“ಜಗತ್ತಿಗೆ ಅತಿಮಾನುಷ  ಶಕ್ತಿಗಳ ಅಗತ್ಯವಿಲ್ಲ” – ಬುದ್ಧ

Most read

ನಮ್ಮ ನಮ್ಮ ಯೋಚನೆ, ನಡವಳಿಕೆಗಳು ಕೆಲಸದ ಮೂಲಕ ಕ್ರಿಯೆಯಾಗಿ ಹೊರಬರುತ್ತದೆ. ನಮ್ಮ ಯೋಚನೆ ಮತ್ತು ಕ್ರಿಯೆಗಳು ಈ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆಯೆ ಹೊರತು ಯಾವುದೇ ಅತಿಮಾನುಷ ಶಕ್ತಿಗಳು ಪ್ರಭಾವ ಬೀರುವುದಿಲ್ಲ. ಇವೆಲ್ಲವೂ ಮಾನವ ನಿರ್ಮಿತ ಎಂಬುದನ್ನು ನಾವು ಅರಿಯಬೇಕು – ಡಾ. ನಾಗೇಶ್‌ ಮೌರ್ಯ, ಬೌದ್ಧ ಚಿಂತಕರು.

ಜಗತ್ತು ಐದು ನಿಯಮಗಳಿಗಾನುಣವಾಗಿ ನಡೆಯುತ್ತದೆ.

ಪ್ರಕೃತಿಯಲ್ಲಿ ಜೀವರಾಶಿಗಳ ಹುಟ್ಟು ಮತ್ತು ಸಾವಿನ ಸರಪಳಿಯಲ್ಲಿ, ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹಾಗೊಂದು ವೇಳೆ ಸಾವಿಲ್ಲದಂತೆ ಆಗಬೇಕಾದರೆ ಬುದ್ಧರಾಗಬೇಕು. ಒಮ್ಮೆ ಬುದ್ಧರಾದವರಿಗೆ ಮತ್ತೆ ಹುಟ್ಟುವ ಆಸೆ ಇರುವುದಿಲ್ಲ.

ಜೀವವೆಂದರೆ, ಮನಸ್ಸು ಮತ್ತು ದೇಹದೊಂದಿಗಿನ ಸಂರಚನೆಯಾಗಿದೆ. ಮನಸ್ಸು ಎಂದರೆ ಸಂವೇದನೆ, ಇಚ್ಛೆ, ಗ್ರಹಿಕೆ ಮತ್ತು ಪ್ರಜ್ಞೆಗಳನ್ನೊಳಗೊಂಡಿರುವಂತಹದು. ಜೀವ ಎಂದರೆ ನಾಲ್ಕು ಧಾತುಗಳಾದ ಭೂಮಿ, ನೀರು ಉಸಿರಾಟ ಮತ್ತು ಬೆಂಕಿ ಅಂದರೆ ಶಕ್ತಿ ಉತ್ಪಾದನೆ ಇವುಗಳಿಂದಾದ ದೇಹವಾಗಿದೆ.

ಸಾವೆಂದರೆ, ಮನಸ್ಸು ಮತ್ತು ದೇಹದ ಬೇರ್ಪಡುವಿಕೆಯಾಗಿದೆ.

ಪುನರ್ ಭವವೆಂದರೆ, ಮನಸ್ಸು ಮತ್ತು ದೇಹದ ಮರು ಸಂಯೋಜನೆಯಾಗಿದೆ.

ಈ ಪ್ರಕ್ರಿಯೆಯನ್ನು ನಾಮ-ರೂಪ ಎಂದು ಕರೆಯುತ್ತಾರೆ.

