ಬುದ್ಧರು ಪ್ರಾಮಾಣಿಕವಾದ ಧರ್ಮವನ್ನು ಬೋಧಿಸಿ ಮಾನವ ಕಲ್ಯಾಣವನ್ನು ಬಯಸಿದ್ದರೂ ಭಾರತ ದೇಶದಲ್ಲಿಯೇ ಬುದ್ಧ ಧರ್ಮವನ್ನು ಇಲ್ಲದಂತೆ ಮಾಡಿದರು. ಬೌದ್ಧ ವಿಹಾರಗಳನ್ನು ಸ್ಥೂಪಗಳನ್ನು ನಾಶ ಮಾಡಿದರು. ಅವರಿಗೆ ಅನುಕೂಲವಾಗುವಂತೆ ವಿಚಾರಗಳನ್ನು ಪರಿವರ್ತನೆ ಮಾಡಿಕೊಂಡರು. ಬೌದ್ಧ ಬಿಕ್ಕುಗಳನ್ನು ಹುಡುಕಿ ಹುಡುಕಿ ಕೊಂದರು. ಬೋಧಿಸತ್ವರ ಬುದ್ಧರ ಮೂರ್ತಿಗಳನ್ನು ದೇವರ ವಿಗ್ರಹಗಳನ್ನಾಗಿ ಪರಿವರ್ತಿಸಿದರು – ಡಾ. ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಭಗವಾನ್ ಬುದ್ಧರ ಬೋಧನೆಗಳಿಂದು ಪ್ರಪಂಚದೆಲ್ಲೆಡೆ ಮಾನ್ಯತೆ ಪಡೆದಿವೆ. ಭಾರತವನ್ನು ಬುದ್ಧರಿಂದಲೇ ಗುರುತಿಸುವಷ್ಟು ಬುದ್ಧರ ಛಾಯೆ ಜಗತ್ತನ್ನ ಆವರಿಸಿದೆ. ಇದಕ್ಕೆ ಪ್ರಮುಖ ಕಾರಣ ಬೌದ್ಧ ಧರ್ಮದಲ್ಲಿರುವ ವೈಜ್ಞಾನಿಕ ಚಿಂತನೆಗಳು. ವಿಜ್ಞಾನಕ್ಕೂ ಬೌದ್ಧ ಧರ್ಮದ ಕೊಡುಗೆ ಅಪಾರವಾಗಿದೆ. ಅಂತಹ ಗಹನವಾದ ವಿಚಾರಗಳನ್ನು ಬುದ್ಧರು ಜಗತ್ತಿಗೆ ತಿಳಿಸಿದ್ದಾರೆ. ಅಂತಹ ವಿಚಾರಗಳಲ್ಲಿ ಬಹಳ ಮುಖ್ಯವಾದ ಮೂರು ಬೋಧನೆಗಳನ್ನು ಈಗ ನೋಡೋಣ
ಅನಿಚ್ಚ: ಪಾಳಿ ಪದವಾದ ಅನಿಚ್ಚದ ಕನ್ನಡದ ಅರ್ಥ ‘ಅನಿತ್ಯ’, ‘ಶಾಶ್ವತವಲ್ಲದ’, ʼನಿರಂತರ ಬದಲಾವಣೆಯಾಗುವʼ ಎಂಬ ಅರ್ಥಗಳಿವೆ. ಇದು ತಟಸ್ಥವಾದಕ್ಕೆ ವಿರುದ್ಧವಾದ ಚಿಂತನೆಯಾಗಿದೆ ಎಂಬುದು ಬುದ್ಧರು ನಿರೂಪಿಸಿರುವ ತತ್ವ. ಇದು ವಿಜ್ಞಾನ ತತ್ವವಾದ ಶಕ್ತಿಯು ಎಂದೂ ನಾಶವಾಗುವುದಿಲ್ಲ, ಬದಲಾಗಿ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುತ್ತದೆ ಎಂಬುದಾಗಿದೆ. