ಪಕ್ಷಪಾತಿ ಉಪರಾಷ್ಟ್ರಪತಿ ಧನಕರ್ ನಿರ್ಗಮನ, ಪ್ರಜಾಪ್ರಭುತ್ವಕ್ಕೆ ವರದಾನ

Most read

ವ್ಯಕ್ತಿ ಯಾರೇ ಆಗಿರಲಿ, ಅದೆಷ್ಟೇ ಪ್ರಭಾವಿಯಾಗಿರಲಿ, ಅಗತ್ಯಕ್ಕೆ ತಕ್ಕಂತೆ ಬಳಸಿ ಬಿಸಾಕುವುದೇ ಆರೆಸ್ಸೆಸ್ ಸಿದ್ಧಾಂತದ ಪ್ರಮುಖ ಭಾಗ. ಹಿಂದುತ್ವರಾಷ್ಟ್ರೀಯತೆಯ ಮನುವಾದಿ ಸರ್ವಾಧಿಕಾರಿ ಸಾಮ್ರಾಜ್ಯ ಸ್ಥಾಪನೆಯ ಹಾದಿಯಲ್ಲಿ ಅಡ್ವಾಣಿ ಯಾಗಿರಲಿ, ಧನ್ಕರ್ ಆಗಿರಲಿ ಅಷ್ಟೇ ಯಾಕೆ ಮುಂದೆ ಮೋದಿ ಶಾ ಗಳೇ ಆಗಿರಲಿ ಎಲ್ಲರ ತಲೆದಂಡ ಆಗುವುದು ನಿಶ್ಚಿತ. ಮನುವಾದಿ ವೈದಿಕಶಾಹಿ ಸಿದ್ದಾಂತ ಗುರಿ ಸಾಧನೆಯ ಹಾದಿಯಲ್ಲಿ ಎಲ್ಲರ ಅಧಿಕಾರವೂ ಅನಿಶ್ಚಿತ – ಶಶಿಕಾಂತ ಯಡಹಳ್ಳಿ. ರಾಜಕೀಯ ವಿಶ್ಲೇಷಕರು.

ಸುಪ್ರೀಂ ಕೋರ್ಟ್ ತೀರ್ಪಿನ ವಿಶ್ವಾಸಾರ್ಹತೆಯನ್ನೇ ಬಹಿರಂಗವಾಗಿ ಟೀಕಿಸಿದ್ದ ಬಿಜೆಪಿ ಪಕ್ಷಪಾತಿ ಹಿಂದುತ್ವವಾದಿ ಜಗದೀಪ್ ಧನಕರ್ ತಮ್ಮ ಉಪರಾಷ್ಟ್ರಪತಿ ಹುದ್ದೆಗೆ ಜುಲೈ 21 ರಂದು ಅಕಾಲಿಕವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಸಾಂವಿಧಾನಿಕ ಉನ್ನತ ಹುದ್ದೆಯಾಗಿರುವ ಉಪರಾಷ್ಟ್ರಪತಿ ಸ್ಥಾನಮಾನದ ವಿಶ್ವಾಸಾರ್ಹತೆಗೆ ಕಳಂಕ ತರುವಂತಹ ಹೇಳಿಕೆಗಳನ್ನು ಕೊಡುತ್ತಿದ್ದ ಧನಕರ್ ರವರು ಆ ಸ್ಥಾನವನ್ನು ಸ್ವಯಂಪ್ರೇರಿತರಾಗಿ ತ್ಯಜಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಕೂಲಕರವಾದ ವಿದ್ಯಮಾನವಾಗಿದೆ.

