ಧಾರವಾಡ ಸೀಮೆಯ ಭಾಷೆಯನ್ನು ತನ್ನ ಜೀವಾಳವಾಗಿಸಿಕೊಂಡಿರುವ ‘ವರ್ಗ ರದ್ದಾಯಿತು’ ಕಥೆಯು, ಅಧಿಕಾರದ ಎರಡು ಕ್ರೂರ ಮುಖಗಳನ್ನು ಏಕಕಾಲದಲ್ಲಿ ತೆರೆದಿಡುತ್ತದೆ. ಒಂದು, ಸೇಡಿನ ರೂಪದಲ್ಲಿ ಆತ್ಮವನ್ನು ಕೊಲ್ಲುವ ಮಾನಸಿಕ ಹಿಂಸೆ; ಮತ್ತೊಂದು, ಕಾಮದ ರೂಪದಲ್ಲಿ ದೇಹವನ್ನು ಬಲಿಪಡೆಯುವ ಲೈಂಗಿಕ ಹಿಂಸೆ. ಅಧಿಕಾರದ ಈ ಲಿಂಗ ರಾಜಕಾರಣವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಡುವ ಕಥೆಗಾರ್ತಿ, ಅಂತಿಮವಾಗಿ ವಿಜಯಳ ‘ಗೆಲುವನ್ನು’ ಅವಳ ದೇಹದ ಬಲಿದಾನದ ಮೇಲೆ ಕಟ್ಟಿದ ಸಮಾಧಿಯನ್ನಾಗಿಸುತ್ತಾರೆ.- ಡಾ. ರವಿ ಎಂ. ಸಿದ್ಲಿಪುರ.
ಪ್ರವೇಶಿಕೆ
ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿ ಅವರ ‘ಜಾತ್ರೆ ಮುಗಿದಿತ್ತು'(1981) ಸಂಕಲನದಲ್ಲಿನ ‘ವರ್ಗ ರದ್ದಾಯಿತು’ ಎಂಬ ಕಥೆಯು ಎಂಬತ್ತರ ದಶಕದಲ್ಲಿ ರಚಿತವಾದರೂ ಇಂದಿಗೂ ಪ್ರಸ್ತುತವೆನಿಸುವ ಒಂದು ಶ್ರೇಷ್ಠ ಸ್ತ್ರೀವಾದಿ ಕಥನವಾಗಿದೆ. ಮೇಲ್ನೋಟಕ್ಕೆ ಇದೊಂದು ಸರ್ಕಾರಿ ನೌಕರಳ ವರ್ಗಾವಣೆ ರದ್ದತಿಯ ಕಥೆಯಂತೆ ಕಂಡರೂ, ತನ್ನ ಆಳದಲ್ಲಿ ಆಧುನಿಕ ಬದುಕಿನ ಜಟಿಲತೆಗಳು ಮತ್ತು ಭ್ರಷ್ಟ ವ್ಯವಸ್ಥೆಯೊಂದಿಗಿನ ನೈತಿಕ ಸಂಘರ್ಷಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸುತ್ತದೆ.
ಪಿತೃಪ್ರಧಾನ ವ್ಯವಸ್ಥೆಯು ಭಾರತೀಯ ಮಧ್ಯಮ ವರ್ಗದ ಕುಟುಂಬದಲ್ಲಿ ಮಹಿಳೆಯ ಸ್ಥಾನಮಾನ, ಅವಳ ಮೇಲಿನ ನಿರೀಕ್ಷೆಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಕಥೆಯು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಕಥಾನಾಯಕಿ ವಿಜಯಳ ಪಾತ್ರದಲ್ಲಿನ ಅಸಹಾಯಕತೆಯು, ಮಹಿಳೆಯನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಿಶ್ಯಕ್ತಗೊಳಿಸುವ ವ್ಯವಸ್ಥೆಯ ಸಂಕೇತವಾಗಿದೆ. ಅದೇ ಹೊತ್ತಿಗೆ ಪತಿ ಅಶೋಕನ ಪಾತ್ರವು ಕಾಳಜಿಯ ಮುಖವಾಡದಡಿಯಲ್ಲೇ ಪಿತೃಪ್ರಧಾನ ಮನಸ್ಥಿತಿ ಎಷ್ಟು ಸಹಜವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಧಿಕಾರಸ್ಥರ ಭ್ರಷ್ಟಾಚಾರ ಮತ್ತು ಸ್ವಹಿತಾಸಕ್ತಿಯು ಸಾಮಾನ್ಯರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕನ್ನು ಹೇಗೆ ಬಲಿಪಶುವಾಗಿಸುತ್ತದೆ ಎಂಬುದನ್ನು ಕಥೆಯು ನಿಖರವಾಗಿ ದಾಖಲಿಸುತ್ತದೆ.
