ಬೆಳ್ತಂಗಡಿ: ನಿನ್ನೆ ಟಿವಿ ಚಾನೆಲ್ ಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿದ್ದ ಸಾಕ್ಷಿ ದೂರುದಾರ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ ಐಟಿ) ಮುಂದೆ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು ಆಧಾರರಹಿತ ಮತ್ತು ಸುಳ್ಳು ಎಂದು ಎಸ್ ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಕ್ಷಿ ದೂರುದಾರ ಅಂತಹ ಯಾವುದೇ ರೀತಿಯ ತಪ್ಪೊಪ್ಪಿಗೆ ನೀಡಿಲ್ಲ ಎಂದೂ ಹೇಳಿದ್ದಾರೆ. ಕೆಲವು ಯೂಟ್ಯೂಬರ್ ಗಳಿಗೆ ನೋಟಿಸ್ ನೀಡಿದೆ ಎಂಬ ವರದಿಗಳನ್ನೂ ಎಸ್ ಐಟಿ ನಿರಾಕರಿಸಿದೆ.
ಸೋಮವಾರ ದಿನವಿಡೀ ಕನ್ನಡದ ಕೆಲವು ಚಾನೆಲ್ ಗಳು ಸಾಕ್ಷಿ ದೂರುದಾರ ಎಸ್ ಐಟಿ ಅಧಿಕಾರಿಗಳ ಮುಂದೆ ತಾನು ತಪ್ಪು ಹೇಳಿಕೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದವು.
2014ರಲ್ಲಿ ಧರ್ಮಸ್ಥಳವನ್ನು ತೊರೆದಾಗ ನಾನು ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ನನ್ನನ್ನು ಪ್ರಶ್ನಿಸಿತ್ತು.
ಕಾನೂನು ಪ್ರಕಾರವೇ ನಾನು ಶವಗಳನ್ನು ಹೂತಿರುವುದಾಗಿ ತಿಳಿಸಿದ್ದೆ. ಆಗ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ನನ್ನ ಮೇಲೆ ಒತ್ತಡ ಹಾಕಿತ್ತು ಎಂದು ಸಾಕ್ಷಿ ದೂರುದಾರ ಎಸ್ ಐಟಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಪ್ರಸಾರ ಮಾಡುತ್ತಿದ್ದವು. ಈ ವಿಷಯ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಆಗ ಗೃಹ ಸಚಿವ ಪರಮೇಶ್ವರ್ ಅವರು ಅಂತಹ ಯಾವುದೇ ಹೇಳಿಕೆಯನ್ನು ಆತ ನೀಡಿಲ್ಲ ಎಂದು ತಿಳಿಸಿದ್ದರು.
ದೂರುದಾರ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ನಾವು ಅವರನ್ನು ಕೇವಲ ದೂರುದಾರ ಮಾತ್ರ ಎಂದು ಪರಿಗಣಿಸಿದ್ದೇವೆ. ಸೆ. 164 ರ ಅಡಿಯಲ್ಲಿ ಅವರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ದೂರುದಾರ ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮೊಲ ಕೆಲಸವಾಗಿದೆ. ದೂರುದಾರರ ಜತೆ ಕೆಲಸ ಮಾಡಿದ ಇತರ ಕಾರ್ಮಿಕರು, ಆಗಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು 1994 ರಿಂದ 2014 ರ ನಡುವೆ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಈ ಅವಧಿಯಲ್ಲಿ ಕೆಲಸ ಮಾಡಿದ ಕೆಲವು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕಾಗಿರುವುದರಿಂದ ಕೆಲವರಿಗೆ ಸಮನ್ಸ್ ನೀಡಲಾಗಿದೆ ಎಂದು ಎಸ್ ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.