ಸ್ವಪಕ್ಷದ ನಾಯಕತ್ವ ತಪ್ಪು ಮಾಡಿದರೆ, ಜನವಿರೋಧಿ ಕೆಲಸ ಮಾಡಿದರೆ ಪಕ್ಷದ ಒಳಗಿದ್ದವರು ಟೀಕಿಸಬಾರದೇ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಖಂಡಿತಾ ಟೀಕಿಸಬೇಕು. ಆದರೆ ಅದು ಆಯಾ ಪಕ್ಷಗಳ ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸಬೇಕೆ ವಿನಃ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಆರೋಪಿಸಬಾರದು. ಇದರಿಂದಾಗಿ ವಿರೋಧ ಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಇಂತಹ ಸೂಕ್ಷ್ಮತೆ ರಾಜಣ್ಣನಂತಹ ಅನುಭವಿ ಹಿರಿಯ ರಾಜಕಾರಣಿಗೆ ಇಲ್ಲವಲ್ಲಾ ಎನ್ನುವುದೇ ಅಚ್ಚರಿದಾಯಕ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಸಹಕಾರಿ ಸಚಿವ ಕೆ.ಎನ್.ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಲಾಗಿದೆ. ಅನಗತ್ಯ ಅರೋಪಗಳಿಂದ ತಮ್ಮದೇ ಪಕ್ಷಕ್ಕೆ ಮುಜುಗರ ಮಾಡುತ್ತಾ ವಿರೋಧ ಪಕ್ಷಗಳಿಗೆ ಅಸ್ತ್ರವನ್ನು ಒದಗಿಸುತ್ತಾ ಬಂದಿದ್ದರಿಂದ ಅವರ ಸಚಿವ ಸ್ಥಾನದ ತಲೆದಂಡವಾಗಿದೆ.
ಬಿಜೆಪಿಯ ಮತಗಳ್ಳತನ ಕುರಿತು ರಾಹುಲ್ ಗಾಂಧಿಯವರು ದೇಶಾದ್ಯಂತ ಅಭಿಯಾನವನ್ನೇ ಆರಂಭಿಸಿರುವ ಸಂದರ್ಭದಲ್ಲಿ ಅದರ ವಿರುದ್ಧ ಹೇಳಿಕೆ ಕೊಡುವ ದುಸ್ಸಾಹಸವನ್ನು ಮಾಡಿದ ರಾಜಣ್ಣನವರ ತಲೆದಂಡ ನಿರೀಕ್ಷಿತವಾಗಿತ್ತು. ರಾಜಣ್ಣನವರನ್ನು ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಆದೇಶಿಸಿತು. ವಜಾ ಮಾಡುವ ಸೂಚನೆ ಸಿಗುತ್ತಿದ್ದಂತೆಯೇ ರಾಜಣ್ಣನವರು ರಾಜೀನಾಮೆ ಪತ್ರ ಬರೆದು ಸಿಎಂ ರವರಿಗೆ ತಲುಪಿಸಿದ್ದರಾದರೂ ಅಷ್ಟರಲ್ಲೇ ಕಾಲ ಮಿಂಚಿತ್ತು. ಸ್ವತಃ ಸಿದ್ದರಾಮಯ್ಯನವರೇ ರಾಜಣ್ಣನವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಹೈಕಮಾಂಡ್ ಆದೇಶ ಮೀರಲಾಗದೇ ಅಸಹಾಯಕರಾಗ ಬೇಕಾಯ್ತು.
