ಮೈಸೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲೂ ಮತ ಕಳವು ನಡೆದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಡೆಸುವ ಸಭೆಯಲ್ಲಿ ಈ ಮತ ಕಳವನ್ನು ಪ್ರಸ್ತಾಪಿಸುತ್ತೇನೆ. ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಲಕ್ಷ ಮತದಾರರಿದ್ದು, 8 ವಿಧಾನಸಭಾ ಕ್ಷೇತ್ರಗಳಿವೆ. 2,202 ಮತಗಟ್ಟೆಗಳಿವೆ. ಬೂತ್ ವಾರು ವಿಶ್ಲೇಷಣೆ ಮಾಡಿ ಪಟ್ಟಿ ಮಾಡಲಾಗಿದ್ದು, 292 ಮತಗಟ್ಟೆಗಳಲ್ಲಿ ಇವಿಎಂ ರಿಗ್ಗಿಂಗ್ ನಡೆದಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಚಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 1,45,616 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ 27,522 ಹಾಗೂ ಬಿಜೆಪಿಗೆ 1,18,094 ಮತ ಬಂದಿವೆ. 2018, 2023ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಶೇ 40ಕ್ಕಿಂತ ಹೆಚ್ಚು ಮತಗಳು ಬಂದಿದ್ದವು. ಆದರೆ, 2024ರ ಚುನಾವಣೆಯಲ್ಲಿ ಶೇ 10ಕ್ಕಿಂತಲೂ ಕಡಿಮೆ ಮತಗಳು ಮಾತ್ರ ಬಂದಿರುವುದು ಮತ ಕಳವು ಆಗಿದೆ ಎಂಬುದಕ್ಕೆ ಸಾಕ್ಷಿ ಯಾಗಿದೆ ಎಂದು ಆರೋಪಿಸಿದರು.
ಗ್ರಾಮವೊಂದರ ಬೂತ್ ನಲ್ಲಿ 750 ಮತ ಚಲಾವಣೆಯಾಗಿದ್ದು, 15 ಮನೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಕನಿಷ್ಟ 50 ಮತಗಳಾದರೂ ಬರಬೇಕಿತ್ತು. ಆದರೆ ಬಂದಿದ್ದು 7 ಮತ ಮಾತ್ರ. ನರಸಿಂಹರಾಜ ಕ್ಷೇತ್ರದ ಶಾಂತಿನಗರದಲ್ಲಿ ಒಂದೇ ಸಮುದಾಯ ಮಾತ್ರವೇ ಇದೆ. 700 ಮತಗಳಲ್ಲಿ 500 ಕಾಂಗ್ರೆಸ್ ಗೆ ಮತ್ತು ಬಿಜೆಪಿಗೆ 200 ಮತ ಸಿಕ್ಕಿವೆ. ಇಲ್ಲಿ ಬಿಜೆಪಿಗೆ ಒಂದೇ ಒಂದೂ ವೋಟು ಸಿಗುವ ಅವಕಾಶ ಇಲ್ಲ. ಜತೆಗೆ 700 ಮತದಾರರಿದ್ದರೂ 750 ಮತಗಳು ಚಲಾವಣೆಯಾಗಿವೆ. ಈವೆಲ್ಲವೂ ಮತ ಕಳವು ಆಗಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು ಪ್ರತಿಪಾದಿಸಿದರು.