ಸೈದ್ಧಾಂತಿಕ ಚೌಕಟ್ಟು
ಕಥೆಯು ಸ್ತ್ರೀವಾದಿ ವಿಮರ್ಶೆಯ ಹಲವು ಪ್ರಮುಖ ಸಿದ್ಧಾಂತಗಳಿಗೆ ವಿಶ್ಲೇಷಣಾತ್ಮಕ ಒಳನೋಟಗಳನ್ನು ಒದಗಿಸುತ್ತದೆ. ಮೊದಲ ನೋಟಕ್ಕೆ, ವಿಜಯಳ ಪಾತ್ರವು ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಪ್ರತಿನಿಧಿಸುವುದರಿಂದ, ಉದಾರವಾದಿ ಸ್ತ್ರೀವಾದದ ಆಶಯಗಳನ್ನು ಈಡೇರಿಸಿದಂತೆ ಕಾಣುತ್ತದೆ. ಆದರೆ, ಕಥೆಯು ಆಳಕ್ಕಿಳಿದಂತೆ, ಕೇವಲ ವೈಯಕ್ತಿಕ ಸಾಧನೆಗಳು ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಮತ್ತು ರಚನಾತ್ಮಕ ಅಸಮಾನತೆಗಳನ್ನು ಮೀರಲು ಸಾಕಾಗುವುದಿಲ್ಲ ಎಂಬ ಕಟು ವಾಸ್ತವವನ್ನು ಅನಾವರಣಗೊಳಿಸುತ್ತದೆ. ಆ ಮೂಲಕ, ಉದಾರವಾದಿ ಸ್ತ್ರೀವಾದದ ಮಿತಿಗಳನ್ನು ಈ ಕಥೆ ಸ್ಪಷ್ಟವಾಗಿ ತೋರಿಸುತ್ತದೆ.
ಕಥೆ ಕೇವಲ ಲಿಂಗಾಧಾರಿತ ಶೋಷಣೆಯನ್ನಷ್ಟೇ ಅಲ್ಲದೆ, ವರ್ಗ ಮತ್ತು ಅಧಿಕಾರದ ಶೋಷಣೆಯನ್ನೂ ಕೇಂದ್ರವಾಗಿರಿಸಿಕೊಂಡಿದೆ. ಆರ್ಥಿಕ ಅನಿವಾರ್ಯತೆ(ವರ್ಗ ರದ್ದುಪಡಿಸುವ ಒತ್ತಡ) ಮತ್ತು ಸಾಂಸ್ಥಿಕ ಅಧಿಕಾರ ರಚನೆಗಳು(ಮಂಜುನಾಥಯ್ಯ ಮತ್ತು ರಂಗಸ್ವಾಮಿಯ ಅಧಿಕಾರ) ಮಹಿಳೆಯ ದಮನದಲ್ಲಿ ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಹೀಗೆ ಮಾರ್ಕ್ಸ್‌ವಾದಿ ಮತ್ತು ಸಮಾಜವಾದಿ ಸ್ತ್ರೀವಾದದ ದೃಷ್ಟಿಕೋನಗಳನ್ನು ಪ್ರತಿಫಲಿಸುತ್ತದೆ.
ಶೀರ್ಷಿಕೆಯಲ್ಲಿನ ‘ವರ್ಗ’ ಪರಿಕಲ್ಪನೆ
ಕಥೆಯ ಶೀರ್ಷಿಕೆಯಲ್ಲಿನ ‘ವರ್ಗ’ ಎಂಬ ಪರಿಕಲ್ಪನೆಯು ಕೇವಲ ಒಂದು ಸರ್ಕಾರಿ ವರ್ಗಾವಣೆಯ ಆದೇಶವನ್ನು ಸೂಚಿಸದೆ, ಹಲವು ಸಂಕೀರ್ಣ ಅರ್ಥಗಳನ್ನು ಧ್ವನಿಸುತ್ತದೆ. ಮೇಲ್ನೋಟಕ್ಕೆ, ಇದು ಭ್ರಷ್ಟ ಮೇಲಧಿಕಾರಿಯು ಪ್ರಾಮಾಣಿಕತೆಯನ್ನು ದಂಡಿಸಲು ಬಳಸುವ ದಮನಕಾರಿ ಆಡಳಿತಾತ್ಮಕ ಅಸ್ತ್ರ. ಸಾಮಾಜಿಕವಾಗಿ, ಇದು ಅಧಿಕಾರಸ್ಥರ ಎದುರು ಅಸಹಾಯಕವಾಗಿರುವ ಮಧ್ಯಮ ವರ್ಗದ(Middle Class) ಸಂಕಟವನ್ನು ಪ್ರತಿನಿಧಿಸುತ್ತದೆ. ಸ್ತ್ರೀವಾದಿ ದೃಷ್ಟಿಕೋನದಲ್ಲಿ, ಇದು ಇಬ್ಬರು ಪುರುಷರ ಪ್ರತಿಷ್ಠೆಯ ಸಮರದಲ್ಲಿ ಮಹಿಳೆಯ ದೇಹ ಮತ್ತು ಘನತೆಯೇ ದಾಳವಾಗುವ ಲಿಂಗಾಧಾರಿತ ‘ವರ್ಗ’ ಸಂಘರ್ಷವನ್ನು(Gender Class) ಸೂಚಿಸುತ್ತದೆ. ಕಥೆಯ ದುರಂತಮಯ ವಿಪರ್ಯಾಸವೆಂದರೆ, ಕಾಗದದ ಮೇಲಿನ ‘ವರ್ಗ’ ರದ್ದಾದರೂ, ಆ ಪ್ರಕ್ರಿಯೆಯಲ್ಲಿ ವಿಜಯಳ ಆತ್ಮಗೌರವ, ಮುಗ್ಧತೆ ಮತ್ತು ಚಾರಿತ್ರ್ಯಗಳು ಶಾಶ್ವತವಾಗಿ ‘ರದ್ದಾಗಿ’ ಹೋಗಿರುತ್ತವೆ. ಹೀಗೆ, ‘ವರ್ಗ’ ಎಂಬ ಒಂದೇ ಪದವು ಅಧಿಕಾರ, ಸೇಡು, ಅಸಹಾಯಕತೆ ಮತ್ತು ಲಿಂಗ ತಾರತಮ್ಯದ ಕರಾಳ ಮುಖಗಳನ್ನು ಪರಿಚಯಿಸುವ ರೂಪಕವಾಗಿದೆ.