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಯಾಗಿ ಯಾವುದೇ ಪಕ್ಷ ಇಲ್ಲವೇ ಸಿದ್ದಾಂತದ ವ್ಯಕ್ತಿ ಆಯ್ಕೆಯಾದರೂ ಆ ಹುದ್ದೆ ಅಲಂಕರಿಸಿದ ತಕ್ಷಣದಿಂದ ಅವರು ಪಕ್ಷಾತೀತರಾಗಬೇಕಾಗುತ್ತದೆ. ಯಾವುದಾದರೂ ಪಕ್ಷದವರಾಗಿದ್ದರೆ ಆ ಪಕ್ಷಕ್ಕೆ ರಾಜೀನಾಮೆ ಕೊಟ್ಟ ನಂತರವೇ ಈ ಪ್ರತಿಷ್ಠಿತ ಉನ್ನತ ಹುದ್ದೆಯ ಗದ್ದುಗೆ ಏರಬೇಕಾಗುತ್ತದೆ. ಪಕ್ಷಾತೀತವಾದ ನಿಲುವನ್ನು ಹೊಂದಿ ಸಂವಿಧಾನಕ್ಕೆ ಬದ್ದರಾಗಿರಬೇಕಾಗುತ್ತದೆ. ಸಂವಿಧಾನದ ರಕ್ಷಣೆಯ ಹೊಣೆಯೂ ಈ ಹುದ್ದೆಗೇರಿದವರ ಆದ್ಯ ಕರ್ತವ್ಯವಾಗಿರುತ್ತದೆ.

ಆದರೆ ಈ ಸನ್ಮಾನ್ಯ ಜಗದೀಪ್‌ ಧನಕರ್ ರವರು ಉಪರಾಷ್ಟ್ರಪತಿಯಾಗಿ ನೇಮಕಗೊಂಡರೂ ಬಿಜೆಪಿ ಪಕ್ಷದ ವಕ್ತಾರರಂತೆ ಪ್ರತಿ ಹಂತದಲ್ಲೂ ತಮ್ಮ ನಡೆ ನುಡಿಯಲ್ಲಿ ವ್ಯಕ್ತಪಡಿಸುತ್ತಲೇ ಬಂದರು. ಕೇಶವಾನಂದ ಭಾರತಿ ಪ್ರಕರಣದಲ್ಲಿ “ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ” ಎಂದು ಸರ್ವೋಚ್ಛ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಈ ಮನುವಾದಿ ಧನಕರ್ ರವರು ನ್ಯಾಯಪೀಠದ ತೀರ್ಪನ್ನೇ ಪ್ರಶ್ನಿಸಿ ಟೀಕಿಸಿದರು. ಸಂವಿಧಾನವೇ ಅಂತಿಮ ಎನ್ನುವ ಪ್ರಜಾಪ್ರಭುತ್ವದ ಆಶಯವನ್ನೇ ಟೀಕಿಸಿದ ಈ ಧನಕರ್ ಸಾಹೇಬರು ಸಂಸತ್ತಿಗೆ ಎಲ್ಲಾ ಪರಮಾಧಿಕಾರ ಎಂದು ವಾದಿಸಿ ಅವರ ನಿಷ್ಠೆ ಬದ್ಧತೆ ಸರ್ವಾಧಿಕಾರಿ ಪರ ಎಂಬುದನ್ನು ಬಹಿರಂಗಪಡಿಸಿದರು. ಇಷ್ಟೇ ಅಲ್ಲದೇ ತಮ್ಮನ್ನು ತಾವೇ “ಆರೆಸ್ಸೆಸ್ ಸಂಘಟನೆಯ ಏಕಲವ್ಯ” ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದು ಉಪರಾಷ್ಟ್ರಪತಿ ಎನ್ನುವ ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರವಾಗಿದೆ.

