ದಿ ಮೇಕಿಂಗ್ ಆಫ್‌ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2

Most read

ಶಿವನಿಗೆ ಎಲ್ಲೂ ಮಂಜುನಾಥ ಎಂಬ ಹೆಸರು ಇಲ್ಲ. ಆದರೆ ಧರ್ಮಸ್ಥಳ ಮತ್ತು ಕದ್ರಿಯಲ್ಲಿ ಮಾತ್ರ ಈ ಹೆಸರು ಇರುವ ಹಿನ್ನೆಲೆ ಬೌದ್ಧ ಮೂಲದ್ದು ಎಂಬುದಾಗಿ ಗೋವಿಂದ ಪೈಗಳು ಖಚಿತ ಅಭಿಪ್ರಾಯಪಡುತ್ತಾರೆ. ಬುದ್ಧಿಸಂನಲ್ಲಿ ಬರುವ ಮಂಜುಶ್ರೀ ಎಂಬ ಪರಿಕಲ್ಪನೆಯೇ ಮಂಜುನಾಥ ಎಂಬ ಶೈವದ ಕಲ್ಪನೆಯಾಗಿ ಹೊರಹೊಮ್ಮಿರುವ ಸಾಧ್ಯತೆಯನ್ನು ಅವರು ಉಲ್ಲೇಖಿಸುತ್ತಾರೆ ಪ್ರಶಾಂತ್‌ ಹುಲ್ಕೋಡ್‌, ಪತ್ರಕರ್ತರು.

ನೇತ್ರಾವತಿ ನದಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಬೆಳ್ತಂಗಡಿ ದಾಟಿಕೊಂಡು ಮಂಗಳೂರಿನ ಉಳ್ಳಾಲದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಒಟ್ಟು 103 ಕಿಮೀ ಉದ್ದದ ಈ ನದಿಯನ್ನು ಹಿಂದೂ  ಶೈವ ಸಂಪ್ರದಾಯದಲ್ಲಿ ಪವಿತ್ರ ನದಿ ಎಂದು ಗುರುತಿಸಲಾಗುತ್ತದೆ. ಈ ನದಿಗೂ ಶಿವನನ್ನು ಮಾತ್ರ ದೇವರು ಎಂದು ಆರಾಧಿಸುತ್ತಿದ್ದ ನಾಥ ಸಂಪ್ರದಾಯಕ್ಕೂ ಹತ್ತಿರದ ಸಂಬಂಧವೂ ಇದೆ. ಮೈಸೂರು ಭಾಗದಲ್ಲಿ ಕಾವೇರಿ ನದಿ ಬಗೆಗೆ ಇರುವ ಪೂಜನೀಯ ಭಾವ, ಮಲೆನಾಡು- ಕರಾವಳಿ ಭಾಗದಲ್ಲಿ ನೇತ್ರಾವತಿ ನದಿ ಬಗೆಗೂ ಇತ್ತು. ಈ ನದಿ ಬೆಳ್ತಂಗಡಿ ಹಾದು ಹೋಗುವ ಸರಹದ್ದಿನಲ್ಲೇ ಬರುತ್ತದೆ ಪುಟ್ಟ ಊರು ಅಂದಿನ ಕುಡುಮ- ನೆಲ್ಯಾಡಿವೀಡು- ಇಂದಿನ ಧರ್ಮಸ್ಥಳ.

