ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು… ಹೀಗೆ ಗುರ್ಪಾಲನ ಟೀ ಅಂಗಡಿಯೆಂದರೆ ಒಂದು ಸಂಪೂರ್ಣ ಇಕೋ-ಸಿಸ್ಟಮ್ ಎಂಬಂತಾಗಿದೆ. – ಪ್ರಸಾದ್ ನಾಯ್ಕ್, ದೆಹಲಿ.
“ಅಲ್ಲೊಂದು ಹಕ್ಕಿ ನೋಡಿದಿರಾ?”, ಎಂದರವರು.
ನಾನು ತಿರುಗಿ ನೋಡಿದೆ. ನನಗಿಂತ ಒಂದಡಿ ದೂರದಲ್ಲಿ ಪುಟ್ಟ ಹಕ್ಕಿಯೊಂದು ತನ್ನ ಪಾಡಿಗೆ ಅತ್ತಿತ್ತ ನೋಡುತ್ತಿತ್ತು. ಹೆಚ್ಚೆಂದರೆ ಅರ್ಧ ಬೊಗಸೆ ಗಾತ್ರದ ಪುಟ್ಟ ದೇಹ, ಕಡುಗಪ್ಪು ಬಣ್ಣ, ನಡುವಿನಲ್ಲೊಂದಿಷ್ಟು ಗೋಡೆಗೆ ಮೆತ್ತಿದ ಪಾಚಿಯಂತೆ ಮಂದ ಹಸಿರು. ಥಟ್ಟನೆ ನೋಡಿದರೆ ಹಮ್ಮಿಂಗ್ ಬರ್ಡ್ ನೆನಪಾಗಬೇಕು. ಅಷ್ಟರಮಟ್ಟಿನ ಹೊಳಪು ಮತ್ತು ಸೌಂದರ್ಯ. ಹಕ್ಕಿ ಈಗ ನನ್ನನ್ನು ನೋಡುತ್ತಿತ್ತು. ನಾನು ಅದರತ್ತ ನೋಡಿದೆ. ಒಂದೇ ಒಂದು ಹೆಜ್ಜೆ ಮುಂದಿಟ್ಟರೆ ಇಬ್ಬರೂ ತಮ್ಮ ದಾರಿ ಹಿಡಿಯುವುದು ಖಚಿತವಾದ್ದರಿಂದ ನಾವಿಬ್ಬರೂ ಒಂದಿಂಚೂ ಕದಲಲಿಲ್ಲ. ಹೀಗೆ ಇಬ್ಬರೂ ಪರಸ್ಪರರನ್ನು ಒಂದಿಷ್ಟು ನೋಡಿ ಕಣ್ತುಂಬಿಕೊಂಡೆವು.
ಇದ್ಯಾವ ಹಕ್ಕಿಯಪ್ಪಾ ಎಂದು ಅವರಲ್ಲಿ ಕೇಳಿದರೆ ಇಲ್ಲಿ ಹೀಗೆ ತರಹೇವಾರಿ ಹಕ್ಕಿಗಳು ಬಂದುಹೋಗುತ್ತಿರುತ್ತವೆ ಎಂದ ಆತ. ಅಂದಹಾಗೆ ಆತನ ಹೆಸರು ಗುರುಪಾಲ್. ಆದರೆ ಎಲ್ಲರೂ ಅವನನ್ನು ತಮ್ಮದೇ ಶೈಲಿಯಲ್ಲಿ ಕರೆಯುತ್ತಾ ಅದು ಗುರ್ಪಾಲ್ ಆಗಿಬಿಟ್ಟಿದೆ. ನಮ್ಮ ಆಫೀಸಿನ ಬುಡದಲ್ಲಿ ಒಂಚೂರು ಜಾಗವನ್ನು ಆವರಿಸಿಕೊಂಡು ಗುರ್ಪಾಲ್ ಅಲ್ಲಿ ಟೀ ಅಂಗಡಿ ಇಟ್ಟಿದ್ದಾನೆ. ಬೆಂಕಿಪೊಟ್ಟಣದಂತೆ ಕಾಣುವ ಆ ಪುಟ್ಟ ಟಿನ್ ಹೌಸಿನಲ್ಲಿ ಕೆಲ ಬಗೆಯ ಬಿಸ್ಕತ್ತುಗಳು, ಮಠ್ಠೀ, ಚಿಕ್ಕಪುಟ್ಟ ಪ್ಯಾಕೇಜ್ ತಿನಿಸುಗಳು, ಸಿಗರೇಟುಗಳು… ಹೀಗೆ ಏನೇನೋ ಇವೆ. ಸಾಮಾನ್ಯವಾಗಿ ಉತ್ತರಭಾರತದಲ್ಲಿ ಚಹಾ ಸಿಗುವ ಈ ಬಗೆಯ ಗೂಡಂಗಡಿಗಳನ್ನು ಠಪ್ರೀ ಎನ್ನುತ್ತಾರೆ. ನಮ್ಮ ಗುರ್ಪಾಲ್ ಇಂಥದ್ದೊಂದು ಠಪ್ರೀಯ ಮಾಲೀಕ.
