರ್ಚೆಗಳು ಪ್ರಾರಂಭವಾಗಿ ಅದು ವಿವಿಧ ಹಂತಗಳನ್ನು ದಾಟಿ ಇದೀಗ ನಿನ್ನೆ ವಿಧಾನಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒಳ ಮೀಸಲಾತಿಯ ಬದಲಾದ ರೂಪುರೇಷೆಗಳನ್ನು ಒಳಗೊಂಡ ಘೋಷಣೆಯೊಂದಿಗೆ ಒಂದು ಹಂತ ತಲುಪಿದೆ.

ಸಾಂದರ್ಭಿಕ ಚಿತ್ರ

ಭಾರತದಂತ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ, ಅತ್ಯಂತ ಅಸಮಾನತೆಯ ಜಾತಿ ಪದ್ಧತಿಯ ಆಚರಣೆ ರಕ್ತಗತವಾಗಿ ಇರುವಾಗ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ, ಸರಳವಲ್ಲ ಮತ್ತು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿನ ವ್ಯವಸ್ಥೆಯಲ್ಲಿ ಯಾವುದೇ ನೀತಿ ನಿಯಮಗಳು ಕೆಲವರಿಗೆ ಅನುಕೂಲಕರವಾದರೆ ಮತ್ತೆ ಕೆಲವರಿಗೆ ಅನಾನುಕೂಲವಾಗುತ್ತದೆ. ಜೊತೆಗೆ ಈ ಅನಾನುಕೂಲ ಆದವರು ಕಿಡಿ ಹೊತ್ತಿಸಿ ಬೆಂಕಿ ಹಚ್ಚಲು ಇಲ್ಲಿನ ರಾಜಕೀಯ ವ್ಯವಸ್ಥೆ ಸದಾ ಕಾಯುತ್ತಿರುತ್ತದೆ. ಇದು ತನ್ನ ಸ್ವಾರ್ಥಕ್ಕಾಗಿ ಪ್ರತಿಯೊಂದನ್ನೂ ವಿಭಜಿಸುವ ಮನಸ್ಥಿತಿ ಹೊಂದಿರುತ್ತದೆ.

ಈ ನಿಟ್ಟಿನಲ್ಲಿ ಈಗಿನ ಮೀಸಲಾತಿ ಪ್ರಮಾಣದ ಅಂಕಿ ಅಂಶಗಳನ್ನ ನೋಡಬೇಕಾಗುತ್ತದೆ. ಖಂಡಿತವಾಗಲೂ ಒಳ ಮೀಸಲಾತಿಯ ಅವಶ್ಯಕತೆ ಇದ್ದೇ ಇತ್ತು. ಅದನ್ನು ಬಹುತೇಕ ಎಲ್ಲರೂ ಒಪ್ಪುತ್ತಿದ್ದರು. ಮುಖ್ಯವಾಗಿ ಗೊಂದಲವಿದ್ದದ್ದು ಯಾವ ಜಾತಿಗಳನ್ನು ಒಳಮೀಸಲಾತಿಯ ವ್ಯಾಪ್ತಿಗೆ ಒಳಪಡಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಅದನ್ನು ನೀಡಬೇಕು ಎಂದು. ಏಕೆಂದರೆ ಪರಿಶಿಷ್ಟ ಜಾತಿಗಳಲ್ಲಿಯೇ ಇದ್ದ 108 ಉಪಜಾತಿಗಳಲ್ಲಿ ಅವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಸ್ಪ್ರಶ್ಯ, ಅಸ್ಪ್ರಶ್ಯ, ಮುಂತಾದ ಸ್ಥಿತಿಗಳನ್ನು ಪರಿಗಣಿಸಬೇಕಾಗಿತ್ತು. ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ನಾನಾ ಕಾರಣಗಳಿಗಾಗಿ ಇಂದಿನ ಕಾಲಘಟ್ಟದಲ್ಲಿ ಇದನ್ನು ನೂರಕ್ಕೆ ನೂರರಷ್ಟು ಖಚಿತವಾಗಿ ಲೆಕ್ಕ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ.

ಆದರೂ ಎಲ್ಲ ಒತ್ತಡಗಳ ನಡುವೆ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಅವರು ಒಂದಷ್ಟು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಹಿತಿಯನ್ನು ಹಂಚಿಕೊಂಡು ಕೆಲವು ಸಲಹೆಗಳನ್ನು ನೀಡಿದ್ದರು. ಅವರು ಶಿಫಾರಸು ಮಾಡಿದ್ದ ಸಲಹೆಗಳನ್ನು ಸಂಪುಟದಲ್ಲಿ ಚರ್ಚೆ ಮಾಡಿ ಮೂರು ವಿಭಾಗಗಳನ್ನಾಗಿ ಮಾಡಿ ಹಂಚಲಾಗಿದೆ. ಇದು ಸಂಪೂರ್ಣ ವಾಸ್ತವಕ್ಕೆ ಹತ್ತಿರದ ಅತ್ಯುತ್ತಮ ತೀರ್ಮಾನ ಎಂದು ಹೇಳಲಾಗದು. ಏಕೆಂದರೆ ಆಯಾಯ ಕಾಲಘಟ್ಟದಲ್ಲಿ ಏನೇನೋ ಬದಲಾವಣೆಗಳಾಗಬಹುದು

ನಾಗಮೋಹನ್‌ ದಾಸ್‌ ಅವರಿಂದ ವರದಿ ಹಸ್ತಾಂತರ

ಈಗಿನ 6/6/5..