ಸುಮಾರು 15-16ನೇ ಶತಮಾನದ ನಡುವೆ ಜೈನ- ಬಂಟ ಸಮುದಾಯ ಎಂದು ಇವತ್ತು ಗುರುತಿಸುವ ಜನಾಂಗವೊಂದು ಇಲ್ಲಿ ವಾಸಿಸುತ್ತಿತ್ತು ಮತ್ತು ಅದರ ಪ್ರಮುಖರನ್ನು ನೆಲ್ಯಾಡಿವೀಡಿನ ಪೆರ್ಗಡೆ ಕುಟುಂಬ ಎಂದು ಕರೆಯಲಾಗುತ್ತಿತ್ತು ಎಂಬುದಕ್ಕೆ ಸಾಕಷ್ಟು ಉಲ್ಲೇಖಗಳು ಸಿಗುತ್ತವೆ. ಪೆರ್ಗಡೆ ಅಥವಾ ಪೇರ್ಗಡೆ ಎಂದರೆ ತುಳು ಭಾಷೆಯಲ್ಲಿ ದೊಡ್ಡವರು ಎಂಬ ಅರ್ಥ ಇದೆ. ಮಧ್ಯಯುಗೀನ ಕಾಲದಲ್ಲಿ ಊರಾಳ್ವಿಕೆ ನಡೆಸುವವರಿಗೆ ಗೌಡ ಎಂದೂ, ಸೇನಾಡಳಿತ ನಡೆಸುವವರಿಗೆ ನಾಯಕ ಎಂದೂ ಹಾಗೇ ನ್ಯಾಯಾಡಳಿತ ವಹಿಸುವವರಿಗೆ ಹೆಗ್ಗಡೆ/ ಪೆರ್ಗಡೆ ಎಂದೂ ನಾಮ ವಿಶೇಷಗಳು ಸೇರಿಕೊಂಡಿದ್ದವು. ಇವು ಅಂದು ಸ್ಥಾನ ಅಥವಾ ಹುದ್ದೆಗೆ ಸೂಚಕವೇ ವಿನಃ ಜಾತಿ ಸೂಚಕವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಊರ ಕಾವಲಿನ ದೈವಗಳು ಕುಡುಮದಲ್ಲಿದ್ದ ಬಿರ್ಮಣ್ಣ ಹೆಗ್ಗಡೆ ಹಾಗೂ ಅಮ್ಮು ಬಲ್ಲಾಳ್ತಿ ಕುಟುಂಬಕ್ಕೆ ಇಲ್ಲಿ ನ್ಯಾಯ ಪಂಚಾಯ್ತಿಗಳು ನಡೆಯಬೇಕು, ಅದಕ್ಕಾಗಿ ದೇವಸ್ಥಾನಗಳನ್ನು ನಿರ್ಮಿಸಬೇಕು ಎಂದು ಆದೇಶಿಸುತ್ತವೆ. ಇದಕ್ಕಾಗಿ ಶಿವಲಿಂಗವೊಂದನ್ನು ಸ್ಥಾಪಿಸಬೇಕು, ಅದೂ ಕೂಡ ಸಮೀಪದ ಕದ್ರಿಯಿಂದಲೇ ತರಬೇಕು ಎಂದು ಹೇಳುತ್ತವೆ. ಜೈನರಾಗಿದ್ದರೂ ಕೂಡ ಅವರು ಶಿವಲಿಂಗವನ್ನು ಸ್ಥಾಪಿಸಿ, ಪ್ರದೇಶದ ನ್ಯಾಯ ಪಂಚಾಯ್ತಿಯ ಉಸ್ತುವಾರಿ ನೋಡಿಕೊಂಡು ಬಂದರು ಎನ್ನುವುದು ಇವತ್ತಿನ ಧರ್ಮಸ್ಥಳದ ಪೆರ್ಗಡೆ ಕುಟುಂಬದ ಬಗೆಗೆ ಇರುವ ಜನಪದ ಕತೆ. ಈ ಕುರಿತು ಲಿಖಿತ ದಾಖಲೆಗಳು ಎಲ್ಲಿಯೂ ಇಲ್ಲ. ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಹಾಗೂ ಪ್ರೊ. ಬಿ. ವಿವೇಕ್ ರೈ ಅವರ ಕರಾವಳಿ ಇತಿಹಾಸದ ಬಗೆಗಿನ ಬರಹಗಳಲ್ಲಿ, ಎಸ್‌ಡಿಎಂ ತಂದಿರುವ ಪುಸ್ತಕಗಳಲ್ಲಿ ಮೇಲಿನ ಕತೆಯ ಉಲ್ಲೇಖವಿದೆ.