ಗಂಡಸರ ಪ್ರತಿಷ್ಠೆ, ಹೆಣ್ಣಿನ ಬಲಿ
ಕಥೆಯಲ್ಲಿ ಸಂಘರ್ಷವು ಇಬ್ಬರು ಪುರುಷರ ಪ್ರತಿಷ್ಠೆಯ ಸಮರದಿಂದ ಆರಂಭವಾಗುತ್ತದೆ. ಮೇಲಧಿಕಾರಿ ಮಂಜುನಾಥಯ್ಯ, ತನ್ನ ಮಗಳಿಗೆ ಹೆಚ್ಚಿನ ಅಂಕಗಳನ್ನು ನೀಡಬೇಕೆಂದು ಅನೈತಿಕ ಒತ್ತಡ ಹೇರಿದಾಗ, ಅಶೋಕನು ಅದಕ್ಕೆ ಮಣಿಯಲು ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಪತಿಯ ಈ ‘ನೈತಿಕ’ ನಿಲುವಿನ ನೇರ ಪರಿಣಾಮವನ್ನು ಹೆಂಡತಿ ವಿಜಯಾ ಅನುಭವಿಸುತ್ತಾಳೆ. ಅವಳ ವರ್ಗಾವಣೆಯು ಕೇವಲ ಆಡಳಿತಾತ್ಮಕ ಕ್ರಮವಾಗಿರದೆ, ಗಂಡನ ‘ಆದರ್ಶ’ ಮತ್ತು ಅಧಿಕಾರಿಯ ‘ಅಹಂಕಾರ’ದ ನಡುವಿನ ಸಂಘರ್ಷದಲ್ಲಿ ಮಹಿಳೆಯನ್ನು ಹೇಗೆ ದಾಳವಾಗಿ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಅಧಿಕಾರದ ಕ್ರೌರ್ಯ
ಕಥೆಯ ದುರಂತವು ತನ್ನ ಪರಾಕಾಷ್ಠೆಯನ್ನು ತಲುಪುವುದೇ ಗಂಡನ ಆದರ್ಶಕ್ಕಾಗಿ ಹೇರಲ್ಪಟ್ಟ ಶಿಕ್ಷೆಯನ್ನು ರದ್ದುಪಡಿಸಲು ವಿಜಯಾ ಒಂಟಿಯಾಗಿ ಬೆಂಗಳೂರಿಗೆ ಹೊರಟಾಗ. ಅಲ್ಲಿ ಸಹಾಯದ ಮುಖವಾಡ ಹೊತ್ತ ಶಿಕ್ಷಣಾಧಿಕಾರಿ ರಂಗಸ್ವಾಮಿ ತನ್ನ ಅಧಿಕಾರವನ್ನು ಬಳಸಿಕೊಂಡು ಅವಳ ಅಸಹಾಯಕತೆಯನ್ನೇ ಲೈಂಗಿಕವಾಗಿ ಶೋಷಿಸುತ್ತಾನೆ.
ಈ ಶೋಷಣೆಯು ಒಂದು ವ್ಯವಸ್ಥಿತ ಪ್ರಕ್ರಿಯೆ. ‘ನೀವು ಮದುವೆಯಾದವರ ಹಾಗೆ ಕಾಣುವುದೇ ಇಲ್ಲ’ ಎಂಬ ಅವನ ಮಾತು, ಅವಳ ವೈಯಕ್ತಿಕ ಅಸ್ತಿತ್ವವನ್ನು (ಪತ್ನಿ, ಶಿಕ್ಷಕಿ) ಅಳಿಸಿಹಾಕಿ, ಅವಳನ್ನು ಕೇವಲ ‘ಭೋಗ್ಯವಸ್ತು’ವನ್ನಾಗಿ ಇಳಿಸುವ(Objectification) ಮೊದಲ ಹಂತ. ಇದು ಕೇಟ್ ಮಿಲೆಟ್ ತನ್ನ ‘Sexual Politics’ ಕೃತಿಯಲ್ಲಿ ವಿವರಿಸುವ ಅಧಿಕಾರ ರಾಜಕೀಯದ ಕ್ರೂರ ನಿದರ್ಶನ.
