ಯುದ್ಧ, ಆಕ್ರಮಣ, ಮೋಸ, ಕೊಲೆ, ಸುಲಿಗೆ, ವಿಶ್ವಾಸ ದ್ರೋಹ ಇಂಥಾ ಯಾವುದೇ ಮಾನವ ನಿರ್ಮಿತ ದುರ್ಘಟನೆ ತರುವ ನೋವು ಕಾಲದಿಂದ ಮಾಸುವುದಲ್ಲ. ತಲೆತಲಾಂತರಗಳಿಗೆ ದಾಟಿಕೊಳ್ಳುತ್ತಾ ಸ್ಮೃತಿಯಾಗಿ ಕಾಡುವಂಥದು. ಹೇಗೆ ಎಂದು ನೋಡಲು ಪುಲಿಟ್ಝರ್ ಪ್ರಶಸ್ತಿ ಪಡೆದ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ ಅಲಿಸ್ ವಾಕರ್ ರ ಒಂದು ಕಥೆಯನ್ನು ನೋಡೋಣ-ವೃಂದಾ ಹೆಗಡೆ, ಉಪನ್ಯಾಸಕರು.
ಅದೊಂದು ಪತ್ರ ರೂಪದ ಒಂದು ಅದ್ಭುತ ಆತ್ಮಕಥನಾತ್ಮಕ ಬರಹ.” ಒಂದು ಮದುವೆಯ ಆತ್ಮಕಥೆ” ಎಂದೂ ಲೇಖಕಿ ಶೀರ್ಷಿಕೆ ಕೊಡುತ್ತಾರೆ. ನಿರೂಪಕಿ ತನ್ನ ಗಂಡನ ಬಿಟ್ಟು ಎರಡು ದಶಕಗಳ ನಂತರ ತಾವು ಒಟ್ಟಿಗೆ ಪ್ರೀತಿಯಿಂದ ಬಾಳಿದ ಮನೆಗೆ ಭೇಟಿ ಕೊಟ್ಟು ಅಲ್ಲಿ ತಮ್ಮ ಪ್ರೀತಿಯ ಸ್ಮೃತಿಯನ್ನು ಮೆಲುಕು ಹಾಕುತ್ತಾಳೆ
ನನ್ನ ಯುವ ಗಂಡನಿಗೆ :ಒಂದು ಮದುವೆಯ ಆತ್ಮಕಥೆ (To my young husband : Memoir of a marriage ) ಎಂದು ಬರೆವ ಅಲಿಸ್ ಆ ಬಾಡಿಗೆ ಮನೆಯ ಮೂಲೆಮೂಲೆಯನ್ನೂ ನೆನಪಿಸಿಕೊಳ್ಳುತ್ತಾ ತಾವಿಬ್ಬರೂ ಸಂಭ್ರಮ, ಖುಷಿಯಿಂದ ಆ ಮನೆಯಲ್ಲಿ ದಾಂಪತ್ಯ ಪ್ರಾರಂಭಿಸಿದ್ದನ್ನು ವಿವರವಾಗಿ ನೆನಪಿಸಿಕೊಳ್ಳುತ್ತಾರೆ. ಸ್ಮೃತಿ ಇಲ್ಲದಾಗಿನ ನಿರುಮ್ಮಳ ಬದುಕು ಅದು.
ಈ ಪತ್ರ ರೂಪದ ಬರಹದ ನಿರೂಪಕಿಯನ್ನು ನಾವು ಲೇಖಕಿ ಅಲಿಸ್ ಅಂತಲೇ ತೆಗೆದುಕೊಳ್ಳೋಣ. ಅಲಿಸ್ ತಮ್ಮ ಮುರಿದು ಹೋದ ದಾಂಪತ್ಯಕ್ಕೆ ವಿಷಾದಿಸುತ್ತಾ ತಾವೀಗ ತಲುಪಿರುವ ಸ್ಥಿತಿಯನ್ನು ಇಪ್ಪತ್ತು ವರ್ಷಗಳ ಹಿಂದೆ ಊಹೆಯೂ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ, ತಾವೀಗ ಆಗೀಗ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು, ‘ ನಮ್ಮ’ ಮಗಳಿಂದ ಏನಾದರೂ ಸಮಾಚಾರ ಇದೆಯಾ ಎಂದು ಕೇಳಿಕೊಳ್ಳುವುದು ಬಿಟ್ಟರೆ ಅದರಿಂದಾಚೆಗೆ ಯಾವ ಮಾತೂ ಆಡದ ಸ್ಥಿತಿಗೆ ತಲುಪಿದ್ದೇವೆ. ಒಳ್ಳೆಯ, ಕೆಟ್ಟ ನೆನಪುಗಳನ್ನು ಮೆಲುಕು ಹಾಕುವುದೋ, ಊಟದ ಮೇಜಿನ ಸುತ್ತ ಕುಳಿತು ತಮಾಷೆ ಮಾಡಿಕೊಂಡು ನಾವು ನಮ್ಮ ನಮ್ಮ ಭಾಷೆಯಲ್ಲಿ ಮಾತನಾಡುತ್ತಾ ಒಬ್ಬರು ಬ್ರೂಕ್ಲಿನ್ ಇನ್ನೊಬ್ಬರು ಯಿದ್ದಿಶ್ ಭಾಷೆಗಳನ್ನು ಅದರದೇ ಉಚ್ಚಾರಣೆಯೊಂದಿಗೆ ಮಾತನಾಡುತ್ತಾ (ತಮ್ಮ ತಮ್ಮ ತಾತಂದಿರು ಒಟ್ಟಿಗೆ ಕೂತು ಮಾತನಾಡಿದಂತೆ ಅನಿಸುವ )ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದದ್ದೋ ಯಾವುದನ್ನೂ ನಾವೀಗ ಮಾತನಾಡುವುದಿಲ್ಲ.!! ಎನ್ನುತ್ತಾರೆ.