ನೀವು ಈ ಏರಿಯಾದಲ್ಲಿ ಚಂದದ ಹಕ್ಕಿಯೊಂದನ್ನು ಕೊನೆಯ ಬಾರಿ ನೋಡಿದ್ದು ಯಾವಾಗ ಎಂದು ಕೇಳಿದ ಗುರ್ಪಾಲ್. ಉತ್ತರವು ತಕ್ಷಣಕ್ಕೆ ಹೊಳೆಯದ ಕಾರಣ ನಾವು ತಲೆ ಕೆರೆದುಕೊಂಡವು. ದಿನದ ಹದಿನೈದು ತಾಸು ಕಂಪ್ಯೂಟರ್-ಸ್ಮಾರ್ಟ್‍ಫೋನ್ ಸ್ಕ್ರೀನುಗಳಲ್ಲಿ ಬಂಧಿಯಾಗಿರುವ ನಮ್ಮಂಥವರಿಗೆ ಹೊರಗಡೆ ಅಡ್ಡಾಡುವುದಾಗಲೀ, ಠಪ್ರೀಗಳಲ್ಲಿ ಚಹಾ ಸವಿಯುವುದಾಗಲೀ, ಹಕ್ಕಿಗಳನ್ನು ನೋಡುವುದಾಗಲೀ ಕಷ್ಟಸಾಧ್ಯದ ಮಾತು. ಕೊನೆಯ ಬಾರಿ ಹೀಗೆ ಬಿಡುವು ಮಾಡಿಕೊಂಡು ಠಪ್ರಿಯೊಂದರಲ್ಲಿ ಚಹಾ ಕುಡಿದಿದ್ದೇ ನನಗೆ ನೆನಪಿಲ್ಲ. ಹೀಗಿರುವಾಗ ಹಕ್ಕಿಯ ಬಗ್ಗೆ ನಾನೇನು ಹೇಳಬಲ್ಲೆ! ನೀನೇ ಹೇಳಪ್ಪ ಅಂದುಬಿಟ್ಟೆ ನಾನು.