ಉಪರಾಷ್ಟ್ರಪತಿಯ ಜೊತೆಗೆ ಸಂಸತ್ತಿನ ರಾಜ್ಯಸಭೆಯ ಸಭಾಪತಿಯೂ ಆಗಿದ್ದ ಧನಕರ್ ರವರು ಪಕ್ಕಾ ಬಿಜೆಪಿಯ ವಕ್ತಾರರಂತೆಯೇ ವರ್ತಿಸಿದ್ದನ್ನು ಇಡೀ ದೇಶವೇ ಮಾಧ್ಯಮಗಳ ಮೂಲಕ ನೋಡಿಯಾಗಿದೆ. ವಿರೋಧ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಪ್ರಶ್ನಿಸುವಾಗ ಅವರ ಮೈಕನ್ನೇ ಆಫ್ ಮಾಡಿಸಿದ್ದು, ಪ್ರತಿಭಟಿಸಿದ ಸಂಸದರಿಗೆ ಪ್ರಶ್ನಿಸಲೂ ಅವಕಾಶ ಕೊಡದೇ ಕಲಾಪದಿಂದಲೇ ಅಮಾನತ್ತು ಮಾಡಿದ್ದು, ವಿರೋಧ ಪಕ್ಷದ ನಾಯಕರನ್ನು ಅವಮಾನಿಸಿದ್ದು  ಧನಕರ್ ರವರ ಸಾಧನೆಯಾಗಿದೆ. ಒಬ್ಬ ಸಭಾಪತಿ ಹೇಗಿರಬಾರದಿತ್ತೋ ಅದೇ ರೀತಿ ಇದ್ದ ಈ ಮಹಾಶಯರು ಆ ಹುದ್ದೆಗೆ ಕಳಂಕವನ್ನು ತಂದಿದ್ದಂತೂ ಸತ್ಯ.

ಉಪರಾಷ್ಟ್ರಪತಿ ಜಗದೀಪ್‌ ಧನಕರ್

ಈ ಬಿಜೆಪಿ ಪಕ್ಷಪಾತಿ ಜಗದೀಪ್‌ ಧನಕರ್ ರವರು ಬಿಜೆಪಿ ಪಕ್ಷದಿಂದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವುದಕ್ಕಿಂತಲೂ ಮುಂಚೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಆಗಲೂ ಮೋದಿ ಶಾ ರವರ ಅಣತಿಯಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿಯವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಆ ರಾಜ್ಯದ ಆಡಳಿತ ಸುಗಮವಾಗಿ ನಡೆಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದರು. ರಾಜ್ಯಾಡಳಿತದಲ್ಲಿ ಅನಗತ್ಯವಾಗಿ ಮೂಗು ತೂರಿಸುವುದರಲ್ಲಿ ಹಾಗೂ ಅಗತ್ಯವಿಲ್ಲದಿದ್ದರೂ ವಿಕ್ಷಿಪ್ತ ಹೇಳಿಕೆಗಳನ್ನು ಕೊಡುವುದರಲ್ಲಿ ಸದಾ ಮುಂದಿದ್ದ ಧನಕರ್ ರವರು ರಾಜ್ಯಪಾಲ ಹುದ್ದೆಯ ಘನತೆ ಗೌರವವನ್ನು ಮಣ್ಣುಪಾಲು ಮಾಡಿದ್ದರು. ರಾಜ್ಯಪಾಲ ಹುದ್ದೆಯನ್ನು ಬಿಜೆಪಿ ವಕ್ತಾರರಂತೆ ನಿಭಾಯಿಸಿದ್ದ ಧನಕರ್ ರವರು ಸಂಸತ್ತಿನ ಸಭಾಪತಿ ಸ್ಥಾನಮಾನವನ್ನು ಬಿಜೆಪಿ ಪಕ್ಷದ ಪರವಾಗಿ ಮೀಸಲಾಗಿರಿಸಿದ್ದರು. ಉಪರಾಷ್ಟ್ರಪತಿಯಾಗಿ ಸಂವಿಧಾನಕ್ಕೆ ನಿಷ್ಟರಾಗುವ ಬದಲಾಗಿ ಬಿಜೆಪಿ ಪಕ್ಷಕ್ಕೆ, ಆರೆಸ್ಸೆಸ್ ಸಿದ್ಧಾಂತಕ್ಕೆ ಹಾಗೂ ಮೋದಿ- ಶಾ ರವರಿಗೆ ತಮ್ಮ ನಿಷ್ಠೆಯನ್ನು ತೋರಿಸುತ್ತಾ ಸಂವಿಧಾನಕ್ಕೆ ಅಪಮಾನ ಮಾಡಿದರು. ನ್ಯಾಯಾಂಗದ ತೀರ್ಪುಗಳನ್ನೇ ಟೀಕಿಸಿದರು.

ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂತಹ ಪಕ್ಷಪಾತಿ ಮನುವಾದಿ ಉಪರಾಷ್ಟ್ರಪತಿ ಎಂದೂ ಇರಲಿಲ್ಲ. ಇನ್ನೂ 2027 ರವರೆಗೂ ಅಧಿಕಾರವಧಿ ಇದ್ದರೂ ಅನಾರೋಗ್ಯದ ಕಾರಣ ಹೇಳಿ ಸಾಂವಿಧಾನಿಕ ಹುದ್ದೆಯಿಂದ ನಿರ್ಗಮಿಸಿದ ಧನಕರ್ ರವರ ಅಸಾಂವಿಧಾನಿಕ ನಡೆ ನುಡಿಯನ್ನು ಈ ದೇಶ ಎಂದೂ ಮರೆಯಲಾರದು, ಮರೆಯಬಾರದು. ಒಬ್ಬ ರಾಜ್ಯಪಾಲ, ಒಬ್ಬ ರಾಜ್ಯಸಭೆಯ ಸಭಾಪತಿ, ಒಬ್ಬ ಉಪರಾಷ್ಟ್ರಪತಿ ಹೇಗಿರಬಾರದು ಎನ್ನುವುದಕ್ಕೆ ಮಾದರಿ ಜಗದೀಶ್ ಧನಕರ್. ಅವರ ನಿರ್ಗಮನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಕೂಲಕರ.

ಉಪರಾಷ್ಟ್ರಪತಿಗಳ ತುರ್ತು ರಾಜೀನಾಮೆಯ ಸುತ್ತ ಅನುಮಾನಗಳ ಹುತ್ತ ಬೆಳೆದು ನಿಂತಿದೆ. ಮಧ್ಯಾಹ್ನ ಹಾಗೂ ಸಂಜೆ ನಡೆದ ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ಸಭೆಯ ನೇತೃತ್ವವನ್ನು ಧನ್ಕರ್ ರವರೇ ವಹಿಸಿಕೊಂಡಿದ್ದರು. ಆದರೆ ಸಂಜೆಯ ನಂತರ ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರ ರವಾನಿಸಿದರು. ಸಂಸತ್ತಿನಲ್ಲಿ ಅಧಿವೇಶನ ಆರಂಭವಾಗುವ ದಿನದಂದೇ ರಾಜ್ಯಸಭೆಯ ಸಭಾಪತಿಗಳಾದ ಧನ್ಕರ್ ರವರು ಉಪರಾಷ್ಟ್ರಪತಿ ಹುದ್ದೆಗೆ ಅವಧಿಪೂರ್ವವಾಗಿ ದಿಢೀರ್ ಎಂದು ಯಾಕೆ ರಾಜೀನಾಮೆ ಕೊಟ್ಟರು ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. ಹೃದಯ ಚಿಕಿತ್ಸೆ ಪಡೆದಿದ್ದರಿಂದ ವೈದ್ಯರ ಸಲಹೆ ಮೇರೆಗೆ ನಿವೃತ್ತಿ ಘೋಷಿಸಿದರು ಎಂಬ ಕಾರಣವನ್ನು ಯಾರೂ ನಂಬಲು ತಯಾರಿಲ್ಲ. ಧನ್ಕರ್ ರವರ ದಿಢೀರ್ ರಾಜೀನಾಮೆಯ ಹಿಂದೆ ಹಲವಾರು ರಾಜಕೀಯ ಕಾರಣ ಹಾಗೂ ಒತ್ತಡಗಳು ಇವೆ ಎಂಬ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ಮುಂಚೂಣಿಯಲ್ಲಿವೆ. ಅವರ ರಾಜೀನಾಮೆ ನಿರ್ಧಾರದ ಹಿಂದೆ ಮೋದಿ ಶಾ ಕೈವಾಡ ಇದೆ ಎಂದೇ ಊಹಿಸಲಾಗಿದೆ. ಯಾಕೆಂದರೆ ರಾಜಕೀಯ ಕಾರಣಕ್ಕೆ ಉಪರಾಷ್ಟ್ರಪತಿಗಳನ್ನು ಬದಲಾಯಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆಯಂತೆ. ಧನ್ಕರ್ ರವರನ್ನು ಬಿಡುಗಡೆಗೊಳಿಸಿ ಆ ಜಾಗಕ್ಕೆ ಬಿಹಾರದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರರವರನ್ನು ತರುವ ದೂರಗಾಮಿ ಯೋಜನೆ ಸಿದ್ಧವಾದಂತಿದೆ. ಇನ್ನೇನು ಬಿಹಾರದಲ್ಲಿ ಚುನಾವಣೆ ಘೋಷಣೆಯಾಗುವುದಿದೆ. ಮಿತ್ರಪಕ್ಷದ ನಿತೀಶ್ ಕುಮಾರರವರನ್ನು ಉಪರಾಷ್ಟ್ರಪತಿಯನ್ನಾಗಿ ಮಾಡಿದರೆ ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ಗಿಟ್ಟಿಸಿಕೊಳ್ಳಬಹುದು ಎನ್ನುವ ಯೋಚನೆ ಮೋದಿ ಶಾ ರವರದ್ದು. ಬಿಜೆಪಿಯ ಕಟ್ಟಾ ಅನುಯಾಯಿಯಾಗಿರುವ ಧನ್ಕರ್ ರವರನ್ನು ತೆಗೆದು ಹಾಕಲು ಬಿಜೆಪಿಗೆ ಕಾರಣ ಬೇಕಾಗಿತ್ತು.

