ಧರ್ಮಸ್ಥಳ ಪ್ರಕರಣ;ಚಿವುಟುವ, ತೂಗುವ ಕೆಲಸ ಮಾಡುತ್ತಿರುವವರು ಈ ಭಟ್ಟರು: ವಿನಯ್‌ ಕುಮಾರ್‌ ಸೊರಕೆ ಆರೋಪ

Most read

ವಿಜಯಪುರ:  ಧರ್ಮಸ್ಥಳ ಪ್ರಕರಣದಲ್ಲಿ  ಒಂದು ಕಡೆ ಚಿವುಟುತ್ತಾ ಮತ್ತೊಂದು ಕಡೆ ತೂಗುವ ಕೆಲಸವನ್ನು ಆರ್‌ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆರೋಪ ಮಾಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು ಧರ್ಮಸ್ಥಳದ ವಿರುದ್ಧ ಧ್ವನಿ ಎತ್ತಿರುವ ಮಹೇಶ ಶೆಟ್ಟಿ ತಿಮ್ಮರೋಡಿ ಅವರಿಗೆ ಇವರೇ ಪ್ರಚೋದನೆ ನೀಡುತ್ತಿದ್ದಾರೆ ಎಂದರು.

ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆದರೂ ಅಲ್ಲೆಲ್ಲಾ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಅವರ ಕೈವಾಡ ಇದ್ದೇ ಇರುತ್ತದೆ. ಆದರೆ  ಬಿಜೆಪಿ ಶಾಸಕರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಬಂದಾಗ ಕಲ್ಲಡ್ಕ ಪ್ರಭಾಕರ ಭಟ್ಟರು ನಾಪತ್ತೆಯಾಗಿದ್ದರು. ಏಕೆ ಹಾಜರಿರಲಿಲ್ಲ ಎಂದು ಅವರೇ ಹೇಳಬೇಕು ಎಂದರು.

ಧರ್ಮಸ್ಥಳ ಪ್ರಕರಣದ ವಿಷಯದಲ್ಲಿ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿಗಳಿಗೆ ಯಾವುದೇ ಹಿತಾಸಕ್ತಿ ಇಲ್ಲ. ನ್ಯಾಯಾಲಯದ ಆದೇಶದ ಅನ್ವಯ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಯಾಗಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೂ ಎಸ್‌ ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ತನಿಖೆ ನಂತರ ಸತ್ಯ ಹೊರಬರಲಿದೆ ಎಂದು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಯಾವುದೇ ಪ್ರಯೋಗಗಳು ರಾಜ್ಯದಲ್ಲಿ ಯಶಸ್ವಿಯಾಗುವುದಿಲ್ಲ. ಅವರು ರಾಜ್ಯದ ಕೋಮು ಸೌಹಾರ್ದ ಕಲಕಿ ಕೋಮು ಪ್ರಚೋಧನೆ ಮಾಡುವ ವಿಷಯದಲ್ಲಿ ಇನ್ನೊಬ್ಬ ಮುತಾಲಿಕ್ ಆಗಲು ಹೊರಟಿದ್ದಾರೆ ಎಂದು ಟೀಕಿಸಿದರು.

More articles

Latest article