ಇಷ್ಟಕ್ಕೂ ಈ ವಾಚಾಳಿ ರಾಜಣ್ಣನವರು ಸಿದ್ದರಾಮಯ್ಯನವರ ಕಟ್ಟಾ ಸಮರ್ಥಕರಾಗಿದ್ದರು. ಸಿದ್ದರಾಮಯ್ಯನವರ ಕೃಪಾಕಟಾಕ್ಷ ತನ್ನ ಮೇಲೆ ಸದಾ ಇದ್ದೇ ಇರುತ್ತದೆ ಎಂದು ನಂಬಿ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡತೊಡಗಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷಗಿರಿ ಕೊಟ್ಟರೆ ಸಚಿವ ಸ್ಥಾನ ಬಿಡುವೆ ಎಂದರು. ಕಾಂಗ್ರೆಸ್ಸಿನ ರಾಜ್ಯ ಉಸ್ತುವಾರಿಗಳಾದ ಸುರ್ಜೆವಾಲರವರು ಬಂದು ಶಾಸಕರ ಜೊತೆಗೆ ಸಮಾಲೋಚನೆ ಮಾಡಿದ್ದನ್ನೂ ಟೀಕಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರವರ ಮೇಲೆ ಸಮಯ ಸಿಕ್ಕಗಲೆಲ್ಲಾ ಹರಿಹಾಯ್ದರು. ಸೆಪ್ಟಂಬರ್ ತಿಂಗಳಲ್ಲಿ ಕಾಂಗ್ರೆಸ್ಸಿನಲ್ಲಿ ಕ್ರಾಂತಿಯಾಗುತ್ತದೆ ಎಂದು ಘೋಷಿಸಿ ಸಂಚಲನ ಸೃಷ್ಟಿಸಿದರು. ಈ ಎಲ್ಲವನ್ನೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಹಿಸಿಕೊಂಡಿತ್ತು. ಒಬ್ಬ ದಲಿತ ಸಚಿವನ ಮೇಲೆ ಕ್ರಮ ತೆಗೆದುಕೊಂಡರೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸುಮ್ಮನಾಗಿತ್ತು. ಮೇಲಾಗಿ ಸಿಎಂ ಸಿದ್ದರಾಮಯ್ಯನವರ ಬೆಂಬಲವೂ ರಾಜಣ್ಣನವರಿಗಿತ್ತು.
ಆದರೆ ಯಾವಾಗ ಕಾಂಗ್ರೆಸ್ ಪಕ್ಷದ ಉನ್ನತ ನಾಯಕ ರಾಹುಲ್ ಗಾಂಧಿಯವರು ಆರಂಭಿಸಿದ ಮತಗಳ್ಳತನ ಅಭಿಯಾನದ ವಿರುದ್ಧ ರಾಜಣ್ಣನವರು ತಮ್ಮ ನಾಲಿಗೆಯನ್ನು ಹರಿಬಿಟ್ಟರೋ, ಯಾವಾಗ ರಾಜಣ್ಣನವರ ಮಾತುಗಳು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತೋ ಆಗ ಕೈ ಪಾಳಯದ ಹೈಕಮಾಂಡ್ ಕೆಂಡಾಮಂಡಲವಾಯ್ತು. ಆಗಲೇ ರಾಜಣ್ಣನವರ ತಲೆದಂಡಕ್ಕೆ ಮುಹೂರ್ತ ಇಟ್ಟಾಗಿತ್ತು.
ಈ ಹಿಂದೆ ಹಲವಾರು ಬಾರಿ ಸುರ್ಜೆವಾಲರವರು ” ಮಾತಿನ ಮೇಲೆ ನಿಯಂತ್ರಣವಿರಲಿ” ಎಂದು ರಾಜಣ್ಣನವರಿಗೆ ಎಚ್ಚರಿಸಿಯಾಗಿತ್ತು. ಡಿಕೆ ಶಿವಕುಮಾರರವರು ರಾಜಣ್ಣನವರ ವಿರುದ್ಧ ಹೈಕಮಾಂಡಿಗೆ ದೂರು ನೀಡಿಯಾಗಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ” ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕೆಂದು ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಎಚ್ಚರಿಕೆ ಕೊಟ್ಟಾಗಿತ್ತು. ಆದರೂ ರಾಜಣ್ಣ ತಮ್ಮ ನಾಲಿಗೆಗೆ ನಿಯಂತ್ರಣ ಹಾಕಲಿಲ್ಲ. ಸ್ವಪಕ್ಷೀಯರ ವಿರುದ್ಧ ಟೀಕಿಸುವುದನ್ನು ಬಿಡಲಿಲ್ಲ. ಸೆಪ್ಟಂಬರ್ ಗೆ ಅದೇನು ಕ್ರಾಂತಿಯಾಗುತ್ತಿತ್ತೋ ಗೊತ್ತಿಲ್ಲ. ಆಗಸ್ಟ್ ನಲ್ಲೇ ರಾಜಣ್ಣನವರ ತಲೆದಂಡದ ಕ್ರಾಂತಿ ನಡೆದಿದ್ದಕ್ಕೆ ಅವರ ಸ್ವಯಂಕೃತ ಹೇಳಿಕೆಗಳೇ ಕಾರಣ ಎನ್ನುವುದು ಸುಳ್ಳಲ್ಲ.