ಹ್ಞಾ. ಏನಿದು ಬ್ರೂಕ್ಲಿನ್ ಮತ್ತು ಯಿದ್ದಿಶ್?
ಆಫ್ರಿಕನ್ ಅಮೆರಿಕನ್ ಅಲಿಸ್ ಮದುವೆಯಾದದ್ದು ಬಿಳಿಯ ಯಹೂದಿಯನ್ನು. ಬ್ರೂಕ್ಲಿನ್ ಎಂಬುದು ನ್ಯೂಯಾರ್ಕ್ ನ ಒಂದು ಭಾಗವಾದ ಪ್ರದೇಶ. ಇಲ್ಲಿ ವಿವಿಧ ಭಾಷೆ ಮಾತನಾಡುವ ಜನರಿದ್ದಾರೆ. ಸಂವಹನ ಭಾಷೆ ಇಂಗ್ಲಿಷ್ ಆದರೂ ವಿವಿಧ ಭಾಷಾಜನರು ಆ ಪ್ರದೇಶದಲ್ಲಿ ಇರುವುದರಿಂದ ಸ್ಪಾನಿಶ್, ಚೈನೀಸ್, ಯಿದ್ದಿಶ್ ಹೀಗೆ ಬೇರೆಬೇರೆ ಭಾಷೆಗಳ ಉಚ್ಚಾರಣೆಯ ಪ್ರಭಾವ ಇಂಗ್ಲಿಷ್ ಉಚ್ಚಾರಣೆಯ ಮೇಲೂ ಆಗುವ ಸಂಭವವಿದೆ. ಹಾಗಾಗಿ ಆಫ್ರಿಕನ್ ಅಮೆರಿಕನ್ ಅಲಿಸ್ ಬ್ರೂಕ್ಲಿನ್ ಇಂಗ್ಲಿಷ್ ಮಾತನಾಡಿದರೆ, ಅವರ ಪತಿ ಯಿದ್ದಿಶ್ ಮಾತನಾಡುವವರು. ಇಬ್ಬರೂ ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದಾಗ ಅವರ ಪೂರ್ವಜರು ಪರಸ್ಪರ ತಮಾಷೆ ಮಾಡುತ್ತಾ ಮಾತನಾಡಿಕೊಂಡ ಹಾಗೆನಿಸುತ್ತಿತ್ತು ಎಂದು ಅಲಿಸ್ ಹೇಳುತ್ತಾರೆ. ಆಗ ಸೃಷ್ಟಿ ಆಗುತ್ತಿದ್ದ ವಿನೋದ ಅವರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿತ್ತು. ಮಾತು, ನಗು ನಿದ್ದೆಯವರೆಗೂ ಮುಂದುವರಿದು ಸುಖವಾದ ನಿದ್ದೆಗೆ ಜಾರಿಸುತ್ತಿತ್ತು. ಇದು ಕೂಡಾ ವಿಭಿನ್ನ ಭಾಷೆಯವರು ತಮ್ಮ ತಮ್ಮ ಭಾಷೆಯ ಬಗ್ಗೆ ಮೇಲರಿಮೆ ಅಥವಾ ಕೀಳರಿಮೆ ಇಲ್ಲದಾಗ ಉಂಟಾಗುವ ಸೌಹಾರ್ದ ಸ್ಥಿತಿ.
ಎರಡು ವಿಭಿನ್ನ ಜನಾಂಗ, ಭಾಷೆ, ಸಂಸ್ಕೃತಿ ಹಾಗೂ ಧಾರ್ಮಿಕ ಸಿದ್ಧಾಂತದ ಜೋಡಿಗಳು ಸೌಹಾರ್ದಯುತ, ನಿರುಮ್ಮಳ, ಪ್ರೀತಿ ತುಂಬಿದ ಬದುಕನ್ನು ಬದುಕಬಲ್ಲರು ಎಂಬುದನ್ನು ತಾನೀಗ ಪ್ರೀತಿಸುತ್ತಿರುವ ಹಾಗು ಸಹಜೀವಿಸುತ್ತಿರುವ ಮಹಿಳೆಗೆ ತೋರಿಸುವುದು ತನ್ನ ಈ ಪ್ರಯಾಣದ ಉದ್ದೇಶ ಎಂದು ಅಲಿಸ್ ಹೇಳುತ್ತಾರೆ.