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳುವುದಾದರೆ ಹಾಲು ನೀಡುವ ಹಸುವಿನ ಕೆಚ್ಚಲೊಳಗೆ ಹಾಲು ಇರುವುದು ಯಾರಿಗೂ ಕಾಣುವುದಿಲ್ಲ. ಆದರೆ ಹಾಲನ್ನು ಹಿಂಡಿದಾಗ ನಮಗೆ ನೊರೆ ಹಾಲಿನ ರೂಪದಲ್ಲಿ ಹಾಲು ದೊರೆಯುತ್ತದೆ. ಆ ಹಾಲನ್ನು ಚೆನ್ನಾಗಿ ಕಾಯಿಸಿದಾಗ ಅದು ಬಿಸಿ ಹಾಲಾಗುತ್ತದೆ. ಅದನ್ನ ನಾವು ವಿವಿಧ ರೀತಿಯಲ್ಲಿ ಬಳಸಬಹುದು. ಟಿ ಕಾಫಿ ಬಾದಾಮಿ ಹಾಲು ಹೀಗೆ ಬೇರೆ ಬೇರೆ ರೀತಿಗಳಲ್ಲಿ ಬಳಸಬಹುದು ಇಲ್ಲಿ ಹಾಲು ಬೇರೆ ಬೇರೆ ರೂಪಗಳಲ್ಲಿ ಸಂಯೋಜನೆಯಾಗುವುದನ್ನು ನಾವು ಕಾಣಬಹುದು.
ಈ ಕಾಯಿಸಿದ ಹಾಲನ್ನು ಒಂದು ಹಂತಕ್ಕೆ ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ ಅಥವಾ ಮೊಸರನ್ನ ಹಾಕಿ ಒಂದು ರಾತ್ರಿ ಅಥವಾ ಒಂದು ಹಗಲು ಬಿಟ್ಟರೆ ಅದು ಮೊಸರಾಗುತ್ತದೆ. ಆ ಮೊಸರನ್ನು ಕಡಿದರೆ ಮಜ್ಜಿಗೆಯಾಗುತ್ತದೆ, ಮಜ್ಜಿಗೆಯನ್ನು ಕಡಿದರೆ ಬೆಣ್ಣೆ ಸಿಗುತ್ತದೆ, ಬೆಣ್ಣೆಯನ್ನು ಚೆನ್ನಾಗಿ ಕಾಯಿಸಿದರೆ ಅದು ತುಪ್ಪವಾಗುತ್ತದೆ. ಹೀಗೆ ಹಾಲು ವಿವಿಧ ಹಂತಗಳಲ್ಲಿ ವಿವಿಧ ರೂಪಗಳನ್ನು ಪಡೆಯುತ್ತದೆ. ವಿಜ್ಞಾನವು ಇವುಗಳನ್ನ ದೃಢೀಕರಿಸುತ್ತದೆ. ಒಂದು ವಸ್ತು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗುವ ಈ ಪ್ರಕ್ರಿಯೆಯನ್ನು ಬುದ್ಧರು ಅನಿತ್ಯ ಎಂದು ಹೇಳಿರುವುದು.
ಅನಿತ್ಯ ತತ್ವಕ್ಕೆ ಮೂರು ಮಜಲುಗಳಿವೆ. ಎಲ್ಲಾ ಸಂಯುಕ್ತ ವಸ್ತುಗಳು ಅನಿತ್ಯವಾಗಿವೆ ಎಂಬುದು ಮೊದಲನೆಯದು, ಎಲ್ಲ ಜೀವಿಗಳಿಗೂ ಅನಿತ್ಯತೆಯ ತತ್ವ ಅನ್ವಯವಾಗುತ್ತದೆ, ಇದು ಎರಡನೆಯದು. ನಿರ್ದಿಷ್ಟ ವಸ್ತುಗಳ ಸ್ವರೂಪಕ್ಕೂ ಅನಿತ್ಯತೆಯ ತತ್ವ ಅನ್ವಯವಾಗುತ್ತದೆ, ಇದು ಮೂರನೆಯದು.
