ನಕಲಿ ವಿಡಿಯೋ ಆಧರಿಸಿ ತಿಮರೋಡಿ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ; ಕೊಲೆ ಮಾಡಿದ್ದು ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದು ಈ ಬಿಜೆಪಿ ಶಾಸಕ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ಸೌಜನ್ಯ ಪರ ಹೋರಾಟ ನಡೆಸುತ್ತಿರುವ  ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ನೀಡಿದ್ದಾರೆ ಎಂಬ ತಿರುಚಿದ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್  ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ಪ್ರತಿಪಕ್ಷದ ನಾಯಕ ಆರ್.‌ ಆಶೋಕ್‌ ಅವರು ವಿಷಯ ಪ್ರಸ್ತಾಪಿಸಿ ವ್ಯಕ್ತಿಯೊಬ್ಬರು 2023 ರ ಡಿಸೆಂಬರ್‌ ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಆ ವ್ಯಕ್ತಿ ಮುಖ್ಯಮಂತ್ರಿ ಕುರ್ಚಿಗೆ ಅವಮಾನಿಸಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ತಿಮರೋಡಿ ಹೆಸರು ಹೇಳದೆ ಆಗ್ರಹಪಡಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚಿಸಿದ ಸರ್ಕಾರ ಸಿದ್ಧರಾಮಯ್ಯ ವಿರುದ್ಧದ ಆರೋಪಕ್ಕೂ ಎಸ್‌ಐಟಿ ರಚಿಸುತ್ತದೆಯೇ ಎಂದು ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೂ ಸಹ ಮಾತನಾಡಿ ಈ ವಿಷಯ ತಮ್ಮ ಗಮನಕ್ಕೂ ಬಂದಿದೆ ಎಂದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಸದನಕ್ಕೆ ತಿಳಿಸಿದರು. ತಿಮರೋಡಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಈ ಹೇಳಿಕೆ ಸಂಬಂಧ ನಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

ಆದರೆ ಈ ಚರ್ಚೆ ಮತ್ತು ಆಡಳಿತ ಮತ್ತು ಪ್ರತಿಪಕ್ಷಗಳ ವೀರಾವೇಶದ ಮಾತುಗಳು ತಿರುಚಿದ ವಿಡಿಯೋ ಸುತ್ತ ಗಿರಕಿ ಹೊಡೆಯುತ್ತಿವೆಯೇ ಹೊರತು ಅಸಲಿ ವಿಡಿಯೋ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಸರಕಾರ ಮತ್ತು ಪ್ರತಿಪಕ್ಷ ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚುತ್ತಿವೆ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅಸಲಿ ವಿಡಿಯೋದಲ್ಲಿ ಏನಿದೆ?

ವಿಧಾನಸಭೆಯಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಮಾತ್ರ ಚರ್ಚೆ ನಡೆಯುತ್ತಿದೆ. ವಾಸ್ತವ ಏನೆಂದರೆ 2023ರಲ್ಲಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನು ತಿಮರೋಡಿ ಪ್ರಸ್ತಾಪಿಸಿ ಪೂಂಜಾ ಅವರನ್ನು ಬಂಧಿಸುವಂತೆ ಆಗ್ರಹಪಡಿಸಿದ್ದರು. ಈ ಆರೋಪವನ್ನು ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳಬೇಕು ಇಲ್ಲವೇ ಕೊಲೆ ಮಾಡಿಲ್ಲ ಎಂದಾದರೆ ಸುಳ್ಳು ಹೇಳಿಕೆ ನೀಡಿದ ಹರೀಶ್ ಪೂಂಜಾ ಅವರನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದರು. ಕತ್ತರಿಸಿದ ವಿಡಿಯೋದಲ್ಲಿ ಹರೀಶ್‌ ಪೂಂಜಾ ಹೇಳಿದ್ದಾರೆ ಎಂಬ ಮಾತುಗಳನ್ನು ಕತ್ತರಿಸಿ ತಿಮರೋಡಿ ಅವರೇ ಈ ಹೇಳಿಕೆ ನೀಡಿದ್ದಾರೆ ಎನ್ನುವಂತೆ ಬಿಂಬಿಸಲಾಗಿದೆ.

ಸಿದ್ದರಾಮಯ್ಯ ಅವರು 24 ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿದ್ದರೆ ನನ್ನ ತಲೆದಂಡ ಆಗಲಿ. ಇಲ್ಲ ಅಂದ್ರೆ ಅದನ್ನು ಯಾರು ಹೇಳಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ. ನಮ್ಮ ಶಾಸಕರು ಹೇಳಿದ್ದಕ್ಕೆ ನನಗೆ ನಂಬಿಕೆ ಇತ್ತು. ಅದನ್ನು ನಾನು ಪುನರುಚ್ಚರಿಸಿದ್ದೇನೆ ಅಷ್ಟೇ.. ಅದು ನನ್ನ ಹೇಳಿಕೆ ಅಲ್ಲ ಎಂದು ತಿಮರೋಡಿ ಅವರು ಸ್ಪಷ್ಟನೆ ನೀಡಿದ್ದಾರೆ.

More articles

Latest article