 ಪ್ರಪಂಚದಲ್ಲಿ ನಾಲ್ಕು ರೀತಿಯ ಹುಟ್ಟುಗಳಿವೆ;

 1. ಉದರ / ಗರ್ಭಧಾರಣೆಯ ಹುಟ್ಟು  Womb Birth

2. ತತ್ತಿ / ಮೊಟ್ಟೆ ಮೂಲಕದಿಂದ ಹುಟ್ಟು  Egg Birth

3. ಅದೃಶ್ಯ ಕ್ರಿಯೆಯ ಮೂಲಕ ಹುಟ್ಟು  Moisture Birth

4. ಪವಾಡ ಜನನ Miraculous Birth

ಉದರ / ಗರ್ಭಧಾರಣೆಯ ಹುಟ್ಟು Womb Birth:

ಒಂದು ಹೆಣ್ಣು ಗಂಡು ಮಿಲನದ ಮೂಲಕ ಗರ್ಭಿಣಿಗೊಂಡ ಮಹಿಳೆ ಒಂಬತ್ತು ತಿಂಗಳ ನಂತರ ಮಗುವಿಗೆ ಜನ್ಮ ನೀಡುತ್ತಾಳೆ. ಇದು ಗರ್ಭಧಾರಣೆಯ ಹುಟ್ಟು. ಇದೇ ರೀತಿಯಲ್ಲಿ ಕೆಲವೊಂದು ಪ್ರಾಣಿಗಳಲ್ಲೂ ಗರ್ಭಧರಿಸಿ ಜನಿಸುವ ಪ್ರಾಣಿಗಳಿವೆ. ಇಲ್ಲಿ ಜೈವಿಕ ಕಾರಣಗಳಿಂದ ಮಕ್ಕಳಾಗುತ್ತವೆ. ಒಮ್ಮೆ ಹೆಣ್ಣು ಗರ್ಭ ಧರಿಸಿದ ಮೇಲೆ ಆ ತಾಯಿಯು ಯಾವ ಆಹಾರ ಸೇವಿಸುತ್ತಾಳೆ, ಯಾವ ರೀತಿಯ ವಾತಾವರಣದಲ್ಲಿ ಜೀವಿಸುತ್ತಾಳೆ ಎಂಬ ಅಂಶಗಳ ಜೊತೆಗೆ, ಅವಳ ಗಂಡನ ವಂಶವಾಹಿಗಳು ಮತ್ತು ಆ ಹೆಣ್ಣಿನ ವಂಶವಾಹಿಗಳು ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ವಿಜ್ಞಾನವು ದೃಢೀಕರಿಸುತ್ತದೆ.

ತತ್ತಿ / ಮೊಟ್ಟೆ ಮೂಲಕದಿಂದ ಹುಟ್ಟು Egg Birth: ಮೊಟ್ಟೆ ಅಥವಾ ತತ್ತಿ ಇಟ್ಟು ಅದಕ್ಕೆ ನಿರ್ಧಿಷ್ಟ ಪ್ರಕಾರದ ಕಾವು ಕೊಟ್ಟು ಜನ್ಮ ನೀಡುವುದು. ಸಾಮಾನ್ಯವಾಗಿ ಪಕ್ಷಿಗಳು, ಉರಗ ಜಾತಿಗೆ ಸೇರಿದ ಹಾವುಗಳು ಮೊಸಳೆಗಳು ಉಡಗಳು ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದರೆ ಡೈನೋಸರ್ ಎನ್ನುವ ಪ್ರಾಣಿ ಮೊಟ್ಟೆ ಇಡುತ್ತಿತ್ತು. ಇದು ಅಚ್ಚರಿಯಾದರೂ ಸತ್ಯ.

ಅದೃಶ್ಯ ಜನನ Moisture Birth: ಅಂದರೆ ಯಾವುದೇ ಒಂದು ಸತ್ತ ಪ್ರಾಣಿ- ಅಥವಾ ಹಣ್ಣು ತರಕಾರಿಗಳು ಸ್ವಲ್ಪ ಸಮಯದ ನಂತರ ಕೊಳೆತು, ಆ ಸತ್ತ ದೇಹದೊಳಗಿಂದ ಅಥವಾ ಕೊಳೆತ  ಹಣ್ಣಿನಿಂದ ಹುಟ್ಟಿ ಬರುವ ಕ್ರಿಮಿ ಕೀಟಗಳು, ಹಾಗೆಯೇ ಅಕ್ಕಿ, ಹಿಟ್ಟು, ಬೇಳೆ ಕಾಳು ಹೀಗೆ ಯಾವುದೇ ಕಾಳುಗಳಿಂದ ನಿರ್ದಿಷ್ಟ ವಾತಾವರಣದಲ್ಲಿ ರಾಸಾಯನಿಕ ಕ್ರಿಯೆಯಾಗಿ ಮತ್ತೊಂದು ಜೀವಿಯ ಜನನಕ್ಕೆ ಕಾರಣವಾಗುವ ಪ್ರಕ್ರಿಯೆಯದು.