ಅಂದಹಾಗೆ ಈ ಗುರ್ಪಾಲ್ ತನ್ನ ಸುತ್ತಮುತ್ತ ಒಂದು ಪುಟ್ಟ ಜೀವಸಂಕುಲವನ್ನೇ ಪೋಷಿಸುತ್ತಿದ್ದಾನೆ ಎಂಬುದು ನನಗೆ ನಂತರ ತಿಳಿದುಬಂತು. ಆತ ತಾನಿರುವ ಪುಟ್ಟ ಜಾಗದಲ್ಲೇ ತಟ್ಟೆಯೊಂದರಲ್ಲಿ ನೀರಿಟ್ಟಿದ್ದಾನೆ. ದಿನದ ನಿರ್ದಿಷ್ಟ ಸಮಯದಲ್ಲಿ ಕಾಳುಗಳನ್ನೂ ಚೆಲ್ಲುತ್ತಾನಂತೆ. ಹೀಗಾಗಿ ನಾವಿರುವ ಕಾಂಕ್ರೀಟ್ ಕಾಡಿನಲ್ಲಿ ಸಾಮಾನ್ಯವಾಗಿ ಎಲ್ಲೂ ಕಾಣಸಿಗದ ಹಕ್ಕಿಗಳು ಇವನ ಬಳಿ ಬರುತ್ತವೆ. ಈತನ ಟೀ ಸಿದ್ಧತೆಗಾಗಿ ಬರುವ ಹಾಲಿನಲ್ಲಿ ಅಲ್ಲಿರುವ ಕೆಲ ಬೆಕ್ಕುಗಳಿಗೂ ಪಾಲಿದೆ. ಹೀಗಾಗಿ ಕೆಲವು ಬೆಕ್ಕುಗಳು ಠೊಣಪರಾಗಿಬಿಟ್ಟಿವೆ. “ಏನಪ್ಪಾ… ಈ ಬೆಕ್ಕುಗಳನ್ನು ಪೈಲ್ವಾನರಾಗಿ ಮಾಡಿಬಿಟ್ಟೆ?”, ಎಂದರೆ “ಪಾಪದವು ಸೊರಗಿಹೋಗಿವೆ ಸಾಬ್. ಮುಂಚೆ ನೋಡಬೇಕಿತ್ತು ನೀವು”, ಅಂತೆಲ್ಲ ರಾಗವೆಳೆಯುತ್ತಾನೆ ಗುರ್ಪಾಲ್.
ಗುರ್ಪಾಲ್ ಕೊಡುವ ತಿಂಡಿಗಳಿಗಾಗಿ ಸುತ್ತಮುತ್ತಲಿರುವ ಬೀದಿನಾಯಿಗಳು ಒಂದು ಕಣ್ಣಿಟ್ಟಿರುತ್ತವೆ. ಬಹುಷಃ ಈತ ದನಗಳಿಗೋಸ್ಕರವೂ ಏನೋ ಒಂದು ವ್ಯವಸ್ಥೆ ಮಾಡಿಕೊಂಡಿದ್ದಾನೆ. ಹೀಗಾಗಿ ನಮ್ಮ ಕಾರ್ಪೋರೆಟ್ ಓಣಿಯಲ್ಲೀಗ ದನಗಳೂ ಕಾಣತೊಡಗಿವೆ. ಹೀಗೆ ಮೈಕೊರೆಯುವ ಚಳಿಯಲ್ಲಿ ಚಾಯ್-ಸಿಗರೇಟು ಕಾಂಬೋ ಸವಿಯಲು ಬರುವ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು, ಸರಕಾರಿ ಅಧಿಕಾರಿಗಳು, ದಾರಿಹೋಕರು, ನಾಯಿ-ಬೆಕ್ಕುಗಳು, ದನಗಳು, ಹಕ್ಕಿಗಳು… ಹೀಗೆ ಗುರ್ಪಾಲನ ಟೀ ಅಂಗಡಿಯೆಂದರೆ ಒಂದು ಸಂಪೂರ್ಣ ಇಕೋ-ಸಿಸ್ಟಮ್ ಎಂಬಂತಾಗಿದೆ.
