ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೂ ದಿವಾಳಿತನಕ್ಕೂ ಇರುವ ಒಂದೇ ಒಂದು ದೂರವೆಂದರೆ ವೈದ್ಯಕೀಯ ಆಪತ್ತು ಎಂಬ ಮಾತುಗಳು ಮಹಾನಗರಗಳಲ್ಲಿವೆ. ಏಕೆಂದರೆ ದುಬಾರಿ ಜೀವನಶೈಲಿಯನ್ನು ತನ್ನ ಭಾಗವಾಗಿಸಿಕೊಂಡ ಮಹಾನಗರಗಳಲ್ಲಿ ಎಲ್ಲವೂ ದುಬಾರಿಯೇ. ಆದರೆ ವೈದ್ಯಕೀಯ ಖರ್ಚುಗಳು ಮಾತ್ರ ಎಲ್ಲಕ್ಕಿಂತಲೂ ದುಬಾರಿ – ಪ್ರಸಾದ್ ನಾಯ್ಕ್, ದೆಹಲಿ.
ಮಹಾನಗರಗಳು ನಮಗೇಕೆ ಮುಖ್ಯ?
ಸರಳಾತಿಸರಳ ಭಾಷೆಯಲ್ಲಿ ಜನಸಾಮಾನ್ಯನೊಬ್ಬನೊಂದಿಗೆ ಈ ಪ್ರಶ್ನೆಯನ್ನು ಕೇಳಿ ನೋಡಿ. ಆತ ಸಿಂಪಲ್ಲಾಗಿ ದುಡ್ಡು ಅನ್ನುತ್ತಾನೆ. ಮಹಾನಗರಗಳೆಂದರೆ ಥಟ್ಟನೆ ನಮ್ಮ ಮನದಲ್ಲಿ ಮೂಡುವ ಇಮೇಜೇ ಅದು. ನಗರವೆಂದರೆ ಅದ್ದೂರಿತನ, ಸಿರಿವಂತಿಕೆ, ವೈಭವ, ವಿಲಾಸ. ಮಹಾನಗರಗಳು ಆಯಾ ರಾಜ್ಯಗಳಿಗೆ ತರುವ ಆದಾಯಗಳನ್ನು ನೋಡಿದರೆ ಇದು ಸತ್ಯವೂ ಹೌದು. ಈ ಕಾರಣದಿಂದಾಗಿಯೇ ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಮಹಾನಗರಗಳದ್ದೇ ಒಂದು ತೂಕ. ಎಲ್ಲದರಲ್ಲೂ ಅವುಗಳಿಗೆ ಪ್ರಥಮ ದರ್ಜೆಯ ಸ್ಥಾನ.
ಜನಸಾಮಾನ್ಯರು ಹಳ್ಳಿಗಳಿಂದ ಮಹಾನಗರಗಳಿಗೆ ವಲಸೆ ಹೋಗುವುದು ಕೂಡ ಇಂತಹ ಕನಸುಗಳನ್ನು ಕಟ್ಟುಕೊಂಡೇ ಅಲ್ಲವೇ! ಎಲ್ಲರಂತೆ ತಾನೂ ಮಹಾನಗರಗಳಿಗೆ ಹೋಗಬೇಕು. ಇಂಥಾ ಮೆಟ್ರೋಸಿಟಿಯಲ್ಲಿದ್ದೇನೆ ಎಂದು ಓರಗೆಯವರ ಬಳಿ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಎಲ್ಲರೂ ನಿಬ್ಬೆರಗಾಗಿ ನೋಡುವ ಈ ಮಹಾನಗರಗಳ ಇಮೇಜು ತಮ್ಮ ಬದುಕಿನೊಂದಿಗೂ ಸೇರಿಕೊಳ್ಳಬೇಕು. ಹೀಗೆ ಏನೇನೋ ಕನಸುಗಳು. ಒಮ್ಮೆ ಊರು ಬಿಟ್ಟು ಅಲ್ಲಿಗೆ ಹೋದರಾಯಿತು, ಲೈಫು ಸೆಟ್ಲು ಎಂಬಂತಿನ ಭಾವ. ಬಹುತೇಕರಿಗೆ ಮಹಾನಗರಗಳೆಂದರೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳಲು ಸುಲಭವಾಗಿ ಕೈಗೆಟಕುವ ಮಹಾದ್ವಾರಗಳು. ಪ್ರಭುತ್ವದ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿ!