ಈ ಸಂಯುಕ್ತ ವಸ್ತುಗಳ ಅನಿತ್ಯತೆಯನ್ನು ಬೌದ್ಧ ಧರ್ಮದ ಮಹಾತತ್ವಜ್ಞಾನಿ ಅಸಂಗ ಬಹಳ ಚೆನ್ನಾಗಿ ವಿವರಿಸಿದ್ದಾನೆ. ಅವನ ಪ್ರಕಾರ ಎಲ್ಲಾ ವಸ್ತುಗಳು ಒಂದು ನಿರ್ದಿಷ್ಟ ಕಾರಣ ಮತ್ತು ಉದ್ದೇಶಗಳಿಂದ ಹುಟ್ಟುತ್ತವೆ. ಅವುಗಳಿಗೆ ತಮ್ಮದೇ ಆದ ಸ್ವತಂತ್ರ ಅಂತಸತ್ವವಿಲ್ಲ. ಸಂಯೋಜನೆಯನ್ನು ಒಡೆದಾಗ ಅವುಗಳ ವಿಘಟನೆ ಅಥವಾ ರೂಪಾಂತರ ಖಚಿತವಾಗುತ್ತದೆ. ಉದಾಹರಣೆಗೆ ಒಂದು ಜೀವಿಯ ದೇಹವು ನಾಲ್ಕು ಮೂಲ ದ್ರವ್ಯ ರಾಶಿಗಳಿಂದ ಆಗಿರುತ್ತದೆ. ಅವುಗಳೆಂದರೆ ಭೂಮಿ ನೀರು ಗಾಳಿ ಶಾಖ. ದೇಹದೊಳಗಿನ ಗಟ್ಟಿಯಾದ ಮೂಳೆಗಳು ಮಾಂಸ ಖಂಡಗಳು ಭೂಮಿಯನ್ನ ಪ್ರತಿನಿಧಿಸುತ್ತವೆ. ದೇಹದಲ್ಲಿರುವ ದ್ರವರೂಪದ ರಕ್ತ ಮತ್ತು ದ್ರವದ ಲೋಳೆ ನೀರನ್ನು ಪ್ರತಿನಿಧಿಸುತ್ತದೆ. ದೇಹದಲ್ಲಿನ ಶಾಖ ಶಕ್ತಿಯ ಉತ್ಪಾದನೆಯನ್ನು ತೋರಿಸುತ್ತದೆ. ದೇಹದ ಉಸಿರಾಟ ಪ್ರಕ್ರಿಯೆ ಗಾಳಿಯನ್ನು ಪ್ರತಿನಿಧಿಸುತ್ತದೆ. ಈ ನಾಲ್ಕು ದ್ರವ್ಯರಾಶಿಗಳೆ ಯಾವುದೇ ಜೀವಿಯು ಬದುಕುಳಿಯಲು ಮೂಲಾಧಾರಗಳಾಗಿವೆ. ಆದರೆ ಮಾನವ ಜೀವಿಯಲ್ಲಿ ಈ ನಾಲ್ಕು ದ್ರವ್ಯರಾಶಿಗಳ ಜೊತೆಗೆ ಯೋಚಿಸುವ ಶಕ್ತಿ ಇದೆ. ಅದನ್ನ ಮನಸ್ಸು ಎಂದು ಬುದ್ಧರು ಕರೆಯುತ್ತಾರೆ. ಜ್ಞಾನವು ಈ ಮನಸ್ಸಿನೊಳಗಿಂದಲೇ ಉದಯವಾಗುತ್ತದೆ. ಜ್ಞಾನ ಚೇತನವಾಗಿ ಇಡೀ ದೇಹದೆಲ್ಲೆಡೆ ಹರಿಯುತ್ತಿರುತ್ತದೆ ಹಾಗೂ ಈ ದೇಹಕ್ಕೆ ನೋವಾದಾಗ ಸುಖವಾದಾಗ ದೇಹದಲ್ಲಿನ ಚೇತನವು ಅದಕ್ಕೆ ಪ್ರತಿಕ್ರಿಯಿಸುತ್ತದೆ. ಇದನ್ನೇ ಬುದ್ಧರು ಸಂಯುಕ್ತ ಅಸ್ತಿತ್ವದ ಅನಿತ್ಯತೆ ಎಂದು ಕರೆದರು.