ಮುಂದಿನ ದುರಂತ ಹಂತದ ನಿರೂಪಣೆಯಲ್ಲಿ ಕಥೆಗಾರ್ತಿಯ ಕೌಶಲ್ಯ ಅಮೋಘವಾದುದು. ‘ಬೆಡ್ರೂಮಿನ ಬಾಗಿಲು ಮುಚ್ಚಿ ಚಿಲಕ ಹಾಕಿದ’ ನಂತರದ ಮೌನದಲ್ಲೇ ಆ ಘೋರ ಕೃತ್ಯದ ಭೀಕರತೆಯನ್ನು ಅವರು ದಾಖಲಿಸುತ್ತಾರೆ. ತೆರೆಯ ಮರೆಯಲ್ಲಿ ನಡೆದ ಆ ದೌರ್ಜನ್ಯಕ್ಕೆ, ವಿಜಯಳ ನಂತರದ ಮಾನಸಿಕ ಪತನ ಮತ್ತು ಅಪರಾಧಿ ಪ್ರಜ್ಞೆಯೇ ಮೂಕ ಸಾಕ್ಷಿಯಾಗುತ್ತದೆ.
ಹೀಗೆ, ಕಥೆಯು ಪಿತೃಪ್ರಧಾನ ಹಿಂಸೆಯ ಎರಡು ಸ್ವರೂಪಗಳನ್ನು ಮುಖಾಮುಖಿಯಾಗಿಸುತ್ತದೆ. ಮಂಜುನಾಥಯ್ಯನ ಬೇಡಿಕೆಯು ಅವಳ ‘ವೃತ್ತಿಪರ ಸಮಗ್ರತೆ’ಯನ್ನು ಬಲಿ ಕೇಳಿದರೆ, ರಂಗಸ್ವಾಮಿಯ ಆಮಿಷವು ಅವಳ ‘ದೈಹಿಕ ಸಾರ್ವಭೌಮತ್ವ’ವನ್ನೇ ಬಲಿ ತೆಗೆದುಕೊಳ್ಳುತ್ತದೆ. ಈ ಎರಡೂ ದಾಳಿಗಳು ಅವಳ ಆತ್ಮಗೌರವವನ್ನು ನುಚ್ಚುನೂರು ಮಾಡುತ್ತವೆ. ಒಂದೇ ವ್ಯವಸ್ಥೆಯು ಸಾಂಸ್ಥಿಕ ಭ್ರಷ್ಟಾಚಾರ ಹಾಗೂ ಸಾಂಸ್ಥಿಕ ಹಿಂಸೆಯ ಮೂಲಕ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಮೌನ, ನೋವು ಮತ್ತು ರೂಪಕಗಳು
ದೌರ್ಜನ್ಯದ ನಂತರ, ವಿಜಯಾ ಅನುಭವಿಸುವ ಮಾನಸಿಕ ಆಘಾತ, ಆತ್ಮಹೀನತೆ ಮತ್ತು ಅಪರಾಧಿ ಪ್ರಜ್ಞೆ ಅವಳನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ವರ್ಗ ರದ್ದಾದರೂ ಅದಕ್ಕಾಗಿ ತಾನು ತೆತ್ತ ಬೆಲೆಯ ಅರಿವಿರುವ ವಿಜಯಳಿಗೆ ಸಂಭ್ರಮಿಸಲು ಸಾಧ್ಯವಾಗುವುದಿಲ್ಲ.
ಲೈಂಗಿಕ ದೌರ್ಜನ್ಯವು ಕೇವಲ ದೇಹದ ಮೇಲಿನ ದಾಳಿಯಲ್ಲ, ಅದು ಮನಸ್ಸಿನ ಮೇಲೆ ಉಂಟುಮಾಡುವ ಆಳವಾದ ಗಾಯ. ವಿಜಯಳ ಪಾತ್ರದಲ್ಲಿ ಈ ಮಾನಸಿಕ ಆಘಾತದ ಕ್ಲಿನಿಕಲ್ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಲೈಂಗಿಕ ಶೋಷಣೆಗೆ ಒಳಗಾದವರಲ್ಲಿ ಖಿನ್ನತೆ(Depression), ತೀವ್ರ ಆತಂಕ(Anxiety) ಮತ್ತು ಆಘಾತೋತ್ತರ ಒತ್ತಡದ ಕಾಯಿಲೆ(PTSD-Post-Traumatic Stress Disorder) ಸಾಮಾನ್ಯವಾಗಿ ಕಂಡುಬರುತ್ತವೆ. ಕಥೆಯಲ್ಲಿ ವಿಜಯ ಪ್ರದರ್ಶಿಸುವ ಅವಳ ಮುಖದಲ್ಲಿನ ಸಪ್ಪೆತನ, ನಿರಂತರ ಜಡತ್ವ, ಪತಿಯ ಕಣ್ಣನ್ನು ಎದುರಿಸಲು ಹಿಂಜರಿಯುವುದು, ತನ್ನನ್ನೇ ದೂಷಿಸಿಕೊಳ್ಳುವುದು- ಇಂತಹ ನಡವಳಿಕೆಗಳ ಮೂಲಕ ಕಥೆಯು ಕೇವಲ ಶೋಷಣೆಯನ್ನು ಚಿತ್ರಿಸದೆ, ಅದರ ನಂತರದ ಮಾನಸಿಕ ಪರಿಣಾಮಗಳನ್ನೂ ದಾಖಲಿಸುತ್ತದೆ.