ಪವಾಡ ಜನನ Miraculous Birth: ಪುರಾಣಗಳಲ್ಲಿ, ಪೌರಾಣಿಕ ಕಥೆಗಳಲ್ಲಿ ಮತ್ತು ಅವತಾರ ಕಥೆಗಳಲ್ಲಿ ಪವಾಡ ಜನನಗಳು ಕಂಡುಬರುತ್ತವೆ. ಇವು ಬಹುತೇಕ ಕಾಲ್ಪನಿಕ ಕಥೆಗಳಷ್ಟೆ ಎಂದು ಹೇಳಬಹುದು.  ಈ ಎಲ್ಲ ಪ್ರಕಾರದ ಜನನಗಳು ಪ್ರಕೃತಿ ನಿಯಮದಿಂದ ಆಗುವಂತವು. ಇದಕ್ಕೆ ಅತಿಮಾನುಷ ಶಕ್ತಿಗಳ ಅಗತ್ಯ ಬೇಕಿಲ್ಲ.

ಹೀಗೆ ಜನಿಸಿದ ಯಾರೇ ಆಗಲಿ ಅವರು ಅಥವಾ ಅವುಗಳು ಮತ್ತೆ ಈ ಕೆಳಗಿನ ಐದು ರೀತಿಯ ನಿಯಮಗಳಿಗೆ ಅನುಸಾರವಾಗಿ ನಡೆಯಬೇಕಾಗುತ್ತದೆ. ಅವುಗಳೆಂದರೆ

1. ಋತು ನಿಯಮ

2. ಬೀಜ ನಿಯಮ

3. ಕಮ್ಮ ನಿಯಮ

4. ಧಮ್ಮ ನಿಯಮ ಮತ್ತು

5. ಚಿತ್ತ ನಿಯಮ

ಋತು ನಿಯಮ : ಪ್ರಕೃತಿ ನಿಯಮದಲ್ಲಿ ಪ್ರತಿಯೊಂದು ಕ್ರಿಯೆಯು ಒಂದು ನಿರ್ದಿಷ್ಟ ಪರಿಮಾಣದಲ್ಲಿ ಕೆಲಸ ಮಾಡುತ್ತಿರುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ವಸಂತಕಾಲ. ಸೂರ್ಯ ಚಂದ್ರ ಬೇರೆ ಗ್ರಹಗಳು ಹೀಗೆ ಎಲ್ಲವೂ ಒಂದಕ್ಕೊಂದು ಸಂವಹನಗೊಂಡು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ವ್ಯತ್ಯಾಸಗಳು ಆದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳಿಗೂ ಯಾವುದೇ ಅತಿಮಾನುಷ ಶಕ್ತಿಗಳ ಅಗತ್ಯವಿರುವುದಿಲ್ಲ. ಕಾಲ ಕಾಲಕ್ಕೆ ಮಳೆ, ಇಬ್ಬನಿ ಬೀಳುವುದು, ಬಿಸಿಲು,  ಚಳಿ ಬರುವುದು ಕಾಲಕ್ಕೆ ತಕ್ಕಂತೆ ಹೂ ಹಣ್ಣುಗಳು ಪ್ರಕೃತಿಯಲ್ಲಿ ಸಿಗುತ್ತವೆ. ಇದರ ಹಿಂದಿನ ವೈಜ್ಞಾನಿಕ ಸತ್ಯವೇ ಅದು ಋತು ನಿಯಮವಾಗಿರುತ್ತದೆ.