ಜೆ ಪಿ ನಡ್ಡಾ, ಧನಕರ್‌, ಕಿರಣ್‌ ರಿಜಿಜು

ಯಾವಾಗ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾರವರನ್ನು ಪದಚ್ಯುತಗೊಳಿಸುವ ನೋಟೀಸನ್ನು ಕಾಂಗ್ರೆಸ್ ರಾಜ್ಯಸಭಾ ಸಭಾಪತಿಗಳಾದ ಧನ್ಕರ್ ರವರಿಗೆ ಕೊಟ್ಟಿತೋ, ಯಾವಾಗ ಧನ್ಕರ್ ರವರು ಕೇಂದ್ರ ಸರಕಾರದ ಜೊತೆ ಸಮಾಲೋಚನೆ ಮಾಡದೇ ಅದಕ್ಕೆ ಒಪ್ಪಿಗೆ ಕೊಟ್ಟರೋ ಆಗ ಬಿಜೆಪಿಯ ಉನ್ನತ ನಾಯಕರಿಗೆ ಕಾರಣ ದೊರಕಿದಂತಾಯಿತು. ಯಾವಾಗ ಸೋಮವಾರ ನಡೆದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ರಾಜ್ಯಸಭೆ ಕಲಾಪದ ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪರೇಶನ್ ಸಿಂಧೂರ ವಿಚಾರದಲ್ಲಿ ಮಾತನಾಡಲು ಸಭಾಪತಿಗಳಾದ ಧನ್ಕರ್ ರವರು ಅವಕಾಶ ಮಾಡಿಕೊಟ್ಟರೋ ಆಗ ಬಿಜೆಪಿಯ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಬಿಜೆಪಿ ನಾಯಕತ್ವಕ್ಕೆ ಸಿಟ್ಟುಬರುವಂತಾಯ್ತು. ಇದೇ ಕಾರಣಗಳಿಂದಾಗಿ ಅಸಮಾಧಾನಿತರಾದ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಹಾಗೂ ಕಿರಣ್ ರಿಜಿಜುರವರು ಸಂಜೆ ನಡೆದ ಸಲಹಾ ಸಮಿತಿ ಸಭೆಗೆ ಗೈರಾದರು. ಮಧ್ಯಾಹ್ನ ಸಭೆಗೆ ಬಂದವರು ಸಂಜೆ ಸಭೆಗೆ ಗೈರಾಗಿದ್ದರ ಹಿಂದಿನ ತಂತ್ರಗಾರಿಕೆ ಧನ್ಕರ್ ರವರಿಗೆ ಅರ್ಥವಾಗಿತ್ತು. ತನ್ನ ಪದಚ್ಯುತಿಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬುದೂ ಅವರ ಅರಿವಿಗೆ ಬಂದಿತ್ತು. ಇದರಿಂದ ಒತ್ತಡಕ್ಕೊಳಗಾದ ಧನ್ಕರ್ ರವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯ್ತು. ಉಪರಾಷ್ಟ್ರಪತಿಗಳು ರಾಜೀನಾಮೆ ಕೊಟ್ಟರೂ ಬಿಜೆಪಿಯ ಯಾವುದೇ ನಾಯಕರಾಗಲೀ ಇಲ್ಲವೇ ಬಿಜೆಪಿ ಮೈತ್ರಿಕೂಟದ ಯಾವುದೇ ಮುಖಂಡರಾಗಲಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಲೇ ಇಲ್ಲ. ಇದರ ಅರ್ಥ ಇಷ್ಟೇ- ಧನ್ಕರ್ ರವರು ರಾಜೀನಾಮೆ ಕೊಡುವುದನ್ನೇ ಈ ಎಲ್ಲರೂ ಕಾಯುತ್ತಿದ್ದರು. ಅದಕ್ಕಾಗಿ ನೇಪಥ್ಯದಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದರು. ನೆಪ ಸಿಕ್ಕಾಗ ಒತ್ತಡವನ್ನು ಸೃಷ್ಟಿಸಿ ಧನ್ಕರ್ ರವರೇ ರಾಜೀನಾಮೆ ಕೊಡುವಂತೆ ಮಾಡಲಾಯಿತು ಎಂಬ ವಿಶ್ಲೇಷಣೆ ಸತ್ಯಕ್ಕೆ ಹತ್ತಿರವಾಗಿದೆ.