ಲೈಂಗಿಕ ಶೋಷಣೆಯಿಂದ ಉಂಟಾದ ಆಘಾತವನ್ನು ನೇರವಾಗಿ ಹೇಳಿಕೊಳ್ಳಲು ಅಸಾಧ್ಯವಾದ ಸಾಮಾಜಿಕ ಸನ್ನಿವೇಶದಲ್ಲಿ, ವಿಜಯಾ ತನ್ನ ನರಳಾಟವನ್ನು ವ್ಯಕ್ತಪಡಿಸಲು ರೂಪಕಗಳ ಮೊರೆ ಹೋಗುತ್ತಾಳೆ. ಗೆಳತಿಯ ಬಳಿ, ‘ಒಂದು ಕೂಸು ಸತ್ತಿತು’ ಎಂದು ಹೇಳುವಾಗ, ಅದು ತನ್ನೊಳಗಿನ ಮುಗ್ಧತೆ, ಚೈತನ್ಯ ಮತ್ತು ಆತ್ಮಗೌರವದ ಸಾವನ್ನು ಸೂಚಿಸುವ ರೂಪಕವಾಗಿದೆ.
ಕಥೆಯ ಅಂತ್ಯದಲ್ಲಿ ಈ ದುರಂತದ ತುತ್ತತುದಿ ತೆರೆದುಕೊಳ್ಳುತ್ತದೆ. ಅಶೋಕನ ನಿರಾಳ ಸಂಭ್ರಮ ಮತ್ತು ವಿಜಯಳ ಮೌನ ವೇದನೆಯ ನಡುವಿನ ಅಗಾಧ ಅಂತರವನ್ನು ಕಥೆಗಾರ್ತಿ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ‘ನಂದು ಬಿಳಿ ಎಂಬ್ರಾಯ್ಡರಿ ಕರಚೀಪು ಇತ್ತಲ್ಲ. ಅದನ್ನು ಬೆಂಗಳೂರಾಗ ಕಳಕೊಂಡಾಂಗ ಅನಸ್ತದ’ ಎಂದು ಅವಳು ತನ್ನ ಚಾರಿತ್ರ್ಯ ಹರಣವನ್ನು ಸಾಂಕೇತಿಕವಾಗಿ ಹೇಳಿಕೊಂಡರೆ, ಅಶೋಕನು ‘ಅಯ್ಯ ಹುಚ್ಚ, ಕರಚೀಫ್s, ಹ ಹ ಹ. ಹೋದರ ಹೋಗಲಿ ಬಿಡು’ ಎಂದು ನಗುತ್ತಾನೆ.
ಅವನ ಈ ಪ್ರತಿಕ್ರಿಯೆಯು ಕೇವಲ ಅರಿವಿನ ಕೊರತೆಯಲ್ಲ; ಅದು ಸೂಕ್ಷ್ಮಸಂವೇದನೆಯ ಸಂಪೂರ್ಣ ಅನುಪಸ್ಥಿತಿಯಿಂದ ಉಂಟಾಗುವ ಕ್ರೌರ್ಯ. ಅಶೋಕನು ಪತ್ನಿಯನ್ನು ಪ್ರೀತಿಸಬಹುದು, ಆದರೆ ಅವಳ ಮಾನಸಿಕ ಪ್ರಪಂಚದೊಳಗೆ ಪ್ರವೇಶಿಸಲು ಮತ್ತು ಅವಳ ಆಘಾತದ ಆಳವನ್ನು ಅರಿಯಲು ಆತ ಸಂಪೂರ್ಣ ವಿಫಲನಾಗುತ್ತಾನೆ. ಅವನ ದೃಷ್ಟಿಯಲ್ಲಿ ‘ವರ್ಗ ರದ್ದಾಯಿತು’ ಎಂಬುದು ವಿಜಯವಾದರೆ, ಅವಳ ಪಾಲಿಗೆ ಅದು ಅವಳ ಅಸ್ತಿತ್ವದ ಸೋಲಾಗಿತ್ತು. ಈ ಸಂವಹನದ ವೈಫಲ್ಯವೇ ಕಥೆಯ ನಿಜವಾದ ದುರಂತ. ಇದು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಅನುಭವವು ಎಷ್ಟು ಏಕಾಂಗಿಯಾದದ್ದು ಎಂಬುದನ್ನೂ ತೋರಿಸುತ್ತದೆ.