ಇವಿಷ್ಟೂ ಸಂಗತಿಗಳ ಮಧ್ಯೆ ಗುರ್ಪಾಲನಿಗೆ ವಿಶೇಷ ಆಸಕ್ತಿಯಿರುವುದು ಹಕ್ಕಿಗಳ ಬಗ್ಗೆ. ಮೊದಲೇ ಹೇಳಿದಂತೆ ಅವನು ಮಾರ್ಜಾಲಪ್ರಿಯನೂ ಹೌದು. “ಬರೀ ಆಫೀಸುಗಳಿಂದ ತುಂಬಿ ಬೋಳುಬೋಳಾಗಿತ್ತು ಈ ಏರಿಯಾ. ಈಗ ನೋಡಿ, ಕನಿಷ್ಠ ನಾಲ್ಕೈದು ಬಗೆಯ ಹಕ್ಕಿಗಳಾದರೂ ಬರುತ್ತಿವೆ. ಚೀಂವ್ ಚೀಂವ್ ಎನ್ನುತ್ತಾ ತಮ್ಮ ಪಾಡಿಗೆ ಹಾಡಿಕೊಂಡಿರುತ್ತವೆ. ನನಗೂ ಒಂದೊಳ್ಳೆಯ ಜೊತೆ”, ಎನ್ನುತ್ತಾನೆ ಗುರ್ಪಾಲ್. ಈತನಿಂದಾಗಿ ಕೆಲವು ಹಕ್ಕಿಗಳು ಅಲ್ಲೇ ಆಸುಪಾಸಿನಲ್ಲಿ ಬೀಡುಬಿಟ್ಟಿರಲೂಬಹುದು. ಇವುಗಳನ್ನೆಲ್ಲಾ ನೋಡಿದರೆ ಈತ ಈ ಹಕ್ಕಿಗಳ ಭಾಷೆಯನ್ನು ಅರ್ಥ ಮಾಡಿಕೊಂಡಿರಬಹುದೇ ಎಂದು ನಾನು ಕಣ್ಣರಳಿಸುತ್ತೇನೆ. ಅಲ್ಲಿಗೆ ಒಂದು ಸುತ್ತಿನ ಟೀ ಮುಗಿದು ಮತ್ತೊಂದು ಪಾತ್ರೆಯಲ್ಲಿ ಹಾಲು ಕುದಿಯತೊಡಗುತ್ತದೆ.
ಗುರ್ಪಾಲ್ ತನ್ನೂರಾದ ಬಿಹಾರದಲ್ಲೂ ಇಂಥದ್ದೊಂದು ವಿಶೇಷ ವ್ಯವಸ್ಥೆಯೊಂದನ್ನು ಹಕ್ಕಿಗಳಿಗಾಗಿ ಮಾಡಿಟ್ಟಿದ್ದಾನಂತೆ. ಅವನಿರುವ ಪುಟ್ಟ ಮನೆಯ ಕಟ್ಟಡದಲ್ಲಿ ಹಲವು ಪಾರಿವಾಳ ಗೂಡುಗಳಿವೆಯಂತೆ. ಇನ್ನು ಕಿಟಕಿಯ ಜೊತೆಗಿರುವ ಛಜ್ಜಾಗಳನ್ನು ಕೊಂಚ ವಿಸ್ತರಿಸಿ ಅವುಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ಸ್ಥಳಾವಕಾಶವನ್ನು ಬೇರೆ ಮಾಡಿಕೊಟ್ಟಿದ್ದೇನೆ ಅನ್ನುತ್ತಾನೆ. ಈ ಬಗ್ಗೆ ತನ್ನ ಪರಿಚಿತರು, ಗೆಳೆಯರು ಮತ್ತು ಸಂಬಂಧಿಕರಿಗೆ ಹೇಳಿ ಅವರಲ್ಲಿ ಕೂಡ ಇಂಥದ್ದೊಂದು ಅಭ್ಯಾಸವನ್ನು ಹುಟ್ಟಿಸಿದ್ದಾನಂತೆ ಈತ.
