ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸಂಘ ಪರಿವಾರ (ಆರ್‌ಎಸ್‌ಎಸ್) ವನ್ನು ಹೊಗಳುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದವರನ್ನು ಅವಮಾನಿಸಿದ್ದಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ ಆಪಾದಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಐತಿಹಾಸಿಕ ದಾಖಲೆ ಹೊಂದಿರುವ ಸಂಸ್ಥೆ ಎಂದು ಕರೆದಿರುವುದು ಸರಿಯಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವನ್ನು ವಹಿಸದ ಮತ್ತು ಧಾರ್ಮಿಕ ಆಧಾರದ ಮೇಲೆ ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಸಂಘಟನೆ ಎಂದರೆ ಆರ್ ಎಸ್ ಎಸ್.
ಮಹಾತ್ಮ ಗಾಂಧಿಯವರಿಂದ ಸುಭಾಷ್ ಚಂದ್ರ ಬೋಸ್ ವರೆಗೆ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಂದ ಕಾಂ. ಪಿ. ಕೃಷ್ಣ ಪಿಳ್ಳೈ, ಇಎಂಎಸ್, ಎಕೆಜಿ, ಅಕ್ಕಮ್ಮ ಚೆರಿಯನ್ ಮತ್ತು ಅಸಂಖ್ಯಾತರು ನಡೆಸಿದ ನಿಸ್ವಾರ್ಥ ಹೋರಾಟಗಳು ನಮ್ಮ ಸ್ವಾತಂತ್ರ್ಯದ ಅಡಿಪಾಯವನ್ನು ರೂಪಿಸುತ್ತವೆ. ಆದರೆ ಆರ್‌ಎಸ್‌ಎಸ್ ಅನ್ನು ಹೊಗಳುವ ಮೂಲಕ, ಪ್ರಧಾನಿ ಹುತಾತ್ಮರ ಸ್ಮರಣೆಯನ್ನು ಅವಮಾನಿಸಿದ್ದಾರೆ. ಇದ ಸ್ವೀಕಾರಾರ್ಹವಲ್ಲ. ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದ್ದಾರೆ.