ಪಾದಕ್ಕೆ ಕಣ್ಣು ಮೂಡಿಸುವ ಹಂಬಲದ ಕವಿತೆಗಳು
ಕನ್ನಡದ ಸೃಜನಶೀಲ ಬರಹಗಾರ್ತಿ ಡಾ. ನಾಗರೇಖಾ ಗಾಂವಕರ ಅವರ ಇಪ್ಪತ್ತು ʼವರ್ಷಗಳ ನಂತರʼ ಮತ್ತು ʼಪಾದಕ್ಕೊಂದು ಕಣ್ಣುʼ ಕೃತಿಗಳ ಬಿಡುಗಡೆ ಸಮಾರಂಭವು 03-08-2025 ರಂದು ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ʼಪಾದಕ್ಕೊಂದು ಕಣ್ಣುʼ ಕವನ ಸಂಕಲನಕ್ಕೆ ಡಾ. ವಿನಯಾ ಒಕ್ಕುಂದ ಬರೆದ ಮುನ್ನುಡಿ ಇಲ್ಲಿದೆ.
ಮಹಿಳಾ ಸಂವೇದನೆ ಕಾವ್ಯ ವಲಯವೆಂಬ ಮಳೆಬಿದ್ದ ನೆಲದಲ್ಲಿ ಮೊಳಕೆಯೊಡೆದು ಬಣ್ಣ, ರೂಪ, ರಸ, ಗಂಧಗಳನ್ನು ಚಿಮ್ಮಸುತ್ತಿರುವ ಕಸುವಿನ ಕಾಲವಿದು. ಈ ಸಂವೇದನೆಯ ಬೆರಕೆ ಕೂಡದಿದ್ದರೆ ಕಾವ್ಯಲೋಕ ಬರಡಾಗಿರುತ್ತಿತ್ತು ಅಂತಲ್ಲ. ಆದರೆ, ನೆಲದ ಪದರದೊಳಗೆ ಅವ್ಯಕ್ತವಾಗಿ ಇಂತಹ ಫಲವತ್ತತೆ ಇತ್ತೆನ್ನುವುದು ಅರಿವಾಗುತ್ತಿರಲಿಲ್ಲ. ಅಂತಹ ಜೀವ ಕಕ್ಕುಲತೆಯ ಕವಿತೆಗಳು ಇಲ್ಲಿವೆ. ನಾಗರೇಖಾ ಗಾಂವಕರ ಬರಹಗಾರಿಕೆಯಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವವರು. ಇಲ್ಲಿಯ ಕವಿತೆಗಳು, ಬದುಕಿನ ಸಣ್ಣ ಸಣ್ಣ ಸಂಗತಿಗಳ ಕನ್ನಡಿಯಲ್ಲಿ ತಾತ್ವಿಕತೆಯ ಶೋಧನೆಗೆ ಪ್ರಯತ್ನಿಸುತ್ತವೆ. ಇದ್ದಿಲು, ಕೆಂಡ, ತರಗಲೆ, ಹಣತೆ, ಬೇಲಿ, ಬೆರ್ಚಪ್ಪ, ಕೆನೆಹಾಲು, ಕೌದಿ, ಪಡಸಾಲೆ, ಬೀಗದ ಕೈ…. ಇವೆಲ್ಲವೂ ಇನ್ಯಾವುದೋ ಅರಿವಿನ ಮಾತು ತಾಕಿಸಲು ಒದಗಿ ಬರುತ್ತವೆ. ಮರ- ಈ ಸಂಕಲನದ ಮಾತ್ರವಲ್ಲ ಕವಿಯ ಭಾವದೀಪಕತೆಯ ಆಳದಲ್ಲೇ ಬೇರೂರಿಬಿಟ್ಟಿದೆ. ‘ಮರವೆಂದರೆ ಬರೀ ಮರವಲ್ಲ’- ಎಂಬ ತಿಳಿವು ದಕ್ಕಿದ ಖುಷಿ ಓದುಗರದ್ದೂ ಆಗುತ್ತದೆ. . ಆಳಕ್ಕಿಳಿದಷ್ಟೂ ಮೇಲಕ್ಕೇರುವ, ಹೇರಿದಷ್ಟೂ ಹರವಿಕೊಳ್ಳುವ ಮರದ ತ್ರಾಣ ಕವಿಯ ಬಾಳುಗಾರಿಕೆಯ ಕನಸಾಗುತ್ತದೆ.