ಋತು ನಿಯಮದಂತೆ ಬೇಸಿಗೆಕಾಲದಲ್ಲಿ ಬಿಸಿಲು, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ, ವಸಂತಕಾಲದಲ್ಲಿ ಹೂವು ಹಣ್ಣು ಮತ್ತು ಸುಂದರವಾದ ಸೌಂದರ್ಯ ಸೃಷ್ಟಿಯಾಗುತ್ತದೆ. ಹೀಗೆ ಆಯಾಯ ಋತುವಿಗೆ ಅನುಗುಣವಾಗಿ ಪ್ರಕೃತಿ ತನ್ನ ಕೆಲಸಗಳನ್ನು ಮಾಡುತ್ತಿರುತ್ತದೆ. ಮಳೆಗಾಲದಲ್ಲಿ ರೈತರು ಭೂಮಿಯಲ್ಲಿ ಉತ್ತು ಬಿತ್ತುವ ಕೆಲಸವನ್ನು ಮಾಡುತ್ತಾರೆ. ಈ ಋತುವಿನಿಂದ ಮತ್ತೊಂದು ಋತುವಿಗೆ ಬರುವಷ್ಟರಲ್ಲಿ ರೈತರು ಹಾಕಿದ ಬೀಜಗಳು ಮೊಳಕೆ ಒಡೆದು, ಗಿಡವಾಗಿ ಫಸಲನ್ನು ಕೊಟ್ಟು ಕೊಯಲಿಗೆ ಬಂದಿರುತ್ತವೆ. ಹೀಗೆ ಮುಂದಿನ ಋತುವಿನಲ್ಲಿ ರೈತ ಬೆಳೆದ ಫಸಲನ್ನು ಒಕ್ಕಣೆ ಮಾಡಿ ದವಸ ಧಾನ್ಯಗಳ ರೂಪಕ್ಕೆ ತಂದು ಮಾರಾಟ ಮಾಡುವ ಇಲ್ಲವೇ ತಾನೇ ಉಪಯೋಗಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಾನೆ.

ಒಂದು ವೇಳೆ ಮಳೆಗಾಲದ ಋತುವಿನಲ್ಲಿ ಮಳೆ ಬಾರದೆ ಹೋದರೆ ರೈತ ಅವನ ಸಂಪೂರ್ಣ ಕೆಲಸವನ್ನು ಕೈ ಬಿಡಬೇಕಾಗುತ್ತದೆ. ಅವನು ಯಾವುದೇ ಉತ್ಪಾದನೆಯಲ್ಲಿ ತೊಡಗುವುದಿಲ್ಲ. ಇದರಿಂದ ರೈತರ ಜೀವನದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ರೈತರು ಬರವನ್ನು ಎದುರಿಸ ಬೇಕಾಗುತ್ತದೆ. ಸಾಲ ಸೋಲ ಮಾಡಿ ಖರ್ಚು ಮಾಡಿದ ಹಣವು ನಷ್ಟವಾಗುತ್ತದೆ. ಇದರಿಂದ ರೈತರು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ ಇದರ ಅರ್ಥ ಯಾವುದೇ ಋತು ತನ್ನ ಕಾರ್ಯವನ್ನ ಸರಿಯಾಗಿ ಮಾಡದೆ ಹೋದರೆ ಅದರಿಂದ ಸಮಾಜದಲ್ಲಿರುವ ಜನರಿಗೆ ನೇರವಾಗಿ ಒಂದಿಲ್ಲ ಒಂದು ಸಮಸ್ಯೆಗಳು ಉಂಟಾಗುತ್ತವೆ. ಅವುಗಳನ್ನ ಎದುರಿಸಲು ತಿಳಿಯದ ಜನರು ಅಗೋಚರ ಅತಿಮಾನುಷ ಶಕ್ತಿಗಳ ಮೊರೆ ಹೋಗುತ್ತಾರೆ. ಇದರಿಂದ ತಮ್ಮ ಸಮಸ್ಯೆ ಪರಿಹಾರವಾಗಬಹುದೆಂದು ನಂಬುತ್ತಾರೆ.  ಕೆಲವೊಮ್ಮೆ ಕಾಕತಾಳಿಯವಾಗಿ ಜನರು ಮಾಡುವ ಪೂಜೆ ಪುನಸ್ಕಾರಗಳಿಗೆ ಅಥವಾ ಆಚರಣೆಗಳಿಗೆ ಅನುಗುಣವಾಗಿ ಅವರು ಅಂದುಕೊಂಡಂತೆ ಕೆಲಸಗಳಾಗಿ ಬಿಡುತ್ತವೆ. ಅದಕ್ಕೆ ಆ ಆಗೋಚರ ಅತಿಮಾನುಷ ಶಕ್ತಿಗಳೇ ಕಾರಣವೆಂದು ಬಲವಾಗಿ ನಂಬಿ ಬಿಡುತ್ತಾರೆ. ವಾಸ್ತವದಲ್ಲಿ ಇದು ಒಮ್ಮೆ ನಡೆಯಬಹುದು. ಆದರೆ ಪ್ರತಿಸಾರಿಯು ಹಾಗೆಯೇ ನಡೆಯುತ್ತದೆಂದು ಹೇಳಲು ಬರುವುದಿಲ್ಲ.