ಜೀವ ಹೋಗುತ್ತಿದ್ದರೂ ನೆರಳಿನಲ್ಲಿ ಸಾಯೋಣವೆಂದರೆ ಒಂದೇ ಒಂದು ಗಿಡ ಇಲ್ಲಿ ಸಿಗುವುದಿಲ್ಲ ಎಂದು ನಾವೆಲ್ಲ ಹಿಂದೆ ಮಾತಾಡಿಕೊಳ್ಳುವುದಿತ್ತು. ನಗರವು ಬೇಸಿಗೆಯಲ್ಲಿ ಕಾದ ಕಾವಲಿಯಂತಾಗುವಾಗ ಮರಗಳು ಮತ್ತಷ್ಟು ನೆನಪಾಗುತ್ತವೆ. ಹಸಿರಿನ ಸುತ್ತ ಅರಳಿಕೊಳ್ಳುವ ಒಂದು ಚಂದದ ಜೀವವ್ಯವಸ್ಥೆಯ ನೆನಪಾಗುತ್ತದೆ. ಅಂದಹಾಗೆ ನಾವೆಲ್ಲ ಹೀಗೆ ಕಾಡುಹರಟೆ ಮಾಡಿಕೊಂಡು, ಬೊಗಳೆ ಭಾಷಣ ಬಿಗಿದುಕೊಂಡು ಅಬ್ಬೇಪಾರಿಗಳಂತೆ ಬದುಕುತ್ತಿದ್ದರೆ, ಈ ಗುರ್ಪಾಲ್ ಯಾರ ಮರ್ಜಿಗೂ ಕಾಯದೆ ತಂದಿರುವ ಚಂದದ ಬದಲಾವಣೆಗಳನ್ನು ನೋಡಿದರೆ ನಾವೆಲ್ಲ ಈ ಭೂಮಿಗೆ ಭಾರ ಎಂದನಿಸಿಬಿಡುತ್ತದೆ. ಈ ನಿಟ್ಟಿನಲ್ಲಿ ಆತನೊಬ್ಬ ಹೀರೋ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಗುರ್ಪಾಲನ ಕತೆ ಕೇಳುತ್ತಿದ್ದಾಗ ನನಗೆ ಥಟ್ಟನೆ ನೆನಪಾಗಿದ್ದು ರೋಸಾ ಪಾರ್ಕ್ಸ್.ಖ್ಯಾತ ಲೇಖಕಿ ಸುಸಾನ್ ಕೇಯ್ನ್ ತಮ್ಮ “Quiet” ಕೃತಿಯಲ್ಲಿ ರೋಸಾರ ಬಗ್ಗೆ ಮನಮುಟ್ಟುವಂತೆ ಬರೆಯುತ್ತಾರೆ. ಅದು ಡಿಸೆಂಬರ್ 01, 1955 ರ ದಿನ. ಎಂದಿನಂತೆ ಆ ಮಧ್ಯಾಹ್ನವೂ ನೀರಸವಾಗಿತ್ತು. ವೃತ್ತಿಯ ಸಲುವಾಗಿ ಓಡಾಟವೆಂದರೆ ರೋಸಾರಿಗೆ ನಿತ್ಯದ ದಿನಚರಿ. ಆ ದಿನದ ಕೆಲಸವನ್ನು ಮುಗಿಸಿದ ರೋಸಾ ಪಾರ್ಕ್ಸ್ ಮನೆಗೆ ಮರಳಲು ಎಂದಿನಂತೆ ಬಸ್ ಹತ್ತಿದ್ದರು. ಆದರೆ ಮುಂದಿನ ಕೆಲ ನಿಮಿಷಗಳಲ್ಲಿ ನಡೆಯಲಿದ್ದ ಬೆಳವಣಿಗೆಗಳು ಅವರ ಮತ್ತು ಇಡೀ ಅಮೆರಿಕಾದ ದಿಕ್ಕು ಬದಲಿಸಲಿದೆಯೆಂಬ ಸುಳಿವು ಅವರಿಗಾದರೂ ಎಲ್ಲಿತ್ತು?
ಆಗಿನ್ನೂ ಅಮೆರಿಕಾದಲ್ಲಿದ್ದ ಕಪ್ಪು ವರ್ಣೀಯರಿಗೆ ಸಾಂವಿಧಾನಿಕ ಹಕ್ಕುಗಳು ದೊರಕಿರಲಿಲ್ಲ. ಹೀಗಾಗಿ ಬಿಳಿಯರು ಇವರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಿದ್ದು ಆ ಕಾಲಕ್ಕೆ ಸಾಮಾನ್ಯ ಸಂಗತಿಯಾಗಿತ್ತು. ಅಂದು ಆಗಿದ್ದು ಕೂಡ ಅದೇ. ರೋಸಾ ಪಾರ್ಕ್ಸ್ ಮನೆಗೆ ಮರಳಲು ಎಂದಿನಂತೆ ಬಸ್ ಹತ್ತಿ ಸೀಟೊಂದರಲ್ಲಿ ಕೂತರು. ಸ್ವಲ್ಪ ಹೊತ್ತಿನ ನಂತರ ಬಿಳಿಯನೊಬ್ಬನೂ ಬಸ್ ಹತ್ತಿದ್ದರಿಂದ, ಹಿಂಬದಿಯ ಸೀಟಿಗೆ ತೆರಳುವಂತೆ ಮುಂದೆ ಕೂತಿದ್ದ ರೋಸಾ ಸೇರಿದಂತೆ ಮೂರು ಮಂದಿಗೆ ಆದೇಶಿಸಲಾಯಿತು. ಆದರೆ ರೋಸಾರಿಗೆ ಅಂದು ಅದೇನಾಗಿತ್ತೋ! ಅವರು ತಾನು ಕೂತಿದ್ದ ಸೀಟನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಬಿಳಿಯನ ಆಗಮನಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ತಾನಿದ್ದ ಸೀಟಿನಲ್ಲಿ ಬಿಮ್ಮನೆ ಕೂತುಬಿಟ್ಟಿದ್ದರು ರೋಸಾ ಪಾಕ್ರ್ಸ್.