ಭಾರತೀಯರು ಕಾಸು ಮಾಡಿಕೊಳ್ಳುವ ವಿಧಾನಗಳ ಬಗ್ಗೆ ನನಗೆ ಎಂದೆಂದಿಗೂ ಮುಗಿಯದ ಕುತೂಹಲ. ಯಾಕೆಂದರೆ ಅವರು ಯಾವುದರಲ್ಲೂ ಹೊಸ ಅವಕಾಶಗಳನ್ನು ಹುಡುಕಿ ತೆಗೆಯಬಲ್ಲ ಚಾಣಾಕ್ಷರು. ಇದು ತಲೆಗೊಂದು ಐಡಿಯಾ ಸಿಗುವ ನಾಡು. ಅಂದಹಾಗೆ ನೂರು ಕೋಟಿ ತಲೆಗಳಿದ್ದಾಗ ಇದರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕೇ? ಉತ್ತರಭಾರತದಲ್ಲಿ ಇವಕ್ಕೆಲ್ಲ “ಜುಗಾಡ್” ಎಂಬ ತಮಾಷೆಯ ಹೆಸರೂ ಇದೆ.
ಆದರೆ ಈ ಜುಗಾಡಿನಲ್ಲೊಂದು ಋಣಾತ್ಮಕ ಅಂಶವೂ ಇದೆ. ಅದೇನೆಂದರೆ ಇವುಗಳೆಲ್ಲ ಸಮಸ್ಯೆಯೊಂದರ ತಾತ್ಕಾಲಿಕ ಪರಿಹಾರಕ್ಕಷ್ಟೇ ಗಮನಹರಿಸಬಲ್ಲ ಶಾರ್ಟ್-ಕಟ್ ಕಣ್ಕಟ್ಟುಗಳು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸಂತೆ. ತಲೆಯ ಮೇಲೆ ತೂಗುಕತ್ತಿಯಂತೆ ಹೆದರಿಸುವ ದೊಣ್ಣೆಯಿಂದ ಒಂದರೆಕ್ಷಣ ತಪ್ಪಿಸಿಕೊಳ್ಳಲು ಜುಗಾಡ್ ಸಾಕು. ಆದರೆ ದೊಣ್ಣೆಯ ತಲೆನೋವೇ ಬೇಡವೆಂದರೆ ಅದಕ್ಕೆ ಬೇಕಾಗುವ ವ್ಯವಸ್ಥೆಯೇ ಬೇರೆ. ನಾವುಗಳು ನಮ್ಮ ಬೆನ್ನನ್ನು ಅದೆಷ್ಟು ತಟ್ಟಿಕೊಂಡರೂ ಇಂಥದೊಂದು ಸದೃಢ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ನಮಗಿರುವ ಶ್ರದ್ಧೆ, ಆಸಕ್ತಿ, ಇಚ್ಛಾಶಕ್ತಿ, ಪರಿಶ್ರಮಗಳು ಅಷ್ಟಕ್ಕಷ್ಟೇ. ಹೀಗಾಗಿ ಈ ದೇಶದಲ್ಲಿ ಇಷ್ಟು ದೊಡ್ಡ ಜನಸಂಖ್ಯೆಯಿದ್ದರೂ ಅದ್ಭುತ ಎಂಬಂತಹ ಉದ್ಯಮ-ವ್ಯವಸ್ಥೆಗಳನ್ನು ಕಟ್ಟಿ ತೋರಿಸಿರುವ ಭಾರತೀಯರ ಸಂಖ್ಯೆಯಿರುವುದು ಬೆರಳೆಣಿಕೆಯಷ್ಟು ಮಾತ್ರ. ಇದು ಯಾವ ಕ್ಷೇತ್ರಕ್ಕಾದರೂ ಅನ್ವಯವಾಗಬಲ್ಲ ಒಂದು ಬಹುಮುಖ್ಯ ಅಂಶ.