ಇರುವುದು ಎಂದರೆ ಆಗುವುದು ಎಂಬ ಬೌದ್ಧ ಸೂತ್ರ ಒಂದು ಜೀವಿಯ ಅನಿತ್ಯತೆಯನ್ನು ಅತ್ಯುತ್ತಮವಾಗಿ ವರ್ಣಿಸುವ ಸೂತ್ರವಾಗಿದೆ. ಒಟ್ಟಿನಲ್ಲಿ ಯಾವುದೇ ಜೀವಿ ಸದಾ ಬದಲಾಗುತ್ತಿರುತ್ತದೆ, ಯಾವಾಗಲೂ ಬೆಳೆಯುತ್ತಿರುತ್ತದೆ. ಆ ಜೀವಿ ತನ್ನ ಬದುಕಿನ ಎರಡು ಭಿನ್ನ ಗಳಿಗೆಗಳಲ್ಲಿ ಒಂದೇ ಆಗಿರುವುದಿಲ್ಲ.
ಅನಿತ್ಯ ತತ್ವದ ಮೂರನೆಯ ಮಜಲನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಪ್ರತಿಯೊಂದು ಜೀವಿಯು ಈಗಲೋ ಆಗಲೋ ಸಾಯುತ್ತದೆ ಎಂಬುದನ್ನ ಸರಳವಾಗಿ ಅರ್ಥಮಾಡಿ ಕೊಳ್ಳಬಹುದು ಮತ್ತು ಇದು ಸುಲಭ. ಆದರೆ ಮಾನವ ಜೀವಿ ಬದುಕಿದ್ದಾಗಲೇ ಹೇಗೆಲ್ಲಾ ಬದಲಾಗುತ್ತಾ ಹೋಗುತ್ತಾನೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಆಗುವಿಕೆಯ ಪ್ರಕ್ರಿಯೆಯನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿ ಕೊಳ್ಳಬಹುದು. ಒಂದು ಮಗು ಭ್ರೂಣ ಹಂತದಿಂದ ಗರ್ಭದಲ್ಲಿ ಬೆಳೆದು ಒಂದು ನಿರ್ದಿಷ್ಟ ಸಮಯದ ನಂತರ ಮಗುವಾಗಿ ಜನಿಸುತ್ತದೆ. ಅಲ್ಲಿಂದ ಬೆಳೆದು ಬಾಲ್ಯಾವಸ್ಥೆಗೆ ತಲುಪುತ್ತದೆ ಇನ್ನೂ ಕೆಲವು ವರ್ಷಗಳ ನಂತರ ಯೌವ್ವನಕ್ಕೆ ಬರುತ್ತದೆ. ಮುಂದುವರೆದು ಮಧ್ಯ ವಯಸ್ಕ ವೃದ್ಧಾಪ್ಯ ಸಾವು ಹೀಗೆ ಪ್ರತಿ ಹಂತದಲ್ಲೂ ಪ್ರತಿಕ್ಷಣವೂ ಪ್ರತಿದಿನವೂ ಬದಲಾವಣೆ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಇದು ಹೇಗೆ ಸಾಧ್ಯ ಎಂದರೆ ಎಲ್ಲವೂ ಅನಿತ್ಯ ಎಂಬ ತತ್ವದಿಂದ ಇದು ಸಾಧ್ಯವಾಗುತ್ತದೆ.