ಇಷ್ಟಕ್ಕೂ ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡುವಂತಹ ಯಾವ ಮಾತನ್ನು ರಾಜಣ್ಣ ಹೇಳಿದ್ದರು? “ಮತದಾರರ ಪಟ್ಟಿಯನ್ನು ಸಿದ್ದಪಡಿಸಿದ್ದು ಕಾಂಗ್ರೆಸ್ ಸರಕಾರ. ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಕೊಟ್ಟಿದ್ದಾಗ ಪರಿಶೀಲಿಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು” ಎಂದು ತಮ್ಮದೇ ಸರಕಾರದ ಬಗ್ಗೆ ಟೀಕೆ ಮಾಡಿದ್ದೇ ಅವರ ಸಚಿವಗಿರಿಗೆ ಕಂಟಕವನ್ನು ತಂದುಕೊಟ್ಟಿತು. ಈ ಮಾತುಗಳಿಂದ ವಿರೋಧ ಪಕ್ಷದವರ ಕೈಗೆ ಅಸ್ತ್ರವನ್ನು ಕೊಟ್ಟಂತಾಯ್ತು. ಬಿಜೆಪಿಗರು ರಾಜಣ್ಣನವರ ಮಾತುಗಳನ್ನು ಬಳಸಿಕೊಂಡು “ಮತಗಳ್ಳತನಕ್ಕೆ ಕಾಂಗ್ರೆಸ್ ಕಾರಣ” ಎಂದು ಆರೋಪಿಸ ತೊಡಗಿದರು. ಇದು ದೇಶಾದ್ಯಂತ ಬಿಜೆಪಿಯ ಮತಗಳ್ಳತನದ ಬಗ್ಗೆ ಆಂದೋಲನ ಮಾಡುತ್ತಿರುವ ರಾಹುಲ್ ಗಾಂಧಿಯವರಿಗೆ ನುಂಗಲಾಗದ ತುತ್ತಾಗಿತ್ತು. ಹೀಗಾಗಿ ರಾಜಣ್ಣನವರನ್ನು ಕ್ಯಾಬಿನೆಟ್ ನಿಂದ ವಜಾ ಮಾಡಲಾಯ್ತು.
ರಾಜಣ್ಣನವರನ್ನು ಸಚಿವ ಸ್ಥಾನದಿಂದ ಉಚ್ಚಾಟನೆ ಮಾಡಲು ಹಲವು ಆಯಾಮಗಳಿವೆ.
- ಕಾಂಗ್ರೆಸ್ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಯಾರೇ ಮಾಡಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಕಾಂಗೈ ನಾಯಕರಿಗೆ ತಿಳಿಸಲಾಯ್ತು.
- ಆಗಸ್ಟ್ 11 ರಂದು ಅಧಿವೇಶನ ಆರಂಭದ ಮೊದಲ ದಿನವಾಗಿದ್ದು ಇದೇ ದಿನ ರಾಜಣ್ಣನವರನ್ನು ವಜಾ ಮಾಡುವ ಮೂಲಕ ವಿರೋಧ ಪಕ್ಷದವರು ಸರಕಾರದ ನ್ಯೂನತೆಗಳ ಬಗ್ಗೆ ಚರ್ಚಿಸುವ ಬದಲಾಗಿ ರಾಜಣ್ಣನವರ ವಜಾ ವಿಷಯವನ್ನು ಚರ್ಚಿಸುವಂತೆ ಮಾಡುವ ಮೂಲಕ ಪ್ರತಿಪಕ್ಷಗಳನ್ನು ಡೈವರ್ಟ್ ಮಾಡವ ತಂತ್ರಗಾರಿಕೆ ಈ ವಜಾ ಕ್ರಮದ ಹಿಂದಿತ್ತು.