ಈ ಬಿಜೆಪಿ ಹಾಗೂ ಅದರ ಪೋಷಕ ಆರೆಸ್ಸೆಸ್ ಇರುವುದೇ ಹೀಗೆ. ಬೇಕಾದಾಗ ಬಳಸಿಕೊಳ್ಳುವುದು ಬೇಡವಾದಾಗ ಬಿಸಾಕುವುದು ಈ ಹಿಂದುತ್ವವಾದಿಗಳ ಸಿದ್ಧಾಂತದ ಭಾಗವೇ ಆಗಿದೆ. ರಥಯಾತ್ರೆಯ ಮೂಲಕ ಬಿಜೆಪಿಗೆ ಗಟ್ಟಿ ಅಸ್ತಿತ್ವವನ್ನು ರೂಪಿಸಿಕೊಟ್ಟ ಲಾಲ್‌ ಕೃಷ್ಣ ಅಡ್ವಾಣಿ ಯವರು ಪಾಕಿಸ್ಥಾನಕ್ಕೆ ಹೋಗಿ ಜಿನ್ನಾರವರನ್ನು ಹೊಗಳಿದ್ದನ್ನೇ ನೆಪವಾಗಿಟ್ಟುಕೊಂಡು ಮೂಲೆಗುಂಪು ಮಾಡಲಾಯ್ತು. ಇನ್ನು ಈ ಧನ್ಕರ್ ಯಾವ ಲೆಕ್ಕ?. ಬಿಜೆಪಿ ಹಾಗೂ ಆರೆಸ್ಸೆಸ್ ಸಿದ್ಧಾಂತ ಪ್ರತಿಪಾದನೆಗಾಗಿ ತಮ್ಮ ಸಾಂವಿಧಾನಿಕ ಹುದ್ದೆಯ ಗೌರವವನ್ನೇ ಕಡೆಗಣಿಸಿ ಬಿಜೆಪಿ ವಕ್ತಾರನಂತೆ ಕಾರ್ಯನಿರ್ವಹಿಸಿದ ಜಗದೀಪ್ ಧನ್ಕರ್ ಈಗ ಬಿಜೆಪಿಗೆ ಬೇಡವಾಗಿದ್ದಾರೆ. ಬಿಹಾರದಲ್ಲಿ ತನ್ನ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಹಾಗೂ ಅಲ್ಲಿರುವ ಮಿತ್ರಪಕ್ಷದ ಮುಖ್ಯಮಂತ್ರಿ ನಿತೀಶರವರನ್ನು ತೆರುವುಗೊಳಿಸಿ ಉಪರಾಷ್ಟ್ರಪತಿಯನ್ನಾಗಿಸಲು ಧನ್ಕರ್ ರವರ ತಲೆದಂಡ ಆಗಲೇ ಬೇಕಿತ್ತು. ಧನ್ಕರ್ ರವರೇ ರಾಜೀನಾಮೆ ಕೊಟ್ಟು ಹೋಗುವಂತೆ ಒತ್ತಡ ಸೃಷ್ಟಿಸಲಾಯ್ತು. ಮೋದಿ ಶಾ ಗಳು ತಮ್ಮ ತಂತ್ರಗಾರಿಕೆಯಲ್ಲಿ ಯಶಸ್ವಿಯಾದರು ಹಾಗೂ ಬಿಜೆಪಿಯ ಕಟ್ಟರ್ ಸಮರ್ಥಕ ಧನ್ಕರ್ ಬಲಿಪಶುವಾದರು. ಸಂಘಪರಿವಾರದ ಸಿದ್ಧಾಂತದ ಪರವಾದ ಅಪಾರ ನಿಷ್ಟೆಗೆ ಹುದ್ದೆ ತ್ಯಾಗ ಮಾಡಬೇಕಾಯ್ತು.  ವ್ಯಕ್ತಿ ಯಾರೇ ಆಗಿರಲಿ, ಅದೆಷ್ಟೇ ಪ್ರಭಾವಿಯಾಗಿರಲಿ, ಅಗತ್ಯಕ್ಕೆ ತಕ್ಕಂತೆ ಬಳಸಿ ಬಿಸಾಕುವುದೇ ಆರೆಸ್ಸೆಸ್ ಸಿದ್ಧಾಂತದ ಪ್ರಮುಖ ಭಾಗ. ಹಿಂದುತ್ವರಾಷ್ಟ್ರೀಯತೆಯ ಮನುವಾದಿ ಸರ್ವಾಧಿಕಾರಿ ಸಾಮ್ರಾಜ್ಯ ಸ್ಥಾಪನೆಯ ಹಾದಿಯಲ್ಲಿ ಅಡ್ವಾಣಿ ಯಾಗಿರಲಿ, ಧನ್ಕರ್ ಆಗಿರಲಿ ಅಷ್ಟೇ ಯಾಕೆ ಮುಂದೆ ಮೋದಿ ಶಾ ಗಳೇ ಆಗಿರಲಿ ಎಲ್ಲರ ತಲೆದಂಡ ಆಗುವುದು ನಿಶ್ಚಿತ. ಮನುವಾದಿ ವೈದಿಕಶಾಹಿ ಸಿದ್ದಾಂತ ಗುರಿ ಸಾಧನೆಯ ಹಾದಿಯಲ್ಲಿ ಎಲ್ಲರ ಅಧಿಕಾರವೂ ಅನಿಶ್ಚಿತ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಇಡಿ ತನಿಖಾ ಸಂಸ್ಥೆಗೆ ಸುಪ್ರೀಂ ತಪರಾಕಿ

More articles

Latest article