ಪರಿಸ್ಥಿತಿಗಳು ಹೀಗಿದ್ದರೂ ಸಂಪತ್ತನ್ನು ಬೆನ್ನಟ್ಟುವವರು ಒಂದೆಡೆ ನಿಲ್ಲುವುದಿಲ್ಲ. ಇತ್ತೀಚೆಗಷ್ಟೇ ಸರಕಾರಿ ಗುಮಾಸ್ತನೊಬ್ಬನ ಮನೆಯಲ್ಲಿ ಅಂದಾಜು ನೂರು ಕೋಟಿ ಮೌಲ್ಯದ ಆಸ್ತಿ ಜಪ್ತಿಯಾಗಿದ್ದು ವರದಿಯಾಗಿತ್ತು. ಈ ಬಗ್ಗೆ ಚಂದದ ಒಂದು ಕತೆಯೂ ಇದೆ. ಒಂದಾನೊಂದು ಕಾಲದಲ್ಲಿ ಇಂಥವನೊಬ್ಬ ಇದ್ದನಂತೆ. ಮಹಾಬುದ್ಧಿವಂತ. ಲಂಚಕೋರ. ಈತನ ಭ್ರಷ್ಟಾಚಾರಗಳು ಅದೆಷ್ಟು ಕುಖ್ಯಾತವಾಗಿತ್ತೆಂದರೆ ಸ್ವತಃ ಆ ಊರಿನ ರಾಜನೇ ಇವನಿಂದ ಚಿಂತೆಗೀಡಾಗಿದ್ದನಂತೆ. “ಮಾನ್ಯ ಮಹಾರಾಜರೇ, ದಯವಿಟ್ಟು ಅವನಿಗೊಂದು ಹೊಸ ಜವಾಬ್ದಾರಿಯನ್ನಿತ್ತು ನೇಮಿಸಿ. ಎಲ್ಲೂ ಒಂದು ಪೈಸೆ ಲಂಚ ಹುಟ್ಟಬಾರದು. ಅಂತಹ ಜಾಗವೊಂದಕ್ಕೆ ಕಳಿಸಿಕೊಡಿ”, ಎಂದು ಆತನ ಬಗ್ಗೆ ರಾಜನಿಗೆ ಹೇಳಿದರಂತೆ ಮಹಾಮಂತ್ರಿ. ಮಂತ್ರಿಯ ಸಲಹೆಯು ರಾಜನಿಗೆ ಸರಿ ಅನ್ನಿಸಿತ್ತು. ಅದೆಷ್ಟು ವಿಚಿತ್ರವಾದ ಕೆಲಸವಾದರೂ ಚಿಂತೆಯಿಲ್ಲ, ಈತನನ್ನು ಸರಿದಾರಿಗೆ ತರಲೇಬೇಕು ಎಂದು ರಾಜನೂ ಯೋಚಿಸಿದ್ದ. ಇದಕ್ಕೆ ತಕ್ಕಂತೆ ಆಸ್ಥಾನದಲ್ಲಿ ಮುಂದಿನ ನಡೆಗಳು ಸಿದ್ಧವಾಗತೊಡಗಿದವು.
ಕೊನೆಗೂ ಯೋಜನೆಯೊಂದು ಸಿದ್ಧವಾಯಿತು. “ನೀನು ಇಂದಿನಿಂದಲೇ ಸಮುದ್ರತೀರಕ್ಕೆ ಹೋಗಿ, ಅಲ್ಲೊಂದು ಕಡೆ ಕೂತು ಸಮುದ್ರದ ಅಲೆಗಳನ್ನು ಎಣಿಸಬೇಕು. ಆಗಾಗ ಬಂದು ನನಗೆ ವರದಿಯನ್ನೂ ಕೊಡುತ್ತಿರಬೇಕು”, ಎಂದು ರಾಜ ಆದೇಶವನ್ನು ಹೊರಡಿಸಿದ. ಖುದ್ದು ಮಹಾರಾಜರಿಂದ ಈ ಆದೇಶವನ್ನು ಕೇಳಿದ ಆಸಾಮಿಗೆ ತಲೆಬಿಸಿಯಾಯಿತು. ಇದೆಂಥಾ ಕೆಲಸವಪ್ಪಾ ಎಂದು ಆತ ತಲೆಕೆಡಿಸಿಕೊಂಡ. ಮಹಾರಾಜರ ಆದೇಶದಂತೆ ಕೂಡಲೇ ಆತನನ್ನು ನಗರದ ಸಮುದ್ರತೀರಕ್ಕೆ ಕರೆದೊಯ್ಯಲಾಯಿತು. ಅಂತೂ ಅವನನ್ನಲ್ಲಿ ಬಿಟ್ಟು ಬಂದು ಪೀಡೆ ತೊಲಗಿತೆಂಬಂತೆ ಅಧಿಕಾರಿಗಳು ಕೈ ತೊಳೆದುಕೊಂಡರು.