- ರಾಹುಲ್ ಗಾಂಧಿಯವರು ಆರಂಭಿಸಿದ ಮತಗಳ್ಳತನ ವಿರೋಧಿ ಹೋರಾಟಕ್ಕೆ ಸ್ವಪಕ್ಷೀಯರಿಂದ ಟೀಕೆಗಳು ಬರದಂತೆ ತಡೆಯಬೇಕಿತ್ತು.
- ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗ ಸಚಿವನ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ಡೋಂಟಕೇರ್ ಸ್ವಭಾವದ ಸಿದ್ದರಾಮಯ್ಯನವರನ್ನು ನಿಯಂತ್ರಿಸುವ ಕೆಲಸವೂ ರಾಜಣ್ಣನವರ ವಜಾ ನಿರ್ಧಾರದ ಹಿಂದಿತ್ತು.
ರಾಹುಲ್ ಗಾಂಧಿಯವರು ಸಿಡಿಸಿದ ಮತಗಳ್ಳತನದ ಆರೋಪದಿಂದಾಗಿ ಇಡೀ ಬಿಜೆಪಿ ಪಕ್ಷದಲ್ಲಿ ಕಂಪನ ಶುರುವಾಗಿದೆ. ಚುನಾವಣಾ ಆಯೋಗದ ಸಹಕಾರದಿಂದ ಬಿಜೆಪಿ ಪಕ್ಷವು ವಂಚನೆಯಿಂದ ಅಧಿಕಾರಕ್ಕೆ ಬಂದಿದೆ ಎಂಬ ಇಂಡಿಯಾ ಮೈತ್ರಿ ಕೂಟದ ಆರೋಪ ಬಿಜೆಪಿಯವರಿಗೆ ನುಂಗಲಾಗದ ತುತ್ತಾಗಿದೆ. ಇದರಿಂದಾಗಿ ಬಿಜೆಪಿಯ ನಾಯಕರೆಲ್ಲಾ ರಾಹುಲ್ ಗಾಂಧಿಯವರನ್ನು ಟೀಕಿಸಲು ಆರಂಭಿಸಿದ್ದಾರೆ. ಚುನಾವಣಾ ಆಯೋಗದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಣ್ಣನವರು ಹೇಳಿದ ಮಾತುಗಳ ಕೆಲವು ಪದಗಳನ್ನು ಮಾತ್ರ ತೆಗೆದುಕೊಂಡು “ನೋಡಿ, ಕಾಂಗ್ರೆಸ್ ಸಚಿವರೇ ಒಪ್ಪಿಕೊಂಡಿದ್ದಾರೆ, ಓಟರ್ ಲಿಸ್ಟ್ ಕಾಂಗ್ರೆಸ್ ಸರಕಾರವೇ ಸಿದ್ಧಗೊಳಿಸಿದೆ ಎಂದು ಹೇಳಿದ್ದಾರೆ” ಎಂದು ರಾಹುಲ್ ಗಾಂಧಿಯವರ ವಿರುದ್ಧದ ಟೀಕೆಗೆ ರಾಜಣ್ಣನವರ ಹೇಳಿಕೆಯನ್ನು ಬಳಸಿ ಕೊಳ್ಳುತ್ತಿದ್ದಾರೆ.
ಆದರೆ ರಾಜಣ್ಣನವರ ಪೂರ್ತಿ ಹೇಳಿಕೆಯನ್ನು ಬಿಜೆಪಿಗರು ಹೇಳುತ್ತಿಲ್ಲ. “ಮೋದಿಯವರು ಮತಗಳ್ಳತನ ಮಾಡಿಯೇ ಮತ್ತೆ ಪ್ರಧಾನಿಯಾಗಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ ಗೋಲ್ಮಾಲ್ ಮಾಡಲಾಗಿದೆ. ಹತ್ತು ಜನ ವಾಸಿಸುವ ವಿಳಾಸದಲ್ಲಿ 60 ಜನ ಇದ್ದಾರೆಂದು ಮತ ಪಟ್ಟಿಯಲ್ಲಿ ಸೇರಿಸಲಾಗಿದೆ…” ಎಂದೆಲ್ಲಾ ರಾಜಣ್ಣ ಬಿಜೆಪಿ ವಿರುದ್ಧದ ಮಾತುಗಳನ್ನೇ ಆಡಿದ್ದಾರೆ. ಆದರೆ ಈ ಬಿಜೆಪಿಗರು ಮಾತ್ರ ರಾಜಣ್ಣನವರ ಮೊದಲಿನ ವಾಕ್ಯಗಳನ್ನು ಮಾತ್ರ ತೆಗೆದುಕೊಂಡು ಮುಂದಿನ ವಾಕ್ಯಗಳನ್ನು ಮರೆಮಾಚಿ ರಾಹುಲ್ ಗಾಂಧಿಯವರ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಹಾರ ಮಾಡುತ್ತಿದ್ದಾರೆ.