ಬೀಜ ನಿಯಮ: ಬೀಜ ನಿಯಮದ ಪ್ರಕಾರ ಬೀಜ ನೆಲಕ್ಕೆ ಬಿದ್ದು ಮೊಳಕೆ ಒಡೆದು ಚಿಗುರಿ ಗಿಡವಾಗಿ, ಮರವಾಗಿ ಬೆಳೆದು ನಂತರ ಹೂ ಬಿಟ್ಟು ಅದು ಹಣ್ಣಾಗಿ ಅದರಿಂದ ಮತ್ತೆ ಬೀಜ ಉತ್ಪತ್ತಿಯಾಗುವ ಪ್ರಕ್ರಿಯೆ. ಇದು ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಇದಕ್ಕೆ ಕೊನೆ ಎಂಬುದು ಇರುವುದಿಲ್ಲ. ಇಲ್ಲಿಯೂ ಯಾವುದೇ ಅತಿಮಾನುಷ ಶಕ್ತಿಯ ಅವಶ್ಯಕತೆ ಇರುವುದಿಲ್ಲ.

ನೆಲಕ್ಕೆ ಹಾಕಿದ ಪ್ರತಿ ಬೀಜವೂ ಮೊಳಕೆ ಒಡೆಯಲೇಬೇಕೆಂಬ ನಿಯಮವಿಲ್ಲ. ಮೊಳಕೆ ಒಡೆದ ಪ್ರತಿಯೊಂದು ಬೀಜವು ಚಿಗುರಿ ಬೆಳೆದು ಫಲ ನೀಡಲೇಬೇಕೆಂಬ ನಿಯಮ ಇಲ್ಲ. ಈ ಪ್ರಕ್ರಿಯೆಯಲ್ಲಿ ಬೆಳೆದ ಫಸಲು ನೂರಕ್ಕೆ ನೂರು ರೈತನ ಕೈಗೆ ಸಿಗಬೇಕೆಂಬ ನಿಯಮಯೂ ಕೂಡ ಇಲ್ಲ. ಬೀಜ ನಿಯಮದ ಪ್ರಕಾರ ಯಾವುದೇ ಬೀಜ ಮೊಳಕೆ ಒಡೆಯಲು ಆ ಬೀಜದೊಳಗೆ ಹುದುಗಿರುವ ಮೊಳಕೆ ಒಡೆಯುವ ಸಾಮರ್ಥ್ಯದ ಮೇಲೆ ಅದು ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ಬೀಜ ಮೊಳಕೆ ಒಡೆದು ಚಿಗುರಿ ಗಿಡವಾಗುವ ಪ್ರಕ್ರಿಯೆಯಲ್ಲಿ ಮೊಳಕೆಯನ್ನು ಅಥವಾ ಗಿಡವನ್ನು ಯಾವುದಾದರೂ ಪ್ರಾಣಿ ಪಕ್ಷಿಗಳು ತಿಂದು ಬಿಡಬಹುದು. ಮುಂದುವರೆದು ಗಿಡವಾಗಿ ಬೆಳೆದು ಫಲ ನೀಡಿದ ಮೇಲೆ ಆ ಗಿಡದಲ್ಲಿರುವ ಅಷ್ಟೂ ಫಲವು ರೈತನ ಕೈಗೆ ಸೇರುವ ಮುನ್ನ ಪ್ರಕೃತಿಯಲ್ಲಿರುವ ಪಕ್ಷಿಗಳು ಕೀಟಗಳು ಅದರಲ್ಲಿ ತಮಗೆ ಸೇರಬೇಕಾದ ಅಥವಾ ತಮಗೆ ಬೇಕಾದ ಆಹಾರವನ್ನ ತಿಂದು ಉಳಿದಿದ್ದನ್ನು ರೈತನಿಗೆ ಬಿಡುತ್ತವೆ. ಅಂದರೆ ರೈತ ನೆಲಕ್ಕೆ ಹಾಕಿದ ಅಷ್ಟು ಕಾಳುಗಳು ಮೊಳಕೆ ಒಡೆದು ಚಿಗುರಿ ಬೆಳೆದು ಎಲ್ಲಿಯೂ ಒಂದು ಚೂರು ನಷ್ಟವಾಗದಹಾಗೆ ಫಲವನ್ನ ಸಂಪೂರ್ಣವಾಗಿ ರೈತನಿಗೆ ಕೊಡುವ ಯಾವುದೇ ಕಡ್ಡಾಯ ನಿಯಮ ಇರುವುದಿಲ್ಲ. ಇದೊಂದು ಬೀಜ ನಿಯಮದ ಆಧಾರದಲ್ಲಿ ಕೆಲಸ ಮಾಡುತ್ತಿರುತ್ತದೆ.