ಆತನೂ ಸಮುದ್ರತೀರಕ್ಕೆ ಬಂದು ಸುಮ್ಮನೆ ನಿಂತ. ಎರಡು ಕಾರಣಗಳಿಂದಾಗಿ ಅವನಿಗೆ ತಲೆಕೆಟ್ಟುಹೋಗಿತ್ತು. ಒಂದು: ರಾಜ ನೀಡಿದ್ದ ಈ ಕೆಲಸಕ್ಕೆ ತಲೆಬುಡವೇ ಇರಲಿಲ್ಲ. ಎರಡು: ಈ ಕೆಲಸದಲ್ಲಿ ಕಾಸು ಹುಟ್ಟುವ ಸಾಧ್ಯತೆಗಳೇ ಇರಲಿಲ್ಲ. ತಾನು ಹೋದಲ್ಲೆಲ್ಲ ಅಕ್ರಮ ಗಳಿಕೆಯನ್ನೇ ನಿತ್ಯದ ದಿನಚರಿಯನ್ನಾಗಿಸಿಕೊಂಡಿದ್ದ ಅವನಿಗೀಗ ನಿರಾಶೆಯಾಗಿತ್ತು. ಈ ಬಗ್ಗೆ ಏನಾದರೂ ಮಾಡಬೇಕಲ್ಲ ಎಂದು ದಿನವಿಡೀ ಯೋಚಿಸಿದ. ಕೊನೆಗೂ ಒಂದು ಉಪಾಯ ಹೊಳೆಯಿತು.
ಮರುದಿನದಿಂದಲೇ ಸಾವಧಾನವಾಗಿ ಕೂತು ಅಲ್ಲಿ ಕಾಣುವ ಮೀನುಗಾರರ ದೋಣಿಗಳ, ವರ್ತಕರ ಹಡಗುಗಳ ವಿವರಗಳನ್ನು ಒಂದೆಡೆ ಪಟ್ಟಿ ಮಾಡಿಕೊಂಡ. ಕೆಲವು ಹಡಗುಗಳು ನಿತ್ಯವೂ ಆ ಭಾಗದಲ್ಲಿ ಸಂಚರಿಸುತ್ತಿದ್ದರೆ, ಇನ್ನು ಕೆಲವು ಅಪರೂಪಕ್ಕೊಮ್ಮೆ ಮಾತ್ರ ಹೋಗಿ ಬರುತ್ತಿದ್ದವು. ಯಾವಾಗಾದರೊಮ್ಮೆ ಪ್ರವಾಸಿಗಳನ್ನು ಹೊತ್ತಿದ್ದ ಹಡಗುಗಳು ಕೂಡ ಆ ಭಾಗದಲ್ಲಿ ಬಂದುಹೋಗುವುದು ಅವನ ಗಮನಕ್ಕೆ ಬಂದಿತ್ತು. ಅಂತೂ ಒಂದು ವಾರ ವ್ಯಯಿಸಿ, ಇವೆಲ್ಲದರ ಬಗ್ಗೆ ಒಂದೆಡೆ ಬರೆದು, ಎಲ್ಲಾ ವಿವರಗಳನ್ನು ಆತ ಶಿಸ್ತಾಗಿ ಕಲೆಹಾಕಿದ.
