ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾತನಾಡುತ್ತಾ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಹೊಗಳಿದ್ದಕ್ಕೆ ಪ್ರತಿಪಕ್ಷಗಳು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಸಂಘಪರಿವಾರವನ್ನು ಪ್ರಸ್ತಾಪಿಸಿದ್ದು, ಸಾಂವಿಧಾನಿಕ ಮತ್ತು ಜಾತ್ಯತೀತ ಒಕ್ಕೂಟ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಟೀಕಿಸಿದ್ದಾರೆ.
ಈ ಮೂಲಕ ಅವರು ಅಧಿಕಾರದಲ್ಲಿ ಮುಂದುವರೆಯಲು ಹತಾಶ ಪ್ರಯತ್ನ ನಡೆಸಿದ್ದಾರೆ. ಈ ಮೂಲಕ ಅವರು ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿದ್ದಾರೆ. ಮುಂದಿನ ತಿಂಗಳು ಮೋದಿ ಅವರಿಗೆ ಎಪ್ಪತ್ತೈದು ವರ್ಷವಾಗಲಿದೆ. ಆರ್‌ಎಸ್‌ಎಸ್ ಅನ್ನು ಹೊಗಳುತ್ತಾ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನ ನಡೆಸಿದ್ದಾರೆ ಎಂದಿದ್ದಾರೆ.
ಆರ್ ಜೆ ಡಿ ಸಂಸದ ಮನೋಜ್ ಝಾ ಬಿಜೆಪಿಯನ್ನು ಟೀಕಿಸುತ್ತಾ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಇತಿಹಾಸವನ್ನು ತಿರುಚಿ ಮನಬಂದಂತೆ ಮಾತನಾಡುವ ಕಾರ್ಯಕ್ರಮ ಅಲ್ಲ ಎಂದರೆ
ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಕೋಮು ಗಲಭೆ ಪ್ರಚೋದಿಸುವಲ್ಲಿ ಆರ್‌ಎಸ್‌ಎಸ್ ಯಾವ ಪಾತ್ರ ವಹಿಸಿದೆ ಇಹಾಸಕಾರರು ಬರೆದಿಟ್ಟಿದ್ದಾರೆ. ಗಾಂಧೀಜಿ ಹತ್ಯೆ ಬಳಿಕ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು. ಪ್ರಧಾನಿ ಮೋದಿ ಅವರು ಆರ್‌ಎಸ್‌ಎಸ್ ಹೊಗಳಿದ್ದು ನಾಚಿಕೆಗೇಡು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ ಆರ್ ಎಸ್ ಎಸ್ ಅನ್ನು ವೈಭವೀಕರಿಸುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ. ಸಂಘಪರಿವಾರ ಬ್ರಿಟಿಷರ ಸೇವೆ ಮಾಡುತ್ತಿತ್ತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತೂ ಭಾಗಿಯಾಗಿರಲಿಲ್ಲ ಎಂದು ಜರಿದಿದ್ದಾರೆ.