ವಿಜಯಳು ಬಳಸುವ ‘ಬಿಳಿ ಕರವಸ್ತ್ರ’ದ ರೂಪಕವು ಅವಳ ಘನತೆ ಮತ್ತು ಶುಭ್ರತೆಯ ಸಂಕೇತವಾಗಿ, ಇಡೀ ಕಥೆಯ ದುರಂತವನ್ನು ಆವರಿಸಿಕೊಳ್ಳುತ್ತದೆ. ತಾನು ಕಳೆದುಕೊಂಡಿದ್ದು ಕೇವಲ ಒಂದು ವಸ್ತುವನ್ನಲ್ಲ, ಬದಲಿಗೆ ತನ್ನ ಅಸ್ತಿತ್ವದ ಒಂದು ಅಮೂಲ್ಯ ಭಾಗವನ್ನೇ ಎಂಬ ಆಳವಾದ ನೋವನ್ನು ಅದು ಧ್ವನಿಸುತ್ತದೆ.
ಈ ಆಘಾತ ಅವಳ ವ್ಯಕ್ತಿತ್ವವನ್ನೇ ಛಿದ್ರಗೊಳಿಸಿಬಿಡುತ್ತದೆ. ‘ತಾನಿನ್ನೂ ಮೊದಲಿನಾಂಗs ಕಾಣಿಸ್ತೀನೇನು?’ ಎಂದು ತನ್ನ ದೇಹವನ್ನೇ ಅಪರಿಚಿತವೆಂಬಂತೆ ಪರೀಕ್ಷಿಸಿಕೊಳ್ಳುವ ದೃಶ್ಯ, ಅವಳ ಆತ್ಮಗೌರವವು ಹೇಗೆ ಪುಡಿಯಾಗಿದೆ ಎಂಬುದರ ಸೂಚ್ಯವಾಗುತ್ತದೆ. ‘ಸಾವನ್ನೇ ಬಯಸಿದ್ದೆನಲ್ಲ… ಗಂಡನಿಗೆ ಮುಖ ತೋರಿಸಲೇಬಾರದು’ ಎಂಬ ಅವಳ ಯೋಚನೆಯು, ಶೋಷಕನ ಮೇಲಿನ ಸಿಟ್ಟಿಗಿಂತ ಹೆಚ್ಚಾಗಿ, ತನ್ನ ‘ಕಳಂಕಿತ’ ದೇಹದೊಂದಿಗೆ ಪತಿಯನ್ನು ಎದುರಿಸಲು ತಾನೊಬ್ಬಳು ಅನರ್ಹಳು ಎಂಬ ಸಾಮಾಜಿಕ ಕಳಂಕದ ಭಾವನೆ(Social Stigma) ಅವಳಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಪಿತೃಪ್ರಧಾನ ವ್ಯವಸ್ಥೆಯು ಹೆಣ್ಣಿನ ಮನಸ್ಸಿನ ಮೇಲೆ ಹೇರುವ ಅತ್ಯಂತ ಕ್ರೂರವಾದ ಹಿಂಸೆಯಾಗಿದೆ.
ಅಸ್ತಿತ್ವದ ಹುಡುಕಾಟ: ‘ಇತರೆ’ಯಾದವಳ ಹೋರಾಟ
ಕಥೆಯಲ್ಲಿ ಸಿಮೋನ್ ದ ಬೊವಾಳ ‘ಇತರೆ’ (The Other) ಎಂಬ ಪರಿಕಲ್ಪನೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ವಿಜಯಳ ಅಸ್ತಿತ್ವವು ಹೆಂಡತಿ, ತಾಯಿ, ಶಿಕ್ಷಕಿ ಎಂಬ ಪಾತ್ರಗಳ ಮೂಲಕವೇ ಗುರುತಿಸಲ್ಪಡುತ್ತದೆ ಹೊರತು, ಸ್ವತಂತ್ರ ವ್ಯಕ್ತಿಯಾಗಿ ಅಲ್ಲ. ಅಶೋಕನ, ‘ಒಂದು ರಾತ್ರಿ ನೀ ಇರದಿದ್ದರೆ ನನಗ ಭಣಭಣಾ ಅನಸತದ’ ಎಂಬ ಭಾವನಾತ್ಮಕ ಅವಲಂಬನೆಯ ಮಾತು ಕೂಡ ಅವಳ ಮೇಲೆ ಇನ್ನೊಂದು ಭಾರವನ್ನು ಹೇರುತ್ತದೆ. ತನ್ನ ನೋವನ್ನು ಹಂಚಿಕೊಂಡರೆ ಗಂಡನ ಸಂತೋಷ ಮತ್ತು ಮನೆಯ ನೆಮ್ಮದಿಗೆ ತಾನೇ ಅಡ್ಡಿಯಾಗುತ್ತೇನೆ ಎಂಬ ಅಪರಾಧಿ ಪ್ರಜ್ಞೆ ಅವಳನ್ನು ಮೌನಕ್ಕೆ ದೂಡುತ್ತದೆ.