ಕದ್ರಿ ದೇವಸ್ಥಾನ

ಇದಕ್ಕೂ ಹತ್ತು ಶತಮಾನಗಳ ಮೊದಲೇ ಕುಡುಮಕ್ಕೆ ಸಮೀಪದ ಕದ್ರಿ ಎಂಬ ಊರು ಇಡೀ ಪ್ರದೇಶದ ಆಧ್ಯಾತ್ಮಿಕ ಕೇಂದ್ರವಾಗಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಈಗಲೂ ಇರುವ ಕದ್ರಿ ಮಂಜುನಾಥ ದೇವಾಲಯಕ್ಕೆ ಭೇಟಿ ನೀಡಿದರೆ ದೇವಸ್ಥಾನದ ಆವರಣದಲ್ಲಿಯೇ ಮತ್ಸೇಂದ್ರನಾಥ, ಅವಲೋಕಿತೇಶ್ವರ, ವ್ಯಾಸ ಎಂದು ಕರೆಯುವ ಪಂಚಲೋಹದ ಪ್ರತಿಮೆಗಳು ನಾಥ ಪರಂಪರೆಯ ಕುರುಹುಗಳನ್ನು ನೀಡುತ್ತವೆ. ಇವು ಬೌದ್ಧಮತದ ಬೋಧಿಸತ್ವನ ಅವತಾರಗಳನ್ನು ಸಂಕೇತಿಸುತ್ತವೆ.  ಈ ಮೂರು ಹಿತ್ತಾಳೆಯ ವಿಗ್ರಹಗಳು ಇಲ್ಲಿ 10ನೇ ಶತಮಾನದ ಅಂತ್ಯದಲ್ಲೂ ಪ್ರಬಲವಾಗಿದ್ದ ಬೌದ್ಧ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ.

ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆಯ ಉತ್ಖನನದಲ್ಲಿ ಇದೇ ದೇವಸ್ಥಾನದ ಮುಂಭಾಗದ ಕೊಳದಲ್ಲಿ ಸಿಕ್ಕಿರುವ ಬುದ್ಧನ ಹೋಲುವ ರುಂಡವಿಲ್ಲದ ಧ್ಯಾನಮಗ್ನ ಬುದ್ಧನ ವಿಗ್ರಹವನ್ನು 4-6ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಅಂದರೆ, ‘ಕದರಿಕಾ ವಿಹಾರ’ ಎಂದು ಕರೆಯಲಾಗುತ್ತಿದ್ದ ಇಂದಿನ ಕದ್ರಿ ಮಂಜುನಾಥ ದೇವಾಲಯದ ಜಾಗದಲ್ಲಿ ಧಾರ್ಮಿಕ ಚಟುವಟಿಕೆ 4-5ನೇ ಶತಮಾನದಿಂದ 10-11ನೇ ಶತಮಾನದವರೆಗೂ ಕ್ರಿಯಾಶೀಲವಾಗಿತ್ತು ಎಂಬುದನ್ನು ಗಮನಿಸಬೇಕಿದೆ.

ಇತಿಹಾಸಕಾರರು ದಾಖಲಿಸಿರುವ ಪ್ರಕಾರ, ಕದ್ರಿಯಲ್ಲಿ ಬುದ್ಧನ ಅನುಯಾಯಿಗಳು ಸ್ಥಾಪಿಸಿಕೊಂಡಿದ್ದ ವಿಹಾರದ ಧಾರ್ಮಿಕ ಆಚರಣೆಯನ್ನು ‘ವಜ್ರಯಾನ’ ಎಂದು ಗುರುತಿಸುತ್ತಾರೆ. ಬುದ್ಧಿಸಂ ಮತ್ತು ಶಿವನ ಆರಾಧಿಸುವ ಶೈವ ಸಂಪ್ರದಾಯಗಳ ಮಿಶ್ರಣ ಇದು. ಇದೇ ಮುಂದೆ ನಾಥ ಸಂಪ್ರದಾಯಕ್ಕೂ ನಾಂದಿಯಾಯಿತು ಎಂಬ ಉಲ್ಲೇಖಗಳೂ ಸಿಗುತ್ತವೆ. ಇನ್ನೊಂದು ಅರ್ಥದಲ್ಲಿ, ಈ ಭಾಗದಲ್ಲಿ ಬುದ್ಧಿಸಂನ ಅಂತ್ಯವು, ನಾಥ ಸಂಪ್ರದಾಯದ ಆರಂಭವೂ ಆಗಿರುವ ಸಾಧ್ಯತೆಗಳನ್ನು 2019ರಲ್ಲಿ ಪ್ರಕಟವಾದ ಜೇಮ್ಸ್‌ ಮ್ಯಾಲಿಸನ್‌ ಎಂಬುವವರು ಬರೆದ ಸಂಶೋಧನಾ ಮಹಾ ಪ್ರಬಂಧ (Kālavañcana in the Konkan: How a Vajrayāna Haṭhayoga Tradition Cheated Buddhism’s Death in India) ಮುಂದಿಡುತ್ತದೆ.