ಹಾಗಾದರೆ ಆ ಸಹಜೀವಿ ಮಹಿಳೆ ಯಾರು? ತಾನಷ್ಟು ಪ್ರೀತಿಸುವ, ತನ್ನ ಮಗುವಿನ ತಂದೆಯಾದ ಪುರುಷನ ಬಿಟ್ಟು ಅದ್ಯಾವ ಮಹಿಳೆಯನ್ನು ಯಾವಾಗ ಪ್ರೀತಿಸಲಾರಂಭಿಸಿದ್ದು ಅಲಿಸ್? ಮತ್ತು ಯಾಕಾಗಿ? ಇದು ಓದುಗರನ್ನು ಕಾಡಲಾರಂಭಿಸುತ್ತದೆ. ಆ ಮಹಿಳೆಯನ್ನು ಪರಿಚಯಿಸುತ್ತಾ ಅವಳು ದಕ್ಷಿಣ ಭಾಗಕ್ಕೆ ಇಲ್ಲಿಯವರೆಗೆ ಬಂದೇ ಇರಲಿಲ್ಲ, ಅವಳ ಪೂರ್ವಜರು ಇಲ್ಲೇ ಮಣ್ಣಾಗಿದ್ದರು ಕೂಡಾ ಎನ್ನುತ್ತಾರೆ ಮತ್ತು ಅವರು ಮಣ್ಣಾದ ಪ್ರದೇಶ ಅಲಿಸಳ ಪತಿ ಮಾನವ ಹಕ್ಕು ವಕೀಲನಾಗಿ ಎಷ್ಟೋ ಕೇಸುಗಳನ್ನು ಹಾಕಿದ ಪ್ರದೇಶ. ಅಂದರೆ ಜನಾಂಗೀಯವಾದ ತನ್ನ ಕ್ರೌರ್ಯವನ್ನು ಮೆರೆದ ಪ್ರದೇಶ ಅಂತಾಯಿತು. ಅಂತಲ್ಲಿ ಈ ಮಹಿಳೆಯ ಪೂರ್ವಜರು ಮಣ್ಣಾಗಿದ್ದಾರೆ ಮತ್ತು ಈ ಮಹಿಳೆ ಇದುವರೆಗೂ ಆ ಪ್ರದೇಶಕ್ಕೆ ಬಂದೇ ಇಲ್ಲ!!! ಹಂಗಾದರೆ ಆ ಮಹಿಳೆಯೂ ಆಫ್ರಿಕನ್ ಅಮೇರಿಕನ್ನೇ ಅನ್ನುವ ಸೂಚನೆ ಸಿಗುತ್ತದೆ.
ಮನೆಯ ಒಳಗೆ ನೋಡಲು ಆಸ್ಪದ ಒದಗುವುದಿಲ್ಲ. ಈಗ ಆ ಮನೆಯಲ್ಲಿ ವಾಸಿಸುವ ಮಹಿಳೆ ಒಂದೋ ಮನೆಯಲ್ಲಿಲ್ಲ ಅಥವಾ ಬಾಗಿಲು ತೆರೆಯಲಿಚ್ಚಿಸಲಿಲ್ಲ. ಅಲಿಸಳಿಗೆ ತನ್ನ ಪ್ರಿಯ ಸಂಗಾತಿಗೆ ಆ ಮನೆಯ ಒಳಾಂಗಣ ತೋರಿಸಬೇಕೆಂದಿತ್ತು. ಗೋಡೆಯ ಮೇಲೆ ತೂಗುಹಾಕಿದ ಲೆವಿಸ್ ಬ್ರೆಡ್ ನ ಪೋಸ್ಟರ್. ಅದರಲ್ಲಿ ಒಬ್ಬ ಚಿಕ್ಕ ವಯಸ್ಸಿನ ಕಪ್ಪು ಹುಡುಗನ ಚಿತ್ರ. ಜೊತೆಗೆ “ಲೆವಿಸ್ ಬ್ರೆಡ್ಡನ್ನು ಇಷ್ಟಪಡಲು ನೀವು ಯಹೂದಿಯೇ ಆಗಬೇಕೆಂದಿಲ್ಲ” ಎಂಬ ಬರಹ. ಏನಿದರ ಅರ್ಥ? ಲೆವಿಸ್ ಬ್ರೆಡ್ ಜರ್ಮನಿಯ ಯಹೂದಿಗಳು ತಯಾರಿಸುವ, ರಾಯಿ ಎಂಬ ವಿಶಿಷ್ಟವಾದ ಸಣ್ಣ ಗೋಧಿಯಿಂದ ಮಾಡುವ ಬ್ರೆಡ್. ಅದನ್ನು ಕಪ್ಪು ಜನಾಂಗದವರೂ ಇಷ್ಟ ಪಡಬಹುದು ಎಂಬುದು ಆ ಪೋಸ್ಟರಿನ ಅರ್ಥ. ಇಲ್ಲಿ ಯಹೂದಿಗಳ ಮತ್ತು ಕಪ್ಪು ಜನರ ನಡುವೆ ಯಾವ ಆಹಾರ ಮೈಲಿಗೆಯಿಲ್ಲ ಎಂದು ತೋರಿಸಿದಂತೆ. ಇನ್ನೊಂದು ಎಸ್ ಎನ್ ಸಿ ಸಿ(Student Non Violent Coordinating Commitee) ಯ ಪೋಸ್ಟರ್, ಇನ್ನೊಂದು ಒಬ್ಬ ವೃದ್ಧ ಪುಟ್ಟ ಹುಡುಗಿಯ ಕೈ ಹಿಡಿದುಕೊಂಡ ಪೋಸ್ಟರ್. ಈ ಪೋಸ್ಟರ್ ಅಲಿಸ್ ಗೆ ತನ್ನ ಮೊದಲನೇ ಕಾದಂಬರಿಯಲ್ಲಿ ತಾತ ಮತ್ತು ಮೊಮ್ಮಗಳ ಸಂಬಂಧದ ಮೇಲೆ ಬರೆಯಲು ಪ್ರೇರೇಪಿಸಿದ್ದು. ಅಡುಗೆ ಮನೆ ಬಾಗಿಲಿನ ಬಳಿ ಅರ್ನ್ಸಸ್ಟ್ ಎಂಬ ಕಲಾಕಾರನ ಲಿಥೋಗ್ರಾಫ್ ಮತ್ತು ಅಲ್ಲೇ ಪಕ್ಕ ಚಾರ್ಲ್ಸ್ ವೈಟ್ ಎಂಬ ಆಫ್ರಿಕನ್ ಅಮೆರಿಕನ್ ವಿಷಯದ ಮೇಲೇ ಕಲಾಕೃತಿ ರಚಿಸುತ್ತಿದ್ದ ಕಲಾಕಾರನ ಪೈಂಟಿಂಗ್.
