ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಹೆಚ್ಚುವರಿ ಭದ್ರತೆ ಒದಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದ್ದಾರೆ.
ಧರ್ಮಸ್ಥಳದ ಪಾಂಗಾಳದಲ್ಲಿ ಎರಡು ಗುಂಪುಗಳ ನಡುವೆ ನಿನ್ನೆ ಘರ್ಷಣೆ ನಡೆದ ನಂತರ ಧರ್ಮಸ್ಥಳ ಪೊಲೀಸ್ ಠಾಣೆಗೆ ಧಾವಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಗುಂಪು ಘರ್ಷಣೆಯಿಂದ ಎಸ್ ಐಟಿ ತನಿಖೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ತನಿಖೆಯ ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಮೂರು ತುಕಡಿಗಳನ್ನು ಒದಗಿಸಲಾಗಿದೆ ಎಂದರು.
ಪಾಂಗಾಳದಲ್ಲಿ ನಿನ್ನೆ ಸಂಜೆ 5.30 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯೂಟ್ಯೂಬರ್ ಗಳ ಸ್ಥಳಿಯರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿದೆ. ಸೌಜನ್ಯಪರ ಹೋರಾಟಗಾರರು ಎನ್ನಲಾದ ಯೂಟ್ಯೂಬರ್ ಗಳ ಮೇಲೆ ಧರ್ಮಸ್ಥಳದ ಪರವಾಗಿ ಇರುವ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ನಂತರ ಖಾಸಗಿ ಸುದ್ದಿ ವಾಹಿನಿಯ ವರದಿಗಾರರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ದೂರು ಸಲ್ಲಿಸಲಾಗಿದೆ. ಆದರೆ ಖಾಸಗಿ ವಾಹಿನಿ ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆ ಎಂದು ಯೂಟ್ಯೂಬರ್ ಪರ ಇರುವವರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ದಾಖಲಾಗಿರುವ ಯಾರಿಗೂ ಗಂಭೀರದ ಗಾಯಗಳಾಗಿಲ್ಲ. ಹಲ್ಲೆ ನಡೆದ ವಿಡಿಯೊ ಇನ್ನು ಸಿಕ್ಕಿಲ್ಲ. ವಾಹನದ ಗಾಜು ಹಾನಿಗೊಂಡ ವಿಡಿಯೊ ಸಿಕ್ಕಿದೆ. ಎರಡೂ ಕಡೆಯವರ ದೂರುಗಳನ್ನೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವ. ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದು ಸರಿ ಅಲ್ಲ. ಬದಲಾಗಿ ಲಿಖಿತ ದೂರು ನೀಡಬಹುದು. ತಮ್ಮ ತಮ್ಮ ನಡುವೆ ಗಲಾಟೆ ಮಾಡಿಕೊಳ್ಳಬಾರದು ಎಂದು ಎರಡೂ ಕಡೆಯವರಿಗೂ ಎಚ್ಚರಿಕೆ ನೀಡಲಾಗಿದೆ ಎಂದರು.
ಯೂಟ್ಯೂಬರ್ ಗಳು ತಮ್ಮ ನಿಲುವನ್ನು ಹೇಳುತ್ತಿದ್ದಾರೆ. ಯಾವುದು ನಿಜ ಎನ್ನುವುದು ಎಸ್ಐಟಿಗೆ ಮಾತ್ರ ಗೊತ್ತು. ಎಸ್ಐಟಿ ಮುಖ್ಯಸ್ಥರು ರು ಅಧಿಕೃತ ಹೇಳಿಕೆ ನೀಡುವವರೆಗೆ ಯಾರೂ ಊಹಾ ಪೋಹಗಳನ್ನು ಹರಡಬಾರದು. ಸೂಕ್ತ ಸಮಯದಲ್ಲಿ ಎಸ್ಐಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಎಸ್ ಪಿ ಅರುಣ್ ಕೆ. ಹೇಳಿದರು.