ಕಮ್ಮ ನಿಯಮ: ಇದು ಬಹಳ ಪರಿಣಾಮಕಾರಿಯಾದುದು. ಪ್ರತಿಯೊಂದು ಘಟನೆಗೆ ಕಾರ್ಯ ಕಾರಣ ಸಂಬಂಧವಿರುತ್ತದೆ. ಒಂದು ಕ್ರಿಯೆಗೆ ಯಾರು ಯಾವ ಸಮಯದಲ್ಲಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಅನ್ನುವುದರ ಆಧಾರದ ಮೇಲೆ ಆ ಕ್ರಿಯೆಯು ಪ್ರಭಾವವನ್ನು ಬೀರುತ್ತದೆ. ಅದು ಸಂತೋಷವಾಗಿರ ಬಹುದು, ದುಃಖವಾಗಿರ ಬಹುದು ಅಥವಾ ಇದ್ಯಾವುದು ಅಲ್ಲದ ತಟಸ್ಥವಾಗಿರುವ ಕ್ರಿಯೆಯಾಗಿರ ಬಹುದು. ಇಲ್ಲಿಯೂ ಯಾವುದೇ ರೀತಿಯ ಅತಿಮಾನುಷ ಶಕ್ತಿಗಳ ಕೈಚಳಕವಿರುವುದಿಲ್ಲ. ಇವೆಲ್ಲವೂ ಒಂದು ವ್ಯವಸ್ಥೆಯ ಮೇಲೆ ನಡೆಯುತ್ತವೆ. ಇದನ್ನೆ ಸೃಷ್ಟಿ ಎನ್ನುವುದು. ಇಲ್ಲಿ ಯಾವುದು ಶಾಶ್ವತವಲ್ಲ, ಯಾವುದು ಸ್ಥಿರವಲ್ಲ, ಯಾವುದು ನಿಂತ ನೀರಲ್ಲ. ಇದು ಸದಾ ಬದಲಾವಣೆಗೆ ಒಳಪಡುವ ಪ್ರಕೃತಿ ನಿಯಮವಾಗಿದೆ.

ನಮ್ಮ ನಮ್ಮ ಯೋಚನೆ, ನಡವಳಿಕೆಗಳು ಕೆಲಸದ ಮೂಲಕ ಕ್ರಿಯೆಯಾಗಿ ಹೊರಬರುತ್ತದೆ. ನಮ್ಮ ಯೋಚನೆ ಮತ್ತು ಕ್ರಿಯೆಗಳು ಈ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆಯೆ ಹೊರತು ಯಾವುದೇ ಅತಿಮಾನುಷ ಶಕ್ತಿಗಳು ಪ್ರಭಾವ ಬೀರುವುದಿಲ್ಲ. ಇವೆಲ್ಲವೂ ಮಾನವ ನಿರ್ಮಿತ ಎಂಬುದನ್ನು ನಾವು ಅರಿಯಬೇಕು.

