ಹೆಬ್ರಿ : ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ ಪ್ರತಿವರ್ಷದಂತೆ ಈ ವರ್ಷವೂ 18ನೇ ವರ್ಷದ ಭೂಮಿ ಹಬ್ಬವನ್ನು ಆಗಸ್ಟ್ 18 ರಂದು ಹೆಬ್ರಿಯ ಬಡಾಗುಡ್ಡೆ ಕೊರಗರ ಸಭಾಭವನದಲ್ಲಿ ಆಚರಿಸಲಿದೆ.
ಭೂಮಿ ಹಬ್ಬದ ಜಾಥಾವು ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಬಡಾಗುಡ್ಡೆ ಕೊರಗರ ಸಭಾಭವನದಲ್ಲಿ ಭೂಮಿ ಹಬ್ಬದ ಆಚರಣೆ ನಡೆಯಲಿದೆ.
ಹಬ್ಬದ ಜಾಥಾವನ್ನು ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರಾನಾಥ ಬಂಗೇರ ಉದ್ಘಾಟಿಸಲಿದ್ದು ಧ್ವಜಾರೋಹಣವನ್ನು ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಐತಪ್ಪ ವರ್ಕಾಡಿ ನೆರವೇರಿಸಲಿದ್ದಾರೆ.
ಭೂಮಿ ಹಬ್ಬದ ಸಮಾರಂಭದ ಉದ್ಘಾಟನೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ. ಕೆ. ರವರು ಸಸಿ ನೆಡುವ ಮೂಲಕ ಭೂಮಿ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಗೊಯಲ್ ಮಾಡಲಿದ್ದಾರೆ.
ಹಬ್ಬದ ಸಂದೇಶವನ್ನು ಸೋಮೇಶ್ವರ ಪುರಸಭಾದ ಮುಖ್ಯ ಅಧಿಕಾರಿ ಮತ್ತಾಡಿ ಕಾಯರ್ ಪಲ್ಕೆ ಮತ್ತು ಸಮುದಾಯದ ಮಾದರಿ ಕೃಷಿಕ ಹಾಗೂ ಯುವ ನಾಯಕ ಕುಮಾರದಾಸ್ ಹಾಲಾಡಿ ನೀಡಲಿದ್ದಾರೆ. ಹಬ್ಬದ ದೀಪವನ್ನು ವಿಶಾಲಾಕ್ಷಿ ಮತ್ತು ಶಾರದಾ ಹೆಬ್ರಿ ಬೆಳಗಿಸುವರು. ಲಕ್ಷ್ಮಿ ಕೆಂಜೂರು ಮತ್ತು ಅಮ್ಮಣ್ಣಿ ಅಬ್ಲಿಕಟ್ಟೆ ಸವಿಜೇನು ಹಂಚಲಿದ್ದಾರೆ.
ಭೂಮಿ ಹಬ್ಬದ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎಂ. ನಾರಾಯಣಸ್ವಾಮಿ, ಯೋಜನಾ ಸಮನ್ವಯ ಅಧಿಕಾರಿ ಐ. ಟಿ.ಡಿ.ಪಿ.ಉಡುಪಿ, ಬಾಲರಾಜ್ ಕೋಡಿಕಲ್, ನ್ಯಾಯಾಧೀಶರು ನಮ್ಮ ನ್ಯಾಯ ಕೂಟ, ಕೊರಗ ಸಂಘಗಳ ಒಕ್ಕೂಟ, ಮೋಹನ್ ಅಡ್ವೆ, ಸಹಾಯಕ ಜನರಲ್ ಮ್ಯಾನೇಜರ್ ಬಿ.ಎಸ್.ಎನ್.ಎಲ್, ಡಾ. ದಿನಕರ ಕೆಂಜೂರು, ಉಪನ್ಯಾಸಕರು, ವಾಣಿಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ಡಾ. ಕಲಾವತಿ ಸೂರಾಲು, ಸಂಶೋಧಕರು ಬುಡಕಟ್ಟು ಸಂಶೋಧನಾ ಕೇಂದ್ರ ಮೈಸೂರು, ಡಾ.ಸಬಿತಾ ಗುಂಡ್ಮಿ, ಸಹಾಯಕ ಪ್ರಾಧ್ಯಾಪಕರು ಸಮಾಜಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಉಷಾ ಅಧ್ಯಕ್ಷರು, ಕೊರಗ ಅಭಿವೃದ್ಧಿ ಸಂಘ ಹೆಬ್ರಿ, ಅಶೋಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ಉಪಸ್ಥಿತರಿರುವರು. ಸಭಾಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸುಶೀಲ ನಾಡ ವಹಿಸಲಿದ್ದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶೀಲಾ ಬಂಟ್ವಾಳ, ಕೋಶಾಧಿಕಾರಿ ವಿನಯ ಅಡ್ವೇ, ಸಂಯೋಜಕರಾದ ಪುತ್ರನ್ ಹೆಬ್ರಿ ಉಪಸ್ಥಿತರಿರುವರು.
ಹಬ್ಬದ ಸಭಾ ಕಾರ್ಯಕ್ರಮದ ನಂತರ ಡೋಲು ವಾದನ, ಡೋಲು ಕುಣಿತ, ಹಾಡು, ಪ್ರಹಸನ ನೃತ್ಯ ಇತ್ಯಾದಿ ಸಾಂಸ್ಕೃತಿಕ ಅಭಿವ್ಯಕ್ತಿ ಕಾರ್ಯಕ್ರಮಗಳು ನಡೆಯಲಿವೆ.