ಹೀಗೆ ವಿವರಗಳನ್ನೆಲ್ಲ ಕಲೆಹಾಕಿದ ನಂತರ ಹಡಗುಗಳ ಮೇಲ್ವಿಚಾರಣೆಯನ್ನು ಹೊತ್ತಿದ್ದ ಪ್ರತಿಯೊಬ್ಬರ ಬಳಿಯೂ ತೆರಳಿ ಅವನೀಗ ಹೀಗೆ ಹೇಳಲಾರಂಭಿಸಿದ: “ಈ ಸಮುದ್ರದಲ್ಲಿ ಏಳುವ ಅಲೆಗಳನ್ನು ಎಣಿಸಲೆಂದು ಮಹಾರಾಜರು ನನ್ನನ್ನು ನೇಮಿಸಿದ್ದಾರೆ. ಆದರೆ ನಿಮ್ಮ ದೋಣಿ/ಹಡಗುಗಳ ಚಲನೆಯಿಂದಾಗಿ ಅಲೆಗಳು ಚದುರಿಹೋಗುತ್ತವೆ. ಅಂದರೆ ಮಹಾರಾಜರಿಗೆ ನಾನು ತಪ್ಪು ಲೆಕ್ಕವನ್ನು ಒಪ್ಪಿಸಿದಂತಾಗುತ್ತದೆ. ಮಹಾರಾಜರಿಗೆ ಈ ಬಗ್ಗೆ ತಿಳಿದರೆ ನಿಮ್ಮೆಲ್ಲರಿಗೆ ದೊಡ್ಡ ಮಟ್ಟಿನ ಶಿಕ್ಷೆಯಾಗಬಹುದು ಅಥವಾ ದೊಡ್ಡ ಮೊತ್ತದ ದಂಡವನ್ನು ಕಟ್ಟಬೇಕಾದ ಪರಿಸ್ಥಿತಿ ಒದಗಿ ಬರಬಹುದು. ಇದಕ್ಕಿರುವುದು ಒಂದೇ ಪರಿಹಾರ. ನೀವು ಸಮುದ್ರಮಾರ್ಗವಾಗಿ ಈ ಕಡೆ ಬಂದಾಗಲೆಲ್ಲ ಇಂತಿಷ್ಟು ಮೊತ್ತವನ್ನು ನನಗೆ ಕಪ್ಪದ ರೂಪದಲ್ಲಿ ನೀಡಿ. ಉಳಿದದ್ದನ್ನೆಲ್ಲ ನಾನು ನೋಡಿಕೊಳ್ಳುತ್ತೇನೆ. ನಿಮ್ಮೆಲ್ಲರ ಸುರಕ್ಷತೆಯ ಜವಾಬ್ದಾರಿ ನನ್ನದು”, ಅಂತೆಲ್ಲ ಬಹಳ ಆತ್ಮವಿಶ್ವಾಸದಿಂದ ಹೇಳಿದ. ಆ ಮಾರ್ಗವಾಗಿ ಬರುತ್ತಿದ್ದ ಎಲ್ಲರಿಗೂ ಮಹಾರಾಜರ ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕಿತ್ತು. ಹೀಗಾಗಿ ಆಳುವವರ ಕೋಪಕ್ಕೆ ಬಲಿಯಾಗುವುದಕ್ಕಿಂತ ಈತನಿಗೆ ಬಿಡಿಗಾಸು ಕೊಟ್ಟರೂ ಅಡ್ಡಿಯಿಲ್ಲ ಎಂಬ ನಿರ್ಧಾರಕ್ಕೆ ಬಹುತೇಕರು ಬಂದಿದ್ದರು. ಒಟ್ಟಿನಲ್ಲಿ ನಮ್ಮ ಕಥಾನಾಯಕನ ಜೇಬು ಇಲ್ಲೂ ಹಿಗ್ಗಲಾರಂಭಿಸಿದ್ದು ಹೀಗೆ.