ವಿಜಯಾ ವರ್ಗವನ್ನು ರದ್ದುಪಡಿಸುವ ತನ್ನ ‘ಕೆಲಸ’ದಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ಈ ಯಶಸ್ಸಿನ ಹಿಂದೆ, ಅವಳು ತೆತ್ತಿರುವ ವೈಯಕ್ತಿಕ ಮತ್ತು ಮಾನಸಿಕ ಬೆಲೆ ಅಪಾರವಾದುದು. ಅವಳ ಆಂತರಿಕ ನೋವು ಈ ಹೊರಗಿನ ‘ಗೆಲುವಿ’ಗಿಂತಲೂ ಮಿಗಿಲಾದುದು. ಅವಳು ತನ್ನ ಮೇಲಾದ ಶೋಷಣೆಯನ್ನು ಬಹಿರಂಗಪಡಿಸಿ ನ್ಯಾಯಕ್ಕಾಗಿ ಹೋರಾಡುವ ದಾರಿಯನ್ನು ತುಳಿಯುವುದಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ, ಅಂತಹ ಹೋರಾಟವು ಮತ್ತಷ್ಟು ಅಪಮಾನಕ್ಕೆ ಕಾರಣವಾಗಬಹುದು ಎಂಬ ಕಟು ವಾಸ್ತವ ಅವಳ ಮೌನಕ್ಕೆ ಕಾರಣವಾಗಿರಬಹುದು.
ಹಾಗಾದರೆ, ವಿಜಯಳ ಆಯ್ಕೆ ಯಾವುದು? ಅವಳ ನಿಜವಾದ ಹೋರಾಟ ಇರುವುದೇ ಇಲ್ಲಿ. ಅವಳು ಸಂಪೂರ್ಣವಾಗಿ ಕುಸಿದು ಹೋಗುವ ಬದಲು, ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ‘ಸಾಯಲು ಮಾತ್ರ ಧೈರ್ಯ ಬರಲಿಲ್ಲ’ ಎಂಬ ಅವಳ ಮಾತು, ಸೋಲನ್ನು ಒಪ್ಪಿಕೊಂಡ ಮಾತಲ್ಲ; ಅದು ಅಸಹನೀಯ ನೋವಿನ ನಡುವೆಯೂ ಬದುಕನ್ನು ಮುಂದುವರೆಸುವ ದುರಂತಮಯ ಇಚ್ಛಾಶಕ್ತಿಯ(Tragic Resilience) ಸಂಕೇತ. ಇದು ವ್ಯವಸ್ಥೆಯನ್ನು ಸಕ್ರಿಯವಾಗಿ ಎದುರುಹಾಕಿಕೊಳ್ಳುವ ಬಂಡಾಯವಲ್ಲ, ಬದಲಿಗೆ ಅನಿವಾರ್ಯ ಪರಿಸ್ಥಿತಿಗಳಿಗೆ ಹೊಂದಿಕೊಂಡು ತನ್ನ ಕುಟುಂಬದ ಅಸ್ತಿತ್ವಕ್ಕಾಗಿ ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡು ಬದುಕನ್ನು ಮುಂದುವರೆಸುವ ಒಂದು ಮೂಕ ಹೋರಾಟ. ವಿಜಯಾ ಹೊರಗಿನ ಯುದ್ಧದಲ್ಲಿ ಗೆದ್ದಂತೆ ಕಂಡರೂ, ತನ್ನ ಅಂತರಂಗದ ಯುದ್ಧದಲ್ಲಿ ಎಂದಿಗೂ ಮಾಯದ ಗಾಯವನ್ನು ಹೊತ್ತು ಮೌನವಾಗಿಬಿಡುತ್ತಾಳೆ.
ಕಲಾತ್ಮಕ ಪ್ರಣಾಳಿಕೆ
ವಿಜಯಳ ಪಾತ್ರದ ಪ್ರಸ್ತುತತೆ ಕಾಲಾತೀತವಾದುದು. ಆರ್ಥಿಕ ಸ್ವಾತಂತ್ರ್ಯ ಮತ್ತು ಕಾನೂನುಗಳಿದ್ದರೂ, ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳದಂತಹ ಶೋಷಣೆಗಳು ನಿಂತಿಲ್ಲ ಎಂಬುದಕ್ಕೆ ಅವಳ ಕಥೆ ಇಂದಿಗೂ ಸಾಕ್ಷಿಯಾಗಿದೆ. 2022ರ NCRB ವರದಿಯ ಪ್ರಕಾರ, ಕೆಲಸದ ಸ್ಥಳದಲ್ಲಿ 419 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ. 2018ರಿಂದೀಚೆಗೆ ಈ ಸಂಖ್ಯೆ ವಾರ್ಷಿಕವಾಗಿ ಸರಾಸರಿ 400ರ ಗಡಿ ದಾಟುತ್ತಿದೆ. ಆದರೆ ವರದಿಯಾಗುವ ಪ್ರಕರಣಗಳಿಗಿಂತ ವರದಿಯಾಗದ ಪ್ರಕರಣಗಳೇ ಹೆಚ್ಚು ಎಂಬ ವಾಸ್ತವವನ್ನು ನಾವು ಮರೆಯುವಂತಿಲ್ಲ. ವಿಜಯಳಂತೆ ಇಂದಿಗೂ ಅನೇಕ ಮಹಿಳೆಯರು, ಸಾಮಾಜಿಕ ಕಳಂಕದ ಭಯ ಮತ್ತು ಕುಟುಂಬದ ನೆಮ್ಮದಿಯ ಕಾರಣಕ್ಕಾಗಿ ತಮ್ಮ ನೋವನ್ನು ಮೌನದಲ್ಲೇ ಹೂತುಹಾಕುತ್ತಾರೆ.