ಇಲ್ಲಿಯ ಕವಿತೆಗಳು ಮತ್ತೆ ಮತ್ತೆ ಮರಳುವುದು ನಿನ್ನೆಗಳಿಗೆ- ಕಳೆದ ಶತಮಾನದ ಉತ್ತರಾರ್ಧದಲ್ಲಿ ಜನಿಸಿದ ಸಂವೇದನಾಶೀಲರ ಜೀವಕೋಶಗಳಲ್ಲಿ ಈ ನೇಯ್ಗೆ ಉಳಿದುಹೋಗಿದೆ. ಶಿಕ್ಷಣ, ಉದ್ಯೋಗಾವಕಾಶಗಳ ಕಾರಣದಿಂದ ಆಧುನಿಕವೆಂಬ ಮೇಲ್ ಚಲನೆಗೆ ಒಳಗಾದರೂ ಸಾಂಪ್ರದಾಯಿಕ ಕೃಷಿ ಮೂಲದ ಕೂಡುಕಟ್ಟುಗಳ ರುಚಿ-ರಸನೆಗಳ ಆಸ್ವಾದನೆಯನ್ನೂ, ಅನುಭವಿಸಿದ್ದ ಸಮುದಾಯ, ಈಗಿತ್ತಲಾಗಿ ಮುಕ್ತ ಮಾರುಕಟ್ಟೆಯೆಂಬ ತಲ್ಲಣದಲ್ಲಿ ದಿಗ್ಭ್ರಾಂತಿಗೊಳಗಾಗಿದೆ. ಪರಸ್ಪರ ವಿರುದ್ಧ ವಾಸ್ತವಗಳಿಗೆ ಸಾಕ್ಷಿಯಾಗಿ ನಿಂತ ತಲೆಮಾರು ಸದಾ ತನ್ನ ಮನಸ್ಸನ್ನು ತೂಗುವ ತಕ್ಕಡಿಯಾಗಿಸಿಕೊಂಡಿದೆ. ಏನೆಲ್ಲ ಬದಲಾಗಿದೆ ಎನ್ನುವುದು ಮುಖ್ಯವಲ್ಲ, ಈ ಬದಲಾವಣೆ ಕೇವಲ ಹೊರ ಆಡಂಬರವಾಗಿದೆ. ಒಳಗೊಳಗೆ ಜೀವಸೌಖ್ಯ ಪೊಳ್ಳುಬಿದ್ದಿದೆ ಎನ್ನುವುದು ಮುಖ್ಯವಾಗುತ್ತಿದೆ. ಅಪ್ರಮಾಣಿಕತೆ ಮತ್ತು ತೋರುಂಬ ಲಾಭಗಳು ಎಲ್ಲವನ್ನೂ ಎಲ್ಲರನ್ನೂ ಆವರಿಸಿಕೊಳ್ಳುತ್ತಿವೆ. ಪರಿಣಾಮವಾಗಿ ಭಾವವಲಯ ಘಾಸಿಗೊಳ್ಳುತ್ತಿದೆ. ಸಂಬಂಧಗಳನ್ನು ಹಿಸುಕಿ ಹಾಕುತ್ತಿದೆ. ನಿನ್ನೆ ಮತ್ತು ಇಂದಿನ ಈ ವ್ಯತ್ಯಾಸ ಆರ್ಥಿಕ, ಸಾಮಾಜಿಕ ವಲಯಗಳ ಸಂಭವನೀಯತೆಯಾಗಿದ್ದರೆ ಅಲಕ್ಷಿಸಬಹುದಿತ್ತು. ಆದರದು ವ್ಯಕ್ತಿ ವ್ಯಕ್ತಿಗಳ ಭಾವ ಸಾಧ್ಯತೆಯನ್ನೆ ಛಿದ್ರಗೊಳಿಸಿ, ಅಸಹಜವನ್ನು ಸಹಜವಾಗಿಸುತ್ತಿದೆ. ಇಲ್ಲಿಯ ಕವಿತೆಯೊಂದು ಅಮ್ಮನ ನೋವಿನ ಬಗ್ಗೆ ಹೇಳುತ್ತದೆ. ಆ ನೋವು ಎಲ್ಲರೆದೆಯಲ್ಲಿರುವ ತಾಯ್ತನದ ನೋವು ಆಗುತ್ತದೆ. ಕಣ್ಣ ಮುಂದೆಯೇ ಕೈಯ ಬೊಗಸೆಯ ನೀರು ಸೋರಿಹೋಗುವ ಅಸಹಾಯಕತೆಯ ಮಿಡುಕಾಟಗಳು ಕವಿತೆಯ ಕಾಳಜಿಯಾಗಿದೆ.