ಅಂತಹ ಕದ್ರಿಯಿಂದ ಲಿಂಗವೊಂದನ್ನು ಉದ್ಭವಿಸಿ ಧರ್ಮಸ್ಥಳಕ್ಕೆ ನಂತರದ ದಿನಗಳಲ್ಲಿ ತೆಗೆದುಕೊಂಡು ಹೋಗಲಾಯಿತು. ಶಿವಲಿಂಗವನ್ನು ಧರ್ಮಸ್ಥಳಕ್ಕೆ ತಂದವರು ಅಣ್ಣಪ್ಪ ಸ್ವಾಮಿ. ಪೆರ್ಗಡೆ ಜೈನ- ಬಂಟ ಕುಟುಂಬಕ್ಕೆ ಈ ಪ್ರದೇಶದ ನ್ಯಾಯ ಪಂಚಾಯ್ತಿ ನಡೆಸಲು ಕದ್ರಿಯ ‘ಉದ್ಭವಲಿಂಗ’ ಸಾಮಾಜಿಕ ಮನ್ನಣೆ ತಂದುಕೊಟ್ಟಿತು ಎಂಬುದು ಧರ್ಮಸ್ಥಳದ ಹುಟ್ಟಿನ ಬಗೆಗೆ ಇರುವ ಕತೆಗಳ ಒಟ್ಟು ಸಾರಾಂಶ. ಈ ಕುರಿತು ಕರಾವಳಿಯ ಯಕ್ಷಗಾನದಲ್ಲಿ ಬರುವ ಪ್ರಸಂಗವೊಂದನ್ನು ಪತ್ರಕರ್ತ ನವೀನ್ ಸೂರಿಂಜೆ ಹೀಗೆ ವಿವರಿಸುತ್ತಾರೆ; “ನಮ್ಮಲ್ಲಿ ಬರುವ ಯಕ್ಷಗಾನವೊಂದರಲ್ಲಿ ಶಿವಲಿಂಗ ಪ್ರತಿಷ್ಠಾಪನೆಯ ಪ್ರಸಂಗವೊಂದು ಬರುತ್ತದೆ. ಈ ಸಮಯದಲ್ಲಿ ಹೆಗ್ಗಡೆ ಮತ್ತು ಅಣ್ಣಪ್ಪ ಸ್ವಾಮಿ ನಡುವೆ ಮಾತುಕತೆಯಲ್ಲಿ ಅಣ್ಣಪ್ಪ ಸ್ವಾಮಿ, ‘ಇನ್ನು ಮುಂದೆ ನ್ಯಾಯ ಪಂಚಾಯ್ತಿ ನೀವು ಮಾಡಿ, ದೇವಸ್ಥಾನದ ವ್ಯವಹಾರ ನಾನು ನೋಡಿಕೊಳ್ಳುತ್ತೇನೆ’ ಎನ್ನುತ್ತಾರೆ. ಇದಾದ ನಂತರ ಅಣ್ಣಪ್ಪ ಸ್ವಾಮಿ ಮಾಯವಾಗುತ್ತಾರೆ. ಇವತ್ತು ನೋಡಿದರೆ, ದೇವಸ್ಥಾನದಲ್ಲಿ ನ್ಯಾಯ ಪಂಚಾಯ್ತಿ, ವ್ಯವಹಾರ ಎರಡೂ ಹೆಗ್ಗೆಡೆ ಕುಟುಂಬದ ಕೈಲಿದೆ. ನಮ್ಮಲ್ಲಿ ಮಾಯವಾಗುವುದು ಎಂದರೆ ಕೊಲೆಯಾಗುವುದು ಎಂಬ ಅರ್ಥವೂ ಇದೆ,’’ ಎನ್ನುತ್ತಾರೆ ನವೀನ್ ಸೂರಿಂಜೆ.