ಈಗ ರಾಜಣ್ಣನವರ ಮೇಲೆ ಈ ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಇದ್ದಕ್ಕಿದ್ದಂತೆ ಅಕ್ಕರೆ ಉಕ್ಕಿ ಬಂದಂತಿದೆ. “ಸತ್ಯ ಹೇಳಿದ್ದಕ್ಕೆ ರಾಜಣ್ಣನವರನ್ನು ವಜಾ ಮಾಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ” ಎನ್ನುವ ಆರೋಪಗಳನ್ನು ಕಾಂಗ್ರೆಸ್ ವಿರುದ್ಧ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಮಾತಾಡಿದ ಯತ್ನಾಳ, ಈಶ್ವರಪ್ಪ, ಎಸ್ ಟಿ ಸೋಮಶೇಖರ್, ಹೆಬ್ಬಾರ್ ಇವರನ್ನೆಲ್ಲಾ ಪಕ್ಷದಿಂದಲೇ ಉಚ್ಚಾಟನೆ ಮಾಡಿದ್ದನ್ನು ಈ ಬಿಜೆಪಿಗರು ಮರೆಮಾಚಿಕೊಳ್ಳುತ್ತಾರೆ. ಹಾಗೆ ಅಮಾನತ್ತುಗೊಂಡವರದ್ದೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಯಾಕೆ ಬಿಜೆಪಿಗರು ಸುಮ್ಮನಿರಲಿಲ್ಲ?. ಬಿಜೆಪಿ ಮಾಡಿದರೆ ಸರಿ, ಬೇರೆ ಪಕ್ಷ ಮಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎನ್ನುವುದು ಕೇಸರಿ ಪಕ್ಷದವರ ಆತ್ಮವಂಚಕ ನಡೆಯಾಗಿದೆ.
ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ಧಾಂತ, ರೀತಿ ನೀತಿ ಬೈಲಾ ಚೌಕಟ್ಟುಗಳಿರುತ್ತವೆ. ಅವುಗಳನ್ನು ಉಲ್ಲಂಘಿಸುವವರನ್ನು ಉಚ್ಚಾಟನೆ ಮಾಡುವ ನಿಯಮ ಪಕ್ಷಗಳ ಬೈಲಾದಲ್ಲಿರುತ್ತದೆ. ಪಕ್ಷದಲ್ಲಿರುವ ಕಾರ್ಯಕರ್ತರಿಂದ ಹಿಡಿದು ನಾಯಕರಿಗೂ ಇದು ಅಪ್ಲೈ ಆಗುತ್ತದೆ. ಪಕ್ಷದ ಶಿಸ್ತು, ನಿಯಮ ಮೀರಿದವರು, ಪಕ್ಷದ ಸಿದ್ಧಾಂತದ ವಿರುದ್ಧ ನಡೆದುಕೊಳ್ಳುವವರು ಅಮಾನತ್ತು ಇಲ್ಲವೇ ವಜಾ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯೇ ಬರುವುದಿಲ್ಲ. ಇಷ್ಟಕ್ಕೂ ಪಕ್ಷದ ಸಿದ್ಧಾಂತದ ವಿರುದ್ಧ, ಪಕ್ಷದ ನಾಯಕತ್ವದ ವಿರುದ್ಧ ನಡೆದುಕೊಂಡರೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದರೆ ಪಕ್ಷದಲ್ಲಿ ಇರುವ ಅಗತ್ಯವೇ ಇಲ್ಲ. ಅಂತವರು ಪಕ್ಷವನ್ನು ತೊರೆದು, ಹೊರಗೆ ಬಂದು ಟೀಕಿಸುವ, ಆರೋಪಿಸುವ ಕೆಲಸ ಮಾಡಬಹುದಾಗಿದೆ. ಪಕ್ಷದ ಒಳಗಿದ್ದೂ ಪಕ್ಷಕ್ಕೆ ಮುಜುಗರ ಮಾಡುತ್ತೇವೆ ಎಂಬುದು ಖಂಡಿತಾ ಸಮರ್ಥನೀಯವಲ್ಲ.