ಮನೆಯ ಈ ಎಲ್ಲಾ ಅಲಂಕಾರಗಳ ವಿವರಣೆ ಯಾಕೆ ಎಂದರೆ ಮನೆಯನ್ನು ಇಟ್ಟುಕೊಳ್ಳುವ ಕ್ರಮ, ಅಲಂಕರಿಸಲು ಉಪಯೋಗಿಸುವ ವಸ್ತುಗಳು ಆ ಮನೆಯವರ ಮನಃಸ್ಥಿತಿಯನ್ನು ತೋರಿಸುತ್ತದೆ. ಭಾರತದಲ್ಲಾದರೆ ದೈವಭಕ್ತರ ಮನೆಗೆ ಹೋಗುತ್ತಿದ್ದಂತೆ ಊದುಬತ್ತಿಯ ಪರಿಮಳ, ಗೋಡೆಯ ಮೇಲೆ ದೇವರ ಚಿತ್ರವಿರುವ ಕ್ಯಾಲೆಂಡರ್, ದೇವರ ಮನೆಯಲ್ಲಿ ದೇವರೇ ಕಾಣದಷ್ಟು ಮುಚ್ಚಿ ಅಲಂಕರಿಸಿದ ಹೂವುಗಳು, ದೀಪ ಎಲ್ಲವೂ ಕಾಣುತ್ತವೆ. ಅಲಿಸ್ ಮನೆಯ ಅಲಂಕಾರ ಆ ದಂಪತಿಗಳ ಸೌಹಾರ್ದಯುತ ಬದುಕನ್ನು ಬಿಂಬಿಸುತ್ತದೆ.
- ಅಲಿಸ್ ಹೇಳುತ್ತಾರೆ ಟುಪೆಲೋ ಗೆ ಉಪನ್ಯಾಸ ಮಾಡಲು ಹೋದಾಗ ಒಬ್ಬ ಹಳೆಯ ಗೆಳತಿಯನ್ನು ಭೇಟಿಯಾದಾಗ ಅವಳಿಗೆ ತನಗಿಂತಾ ಜಾಸ್ತಿ ತನ್ನ ಮನೆಯ ನೆನಪು ಇದ್ದುದನ್ನು ನೋಡಿ ಆಶ್ಚರ್ಯ ಪಟ್ಟೆ ಅಂತ. ಅಡುಗೆ ಮನೆ ಚಿಕ್ಕದಿದ್ದದ್ದು, ರೌಂಡ್ ಡೈನಿಂಗ್ ಟೇಬಲ್ ಒಂದು ಮೂಲೆಯಲ್ಲಿ ಕಿತ್ತುಹೋದದ್ದು, ನೆಲಹಾಸಿನ ಬಣ್ಣ, ಚಿತ್ತಾರ ಎಲ್ಲವೂ. ಫ್ರಿಡ್ಜ್ ಮೇಲೆ ಅಂಟಿಸಿದ ಚಿತ್ರ ಕೂಡಾ. ಈ ಯಾವುದನ್ನೂ ಅಲಿಸ್ ಹೆಚ್ಚು ಗಮನಿಸಿರಲಿಲ್ಲ. ಅಂದರೆ ವಿಭಿನ್ನ ಜನಾಂಗದ ಇವರಿಗೆ ಈ ಸಣ್ಣ ಪುಟ್ಟ ವಿಷಯಗಳು ಪ್ರಮುಖವೆನಿಸದೆ ತಮ್ಮ ಮನಃಸ್ಥಿತಿಯನ್ನು ಬಿಂಬಿಸುವ ವಸ್ತುಗಳೇ ಹೆಚ್ಚು ಆದ್ಯತೆಯವು ಎಂದು ಹೇಳುತ್ತಿರಬಹುದು.
