ಹಿಂದುಳಿದ ವರ್ಗಗಳ ಸಮಸ್ಯೆ ಅರಿವಿದ್ದಿದ್ದರೆ ಮೊದಲೇ ಜಾತಿಗಣತಿ ಮಾಡಿಸುತ್ತಿದ್ದೆ: ರಾಹುಲ್‌ ಗಾಂಧಿ

Most read

ನವದೆಹಲಿ: ಈ ಮೊದಲು ಒಬಿಸಿ ಸಮುದಾಯದ ಸಮಸ್ಯೆಗಳ ಅರಿವಿದ್ದಿದ್ದರೆ ಬಹಳ ಹಿಂದೆಯೇ ಜಾತಿ ಜನಗಣತಿಯನ್ನು ನಡೆಸುತ್ತಿದ್ದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಕ್ಷದ ಒಬಿಸಿ ಘಟಕ ಆಯೋಜಿಸಿದ್ದ ‘ಭಾಗೀದಾರಿ ನ್ಯಾಯ ಸಮ್ಮೇಳನ’ದಲ್ಲಿ ಪಾಲ್ಗೊಂಡಿದ್ದ ಅವರು, ಒಬಿಸಿಯವರ ಸಮಸ್ಯೆಗಳು ಗೌಪ್ಯವಾಗಿರುತ್ತವೆ ಮತ್ತು ಸುಲಭವಾಗಿ ಗೋಚರಿಸುವುದಿಲ್ಲ. ದಲಿತರು, ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ವಿಷಯ ಬಂದಾಗ ನನಗೆ ಉತ್ತಮ ಅಂಕಗಳು ದೊರೆಯಬೇಕು. ಆದರೆ ಒಬಿಸಿ ಸಮುದಾಯವನ್ನು ರಕ್ಷಿಸಬೇಕಿದ್ದ ರೀತಿಯಲ್ಲಿ ರಕ್ಷಿಸಲಿಲ್ಲ ಎಂಬ ಕೊರಗು ಎಂದರು.

2004ರಿಂದ ನಾನು ರಾಜಕೀಯದಲ್ಲಿರುವ ನನಗೆ ತಪ್ಪು ಮಾಡಿದ್ದೇನೆ ಎಂದು ಭಾಸವಾಗುತ್ತಿದೆ. ಆ ಸಮಯದಲ್ಲಿ ನನಗೆ ನಿಮ್ಮ ಸಮಸ್ಯೆಗಳು ಅರ್ಥವಾಗಿರಲಿಲ್ಲ. ನಿಮ್ಮ ಇತಿಹಾಸ ಮತ್ತು ಸಮಸ್ಯೆಗಳ ಅರಿವಿದ್ದಿದ್ದರೆ ನಾನು ಆಗಲೇ ಜಾತಿ ಜನಗಣತಿ ಮಾಡಿಸುತ್ತಿದ್ದೆ. ಈಗ ತಪ್ಪನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರದ್ದು ತೋರಿಕೆ, ಒಳಗೆಲ್ಲಾ ಟೊಳ್ಳು. ಕೆಲವು ಮಾಧ್ಯಮಗಳು ಪ್ರಧಾನ ಮಂತ್ರಿಯವರ ಬಲೂನ್‌ ಅನ್ನು ಊದಿದ್ದಾರೆ. ಆದರೆ, ಅವರ ಒಳಗೆ ಏನೂ ಇಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಸುಳ್ಳು ಹೇಳುವ ಪ್ರಧಾನಿ ಮೋದಿ ಅವರಿಂದ ದೇಶಕ್ಕೆ ಒಳ್ಳೆಯದೇನೂ ಆಗುವುದಿಲ್ಲ. ಒಬಿಸಿ ಮತ್ತು ಇತರ ನಿರ್ಲಕ್ಷಿತ ವರ್ಗಗಳು ಬಿಜೆಪಿಯ ವಿರುದ್ಧ ಒಂದಾಗಬೇಕು ಎಂದು ಕರೆ ನೀಡಿದರು.

More articles

Latest article