ಪಟನಾ: ಬಿಹಾರ ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಮತದಾರರ ಪಟ್ಟಿ ದೋಷರಹಿತವಾಗಿದೆ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ನಲ್ಲಿ ಮೊದಲು ಪ್ರಮಾಣಪತ್ರ ಸಲ್ಲಿಸಿದರೆ ಮತದಾರರ ಪಟ್ಟಿಯಲ್ಲಿ ಲೋಪಗಳಿವೆ ಎಂದು ನಾವೂ ಪ್ರಮಾಣಪತ್ರ ಸಲ್ಲಿಸುತ್ತೇವೆಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ತಿರುಗೇಟು ನೀಡಿದೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಬಿಜೆಪಿ ವಕ್ತಾರರಂತೆ ಮಾತನಾಡಿದ್ದಾರೆ ಎಂದೂ ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯ ಅಕ್ರಮಗಳ ಕುರಿತ ತಮ್ಮ ಆರೋಪಗಳಿಗೆ ಏಳು ದಿನಗಳ ಒಳಗಾಗಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅವರ ಆರೋಪವನ್ನು ಆಧಾರರಹಿತ ಎಂದು ಪರಿಗಣಿಸಲಾಗುವುದು ಎಂದು ಚುನಾವಣಾ ಆಯೋಗ ಭಾನುವಾರ ಹೇಳಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ಮತದಾರರ ಅಧಿಕಾರ ಯಾತ್ರೆ’ ಸಂದರ್ಭದಲ್ಲಿ ಪಕ್ಷದ ಮುಖಂಡ ಕನ್ಹಯ್ಯಾ ಕುಮಾರ್ ಮಾತನಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಆಡಳಿತ ಪಕ್ಷದ ವಕ್ತಾರರಂತೆ ಮಾತನಾಡುತ್ತಿದೆ ಎಂದು ಆಪಾದಿಸಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ದೋಷಗಳಿಲ್ಲ ಎನ್ನುವುದಾದರೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು ಈ ಮೂಲಕ ಮತದಾರರ ಪಟ್ಟಿಯಲ್ಲಿ ಲೋಪ ಇರುವುದನ್ನು ಆಯೋಗ ಒಪ್ಪಿಕೊಂಡಿದೆ. ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಕುರಿತು ಎತ್ತಿ ತೋರಿಸಿದಾಗ ಚುನಾವಣಾ ಆಯೋಗವು ಪ್ರಮಾಣಪತ್ರ ಸಲ್ಲಿಸುವಂತೆ ಕೇಳಿದೆ. ಈ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಬಿಜೆಪಿ ವಕ್ತಾರರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಎತ್ತಿರುವ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಇದು ಬಿಜೆಪಿ ಸರ್ಕಾರ ಅವರ ಕೈಗಳನ್ನು ಕಟ್ಟಿ ಹಾಕಿರುವುದನ್ನು ತೋರಿಸುತ್ತದೆ ಎಂದರು.
ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರ ಮಾತನಾಡಿ, ಕಾಂಗ್ರೆಸ್ ಮುಖಡ ರಾಹುಲ್ ಗಾಂಧಿ ಈ ಯಾತ್ರೆ ಆರಂಭಿಸಿದ ನಂತರ ಜ್ಞಾನೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸುವ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಇದ್ದಾರೆ ಎನ್ನುವುದು ಅವರು ಪತ್ರಿಕಾಗೋಷ್ಠಿ ನಡೆಸಿದ ನಂತರ ತಿಳಿದು ಬಂದಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಆರೋಪಗಳಿಗೆ ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ಸಂಬಿತ್ ಪಾತ್ರಾ ಅವರು ಮಾತ್ರ ಪ್ರತಿಕ್ರಿಯಿಸುತ್ತಿದ್ದರು. ಕೊನೆಗೂ ಸಿಇಸಿ ಅವರು ಪ್ರತಿಕ್ರಿಯಿಸಬೇಕಾಗಿ ಬಂದಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.