ಇಲ್ಲಿಯ ಕವಿತೆಗಳು ಜೀವದಾಳದಲ್ಲಿ ಸಂಭವಿಸುವ ಪಲ್ಲಟಗಳನ್ನು ಕಾಣಿಸುತ್ತವೆ. ಬಿಡುಗಡೆ ಒಂದು ಎಚ್ಚರ. ಅದು ಮನಸ್ಸಿನಾಳದ ತೀರ್ಮಾನವಾಗಿರುತ್ತದೆ. ರೂಢಿಯಿಂದ ನಡೆಯುತ್ತ ಬಂದ ಹಾದಿಯನ್ನು, ಪ್ರಜ್ಞೆಯಿಂದ ನಡೆಯುವಾಗ ಜಗತ್ತು ಬೇರೆಯಾಗಿ ಕಾಣುತ್ತದೆ. ಅದನ್ನು ‘ಪಾದಕ್ಕೆ ಮೂಡಿಸಿಕೊಳ್ಳುವ ಕಣ್ಣು’ ಎಂಬ ರೂಪಕ ಹೇಳುತ್ತದೆ.
‘ಪಾದಕ್ಕೊಂದು ಕಣ್ಣು ಮೂಡಿದೆ
ಗೆದ್ದಲು ಹಬ್ಬಿದ ಗಿಡಕ್ಕೆ ಜೇನೂ ಕಟ್ಟಿದೆ’
ಬದುಕಿನ ಯಾವ ಕ್ಷಣದಲ್ಲಾದರೂ ಅದಮ್ಯ ಕನಸುಗಾರಿಕೆಯ ಫಲಿತವಾಗಿ ಬೆಳಕು ಬೆಳಗಬಹುದು.
‘ಜೀವವಿಲ್ಲದ ಒಣ ಎಲೆಯೆಂದವರ
ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು’ ಎಂಬ ಆತ್ಮಘನತೆ ಅಂಕುರಿಸುತ್ತದೆ. ನಮ್ಮೊಳಗೆ ಸಂಭವಿಸುವ ಬದಲಾವಣೆಯು ಲೋಕವನ್ನು ಕಾಣುವ ನೆಲೆಯನ್ನೇ ಬದಲಿಸಬಹುದು. ಇದು ಸುಖವನ್ನೇ ನೀಡಬಲ್ಲುದೆಂಬ ಭ್ರಮೆ ಬೇಡ. ಆದರೆ ಖಂಡಿತವಾಗಿಯೂ ಮನಸ್ಸಿನ ಕಳವಳವನ್ನು ಕಳೆಯುತ್ತದೆ. ಪ್ರೀತಿಸುತ್ತಲೂ ಪ್ರಶ್ನಿಸುವ ತಾಕತ್ತನ್ನು ಕೊಡುತ್ತದೆ. ಅಂತಹ ಅನುಭವವನ್ನು ಇಲ್ಲಿಯ ಕವಿತೆಗಳು ಕೊಡುತ್ತವೆ. ಹೆಣ್ಣನ್ನು ಅಸ್ಪೃಶ್ಯಳಾಗಿಸಿದ ಧರ್ಮಕಾರಣವನ್ನು ಪ್ರಶ್ನಿಸುವ ಕವಿತೆಯೂ, ಸೃಷ್ಟಿಶೀಲವಾದ ಹೆಣ್ಣಿನ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಗಳನ್ನೆಲ್ಲ ಮೈಲಿಗೆಯಾಗಿಸಿದ ಆ ದೇವನೆಂಬವನನ್ನು ಹುಡುಕಿಕೊಡು- ಎಂದು ಕವಿತೆ ಆಹ್ವಾನಿಸುತ್ತದೆ. ಹೆಣ್ಣನ್ನು ಹಂಗಿಸುವ ವ್ಯಂಗಿಸುವ ಸಜ್ಜನರಿಗೆ ಕವಿತೆ “ ಅವಳ ಕೈಗಳಲ್ಲಿ ಉಗುರುಗಳು ಮೂಡುವವರೆಗೂ ನಿಶ್ಚಿಂತರಾಗಿರಿ”- ಎಂದು ಎಚ್ಚರಿಸುತ್ತದೆ. ಇಂದಲ್ಲ ನಾಳೆ ಉಗುರುಗಳು ಮೂಡಿಯೇ ಮೂಡುತ್ತವೆಂದೂ ಸೂಚಿಸುತ್ತಿದೆ.