ಈ ಮೂಲಕ, ವಿಜಯಾ ಕೇವಲ ಒಂದು ಕಥೆಯ ಪಾತ್ರವಾಗಿ ಉಳಿಯುವುದಿಲ್ಲ. ಅವಳು ವೃತ್ತಿ ಮತ್ತು ಕುಟುಂಬದ ನಡುವೆ ನಲುಗುತ್ತಾ, ಶೋಷಣೆಯನ್ನು ಮೌನವಾಗಿಯೇ ಎದುರಿಸುತ್ತಾ ಬದುಕುವ ಇಂದಿನ ಲಕ್ಷಾಂತರ ಮಹಿಳೆಯರ ಸಂಕೇತವಾಗಿ ನಿಲ್ಲುತ್ತಾಳೆ.
ಇದನ್ನೂ ಓದಿ- ಅಲಿಸ್ ವಾಕರ್ ಅವರ ಒಂದು ಅದ್ಭುತ ಆತ್ಮಕಥನಾತ್ಮಕ ಬರಹ
ಧಾರವಾಡ ಸೀಮೆಯ ಭಾಷೆಯನ್ನು ತನ್ನ ಜೀವಾಳವಾಗಿಸಿಕೊಂಡಿರುವ ‘ವರ್ಗ ರದ್ದಾಯಿತು’ ಕಥೆಯು, ಅಧಿಕಾರದ ಎರಡು ಕ್ರೂರ ಮುಖಗಳನ್ನು ಏಕಕಾಲದಲ್ಲಿ ತೆರೆದಿಡುತ್ತದೆ. ಒಂದು, ಸೇಡಿನ ರೂಪದಲ್ಲಿ ಆತ್ಮವನ್ನು ಕೊಲ್ಲುವ ಮಾನಸಿಕ ಹಿಂಸೆ; ಮತ್ತೊಂದು, ಕಾಮದ ರೂಪದಲ್ಲಿ ದೇಹವನ್ನು ಬಲಿಪಡೆಯುವ ಲೈಂಗಿಕ ಹಿಂಸೆ. ಅಧಿಕಾರದ ಈ ಲಿಂಗ ರಾಜಕಾರಣವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಡುವ ಕಥೆಗಾರ್ತಿ, ಅಂತಿಮವಾಗಿ ವಿಜಯಳ ‘ಗೆಲುವನ್ನು’ ಅವಳ ದೇಹದ ಬಲಿದಾನದ ಮೇಲೆ ಕಟ್ಟಿದ ಸಮಾಧಿಯನ್ನಾಗಿಸುತ್ತಾರೆ.
ಗಂಡಸಿನ ಅಧಿಕಾರದ ಆಟದಲ್ಲಿ ಹೆಣ್ಣಿನ ದೇಹ ಹೇಗೆ ಚೌಕಾಸಿಯ ವಸ್ತುವಾಗುತ್ತದೆಂಬ ನಾಚಿಕೆಗೇಡಿನ ವಾಸ್ತವವನ್ನು ಕಥೆಯು ಮುಲಾಜಿಲ್ಲದೆ ಓದುಗರೆದುರು ಬೆತ್ತಲೆಗೊಳಿಸುತ್ತದೆ. ಆದ್ದರಿಂದಲೇ ಇದು ಕಥೆಯಾಗಿ ಸೀಮಿತಗೊಳ್ಳದೆ, ಕೊಳೆತ ವ್ಯವಸ್ಥೆಗೆ ಪ್ರತಿರೋಧ ಒಡ್ಡುವ ಕಲಾತ್ಮಕ ಪ್ರಣಾಳಿಕೆಯಾಗುತ್ತದೆ. ವಿಜಯಳ ಕೊನೆಯ ಮೌನ ಅವಳ ಸೋಲಲ್ಲ, ಅದು ಇಡೀ ವ್ಯವಸ್ಥೆಯ ವೈಫಲ್ಯ ಮತ್ತು ಸಮಾಜದ ಆತ್ಮಸಾಕ್ಷಿಯ ಸಾವಿಗೆ ಹಿಡಿದ ದೀವಟಿಗೆ.
ಡಾ. ರವಿ ಎಂ ಸಿದ್ಲಿಪುರ
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’, ‘ವಿಮರ್ಶೆ ಓದು’, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಅತ್ತಿಮಬ್ಬೆ-ದೇಕಬ್ಬೆ: ನಿರ್ಮಾಣ ಮತ್ತು ಸಮರ್ಪಣೆಯ ಕಥನ