ಸ್ವಲ್ಪ ಮಟ್ಟಿಗೆ ಎಡ ಸಮುದಾಯದ ತೀವ್ರವಾದಿಗಳಲ್ಲಿ ಸ್ವಲ್ಪ ಅಸಮಾಧಾನ ಇದ್ದರೆ ಉಳಿದವರು ಸಮಾಧಾನವಾಗಿದ್ದಾರೆ. ಅಲೆಮಾರಿ ಸಮುದಾಯಗಳಲ್ಲಿ ಒಂದಷ್ಟು ಬೇಸರವಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೇಗಿದ್ದರೂ ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚನೆ ಮಾಡುವುದರಿಂದ ಅದನ್ನು ಮತ್ತೆ ಪುನರ್ ವಿಮರ್ಶೆ ಮಾಡಲು ಅವಕಾಶವಿದೆ. ಅಲ್ಲಿ ಅದನ್ನು ಕೂಡ ಸರಿಪಡಿಸುವ ಕೆಲಸವಾಗಲಿ.

ಮುಖ್ಯವಾಗಿ ಈ ಒಳ ಮೀಸಲಾತಿ ಹೋರಾಟದ ಪರಿಣಾಮವಾಗಿ ದಲಿತ ಚಳುವಳಿ, ದಲಿತ ಸಂಘಟನೆ, ದಲಿತ ಶಕ್ತಿ ಒಡೆದು ಹೋಗದಿರುವಂತೆ ಕಾಯುವ ಜವಾಬ್ದಾರಿ ಹೋರಾಟಗಾರರಿಗೆ ಇರಬೇಕಾಗಿದೆ. ದಲಿತ ಪ್ರಜ್ಞೆ ಎಂಬುದು ಕೇವಲ ಈ ರೀತಿಯ ಮೀಸಲಾತಿ ವಿಷಯಕ್ಕೆ ಮಾತ್ರ ಸೀಮಿತವಾಗಬಾರದು. ಅದು ಸಂವಿಧಾನ ರಕ್ಷಣೆಯ ಎಲ್ಲ ಶೋಷಿತ ಸಮುದಾಯಗಳ ಆಶಾಕಿರಣವಾಗಿ ಮೂಡಿ ಬರುತ್ತಿರುವ ಸಂದರ್ಭದಲ್ಲಿ ಒಳ ಮೀಸಲಾತಿಯ ವಿಷಯವೇ ಪ್ರಧಾನವಾದರೆ ಮೇಲ್ವರ್ಗದ ಮೀಸಲಾತಿ ವಿರೋಧಿ ಮನಸ್ಥಿತಿಗೆ ಪರೋಕ್ಷ ನೈತಿಕ ಬೆಂಬಲ ನೀಡಿದಂತಾಗುತ್ತದೆ.

ಈಗಿನ ಖಾಸಗೀಕರಣದ ಕಾರ್ಪೊರೇಟ್ ಸಂಸ್ಕೃತಿಯ ಸಂದರ್ಭದಲ್ಲಿ ಪಕ್ಕಾ ಬಲಪಂಥೀಯ ಸರ್ಕಾರ ಬಂಡವಾಳಶಾಹಿಗಳ ಅಣತಿಯಂತೆ ಕೆಲಸ ಮಾಡುತ್ತಿರುವಾಗ ಮೀಸಲಾತಿಯ ವಾಸ್ತವದ ಪ್ರಯೋಜನ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ದಲಿತ ಸಂವೇದನೆ ಮುಖ್ಯವಾಗಬೇಕೆ ಹೊರತು ಮೀಸಲಾತಿ ಅದರ ಒಂದು ಭಾಗವಾಗಬೇಕು ಅಷ್ಟೇ.

ಇಲ್ಲಿ ಸಮಗ್ರ ಚಿಂತನೆ ಮತ್ತು ದೂರ ದೃಷ್ಟಿ ಮುಖ್ಯವಾಗಬೇಕು. ಬಾಬಾ ಸಾಹೇಬರು ಹೇಳಿರುವಂತೆ ಹೋರಾಟದ ರಥವನ್ನು ನಾವು ಸಾಧ್ಯವಾದರೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಯಾವ ಕಾರಣಕ್ಕೂ ಅದನ್ನು ಹಿಂದಕ್ಕೆ ಚಲಿಸಲು ಬಿಡಬಾರದು. ಆ ಜವಾಬ್ದಾರಿಯನ್ನು ಎಲ್ಲಾ ಶೋಷಿತ ಸಮುದಾಯಗಳು ಹೊರಬೇಕು.

ಸದ್ಯ ಅಲೆಮಾರಿ ಸಮುದಾಯ ಹೊರತುಪಡಿಸಿ ಇತರರು ಇದನ್ನು ಸಂಪೂರ್ಣ ಒಪ್ಪಿಕೊಳ್ಳಲಿ. ಅಲೆಮಾರಿ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗಲಿ ಎಂದು ಆಶಿಸುತ್ತಾ…..

(ಮನಸ್ಸುಗಳ ಅಂತರಂಗದ ಚಳವಳಿ‌)

ವಿವೇಕಾನಂದ ಎಚ್. ಕೆ.

ಬರಹಗಾರರು ಹಾಗೂ ಪತ್ರಕರ್ತರು

ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-1

More articles

Latest article