ಇಲ್ಲಿಯ ಕವಿತೆಗಳಲ್ಲಿ ಮನುಷ್ಯನ ಬಾಳನ್ನು ಪೊರೆವ ಪ್ರೀತಿಯ ಹಲವು ನೆಲೆಗಳ ಆಪ್ತ ಸೆಲೆಯಿದೆ. ಅದು ವ್ಯಕ್ತವಾಗಿರಬಹುದು, ಅವ್ಯಕ್ತವಾಗಿರಲೂಬಹುದು. ಅದು ಮನುಷ್ಯ ಸಂಬಂಧಗಳ ಮಾತಿರಬಹುದು, ಪ್ರಕೃತಿಯ ಮೂಕ ಸಾಂತ್ವನದ ಸಂಗತಿಯಾಗಿರಬಹುದು. ಮನೆ ಜಗುಲಿಗೆ ಮಾತ್ರ ಪ್ರವೇಶಿಸಿದ ಬಾಂಧವ್ಯವಿರಬಹುದು. ಬದುಕು ಸಂಭಾಳಿಸುವ ನೋಟವನ್ನು ಕೊಟ್ಟ ಗುರುತನವಿರಬಹುದು. ಹೆಸರಿಲ್ಲದ ಹಾಳೆಯೊಂದು ಎಲ್ಲರ ಎದೆಯ ಪದರದೊಳಗೂ ಇದೆ. ಇರುತ್ತದೆ ಎಂಬ ವಿವೇಕವಿದು. ವಿಶೇಷವೆಂದರೆ ಆ ಹಾಳೆಗಳಿಗೆ ಎಂದೂ ಹೆಸರು ನಮೂದಾಗುವುದಿಲ್ಲ.
ಹೀಗೆ ಮನಸ್ಸಿಗೆ ತಾಕುವ, ಒಂದರೆಗಳಿಗೆ ಅವುಗಳ ಸಾನಿಧ್ಯದಲ್ಲಿ ಇರಬೇಕೆನ್ನಿಸುವ ಹಲವು ಕವಿತೆಗಳು ಇಲ್ಲಿವೆ. ಅದಕ್ಕಾಗಿ ನಾಗರೇಖಾಗೆ ಶುಭಾಶಯ. ಆದರೆ ಹೀಗೆ ಹೊಸ ಕವಿತೆಗಳ ಕಟ್ಟನ್ನು (ನನ್ನ ಕವಿತೆಗಳನ್ನೂ ಒಳಗೊಂಡು) ಓದುವಾಗೆಲ್ಲ, ಇವುಗಳಲ್ಲಿ ಎಲ್ಲವನ್ನೂ ಕಲಸಿ ಹದಬರಿಸಿ, ಆಹಾ!! ಎಂದು ನಿಲ್ಲಿಸಿಬಿಡುವ ಸ್ವಾದವನ್ನು ತರಲಾಗುತ್ತಿಲ್ಲವೇ ಎಂಬ ಅಳುಕಾಗುತ್ತದೆ. ದಿನದಿನದ ಅಡುಗೆಗೂ ‘ನನ್ನದೇ’ ಎಂಬ ರುಚಿಗೂ ಇರುವ ಅಂತರವಿದು. ಇದು, ಇಂದು ಕವಿತೆ ಬರೆಯುತ್ತಿರುವ ಎಲ್ಲರಿಗೂ ಅನ್ವಯಿಸುವ ಮಾತು. ಇಲ್ಲಿ ಆಡಲು ಕಾರಣವೆಂದರೆ, ನಾಗರೇಖಾ ಅಂತಹ ಕವಿತೆಯ ಹದ ಹುಡುಕುವ ಶಕ್ತಿಯಿರುವ ಕವಿ. ಅವರಿಗದು ಸಾಧ್ಯವಾಗಲಿ ಎಂಬ ಹಂಬಲದೊಂದಿಗೆ-
ವಿನಯಾ ಒಕ್ಕುಂದ
ಇದನ್ನೂ ಓದಿ- ಕುದಿಯುವರು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