- ಸಾಮಾನ್ಯವಾಗಿದ್ದ, ವಿಶೇಷ ಲಕ್ಷಣಗಳಿರದ ಸ್ನಾನದ ಮನೆಯನ್ನೂ ನೋಡಲಿಚ್ಚಿಸಿದ್ದೆ. ಅಲ್ಲಿರುವ ಕನ್ನಡಿಯಲ್ಲಿ ಆಗಿನ ತನ್ನ ಗಂಭೀರ ಮುಖವೇ ಕಾಣಬಹುದಿತ್ತಾ? ನೋವು ತುಂಬಿದ ಮುಖ. ಯಾವ ನೋವು? ಅಗಾಧ ಖುಷಿಯನ್ನೂ ಮರೆಸುವಂತಾ ನೋವು. ಹೇಳಹೆಸರಿಲ್ಲದಂತೆ ಮರೆಯಾದ ನೂರಾರು ಆಫ್ರಿಕನ್ ಅಮೆರಿಕನ್ನರ ದಾರುಣ, ಅನ್ಯಾಯದ ಸಾವುಗಳು. ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಹತ್ಯೆ ತಂದ ನೋವು ಕಾಣುತ್ತಿತ್ತಾ ಎಂದೊಮ್ಮೆ ನೋಡಬೇಕಿತ್ತು. ನಮ್ಮ ಮಗುವಿನ ಕೋಣೆಯನ್ನು ನೋಡಲಿಚ್ಚಿಸಿದೆ. ಹಳದಿ ಬಣ್ಣದ ಕೋಣೆ. ಬದುಕಿನಲ್ಲಿ ಖುಷಿ, ನೆಮ್ಮದಿ ಇರುತ್ತದೆ ಎಂದು ಮಗುವಿಗೆ ಅನಿಸಲಿ ಎಂಬ ಉದ್ದೇಶದಿಂದ ಆ ಬಣ್ಣ ಹಚ್ಚಿದ್ದು.
- ಹಾಗಾದರೆ ನಾವು ನೀವು ಮಾತಾಡಿಕೊಳ್ಳುವ ಹಾಗೆ, ನಮ್ಮ ಕಾಲದಲ್ಲಿ ಕಾಲ ಇಷ್ಟು ಕೆಟ್ಟಿರಲಿಲ್ಲ ಅನ್ನುವಂತೆ ಅಲಿಸ್ ಗೋಲ್ಡನ್ ಪಾಸ್ಟ್ ಬಗ್ಗೆ ಹೇಳುತ್ತಿದ್ದಾರಾ? ಹಾಗಾದರೆ ಆಗ ಜನಾಂಗೀಯತೆ ಇರಲಿಲ್ವಾ?
- ಇದ್ದೇ ಇತ್ತು. ಅಲಿಸ್ ಮತ್ತು ಅವರ ಪತಿ ಮೊದಲ ಬಾರಿಗೆ ಇಬ್ಬರೇ ರಾತ್ರಿ ಒಂದು ಹೊಟೆಲಿನಲ್ಲಿ ತಂಗಿದ್ದಾಗ, ಜನಾಂಗೀಯವಾದಿ ಬಿಳಿಯ ಜನ ಇವರನ್ನು ಗುರುತಿಸಿ ಕೆಂಗಣ್ಣು ಹಾಯಿಸಿದ್ದು, ಸಾಹಿತ್ಯಾಸಕ್ತಿ ಇರುವ ಇವರಿಬ್ಬರೂ ರಾತ್ರಿಯಿಡೀ ಪರಸ್ಪರ ಬೈಬಲ್ ಓದುತ್ತಾ ನಿದ್ದೆಗೆಟ್ಟು ರಾತ್ರಿ ಕಳೆದಿದ್ದು, ಮರುದಿನ ಬೆಳಿಗ್ಗೆ ಇವರನ್ನು ಆ ಊರಿನಿಂದಲೇ ಓಡಿಸುವ ಹುನ್ನಾರದಿಂದ ಆ ಬಿಳಿಯ ಜನ ಬಂದಿದ್ದು, ಸ್ಥಳೀಯ ಕಪ್ಪು ವರ್ಣೀಯರು ಧೈರ್ಯದಿಂದ ಇವರನ್ನು ಪಾರುಮಾಡಿದ್ದು ಎಲ್ಲವನ್ನೂ ಹೇಳುತ್ತಾರೆ. ಜೊತೆಗೆ ಇವರು ಉಳಿದುಕೊಂಡ ಸಣ್ಣ ಲಾಡ್ಜ್ “ಸ್ವಚ್ಛಗೊಳಿಸದ” ಜಾಗ ಬೇರೆ. ಏನಿದು ಸ್ವಚ್ಛಗೊಳಿಸುವುದು ಎಂದರೆ? ಬಿಳಿಯರು ಕಪ್ಪು ಜನರ ಜೊತೆ ಬೆರೆಯುವುದೇ ಮಲಿನ ಅಂತ ಜನಾಂಗೀಯವಾದ ಹೇಳುತ್ತದೆ. ಅಂತಹ ಜೋಡಿ ಅಲ್ಲಿ ಬರದ ಹಾಗೆ ತಡೆಯುವುದೇ ಸ್ವಚ್ಛ ಗೊಳಿಸುವುದು. ಪ್ಯೂರ್ ರೇಸ್ ತತ್ವ . ಭಾರತೀಯರ ಜಾತೀಯತೆಯ ಕೊಳಕು ಮನಃಸ್ಥಿತಿ ನೆನಪಾಗುವುದಿಲ್ಲವೆ?