ಹಲವಾರು ಬಾರಿ ಎಚ್ಚರಿಸಿದರೂ ತಿದ್ದಿಕೊಳ್ಳದೇ ಇದ್ದಾಗ ರಾಜಣ್ಣನವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇನ್ನೂ ಮತ್ತೆ ಹೀಗೆಯೇ ಪಕ್ಷದ ಸಿದ್ಧಾಂತ ಅಥವಾ ನಾಯಕತ್ವದ ವಿರುದ್ಧ ರಾಜಣ್ಣ ಆರೋಪಿಸುತ್ತಲೇ ಹೋದರೆ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವುದು ಖಂಡಿತ. ಎಲ್ಲಾ ಪಕ್ಷದವರೂ ಹೀಗೆಯೇ ಮಾಡಿವೆ. ಆದರೆ ಬಿಜೆಪಿ ಯಂತಹ ಪಕ್ಷ ತಾನು ಮಾಡಿದ್ದನ್ನೆಲ್ಲಾ ಪಕ್ಕಕ್ಕಿಟ್ಟು ಬೇರೆ ಪಕ್ಷ ಮಾಡಿದಾಗ ಹುಯಿಲೆಬ್ಬಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಅಪಪ್ರಚಾರ ಮಾಡುತ್ತದೆ.
ರಾಜಣ್ಣನವರ ಸಚಿವ ಸ್ಥಾನದ ತಲೆದಂಡ ಸ್ವಪಕ್ಷ ಟೀಕಾಸುರರಿಗೆ ಎಚ್ಚರಿಕೆ ಗಂಟೆಯಾಗಿದೆ. ರಾಜಣ್ಣನವರ ವಜಾದ ಹಿಂದಿರುವ ಕಾಂಗ್ರೆಸ್ ಅಜಂಡಾ ಕೂಡಾ ಇದೇ ಆಗಿದೆ. ಹಾಗಾದರೆ ಸ್ವಪಕ್ಷದ ನಾಯಕತ್ವ ತಪ್ಪು ಮಾಡಿದರೆ, ಜನವಿರೋಧಿ ಕೆಲಸ ಮಾಡಿದರೆ ಪಕ್ಷದ ಒಳಗಿದ್ದವರು ಟೀಕಿಸಬಾರದೇ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಖಂಡಿತಾ ಟೀಕಿಸಬೇಕು. ಆದರೆ ಅದು ಆಯಾ ಪಕ್ಷಗಳ ಸೂಕ್ತ ವೇದಿಕೆಗಳಲ್ಲಿ ಪ್ರಶ್ನಿಸಬೇಕೇ ವಿನಃ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಆರೋಪಿಸಬಾರದು. ಇದರಿಂದಾಗಿ ವಿರೋಧ ಪಕ್ಷಗಳ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಇಂತಹ ಸೂಕ್ಷ್ಮತೆ ರಾಜಣ್ಣನಂತಹ ಅನುಭವಿ ಹಿರಿಯ ರಾಜಕಾರಣಿಗೆ ಇಲ್ಲವಲ್ಲಾ ಎನ್ನುವುದೇ ಅಚ್ಚರಿದಾಯಕ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿದ್ದೀರಾ?- ಸಿನೆಮಾ | ಸು.ಫ್ರಂ.ಸೋ- ಗಡಿಬಿಡಿ ಧಾವಂತಗಳ ಸುಂದರ ಎರಚು ಬಣ್ಣದ ಕ್ರಾಫ್ಟ್!