ಕಾಸು ಮಾಡುವ ಕರಾಮತ್ತಿರುವವರು ಹೀಗೇನೇ. ಯಾವ ನರಕಕ್ಕೆ ಎಸೆದರೂ ಅಲ್ಲಿ ಕಾಸು ಮಾಡಿ ಬರುತ್ತಾರೆ. ಲಾಟರಿಯ ಪಿತಾಮಹನೆಂದು ಹೇಳಲಾಗುವ ಗ್ಯಕೋಮೋ ಕ್ಯಾಸನೋವಾ ಕೂಡ ಹೀಗಿದ್ದನಂತೆ. 18ನೇ ಶತಮಾನದಲ್ಲಿ ಬದುಕಿದ್ದ ಈತನನ್ನು ಮಹಾಸ್ತ್ರೀಲೋಲ ಎಂದೇ ಸಾಮಾನ್ಯವಾಗಿ ನೆನಪಿಸಿಕೊಳ್ಳುವುದು ಹೆಚ್ಚು. ಆದರೆ ಈತ ಸಾಹಸಿ, ಜೂಜುಕೋರ, ಬರಹಗಾರ… ಹೀಗೆ ಏನೇನೋ ಆಗಿದ್ದ. ಅಪಾರ ಲೋಕಜ್ಞಾನವಿದ್ದ ಕ್ಯಾಸನೋವಾನಿಗೆ ಗಳಿಸುವುದು ಹೇಗೆ ಎಂಬುದು ಗೊತ್ತಿತ್ತು. ಜೊತೆಗೇ ಗಳಿಸಿದ್ದೆಲ್ಲವನ್ನು ಜೂಜು-ಮೋಜುಗಳಲ್ಲಿ ಕಳೆದುಕೊಳ್ಳುವುದು ಕೂಡ ಅವನಿಗೆ ಸಾಮಾನ್ಯವಾಗಿತ್ತು. ವಿಶೇಷವೆಂದರೆ ಹೀಗೆ ಕಳೆದುಕೊಂಡ ಎಲ್ಲವನ್ನು ಹತ್ತರಷ್ಟು ಗಳಿಸಿ, ಬದುಕೆಂಬ ಅಖಾಡದ ಆಟಕ್ಕೆ ಮತ್ತೆ ಮರಳುವ ಕಲೆಯೂ ಅವನಿಗೆ ಕರಗತವಾಗಿತ್ತು. ಇಂದಿಗೂ ಕ್ಯಾಸನೋವಾ ಓರ್ವ ಸೋಜಿಗದಂತೆ ಕಾಣುವುದು ಈ ಕಾರಣಕ್ಕೇನೇ.
ನಮ್ಮ ಮಹಾನಗರಗಳ ಲೋಕವೂ ಒಂಥರಾ ಹೀಗೇನೇ. ದುಡ್ಡಿದ್ದವರು ಮತ್ತಷ್ಟು ದುಡ್ಡು ಮಾಡುತ್ತಾ ಹೋಗುತ್ತಾರೆ. ಇಲ್ಲದವರು ತಮ್ಮ ಹಣೆಬರಹವೇ ಇಷ್ಟು ಎಂದು ಗೊಣಗುತ್ತಾ ದಿನತಳ್ಳುತ್ತಾರೆ. ದಿಲ್ಲಿಯಲ್ಲಿರುವ ನನ್ನ ಪರಿಚಯದ ಕಾರು ಚಾಲಕನೊಬ್ಬ ಏನಿಲ್ಲವೆಂದರೂ ಐದಾರು ಮೂಲಗಳಿಂದ ಕಾಸು ಸಂಪಾದಿಸುತ್ತಾನೆ. ಇತ್ತ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ಪದವೀಧರ ನೌಕರರು ತಮ್ಮ ಸಂಬಳವನ್ನು ಅಗತ್ಯ ಖರ್ಚುಗಳೊಂದಿಗೆ ಸರಿದೂಗಿಸಲಾರದೆ ಒದ್ದಾಡುತ್ತಲೇ ಇರುತ್ತಾರೆ. ವಿವಿಧ ಸಾಲಗಳು ಹೆಬ್ಬಾವಿನಂತೆ ಕಾಲಿಗೆ ಸುತ್ತಿಕೊಂಡಿರುತ್ತವೆ. ಅಷ್ಟರಮಟ್ಟಿಗೆ ಮಹಾನಗರಗಳಲ್ಲಿನ ಬದುಕು ಗಾಣದೆತ್ತಿನಂತೆ ಸುಸ್ತು ಹೊಡೆಸುತ್ತಲೇ ಇರುತ್ತದೆ.