- ಇಂಥಾ ವಿರೋಧಿ ಮನೋಭಾವದ ಸಮಾಜದಲ್ಲಿ ಅಡೆತಡೆಗಳನ್ನು ಎದುರಿಸಿಯೂ ಜೊತೆಯಾಗಿ ಖುಷಿಯಾಗಿ ಸುಖವಾಗಿ ಬದುಕಬಹುದು ಎಂಬುದನ್ನು ತೋರಿಸಿದ ಅಲಿಸ್ ದಂಪತಿಗಳ ಬದುಕಲ್ಲಿ ಬಿರುಕು ಬಂದಿದ್ದು ಹೇಗೆ? ಇಲ್ಲಿ ನಿಜವಾದ ಕಥೆ ಪ್ರಾರಂಭ ಆಗುತ್ತದೆ.
ನೆನಪಿದೆಯಾ ಆ ಎಫ್ ಎಂಬ ಮಹಿಳೆ? ಅವಳೊಂದು ಪುಸ್ತಕವನ್ನು ನನಗೆ ಉಡುಗೊರೆಯಾಗಿ ಕೊಟ್ಟಿದ್ದಳು. ಇದೇ ಉಡುಗೊರೆ ನನ್ನ ಬದುಕು ಬದಲಿಸಿದ್ದು. ಅದನ್ನು ಓದಲು ಪ್ರಾರಂಭಿಸಿದ ತಕ್ಷಣದಿಂದ ಆ ಕಾದಂಬರಿ ಮತ್ತು ಲೇಖಕಿಯನ್ನು ಉತ್ಕಟವಾಗಿ ಪ್ರೀತಿಸಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ಶಾಲೆ ಕಾಲೇಜುಗಳಲ್ಲಿ ನಮ್ಮ ಮೇಲೆ ಹೇರಿದ ಹಳೆಯ ಬಿಳಿಯ ಲೇಖಕರನ್ನಷ್ಟೇ ಓದುತ್ತಿದ್ದೆ. ಈ ಕಾದಂಬರಿಯ ಲೇಖಕಿ ಅನಾಮಿಕಳಾಗಿ ಯಾವಾಗಲೋ ಇಹಲೋಕ ತ್ಯಜಿಸಿದವಳಾಗಿದ್ದಳು.
ಇದೇ ಕಾದಂಬರಿ ಅವರ ಬದುಕು ಒಡೆದದ್ದು. ಅಂದರೆ ಆ ಅನಾಮಿಕ ಲೇಖಕಿ ಕಪ್ಪು ಮಹಿಳೆಯಾಗಿರಲೇಬೇಕು. ಅಲಿಸ್ ಗೆ ತನ್ನ ಪೂರ್ವಜರ ನರಳಿಕೆ ಕೇಳಿರಲೇಬೇಕು. ಬಿಳಿಯ ಯೂರೋಪಿಯನ್ನರು ಆಫ್ರಿಕದಿಂದ ನಿರ್ಜೀವ ವಸ್ತುಗಳ ತರಹ ಅಲ್ಲಿಯ ಜನರನ್ನು ತಂದು ಅಮಾನವೀಯವಾಗಿ ಗುಲಾಮರನ್ನಾಗಿಸಿ ಮಾರಾಟ ಮಾಡಿದ್ದು, ಹೆಸರು, ಭಾಷೆಯಲ್ಲದೆ ಧರ್ಮ, ದೇವರುಗಳನ್ನೂ ಬಲವಂತವಾಗಿ ಹೇರಿದ್ದು, ಪ್ರಾಣಿಗಳಿಗಿಂತಾ ಕಡೆಯಾಗಿ ನಡೆಸಿಕೊಂಡಿದ್ದು ಎಲ್ಲವೂ ಸ್ಮೃತಿಯಾಗಿ ಕಾಡದಿರುವುದೆ? ಅಲೆಕ್ಸ್ ಹೆಲಿಯ The Roots ( ಕನ್ನಡಕ್ಕೆ ‘ತಲೆಮಾರು’ ಎಂದು ಬಂಜಗೆರೆ ಜಯಪ್ರಕಾಶ್ ಅನುವಾದಿಸಿದ್ದಾರೆ.) ಕಾದಂಬರಿ ಓದಿದ ಯಾವ ಮಾನವರನ್ನಾದರೂ ದುಗುಡಕ್ಕೆ ದೂಡುವ ಸಂಗತಿಗಳು ಸ್ವತಃ ಆಫ್ರಿಕನ್ ಅಮೇರಿಕನ್ನರಿಗೆ ತಾಗದಿರುತ್ತದೆಯೆ?
