3 ಸಾವಿರ ಕೋಟಿ ರೂ. ಬ್ಯಾಂಕ್‌ ಸಾಲ ವಂಚನೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

Most read

ನವದೆಹಲಿ: 3 ಸಾವಿರ ಕೋಟಿ ಮೊತ್ತದ ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಇಂದು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಹಾಜರಾಗಿದ್ದರು.

ದೆಹಲಿಯಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 10:50ಕ್ಕೆ ಉದ್ಯಮಿ ಅನಿಲ್‌ ಅಂಬಾನಿ ಆಗಮಿಸಿದ್ದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅನಿಲ್‌ ಅವರ ಹೇಳಿಕೆಗಳನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ.

ಜುಲೈ 24 ರಂದು ರೂ.3 ಸಾವಿರ ಕೋಟಿ ಮೊತ್ತದ ಬ್ಯಾಂಕ್‌ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಅನಿಲ್‌ ಅಂಬಾನಿ ಒಡೆತನದ 50ಕ್ಕೂ ಹೆಚ್ಚು ಕಂಪನಿಗಳು ಮುಂಬೈ ಹಾಗೂ ದೆಹಲಿಯಲ್ಲಿನ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ನಂತರ ಆಗಸ್ಟ್ 5ರಂದು ವಿಚಾರಣೆಗೆ ಹಾಜರಾಗುವಂತೆ ಅನಿಲ್‌ ಅಂಬಾನಿ ಅವರಿಗೆ ಇ.ಡಿ ಸಮನ್ಸ್‌ ಜಾರಿ ಮಾಡಿತ್ತು.

ಅನಿಲ್‌ ಅಂಬಾನಿ ಸಮೂಹ ಸಂಸ್ಥೆಗಳಿಗೆ ನಿಯಮ ಉಲ್ಲಂಘಿಸಿ, ಅಕ್ರಮವಾಗಿ ಸಾಲ ಮಂಜೂರು ಮಾಡಿದ ಆರೋಪದಲ್ಲಿ ಯೆಸ್‌ ಬ್ಯಾಂಕ್‌ ಕಚೇರಿ ಮೇಲೂ ಇ.ಡಿ ದಾಳಿ ನಡೆಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ದಾಳಿ ನಡೆದಿದ್ದು, ಮುಂಬೈ ಮತ್ತು ದೆಹಲಿಯಲ್ಲಿ 25ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು 35ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕಾರ್ಯಾಚರಣೆ ನಡೆಸಿತ್ತು.

2017–19ರ ಅವಧಿಯಲ್ಲಿ ಯೆಸ್‌ ಬ್ಯಾಂಕ್‌, ಅನಿಲ್‌ ಅಂಬಾನಿ ಸಮೂಹ ಸಂಸ್ಥೆಗಳಿಗೆ ಅಕ್ರಮವಾಗಿ 3 ಸಾವಿರ ಕೋಟಿ ರೂ.ಸಾಲ ವಿತರಿಸಲಾಗಿದೆ. ಈ ಸಾಲ ಮಂಜೂರಾಗುತ್ತಿದ್ದಂತೆ ಯೆಸ್‌  ಬ್ಯಾಂಕ್‌ನ ಮುಖ್ಯಸ್ಥರ ಖಾತೆಗಳಿಗೂ ಹಣ ಸಂದಾಯ ಮಾಡಿರುವುದನ್ನು ಇ.ಡಿ ಪತ್ತೆ ಹಚ್ಚಿತ್ತು. ಅಕ್ರಮವಾಗಿ ಸಾಲ ಮಂಜೂರು ಮಾಡಿರುವುದು ಮತ್ತು ಇದಕ್ಕಾಗಿ ಲಂಚ ಪಡೆದಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸಾಲ ಮಂಜೂರಾತಿ ಸಂದರ್ಭದಲ್ಲಿ ಯೆಸ್‌ ಬ್ಯಾಂಕ್‌ ‘ಗಂಭೀರ ನಿಯಮ ಉಲ್ಲಂಘನೆ’ ಮಾಡಿರುವುದು ಕಂಡು ಬಂದಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.

More articles

Latest article