ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಹತ್ಯೆಗಳನ್ನು ಕುರಿತು ತನಿಖೆ ನಡೆಸಲು ಎಸ್ ಐಟಿ ರಚನೆಯಾಗುತ್ತಿದ್ದಂತೆ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂದಷ್ಟೇ ಕೇರಳ ರಾಜ್ಯದ ಅನೀಸ್ ಎಂಬುವರು ತಮ್ಮ ತಂದೆಯ ಹ*ತ್ಯೆಯಾಗಿದ್ದು ಈಗ ಆಪಾದನೆ ಎದುರಿಸುತ್ತಿರುವವರೇ ಕೊಲೆಗೆ ನೇರ ಕಾರಣ ಎಂದು ದೂರು ಸಲ್ಲಿಸಿದ್ದಾರೆ.
ಅನೀಸ್ ಅವರು ಕಣ್ಣೂರು ಮೀಪದ ಕಣ್ಣೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಥಾಲಿಪಂಬ ಎಂಬ ಗ್ರಾಮದ ನಿವಾಸಿಯಾಗಿದ್ದಾರೆ.
ತಮ್ಮ ತಂದೆ ಕೆ ಜೆ ಜಾಯ್ ಅವರು 2018 ಏಪ್ರಿಲ್ 5ರಂದು ಕರ್ನಾಟಕದ ಮೂಡುಬಿದಿರೆಯ ಮುಂಡ್ಕೂರು ಎಂಬ ಗ್ರಾಮದ ರೋಗಿಯೊಬ್ಬರಿಗೆ ಆಯುರ್ವೇದ ಚಿಕಿತ್ಸೆ ನೀಡಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿರುವಾಗ ಹ*ತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ತಂದೆ ದ್ವಿಚಕ್ರ ವಾಹನದಲ್ಲಿ ಮರಳುತ್ತಿರುವಾಗ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳವಾಯಿ ಬಳಿ ಅವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ವಾಹನವೊಂದು ಡಿಕ್ಕಿ ಹೊಡೆಯುತ್ತದೆ. ಆಗ ಜಾಯ್ ಅವರು ಕೆಳಗೆ ಬೀಳುತ್ತಾರೆ. ನಂತರ ತಲೆ, ಹೊಟ್ಟೆ ಮತ್ತು ಕೈಗಳಿಗೆ ಆಯುಧವೊಂದರಿಂದ ಹೊಡೆದ ಗುರುತುಗಳಿರುತ್ತವೆ. ನಿಜವಾಗಿಯೂ ಅಪಘಾತ ಸಂಭವಿಸಿದ್ದರೆ ಹೆಲ್ಮೆಟ್ ಗೆ ಹಾನಿಯಾಗಬೇಕಿತ್ತು. ಆದರೆ ಏನೂ ಆಗಿಲ್ಲ. ವಾಹನದ ಮುಂಭಾಗವೂ ಹಾಳಾಗಬೇಕಿತ್ತು. ಹಾಗೆ ಆಗಿಯೇ ಇಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.
ಆದರೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ತನಿಖೆಯೇ ಆಗಲಿಲ್ಲ. ಆಗಿನ ಇನ್ ಸ್ಪೆಕ್ಟರ್ ಅವರು ಈ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದು, ದೂರಿನಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದರು. ತಂದೆಯ ಸಾವಿಗೆ ನ್ಯಾಯ ದೊರಕಿಸಿಕೊಡಲು ವಾರಕ್ಕೆ ಎರಡು ಮೂರು ಬಾರಿ ಠಾಣೆಗೆ ಎಡತಾಕುತ್ತಿದ್ದೆ. ಆಗ ಇನ್ ಸ್ಪೆಕ್ಟರ್ ಅವರು ನ್ಯಾಯಕ್ಕಾಗಿ ಹೋರಾಟ ನಡೆಸಿದರೆ ನಿಮ್ಮ ಜೀವಕ್ಕೂ ಅಪಾಯ ಎದುರಾದೀತು ಎಂದು ಎಚ್ಚರಿಕೆ ನೀಡಿದ್ದರು. ಹಾಗಾಗಿ ಭಯಗೊಂಡು ಕೇರಳಕ್ಕೆ ಬಂದು ನೆಲೆಸಿದ್ದಾಗಿ ಅನೀಸ್ ಹೇಳುತ್ತಾರೆ.
ತಮ್ಮ ತಂದೆಯದ್ದು ಹ**ತ್ಯೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯಗಳಿವೆ. ತಂದೆಯ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದನ್ನು ನೋಡಿದ್ದಾಗಿ ಓರ್ವ ಪ್ರತ್ಯಕ್ಷದರ್ಶಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಅಲ್ಲಿಯ ಸಿಸಿಟಿವಿ ದೃಶ್ಯಾವಳಿಗಳೂ ಇದನ್ನೇ ಹೇಳುತ್ತವೆ. ಈ ಸಾಕ್ಷ್ಯಗಳನ್ನು ಸ್ವತಃ ಇನ್ ಸ್ಪೆಕ್ಟರ್ ಅವರೇ ತಮಗೆ ತೋರಿಸಿದ್ದಾಗಿ ಅವರು ನೆನಪು ಮಾಡಿಕೊಳ್ಳುತ್ತಾರೆ.