ಈ ಉತ್ಕಟತೆಯನ್ನು, ಭಾವೋದ್ರೇಕವನ್ನು ಅಲಿಸ್ ತಮ್ಮ ಗಂಡನ ಬಳಿ ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಉಳಿದೆಲ್ಲಾ ವಿಷಯಗಳನ್ನು ಹಂಚಿಕೊಂಡ ಅವರು ಈ ವಿಷಯ ಹಂಚಿಕೊಳ್ಳಲು ಸುತಾರಾಂ ತಯಾರಿರುವುದಿಲ್ಲ.!! ಇಷ್ಟು ವರ್ಷಗಳಲ್ಲಿ ಅವರು ಎಷ್ಟೆಲ್ಲಾ ಲೇಖಕರೊಂದಿಗೆ ಚರ್ಚಿಸಿದ್ದಾರೆ. ಶೇಕ್ಸ್ ಪಿಯರ್, ದಾಸ್ತೋವೆಸ್ಕಿ, ಟಾಲ್‍ಸ್ಟಾಯ್, ಆರ್ವೆಲ್, ಲ್ಯಾಂಗ್‌ಸ್ಟನ್ ಹ್ಯೂಗ್ಸ್, ಸಿಯಾನ್ ಓಫಾಲಿಯನ್, ಎಲಿಸನ್ ಹೀಗೇ ನೂರಾರು ಲೇಖಕರು. (ಇವರಲ್ಲಿ ಯಾರೂ ಕಪ್ಪು ಜನಾಂಗದವರು ಅಥವಾ ಮಹಿಳೆಯರು ಇಲ್ಲದ್ದು ಗಮನಾರ್ಹ) ಆದರೆ ತಾನು ಪ್ರೀತಿಸುವ ಈ ಕಪ್ಪು ಮಹಿಳೆಯ ಸಣ್ಣ, ಕಡಿಮೆ ಪುಟಗಳಿರುವ ಪುಸ್ತಕವನ್ನು ಮಾತ್ರ ಗಂಡ ಓದಲು ನಿರಾಕರಿಸುತ್ತಾನೆ.!!! ಅಲಿಸ್ ಹೇಳುತ್ತಾರೆ, ಅವನ ಈ ಹಠ ತಮ್ಮಿಬ್ಬರ ನಡುವೆ ಒಂದು ಗೆರೆಯನ್ನು ಕೊರೆಯಿತು ಅಂತ. ಪತಿ ಹೇಳುವುದೇನೆಂದರೆ ಇದೊಂದನ್ನು ಬಿಟ್ಟು ನಿನ್ನನ್ನು ಮನಃಪೂರ್ವಕವಾಗಿ ಪ್ರೀತಿಸುವೆ ಎಂದು. ಆದರೆ ಅಲಿಸ್ ಗೆ ಆ ಚಿಕ್ಕ ಪುಸ್ತಕವೇ ಎಲ್ಲವೂ ಆಗಿರುತ್ತದೆ. ಗಂಡಿನ ಈ ಮನಃಸ್ಥಿತಿಯನ್ನು ಹೇಗೆ ವಿಶ್ಲೇಷಿಸೋಣ?
ತವರು ಮನೆಗೆ ಕಳಿಸದಿರುವ, ಹೆಣ್ಣಿನ ತವರಿನವರ ಬಗ್ಗೆ ನಿಕೃಷ್ಟ ಭಾವ ಇರುವ, ಅವರನ್ನು ದೂಷಿಸುವ, ಗೇಲಿ ಮಾಡುವ ಎಷ್ಟೋ ಗಂಡಂದಿರು ಹೆಂಡತಿ ತನ್ನ ಮನೆಯವರನ್ನು ಮಾತ್ರ ತನ್ನವರೆಂದೇ ಅಂದುಕೊಂಡು ಪ್ರೀತಿಸಬೇಕು ಎಂದು ಬಯಸುವುದನ್ನು, ಅದನ್ನು ಬಲಾತ್ಕಾರವಾಗಿ ಹೇರುವುದನ್ನು ನೋಡುತ್ತೇವೆ. ಗಂಡ ಹೆಂಡತಿ ಸುಖವಾಗಿರುವಂತೆ ಕಾಣುವ ಅದೆಷ್ಟೋ ಸಂದರ್ಭಗಳಲ್ಲಿ ಹೆಣ್ಣು ಈ ನೋವನ್ನು ಗೋಪ್ಯವಾಗಿ ಇಟ್ಟುಕೊಂಡಿರುವುದನ್ನು, ಅದನ್ನು ಗೋಪ್ಯವಾಗಿಡಬಲ್ಲವರ ಹತ್ತಿರ ಹಂಚಿಕೊಳ್ಳುವುದನ್ನು ನೋಡಿದ್ದೇನೆ. ಅದೇ ಥರದ ಮನಃಸ್ಥಿತಿ ಅಲಿಸ್ ರ ಗಂಡಂದಾಗಿರಬಹುದೆ? ಅಲಿಸ್ ಗೆ ತನ್ನ ಪೂರ್ವಜರ ಕಥೆಯನ್ನು ಕೂಲಂಕಷವಾಗಿ ನೆನಪಿಸುವ ಕಾದಂಬರಿ ಅದಾಗಿರಬಹುದೆ?
