ಬೆಂಗಳೂರು: ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರಜಾಪ್ರಭುತ್ವದ ಪರವಾಗಿ ಹುಟ್ಟಿಕೊಂಡ ಸಾಂಸ್ಕೃತಿಕ ಹೋರಾಟ ವೇದಿಕೆ ಸಮುದಾಯ ಕರ್ನಾಟಕ ಈಗ ‘ಮನುಷ್ಯತ್ವದೆಡೆಗೆ‘ ಎಂಬ ಶೀರ್ಷಿಕೆಯಡಿ ತನ್ನ ಐವತ್ತನೇ ವರ್ಷಾಚರಣೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಸಮುದಾಯ 50 ರ ಜಾಥಾ ಬೀದಿ ನಾಟಕಗಳು, ರಾಷ್ಟ್ರೀಯ ನಾಟಕೋತ್ಸವ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಮ್ಮಟ, ಕಲಾ ಪ್ರದರ್ಶನ, ಕಿರುಚಿತ್ರ ಸ್ಪರ್ಧೆ ಹಮ್ಮಿಕೊಂಡಿದೆ. ಈ ಮೂಲಕ ಸಂವಿಧಾನಿಕ ಮೌಲ್ಯಗಳಾದ ಸೌಹಾರ್ದ, ಸಮಾನತೆ, ಭ್ರಾತೃತ್ವದ ಆಶಯಗಳನ್ನು ಜನರ ನಡುವೆ ಪ್ರಚಾರ ಮಾಡಲಿದೆ.
ಈ ಕುರಿತು ಬೆಂಗಳೂರು ಸಮುದಾಯದ ತಂಡ ಮತ್ತು ಸಮುದಾಯ– 50 ಸ್ವಾಗತ ಸಮಿತಿಯ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮುದಾಯದ ಗೌರವ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ ತುರ್ತು ಪರಿಸ್ಥಿತಿಯ ಕಾಲಕ್ಕಿಂತ ಹೆಚ್ಚಿನ ಸವಾಲುಗಳು ಇಂದು ನಮ್ಮ ಪ್ರಜಾಪ್ರಭುತ್ವದ ಎದುರಿನಲ್ಲಿದ್ದು ಅವುಗಳನ್ನು ಎದುರಿಸಲು ಬೇಕಾದ ಸಾಂಸ್ಕೃತಿಕ ಚೈತನ್ಯ ಬೆಳೆಸಲು ಈ ಜಾಥಾ ಉದ್ದೇಶಿಸಿದೆ. ಇದನ್ನು ರಾಜ್ಯಾದ್ಯಂತ ಯಶಸ್ವಿಗೊಳಿಸಲು, ದಲಿತ, ರೈತ, ಕನ್ನಡಪರ ಹಾಗೂ ಎಡಪಂಥೀಯ ಜನಪರ ಸಂಘಟನೆಗಳು ಸಹಕರಿಸಬೇಕು ಎಂದು ಕೋರಿದರು.
‘ನೂರತರ ನೂರುಮರ ಭಾರತವೆಂಬುದು ಜೀವಸ್ವರ‘ “ಮನುಷ್ಯತ್ವದೆಡೆಗೆ ಸಮುದಾಯ 50 ಜಾಥಾ‘ ಎಂಬ ಘೋಷವಾಕ್ಯದೊಂದಿಗೆ ದೊಡ್ಡ ರೀತಿಯಲ್ಲಿ ಸಮುದಾಯ ತನ್ನ ಯಶಸ್ವಿ 50 ವರ್ಷಗಳ ಪಯಣದ ಸಾಧನೆಯನ್ನು ಇತಿಹಾಸದಲ್ಲಿ ದಾಖಲಿಸಲು ಸಿದ್ಧತೆ ನಡೆಸಿದೆ.
ಸಾಮಾಜೋ ರಾಜಕೀಯ ತಲ್ಲಣಗಳಿಗೆ ಸ್ಪಂದಿಸಲು ಸಮುದಾಯ ಪ್ರಾರಂಭದಿಂದಲೂ ತನ್ನ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಈಗ ವರ್ಷಪೂರ್ತಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿ ಸಮುದಾಯ ಸಂಘಟನೆ ಬಂಡಾಯ- ದಲಿತ ಸಂಘರ್ಷ ಸಮಿತಿ- ರೈತ-ಕಾರ್ಮಿಕ ಸಂಘಟನೆಗಳ ಜೊತೆಗೆ ಕೈ ಜೋಡಿಸಿ, ಎಲ್ಲ ಜಿಲ್ಲೆಗಳಲ್ಲೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲಿದೆ ಎಂದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಮಾತನಾಡಿ ವರ್ಷಪೂರ್ತಿ ನಡೆಯುವ ಸಮುದಾಯ 50 ರ ಕಾರ್ಯಕ್ರಮಗಳು ಇದೇ ಆಗಸ್ಟ್ 24, 2025 ರಂದು ಪ್ರಾರಂಭವಾಗಲಿದೆ. ಅಂದು ರವೀಂದ್ರ ಕಲಾಕ್ಷೇತ್ರ ಆವರಣದ ‘ಪಡಸಾಲೆ‘ಯಲ್ಲಿ ಬೆಳಗ್ಗೆ 10:30 ರಿಂದ ‘ಮನುಷ್ಯತ್ವದೆಡೆಗೆ ಸಮುದಾಯ – ಕಲಾ ಶಿಬಿರ‘ದಲ್ಲಿ ಖ್ಯಾತ ಚಿತ್ರ ಕಲಾವಿದರಿಂದ ಚಿತ್ರ ರಚನೆ ಏರ್ಪಡಿಸಲಾಗಿದೆ. ಸಂಜೆ 5ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಡಾ. ಬರಗೂರು ರಾಮಚಂದ್ರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ. ನಂತರ ಮೂರು ದಿನಗಳ ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ 25ರಂದು ಸಂಜೆ ಜುಗಾರಿ ಕ್ರಾಸ್ 26ರಂದು ಬುದ್ಧ ಪ್ರಭುದ್ಧ, 27ರಂದು ಸಂಜೆ ಜನತಾ ರಾಜ ಶಿವಾಜಿ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.