ಕದ್ರಿಯ ಅವಲೋಕಿತೇಶ್ವರ

ಇಂತಹ ವಿವೇಕಯುತ ಪರಿಕಲ್ಪನೆಯು ಮಂಜುನಾಥ ಸ್ವಾಮಿ ಅಥವಾ ಶಿವನ ಆರಾಧನೆಯ ದೇವಸ್ಥಾನವಾಗಿ ಹೇಗೆ ಬದಲಾಯಿತು? ಅದಕ್ಕೂ ಧರ್ಮಸ್ಥಳ ದೇವಸ್ಥಾನ ಸಮಿತಿಯವರೇ ತಂದ ಸ್ಮರಣ ಪ್ರಬಂಧಗಳಲ್ಲಿ ಸುಳಿವು ಸಿಗುತ್ತದೆ. ಇದನ್ನು ಉಲ್ಲೇಖಿಸುತ್ತಲೇ, “15 ನೇ ಶತಮಾನದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ವಾದಿರಾಜರು ಕದ್ರಿಯಿಂದ ತಂದ ಉದ್ಭವ ಲಿಂಗಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಆಗಮ ಶಾಸ್ತ್ರದ ಅಡಿಯಲ್ಲಿಯೇ ಈ ಲಿಂಗದ ಪೂಜೆ ಸಲ್ಲಿಸಲು ವೈಷ್ಣವ ಬ್ರಾಹ್ಮಣರನ್ನು ನೇಮಕ ಮಾಡಿದರು. ಅಲ್ಲಿಂದ ಮುಂದೆ ಕ್ಷೇತ್ರ ಅಭಿವೃದ್ಧಿಹೊಂದಲು ಶುರುವಾಯಿತು,’’ ಎನ್ನುತ್ತಾರೆ ಉಡುಪಿ ಮಠದ ಭಕ್ತರೊಬ್ಬರು. 14-16ನೇ ಶತಮಾನದ ನಡುವೆ ಕರಾವಳಿ- ಮಲೆನಾಡಿನ ಕೆಲವು ಭಾಗಗಳಲ್ಲಿ ಜೈನ್ ಕುಟುಂಬಗಳ ಮುಂದಾಳುಗಳೇ ನ್ಯಾಯ ಪಂಚಾಯ್ತಿಯಂತಹ ಆಯಕಟ್ಟಿನ ಜಾಗಗಳಲ್ಲಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು. ಇದಕ್ಕೆ ಕರ್ನಾಟಕದ ಈ ಭೂಭಾಗದಲ್ಲಿ ಅವತ್ತಿಗೆ ಇದ್ದ ಜೈನ ಅರಸ ಮನೆತನಗಳು, ಪಾಳೇಗಾರರ ಬೆಂಬಲವೂ ಪ್ರಮುಖ ಕಾರಣವಿರಬಹುದು.