ಇನ್ ಸ್ಪೆಕ್ಟರ್ ಅವರು ಆಗಿದ್ದು ಆಗಿ ಹೋಯಿತು. ವಿಮಾ ಕಂಪನಿಯಿಂದ ಪರಿಹಾರ ಕೊಡಿಸುವುದಾಗಿ ಹೇಳಿದ್ದರು. ಆದರೆ ಆ ವಾಹನಕ್ಕೆ ವಿಮೆ ಇಲ್ಲದ್ದರಿಂದ ಅವರದ್ದೇ ಮತ್ತೊಂದು ವಾಹನವನ್ನು ತಂದು ನಿಲ್ಲಿಸಿ ಪರಿಹಾರ ಕೊಡಿಸುವುದಾಗಿಯೂ ಹೇಳಿದ್ದರು. ಮತ್ತೊಂದು ವಾಹನವನ್ನು ತೋರಿಸುವುದು ಆ ಕುಟುಂಬದ ಪ್ರೆಸ್ಟೀಜ್ ಗೆ ಅಡ್ಡಿ ಬರುತ್ತದೆ ಎಂದು ಇನ್ ಸ್ಪೆಕ್ಟರ್ ತಿಳಿಸಿದ್ದಾಗಿ ಅನೀಸ್ ಹೇಳುತ್ತಾರೆ.
ಜಾಯ್ ಹತ್ಯೆಗೆ ಕಾರಣವೇನು?
ಧ**ರ್ಮಸ್ಥಳ ವ್ಯಾಪ್ತಿಯಲ್ಲಿ ಜಾಯ್ ಅವರ ಕುಟುಂಬಕ್ಕೆ ಸೇರಿದ 40 ಎಕರೆ ಭೂಮಿ ಇದೆ. ಈ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಹತ್ಯೆ ನಡೆದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ 40 ಎಕರೆ ಭೂಮಿಯಲ್ಲಿ 20 ಎಕರೆ ಭೂಮಿಯನ್ನು ಬಲವಂತವಾಗಿ, ಹೆದರಿಸಿ ಬೆದರಿಸಿ ಬರೆಯಿಸಿಕೊಂಡಿದ್ದರು. ಉಳಿದ 20 ಎಕರೆ ಭೂಮಿ ಅಕ್ರಮ ಸಕ್ರಮದಿಂದ ಇವರ ಪಾಲಿಗೆ ಬಂದಿತ್ತು. ಆ ಭೂಮಿಯನ್ನೂ ಬಿಟ್ಟುಕೊಡಬೇಕು ಎಂದು ಬೆದರಿಕೆ ಒಡ್ಡಿದ್ದರು. ಈ ಕಾರಣಕ್ಕಾಗಿ ಜಾಯ್ ಅವರ ಕೊಲೆ ನಡೆದಿದೆ.
ಈ ಜಮೀನು ಬಿಟ್ಟುಕೊಡುವಂತೆ ಸುಭಾಷ್ ಚಂದ್ರ ಜೈನ್ ಎಂಬಾತ ಪದೇ ಪದೇ ತಮ್ಮ ತಂದೆಗೆ ಬೆದರಿಕೆ ಹಾಕುತ್ತಿದ್ದನ್ನೂ ಅನೀಷ್ ಸ್ಮರಿಸಿಕೊಳ್ಳುತ್ತಾರೆ.
ಈ ಜಮೀನು ಜಾಯ್ ಅವರ ತಾಯಿ, ಮತ್ತು ಅಣ್ಣತಮ್ಮಂದಿರ ಹೆಸರಿನಲ್ಲಿದೆಯಾದರೂ ಭೂಮಿ ಮಾತ್ರ ಆ ಕುಟುಂಬದವರ ಹಿಡಿತದಲ್ಲಿದೆ.
ಇಷ್ಟು ದಿನ ಕೊಲೆಗಾರ ಯಾರು ಎನ್ನುವುದು ಗೊತ್ತಿದ್ದರೂ ಭಯದಿಂದ ಮೌನವಾಗಿರಬೇಕಿತ್ತು. ಮತ್ತೊಮೆ ಹೋರಾಟ ನಡೆಸುವ ಪರಿಸ್ಥಿತಿಯಲ್ಲಿ ನಾವು ಇರಲಿಲ್ಲ. ಈಗ ಎಸ್ ಐಟಿ ರಚನೆಯಾಗಿದ್ದರಿಂದ ದೈರ್ಯ ಬಂದಿದೆ. ಸೌಜನ್ಯ ಪರ ಹೋರಾಟಗಾರರು ಸೇರಿದಂತೆ ಅನೇಕ ಮಂದಿ ಬೆಂಬಲ ನೀಡುತ್ತಿದ್ದಾರೆ. ನಮ್ಮ ತಂದೆ ಹತ್ಯೆ ದೂರೂ ಸಹ ಎಸ್ ಐಟಿ ವ್ಯಾಪ್ತಿಗೆ ಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂಬ ಆಶಾಭಾವ ಹೊಂದಿರುವುದಾಗಿ ಹೇಳುತ್ತಾರೆ.
ಭೂಮಿಯನ್ನು ಮರಳಿ ಪಡೆದುಕೊಳ್ಳುವ ಸಂಬಂಧ ವಕೀಲರೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ಆ ಭಾಗದಲ್ಲೇ ವಾಸವಾಗಿದ್ದ ನಮಗೆ ಅಲ್ಲಿ ಸಾಕಷ್ಟು ಹತ್ಯೆಗಳು ನಡೆದಿರುವುದು ಸತ್ಯ. ತನಿಖೆಯಿಂದ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಮೂಲಕ ನನ್ನ ತಂದೆಯೂ ಸೇರಿದಂತೆ ಅಸುನೀಗಿದವರ ಆತ್ಮಕೆ ಶಾಂತಿ ಸಿಗಲಿದೆ ಹಾಗೂ ಅವರ ಕುಟುಂಬದವರಿಗೆ ತೃಪ್ತಿ ಸಿಗಲಿದೆ ಎಂದು ಅನೀಸ್ ತಿಳಿಸಿದ್ದಾರೆ.