ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದವರು, ಇಂದು ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ : ಸಿದ್ದರಾಮಯ್ಯ

Most read

ನಮ್ಮ ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಧೀಮಂತ ನಾಯಕರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಐತಿಹಾಸಿಕ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ʼಬಸವಾದಿ ಶರಣರ ಆಶಯ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣುತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ. ಈಗ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ – ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲʼ ಎಂದರು.

ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣುತೆ ನಮಗೆ, ನಿಮಗೆ ಮಾದರಿಯಾಗಲಿ. ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದರು, ಈಗ ನಮ್ಮದೇ ಗ್ಯಾರಂಟಿಗಳನ್ನು ಕಾಪಿ ಮಾಡಿ ಅದಕ್ಕೆ, “ಮೋದಿ ಗ್ಯಾರಂಟಿ” ಎಂದು ಹೆಸರಿಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರದಿಂದ ನಮ್ಮ ಪಾಲಿನ ನಯಾಪೈಸೆ ಪರಿಹಾರದ ಹಣ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಿದೆ. ನಮ್ಮ ಗ್ಯಾರಂಟಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಹಣ ಉಳಿತಾಯ ಆಗಿ ಬರಗಾಲದ ಸಂಕಷ್ಟದಿಂದ ಬಡ ಮತ್ತು ಮಧ್ಯಮ ವರ್ಗದವರನ್ನು ಪಾರು ಮಾಡಿದೆ. ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ ಎಂದರು.

ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇತಿಹಾಸಕಾರ ಅಬ್ದುಲ್ ರಜಾಕ್ ಚಿತ್ರಿಸಿದ್ದಾರೆ, ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು ಎಂದು ಹೇಳಿದರು.

ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ದೊಡ್ಡ ರಾಜ್ಯ ಆಗಿದೆ. ವರ್ಷಕ್ಕೆ 4 ಲಕ್ಷ ಕೋಟಿ ತೆರಿಗೆಯನ್ನು ಕನ್ನಡಿಗರು ಕಟ್ಟುತ್ತಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 50 ಸಾವಿರ ಕೋಟಿ. 15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

More articles

Latest article