ಖಂಡಿತಾ ಅದೇ. ಪುಲಿಟ್ಝರ್ ಪ್ರಶಸ್ತಿ ಗೆದ್ದು ಕೊಟ್ಟ ಅಲಿಸರ ಕಾದಂಬರಿ ದ ಕಲರ್ ಪರ್ಪಲ್ ನ ಮುನ್ನುಡಿಯಲ್ಲಿ ಅಲಿಸ್ ತಮ್ಮ ಸ್ಮೃತಿ ತಂದ ಜ್ಞಾನವನ್ನು, ತಮ್ಮ ಇತಿಹಾಸವನ್ನು ವಿವರವಾಗಿ ಬಿಚ್ಚಿಡುತ್ತಾರೆ. ಕಪ್ಪಾಗಿರುವುದು ಅಧರ್ಮ ಎಂದ ಧರ್ಮವನ್ನು ಇವರು ಒಪ್ಪಿ ಅಪ್ಪಿಕೊಳ್ಳುವಂತೆ ಮಾಡಿದ ಸಂದರ್ಭ, ಮನುಷ್ಯರನ್ನು ಇನ್ನಿಲ್ಲದಂತೆ ದಮನಿಸಿದ ಜನ ತಾವು ಉದಾರವಾದದ್ದೆಂದು ಹೇಳುವ ಧರ್ಮವನ್ನು ಹೇರಿದಾಗ ಅದು ಖೈದಿಯ ಹೃದಯ ಗೆಲ್ಲಲು ಸಾಧ್ಯವೆ? ಈ ಜ್ಞಾನೋದಯವಾದಾಗಲೂ ಅಲಿಸ್ ಸೆಮೆಟಿಕ್ ವಿರೋಧಿಯಾಗದಿರಲು ಸಾಧ್ಯವೆ? ಪ್ರಕೃತಿಯನ್ನು ಪೂಜಿಸಿದ ತನ್ನ ಪೂರ್ವಜರ ಧರ್ಮ ಸೆಳೆಯದಿರಲು ಸಾಧ್ಯವೆ?
ಯಾಕಾಗಿ ಮನುಷ್ಯರಿಗೆ ತಾನು ಹುಟ್ಟಿದ ಆದರೆ ತನ್ನ ಆಯ್ಕೆಯಲ್ಲದ ಧರ್ಮ ಇಷ್ಟೊಂದು ಗಟ್ಟಿಯಾಗಿ ಬಂಧಿಸಿಡುವುದು? ಆ ಬಂಧನದಿಂದ ಬಿಡಿಸಿಕೊಳ್ಳಲು ಹೊರಗಿನ ಸ್ಥಿತಿ ಬಿಡಿ, ಅಂತರಾಳದಲ್ಲಿ ಕೂಡಾ ಯಾಕೆ ಸಾಧ್ಯವಾಗುವುದಿಲ್ಲ? ಇದು ಕಾಡುವ ಪ್ರಶ್ನೆ ಯಾಗಿಯೇ ಉಳಿಯುತ್ತದೆ.
ತಮ್ಮ ಮಗು ಆ ಪುಸ್ತಕವನ್ನು ಓದಿದಳು, ತಾಯಿ ಮಗಳು ಅದನ್ನು ಜೊತೆಯಾಗಿ ಓದಿದರು, ಆ ಪುಸ್ತಕ ಸ್ಫುರಿಸಿದ ಭಾವನೆಗಳನ್ನು ಹಂಚಿಕೊಂಡರು. ಕಾಲದ ಈ ಹಂತದಲ್ಲಿ ನಿಂತು ಏನು ಹೇಳಬಹುದು? ಪ್ರೀತಿ ಯಾವ ತಡೆಯನ್ನೂ ತಡೆದುಕೊಳ್ಳುವುದಿಲ್ಲ, ಕಾಲದ ತಡೆಯನ್ನೂ ಕೂಡಾ. ಅವ್ಯಾವ ತಡೆಗಳೂ ಇಲ್ಲದ ಕಾಲದಲ್ಲಿ ನಾನು ನೀನು ಆ ಚಿಕ್ಕ ಆದರೆ ನಮಗೆ ದೊಡ್ಡದೆನಿಸುತ್ತಿದ್ದ ಮನೆಯಲ್ಲಿ ತಾವು ಪರಸ್ಪರ ಕೊಟ್ಟು ಕೊಂಡೆವು ಎಂದು ಅಲಿಸ್ ತಮ್ಮ ಪತ್ರವನ್ನು ಕೊನೆಗೊಳಿಸುತ್ತಾರೆ. ಇಂತೀ ತಮ್ಮ ಅನ್ನುವ ಕೊನೆಯೂ ಮಹತ್ವದ್ದೇ. ಲೇಖಕಿ ಬಂಧನ ಮುಕ್ತ ನಿರಾಳ ಬದುಕಿಗೆ ಈಗಲೂ ಕಾತರಿಸುತ್ತಾರೆ ಎಂಬುದು ಈ ಪತ್ರ ಎತ್ತಿ ತೋರಿಸುತ್ತದೆ.
ಜರ್ಮನಿಯ ನಾಝಿಗಳ ಆಟಾಟೋಪ ಮರೆಯಲು ಸಾಧ್ಯವೆ? ಆದರೆ ಅದೇ ಜನಾಂಗ ಪ್ಯಾಲೆಸ್ಟೈನ್ ಮೇಲೆ ಮಾಡುತ್ತಿರುವ ಘೋರ ಅನಾಚಾರ?!!!! ಅರ್ಥೈಸುವುದಾದರೂ ಹೇಗೆ? ಮನುಷ್ಯ ಯಾಕಿಷ್ಟು ಕ್ರೂರಿ?
ಕಾಲ ಕೂಡಾ ನೋವಿಗೆ ಮದ್ದಾಗಲಾರದು.
ವೃಂದಾ ಹೆಗಡೆ
ಅತಿಥಿ ಉಪನ್ಯಾಸಕರು
ಇದನ್ನೂ ಓದಿ- ಅವಳೇಕೆ ಹೀಗೆ?