ಒಬ್ಬ ರೈತ ಹೊಲದಲ್ಲಿ ರಾಗಿಯನ್ನ ಬಿತ್ತನೆ ಮಾಡುತ್ತಾನೆ. ಅದು ಬೆಳೆದು ಮತ್ತೆ ರಾಗಿಯ ರೂಪದಲ್ಲಿಯೇ ವಾಪಸ್ ರೈತನಿಗೆ ಸಿಗುತ್ತದೆ. ಇದಕ್ಕೆ ಬದಲಾಗಿ ಸಾಸಿವೆಯೋ ಬೆಳೆಯೋ ಅಕ್ಕಿಯೋ ಸಿಗುವುದಿಲ್ಲ. ಏಕೆಂದರೆ ಅದು ಬೀಜ ನಿಯಮವಾಗಿರುತ್ತದೆ. ಹಾಗೆಯೇ ಇದರ ಜೊತೆಗೆ ರೈತನ ಕರ್ಮ ನಿಯಮವು ಸೇರಿಕೊಂಡಿರುತ್ತದೆ. ರೈತನು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲವಾಗಿ ದವಸದ ರೂಪದಲ್ಲಿ ಅವನಿಗೆ ಅದು ಸಿಗುತ್ತದೆ. ಒಂದು ವೇಳೆ ಪ್ರಕೃತಿಯ ವೈಪರೀತ್ಯದಿಂದ ಬೆಳೆಗೆ ರೋಗವೋ, ಕೀಟ ಬಾಧೆಯೋ, ಮಳೆಯ ಅಭಾವವೋ ಆಗಿ ನಿರೀಕ್ಷಿತ ಫಲ ಸಿಗದೇ ಹೋಗಬಹುದು. ಅದಕ್ಕೆ ಕಾರಣ ಕರ್ಮ ನಿಯಮವಲ್ಲದೆ ಪ್ರಕೃತಿಯ ವೈಪರೀತ್ಯವೆಂದು ಹೇಳಬೇಕಾಗುತ್ತದೆ. ಕೆಲಸ ಮಾಡುವವರು ಕೆಲಸಕ್ಕೆ ತಕ್ಕ ಪ್ರತಿಫಲ ಕೇಳುವುದು ಸರಿಯಾದುದೇ. ಆದರೆ ನೀಡುವ ಜಾಗದಲ್ಲಿ ಮನುಷ್ಯರಲ್ಲದೆ ಪ್ರಕೃತಿ ಇರುವುದರಿಂದ ನಾವು ಕೇಳಿದ್ದು ಸಿಗದೇ ಇರಬಹುದು ಅಥವಾ ನಮ್ಮ ಕೆಲಸಕ್ಕೆ ಸರಿಯಾದ ಪ್ರತಿಫಲ ಸಿಗದೇ ಇರಬಹುದು. ಈ ವೈಚಾರಿಕತೆಯನ್ನು ನಾವು ತಿಳಿಯದಿದ್ದರೆ ಅಲ್ಲಿಗೆ ಅಗೋಚರ, ಅತಿಮಾನುಷ ಶಕ್ತಿಗಳಾದ ದೇವರು ದೆವ್ವಗಳು ಅಲ್ಲಿಗೆ ಕಾಲಿಡುತ್ತವೆ.

ಧಮ್ಮ ನಿಯಮ: ಧಮ್ಮಕ್ಕೆ ವಿವಿಧ ಅರ್ಥಗಳಿವೆ ಇಲ್ಲಿನ ಅರ್ಥ “ಇದೊಂದು ನೈಸರ್ಗಿಕ ವಿದ್ಯಮಾನ”ವೆಂದು ಹೇಳಬಹುದು. ವಿದ್ಯುತ್ ಶಕ್ತಿಗಳಿಗೆ ಮತ್ತು ಉಬ್ಬರವಿಳಿತಗಳ ಚಲನೆಗಳಿಗೆ ಸಂಬಂಧಿಸಿದ ಸಿದ್ಧಾಂತದಂತೆ ಇದು ಕೆಲಸ ಮಾಡುತ್ತದೆ. ಅಂದರೆ ಇಲ್ಲಿ ಎಲ್ಲವೂ ಬದಲಾಗುತ್ತಲೆ ಇರುತ್ತದೆ. ಈ ವಿಶ್ವದಲ್ಲಿರುವ ಎಲ್ಲವೂ ಬದಲಾವಣೆಯ ನಿಯಮಕ್ಕೆ ಒಳಪಟ್ಟಿರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ.