ಹಾಗೆ ನೋಡಿದರೆ ಮಹಾನಗರಗಳಲ್ಲಿ ಗಳಿಸುವುದು ಕಷ್ಟವಲ್ಲ. ಆದರೆ ಉಳಿಸುವುದೇ ದೊಡ್ಡ ಸವಾಲು. ಕೊಳ್ಳುಬಾಕತನವನ್ನು ಇನ್ನಷ್ಟು ಮತ್ತಷ್ಟು ಪ್ರೊಮೋಟ್ ಮಾಡುವ ಮಹಾನಗರಗಳ ಜೀವನಶೈಲಿಯು ನಮ್ಮ ಆಸೆಗಳನ್ನು ತಳವಿಲ್ಲದ ಮಡಕೆಯಂತಾಗಿ ಪರಿವರ್ತಿಸಿಬಿಟ್ಟಿದೆ. ಹೀಗಾಗಿ ಈ ಮಡಕೆಗೆ ಎಷ್ಟು ತುಂಬಿಸಿದರೂ ಸಾಲುವುದಿಲ್ಲ. ಥೇಟು scroll ಮಾಡಿದಷ್ಟೂ ಹೊಸ ಕಂಟೆಂಟುಗಳನ್ನು ನೀಡುತ್ತಾ ಸಾಗುವ ರೀಲುಗಳ ಥರಾನೇ!
ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೂ ದಿವಾಳಿತನಕ್ಕೂ ಇರುವ ಒಂದೇ ಒಂದು ದೂರವೆಂದರೆ ವೈದ್ಯಕೀಯ ಆಪತ್ತು ಎಂಬ ಮಾತುಗಳು ಮಹಾನಗರಗಳಲ್ಲಿವೆ. ಏಕೆಂದರೆ ದುಬಾರಿ ಜೀವನಶೈಲಿಯನ್ನು ತನ್ನ ಭಾಗವಾಗಿಸಿಕೊಂಡ ಮಹಾನಗರಗಳಲ್ಲಿ ಎಲ್ಲವೂ ದುಬಾರಿಯೇ. ಆದರೆ ವೈದ್ಯಕೀಯ ಖರ್ಚುಗಳು ಮಾತ್ರ ಎಲ್ಲಕ್ಕಿಂತಲೂ ದುಬಾರಿ. ಒಂದೇ ಒಂದು ಆರೋಗ್ಯಸಂಬಂಧಿ ತುರ್ತು ಸನ್ನಿವೇಶವು ವ್ಯಕ್ತಿಯೊಬ್ಬನ ಅಷ್ಟೂ ಗಳಿಕೆಯನ್ನು ಮತ್ತು ಉಳಿತಾಯವನ್ನು ಇಲ್ಲಿ ನಿವಾಳಿಸಿ ಎಸೆಯಬಲ್ಲದು. ಹೀಗಾಗಿ ಮಹಾನಗರಗಳ ನಿವಾಸಿಗಳಿಗಂತೂ ಆರೋಗ್ಯವೆಂಬುದು ನಿಜಾರ್ಥದಲ್ಲಿ ಭಾಗ್ಯವೇ. ಇಂದು ಉಳಿತಾಯ ಮತ್ತು ಹೂಡಿಕೆಗಳ ಕುರಿತಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಚರ್ಚೆಗಳಾಗುತ್ತಿರುವುದು ಇದಕ್ಕೊಂದು ಉತ್ತಮ ನಿದರ್ಶನ. ವೈಯಕ್ತಿಕ ಮತ್ತು ಕೌಟುಂಬಿಕ ಆರ್ಥಿಕತೆಯ ಬಗೆಗಿನ ಜ್ಞಾನವು ಇಂದು ಕಲಿಕೆಯಷ್ಟೇ ಅಲ್ಲ. ಬದುಕಿನ ತುರ್ತು ಕೂಡ ಹೌದು.