ಧರ್ಮಸ್ಥಳಕ್ಕೆ ಅಂದು ವಾದಿರಾಜರ ಭೇಟಿಯ ಹಿಂದೆ ಕರ್ನಾಟಕದ ಉತ್ತರ ಭಾಗದಲ್ಲಿ ನಡೆಯುತ್ತಿದ್ದ ಕೆಳಗಿನ ಘಟನಾವಳಿಗಳು ಕಾರಣ ಇರಬಹುದು. ಇದೇ ಹೊತ್ತಿಗೆ ವಚನ ಚಳವಳಿಯನ್ನು ಹತ್ತಿಕ್ಕಿದ್ದ ವಿಜಯನಗರ ಸಾಮ್ರಾಜ್ಯ ತನ್ನ ಉಚ್ಛ್ರಾಯದಲ್ಲಿತ್ತು. ಇತಿಹಾಸಕಾರ ಬರ್ಟನ್‌ ಸ್ಟೈನ್‌ ಬರೆದಿರುವ ‘ವಿಜಯನಗರ’ ಇತಿಹಾಸದಲ್ಲಿ, ಇದೇ ಕಾಲಘಟ್ಟದಲ್ಲಿ ಶೈವ ಮತ್ತು ವೈಷ್ಣವರ ನಡುವಿನ ಶತಮಾನಗಳ ಕಾದಾಟ ಸ್ವಲ್ಪ ಮಟ್ಟಿಗೆ ತಣ್ಣಗಾಗಿ, ಮಧ್ಯದ ಶಾಂತಿ ಮಾರ್ಗವನ್ನು ಹಿಡಿಯುವ ಕಡೆಗೆ ಹೊರಟ ಸುಳಿವುಗಳು ಸಿಗುತ್ತವೆ. 13-16ನೇ ಶತಮಾನದ ನಡುವೆ ವಿಜಯನಗರ ಸಾಮ್ರಾಜ್ಯದಲ್ಲಿ ಶೈವರ ಶೃಂಗೇರಿಗೂ, ವೈಷ್ಣವರ ಶ್ರೀರಂಗಕ್ಕೂ ಸಮಾನ ಪ್ರಮಾಣದಲ್ಲಿ ರಾಜಾಶ್ರಯ ಸಿಕ್ಕಿತ್ತು ಎಂದು ಸ್ಟೈನ್‌ ಉಲ್ಲೇಖಿಸುತ್ತಾರೆ. ಜತೆಗೆ, ವರ್ಣಾಶ್ರಮ ಪದ್ಧತಿಯ ಮುಂದುವರಿಸುವ ಭಾಗವಾಗಿ, ಸಾಮಾಜಿಕ ಅಧಿಕಾರದ ಸ್ಥಾಪನೆಗಾಗಿ ದೇವಸ್ಥಾನಗಳನ್ನು ಹುಟ್ಟುಹಾಕುವ ಕೆಲಸವೂ ಭರದಿಂದ ಸಾಗಿದ ಕಾಲವಿದು. ಅದರಲ್ಲಿ ವೈಷ್ಣವ ಪರಂಪರೆಯ ಭಾಗವಾಗಿರುವ ವಾದಿರಾಜ ತೀರ್ಥ, ವ್ಯಾಸರಾಜ ಹಾಗೂ ವಿದ್ಯಾರಣ್ಯರು ಸ್ಥಾಪಿಸಿದ ಹಲವು ದೇವಾಲಯಗಳ ಚಿತ್ರಣವೂ ಕರ್ನಾಟಕದಾದ್ಯಂತ ಸಿಗುತ್ತವೆ. ದೇವರುಗಳ ಮೂರ್ತಿ ಪ್ರತಿಷ್ಠಾಪನೆ, ಪ್ರತಿಮೆಗಳಿಗೆ ಅಲಂಕಾರ, ಅವುಗಳಿಗೆ ನಿತ್ಯ ಪೂಜೆಯಂತಹ ಕಟ್ಟಳೆಗಳನ್ನು ಒಳಗೊಂಡ ಆಗಮ ಪದ್ಧತಿಯ ಅಳವಡಿಕೆ, ದೇವಸ್ಥಾನಗಳ ಆಡಳಿತ ಹೀಗೆ ಹಲವು ವಿಚಾರಗಳು ಗಟ್ಟಿನೆಲೆ ಪಡೆದುಕೊಂಡ ಕಾಲವೂ ಇದೆ.