ರೋಸಾ ತನಗರಿವಿಲ್ಲದಂತೆ ದೊಡ್ಡ ಕಾಡ್ಗಿಚ್ಚೊಂದಕ್ಕೆ ಕಿಡಿ ಹಚ್ಚಿದ್ದರು. ಘರ್ಷಣೆಯು ಸಹಜವಾಗಿತ್ತು. ಕೂಡಲೇ ರೋಸಾರನ್ನು ಅರೆಸ್ಟ್ ಮಾಡಲಾಯಿತು. ಶಿಕ್ಷೆಯ ರೂಪದಲ್ಲಿ ದಂಡವನ್ನೂ ಅವರ ಮೇಲೆ ವಿಧಿಸಲಾಯಿತು. ಆದರೆ ಮಾಂಟೋಗ್ಮರಿಯಲ್ಲಿ ನಡೆದ ಈ ಚಿಕ್ಕ ಘಟನೆಯು ಅಮೆರಿಕದಾದ್ಯಂತ ಸುದ್ದಿಯಾಗಿ ದೊಡ್ಡ ಮಟ್ಟಿನ ವಿರೋಧಕ್ಕೆ ಕಾರಣವಾಯಿತು. ಸಾವಿರಾರು ಮಂದಿ ಬೀದಿಗಿಳಿದರು. ಬಾಯ್ಕಾಟ್ ಆಗ್ರಹ ತಾರಕಕ್ಕೇರಿತು. ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕ ಹಕ್ಕುಗಳ ಐತಿಹಾಸಿಕ ಚಳುವಳಿಗೆ ಇದೊಂದು ಪುಟ್ಟ ಘಟನೆಯು ಭರ್ಜರಿಯಾಗಿ ನಾಂದಿ ಹಾಡಿತ್ತು. ಮುಂದೆ ನಾಗರಿಕ ಹಕ್ಕುಗಳ ಚಳುವಳಿಗೆ ಸಂಬಂಧಪಟ್ಟಂತೆ ಮಾರ್ಟಿನ್ ಲೂಥರ್ ಕಿಂಗ್ ವಿಶ್ವದಾದ್ಯಂತ ದೊಡ್ಡ ಹೆಸರಾದರೂ, ಈ ಐತಿಹಾಸಿಕ ಚಳುವಳಿಯ ಮಾತೆಯೆಂದು ಇಂದಿಗೂ ಕರೆಯಲಾಗುವುದು ರೋಸಾರನ್ನೇ.