ಸಾಂದರ್ಭಿಕ ಚಿತ್ರ

ಪ್ರತಿ ಕ್ಷಣವೂ ಜೀವರಾಶಿಗಳನ್ನು ಒಳಗೊಂಡಂತೆ ಮರಗಳು, ಪರ್ವತಗಳು, ನದಿಗಳು, ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಸೌರಮಂಡಲ, ಗೆಲಕ್ಸಿಗಳು ಮತ್ತು ಇಡೀ ವಿಶ್ವವು ಪ್ರತಿ ನ್ಯಾನೋ ಸೆಕೆಂಡುಗಳಲ್ಲಿ ಬದಲಾಗುತ್ತಿರುತ್ತದೆ. ಯಾರೂ ಇದನ್ನು ನಿಯಂತ್ರಿಸುವುದಿಲ್ಲ. ಇದು ಕಾರ್ಯಕಾರಣ ಸಂಬಂಧದ ಮೇಲೆ ಕೆಲಸ ಮಾಡುತ್ತದೆ. ಇದನ್ನೆ ಧಮ್ಮ ನಿಯಮವೆಂದು ಕರೆಯುತ್ತಾರೆ.

ಚಿತ್ತ ನಿಯಮ: ಚಿತ್ತವೆಂದರೆ ಮನಸ್ಸು, ಮನಸ್ಸಿನ ಸ್ವರೂಪವನ್ನು ಇಲ್ಲಿ ವಿವರಿಸಲಾಗಿದೆ. ಒಂದು ಆಲೋಚನೆಯು ಹೇಗೆ ಒಂದು ನ್ಯಾನೋ ಸೆಕೆಂಡಿನಲ್ಲಿ ಉದ್ಭವಿಸುತ್ತದೆ, ಬೆಳೆಯುತ್ತದೆ ಮತ್ತು ಸಾಯುತ್ತದೆ ಇಲ್ಲವೆ ಮುಂದುವರೆಯುತ್ತದೆ ಎಂಬುದರ ಬಗ್ಗೆ ಈ ನಿಯಮ ಕೆಲಸ ಮಾಡುತ್ತದೆ.

ನಾವು ಈ ಆಲೋಚನೆಗಳ ಪ್ರವಾಹವನ್ನು ಮನಸ್ಸು ಎಂದು ಕರೆಯುತ್ತೇವೆ. ಆದ್ದರಿಂದ ಆಲೋಚನೆಗಳ ಹುಟ್ಟು ಮತ್ತು ನಾಶವನ್ನು ಯಾರೂ ನಿಯಂತ್ರಿಸುವುದಿಲ್ಲ ಮತ್ತು ಅದು ಚಿತ್ತದ ನಿಯಮಕ್ಕನುಗುಣವಾಗಿ ಕೆಲಸ ನಿರ್ವಹಿಸುತ್ತದೆ. ಜಗತ್ತಿನ ಪ್ರತಿ ಒಳಿತು ಕೆಡುಕಿನ ಹಿಂದೆ ಈ ಚಿತ್ತ ನಿಯಮದ ಪಾತ್ರವಿರುತ್ತದೆ.

ಡಾ. ನಾಗೇಶ್ ಮೌರ್ಯ

ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್‌ ಬೆಂಗಳೂರು.

ಮೊಬೈಲ್‌ : 9743907399

ಇದನ್ನೂ ಓದಿ- ಬುದ್ಧರ ಮೂರು ಮುಖ್ಯ ಬೋಧನೆಗಳು: ಅನಿಚ್ಚ, ಅನತ್ತ ಮತ್ತು ದುಃಖ

More articles

Latest article