ಕದ್ರಿಯ ಶಿವಲಿಂಗ

“ಕರ್ನಾಟಕದ ನಟ್ಟನಡುವೆ ಇರುವ ಬಂಕಾಪುರಕ್ಕೆ ವಿದ್ಯಾರಣ್ಯರು ಭೇಟಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿಯೇ ಸ್ಮಾರ್ಥ ಬ್ರಾಹ್ಮಣರಿಗೆ ಇಲ್ಲಿನ ವಿರೂಪಾಕ್ಷ ದೇವಸ್ಥಾನದ ಪೂಜಾರಿಕೆ ನೀಡಲಾಯಿತು,’’ ಎನ್ನುತ್ತಾರೆ ಆಧ್ಯಾತ್ಮಿಕ ಸಾಧಕರು, ಸ್ನೇಹಿತರೂ ಆಗಿರುವ ನಂದನ್ ಪೂಜಾರ್. ಬಂಕಾಪುರದ ವಿರೂಪಾಕ್ಷ ದೇವಸ್ಥಾನದಲ್ಲಿ ವಿರೂಪಾಕ್ಷ ದೇವರ ಮೂರ್ತಿಗೆ ಇವರ ಕುಟುಂಬಸ್ಥರೇ ಇವತ್ತಿಗೂ ಪೂಜೆ ಸಲ್ಲಿಸುತ್ತಿದ್ದಾರೆ. ಸ್ಮಾರ್ಥ ಬ್ರಾಹ್ಮಣರೂ ಆಗಮ ಶಾಸ್ತ್ರವನ್ನು ಅಳವಡಿಸಿಕೊಂಡು ಮೂರ್ತಿ ಆರಾಧನೆ ಆರಂಭಿಸಿದಕ್ಕೆ ಸಾಕಷ್ಟು ಉದಾಹರಣೆಗಳು ಕರ್ನಾಟಕದ ಉದ್ದಗಲಕ್ಕೂ ಸಿಗುತ್ತವೆ. ಬಹುಶಃ ಅಂದಿಗೆ ವಿಜಯ ನಗರ ಸಾಮ್ರಾಜ್ಯದ ರಾಜಾಶ್ರಯದ ಅಡಿಯಲ್ಲಿ ನಡೆದ ಇಂತಹ ದೇವಸ್ಥಾನಗಳ ಪ್ರತಿಷ್ಠಾಪನೆಯ ಕಾರ್ಯವನ್ನೇ ‘ಧರ್ಮ ಸಂಸ್ಥಾಪನೆ’ ಎಂದುಕೊಂಡಿರಲೂ ಬಹುದು. ಇದರ ಭಾಗವಾಗಿಯೇ ವಾದಿರಾಜರು ಧರ್ಮಸ್ಥಳಕ್ಕೂ ಭೇಟಿ ನೀಡಿರುವ ಸಾಧ್ಯತೆಯೂ ಇದೆ. ಶೈವರು ಆರಾಧಿಸುವ ಲಿಂಗಕ್ಕೆ ಮಂಜುನಾಥ ಸ್ವಾಮಿ ಎಂಬ ನಾಮಕರಣವನ್ನು ವಾದಿರಾಜರೇ ಮಾಡಿದರು. ಜತೆಗೆ, ದೇವಸ್ಥಾನಕ್ಕೆ ಮಾಧ್ವ ಅರ್ಚಕರ ನೇಮಕ ಮತ್ತು ಜೈನ ಕುಟುಂಬದ ಮೇಲ್ವಿಚಾರಣೆಯ ಮುಂದುವರಿಕೆ ಅವರ ನೇತೃತ್ವದಲ್ಲಿಯೇ ನಡೆಯುತ್ತದೆ ಎಂಬುದಕ್ಕೂ ಉಲ್ಲೇಖಗಳಿವೆ. ಒಟ್ಟಾರೆ, ತ್ರಿಮಸ್ಥರು ಮಾತ್ರವಲ್ಲ, ಮತ್ತೊಂದು ಧರ್ಮದವರನ್ನೂ ಆಡಳಿತದಲ್ಲಿ ಒಪ್ಪಿಕೊಂಡಾದರೂ ಸರಿ, ಅಲೌಕಿಕ ಪರಂಪರೆಯನ್ನು ಮುಂದುವರಿಸಲು ನಡೆದ ಶಾಂತಿಯುತ ಒಳ ಒಪ್ಪಂದ ಇದಿರಬಹುದು. ಪರಿಣಾಮ, ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಕಳೆದ ಶತಮಾನದಲ್ಲಿ ಕರ್ನಾಟಕದಲ್ಲಿ ಸೃಷ್ಟಿಯಾದ ಅಲೌಕಿಕದೆಡೆಗಿನ ಅಪಾರವಾಗಿರುವ ಭಕ್ತಿ.     

ಮುಂದಿನ ಭಾಗದಲ್ಲಿ: ನಾಲ್ಕು ಹೆಗ್ಗಡೆ ಕುಟುಂಬಗಳು: ಬ್ರಿಟಿಷರೊಂದಿಗೆ ಕೈಜೋಡಿಸಿದವರಿಗೆ ಮನ್ನಣೆ

ಪ್ರಶಾಂತ್‌ ಹುಲ್ಕೋಡ್‌

ಪತ್ರಕರ್ತರು.

ಇದನ್ನು ಓದಿದ್ದೀರಾ? ಧರ್ಮಸ್ಥಳ: ಮುಖ್ಯವಾಹಿನಿಯ ಆಟ ಮತ್ತು ಡಿಜಿಟಲ್ ಪ್ರತಿರೋಧ | ಭಾಗ 1

More articles

Latest article