ಒಮ್ಮೆ ದಿಲ್ಲಿಯ ಖ್ಯಾತ ಪುಸ್ತಕದಂಗಡಿಗೆ ಹೋಗಿದ್ದ ನಾನು ನಿಮ್ಮ ಬಳಿ ಬರುವ ಗ್ರಾಹಕರು ಯಾವ ಬಗೆಯ ಪುಸ್ತಕಗಳನ್ನು ಹೆಚ್ಚು ಖರೀದಿಸುತ್ತಾರೆ ಎಂದು ಕೇಳಿದ್ದೆ. ಜಗತ್ತಿನ ಕೆಲ ಖ್ಯಾತ ಕ್ಲಾಸಿಕ್ ಗಳು ಮತ್ತು ಇತ್ತೀಚಿನ ಕೆಲ ಜನಪ್ರಿಯ ಲೇಖಕರ ಪುಸ್ತಕಗಳನ್ನು ಹೊರತುಪಡಿಸಿ, ವಿಪರೀತ ಬೇಡಿಕೆಯಲ್ಲಿದ್ದ ಪುಸ್ತಕಗಳು “ಸೆಲ್ಫ್ ಹೆಲ್ಪ್” ವಿಭಾಗದ್ದೇ ಆಗಿದ್ದವು. ಅದರಲ್ಲೂ ವಿಶೇಷವಾಗಿ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟ ಪುಸ್ತಕಗಳು ಈಗ ಹೆಚ್ಚು ಮಾರಾಟವಾಗುತ್ತಿವೆ ಎಂಬುದನ್ನು ಪುಸ್ತಕದಂಗಡಿಯ ವ್ಯವಸ್ಥಾಪಕರು ನಿರ್ದಿಷ್ಟವಾಗಿ ಹೇಳಿದ್ದರು. “Do Epic Shit” ಎಂಬ ಪುಸ್ತಕದೊಂದಿಗೆ ಲೇಖಕರಾಗಿ ಖ್ಯಾತಿಯನ್ನು ಪಡೆದ ಅಂಕುರ್ ವಾರಿಕೂ, ಅದಕ್ಕಿಂತ ದೊಡ್ಡ ಯಶಸ್ಸನ್ನು ಪಡೆದಿದ್ದು “Make Epic Money” ಕೃತಿಯಿಂದ. ಸದ್ಯಕ್ಕಂತೂ ಈ ಕಂಟೆಂಟುಗಳನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿರುವ ಅವರ ಹಲವು ಕೋರ್ಸುಗಳು ವಿವಿಧ ರೂಪ ಮತ್ತು ಹೆಸರುಗಳಲ್ಲಿ ಮಾರಾಟವಾಗುತ್ತಿವೆ. ಈ ಮಾದರಿಯಲ್ಲಿ ಸದ್ಯ ಹಲವರಿಂದ ದಂಡಿಯಾಗಿ ಬರುತ್ತಿರುವ ಮತ್ತು ಭಾರೀ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಆಕರಗಳ ಮೂಲ ಜೀವದ್ರವ್ಯವು ಕೂಡ ಅದೊಂದೇ: ದುಡ್ಡು!
ನಮ್ಮ ಹಿಂದಿನ ಪೀಳಿಗೆಯ ಮಂದಿ ದುಡ್ಡಿನ ವಿಚಾರದಲ್ಲಿ ಇಷ್ಟು ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದರೇ? ಬದುಕಿಗಾಗಿ ಗಳಿಕೆ ಅನ್ನುವುದಕ್ಕಿಂತ ಹೆಚ್ಚಾಗಿ ಗಳಿಕೆಗಾಗಿ ಬದುಕು ಅನ್ನುವಂಥಾ ದಿನಗಳು ಆಗ ಇದ್ದಿರಬಹುದೇ? ನನಗಂತೂ ಗೊತ್ತಿಲ್ಲ. ಆದರೆ ಗಳಿಕೆಯೆಂಬುದು ಈ ಮಟ್ಟಿನ ಕೊನೆಯಿಲ್ಲದ ಹಂಬಲ ಮತ್ತು ಭಯಂಕರ ತುರ್ತಾಗಿ ಬದಲಾಗಿರುವುದು ಬಹುಷಃ ನಮ್ಮ ಕಾಲದಲ್ಲೇ! ಈ ಜಂಜಾಟದಲ್ಲಿ ಬದುಕನ್ನೇ ಕಂದಾಯವಾಗಿ ತೆರಬೇಕಾದ ಪರಿಸ್ಥಿತಿಗಳು ಬರದಿದ್ದರೆ ಸಾಕು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- http://“ಕಟ್ಟಡ ಹೇಳುವ ಕತೆ” https://kannadaplanet.com/a-building-tells-a-story/