ಇಲ್ಲಿ ರೋಸಾ ಪಾರ್ಕ್ಸ್ ನನಗೆ ಮುಖ್ಯವಾಗುವುದು ಅಮೆರಿಕಾದ ನಾಗರಿಕ ಹಕ್ಕುಗಳ ಚಳುವಳಿಗೆ ಕಾರಣರಾದರು ಎಂಬುದಕ್ಕಲ್ಲ. ಬದಲಾಗಿ ರೋಸಾ ಪಾರ್ಕ್ಸ್ ಓರ್ವ ಸಾಮಾನ್ಯ ಮಹಿಳೆಯಾಗಿದ್ದರು ಎಂಬ ಸತ್ಯಕ್ಕಾಗಿ. ಮೆಲುದನಿಯಲ್ಲಿ ಮಾತಾಡುತ್ತಿದ್ದ, ಸಾಮಾನ್ಯ ಮಧ್ಯವಯಸ್ಕ ಮಹಿಳೆಯಾಗಿದ್ದ ರೋಸಾ ಪಾಕ್ರ್ಸ್ ಯಾವತ್ತೂ ಹೋರಾಟ-ಚಳುವಳಿ ಎಂದು ಬೀದಿಗಿಳಿದವರೇ ಅಲ್ಲ. ಸ್ವಭಾವತಃ ಅಂತರ್ಮುಖಿ ಬೇರೆ. ತನ್ನ ಕುಟುಂಬ-ಉದ್ಯೋಗ-ಹೊಟ್ಟೆಪಾಡು ಎಂದು ತನ್ನ ಪಾಡಿಗಿದ್ದವರು. ಆದರೆ ಅಂದೇಕೋ ತನ್ನ ಒಳದನಿಗೆ ಕಿವಿಯಾಗಿ ತಣ್ಣಗೆ ಕೂತುಬಿಟ್ಟಿದ್ದರು. ಅಂದು ಆಕೆ ಎಂದಿನಂತೆ ತನ್ನ ಸೀಟನ್ನು ಆ ಬಿಳಿಯನಿಗೆ ಸುಮ್ಮನೆ ಬಿಟ್ಟುಕೊಟ್ಟಿದ್ದರೆ “ಮಾಂಟೆಗ್ಮರಿ ಬಸ್ ಬಾಯ್ಕಾಟ್” ಮಾರುತವು ಸಂಭವಿಸುತ್ತಲೇ ಇರಲಿಲ್ಲ. ಜೊತೆಗೇ ಅಮೆರಿಕಾದಂತಹ ಅಮೆರಿಕಾದ ಹಣೆಬರಹವೂ ಕೂಡ!
ಸಾಮಾಜಿಕ ನ್ಯಾಯಕ್ಕಾಗಿ ತನ್ನದೊಂದು ಪುಟ್ಟ ಪ್ರತಿಭಟನೆ ಎಂದು ಹೆಚ್ಚಿನ ನಿರೀಕ್ಷೆಗಳಿಲ್ಲದೆ ರೋಸಾ ರೋಸಾ ಪಾರ್ಕ್ಸ್ ಅಂದು ಆ ಹೆಜ್ಜೆಯನ್ನಿಟ್ಟಿರಬಹುದು. ತನ್ನ ಸುತ್ತಮುತ್ತ ಕಾಂಕ್ರೀಟ್ ಕಾಡಿದ್ದರೇನು? ತಾನಿರುವ ಕೈಯಳತೆಯ ದೂರದಲ್ಲಿ ಹಸಿರು ಬಿತ್ತುತ್ತೇನೆ, ಹಕ್ಕಿಗಳನ್ನು ಕರೆತರುತ್ತೇನೆ ಎಂದು ಗುರ್ಪಾಲ್ ಯೋಚಿಸಿರಬಹುದು. ಹಿಂದೆ ದೂರದರ್ಶನದಲ್ಲಿ ಸುಂಯ್ಯನೆ ಗಾಳಿಯಂತೆ ಬರುತ್ತಿದ್ದ ಶಕ್ತಿಮಾನ್ “ಛೋಟೀ-ಛೋಟೀ ಮಗರ್ ಮೋಟೀ ಬಾತೇ” (ಚಿಕ್ಕ-ಚಿಕ್ಕ, ಆದರೆ ದೊಡ್ಡ ಸಂಗತಿಗಳು) ಎಂದು ಆಗಾಗ ಹೇಳುತ್ತಿದ್ದ. ಆದರೆ ನಮ್ಮೆಲ್ಲರೊಳಗೂ ಒಬ್ಬ ಸೂಪರ್ ಹೀರೋ ಇರುತ್ತಾನೆ ಎಂಬುದು ಮಾತ್ರ ನಮಗಾಗ ತಿಳಿದಿರಲಿಲ್ಲ.
ಗುರ್ಪಾಲ್ ಈ ಸತ್ಯವನ್ನು ಮತ್ತೊಮ್ಮೆ ನನಗೆ ನೆನಪಿಸಿದ್ದ.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.