ಎಲ್ಲಾ ವಸ್ತುಗಳ ಅನಿತ್ಯ ಸ್ವಭಾವದ ಮೇಲೆ ಇತರ ಎಲ್ಲ ವಸ್ತುಗಳ ಸಾಧ್ಯತೆ ನಿಂತಿದೆ. ವಸ್ತುಗಳು ನಿರಂತರ ಬದಲಾವಣೆಗೆ ಸಿಲುಕದೆ ಶಾಶ್ವತವಾಗಿ ಮತ್ತು ಅಪರಿವರ್ತನಾಶೀಲವಾಗಿದ್ದರೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಜೀವವಿಕಾಸ ಮತ್ತು ಜೀವಿಗಳ ಬೆಳವಣಿಗೆ ಆಗದೆ ನಿಂತುಬಿಡುತ್ತಿತ್ತು. ಒಂದು ವೇಳೆ ಮಾನವ ಜೀವಿಗಳು ಸಾಯದೆ ಅಥವಾ ಬದಲಾವಣೆಯಾಗದೆ ಒಂದೇ ಸ್ಥಿತಿಯಲ್ಲಿ ನಿರಂತರವಾಗಿ ಮುಂದುವರೆದಿದ್ದರೆ ಎಂತಹ ಪರಿಣಾಮವಾಗುತ್ತಿತ್ತು ಒಮ್ಮೆ ಯೋಚಿಸಿ? ಇಡೀ ಮಾನವ ಜನಾಂಗದ ಪ್ರಗತಿಯೇ ಮೃತಸ್ಥಿತಿಗೆ ತಲುಪುತ್ತಿತ್ತು ಅಲ್ಲವೇ? ಆದ್ದರಿಂದ ಬುದ್ಧರ ಅನಿತ್ಯತೆಯ ತತ್ವದ ನೀತಿ ಸರಳವಾಗಿದೆ ಅದು ಹೇಳುವುದೇನೆಂದರೆ ಯಾವುದಕ್ಕೂ ಅಂಟಿಕೊಳ್ಳಬೇಡ ಎಂಬುದಾಗಿದೆ.
ಅನತ್ತ
‘ನಾನು’ ಎಂಬುವುದಿಲ್ಲ ಆತ್ಮವಿಲ್ಲ ಮತ್ತು ಆತ್ಮ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ ಎಂಬ ಅರ್ಥ ಅನತ್ತಕ್ಕೆ ಇದೆ. ಆತ್ಮವನ್ನು ಆಧರಿಸಿದ ಧರ್ಮ ಊಹೆಯ ಮೇಲೆ ನಿಂತಿರುವ ಧರ್ಮವಾಗಿದೆ ಎಂದು ಬುದ್ಧರು ಹೇಳಿದ್ದಾರೆ. ಇನ್ನೊಂದು ಕಡೆ ಬೋಧಿಸತ್ವ ಬಾಬಾ ಸಾಹೇಬರು ಆತ್ಮದ ಕುರಿತು ಹೀಗೆ ಹೇಳುತ್ತಾರೆ “ಆತ್ಮವನ್ನು ಯಾರು ನೋಡಿಲ್ಲ ಅಥವಾ ಆತ್ಮದ ಜೊತೆ ಯಾರೂ ಸಂಭಾಷಿಸಿಲ್ಲ, ಆತ್ಮ ಅಜ್ಞಾತ ಮತ್ತು ಅಗೋಚರ. ಮನುಷ್ಯರಲ್ಲಿ ಅಸ್ತಿತ್ವದಲ್ಲಿರುವುದು ಆತ್ಮವಲ್ಲ ಅದು ಮನಸ್ಸು. ಮನಸ್ಸು ಆತ್ಮಕ್ಕಿಂತ ಭಿನ್ನವಾಗಿದೆ. ಆತ್ಮದಲ್ಲಿ ನಂಬಿಕೆ ಇಡುವುದು ಲಾಭಕರವಲ್ಲ. ಆತ್ಮವನ್ನು ಅವಲಂಬಿಸಿದ ಧರ್ಮ ಸ್ವೀಕಾರ ಯೋಗ್ಯವಲ್ಲ. ಅದು ಮೌಢ್ಯವನ್ನ ಸೃಷ್ಟಿಸುವುದರಲ್ಲಿ ಕೊನೆಯಾಗುತ್ತದೆ”.
ಯಾವುದೇ ಮಾನವ ಜೀವಿಯ ದೇಹವನ್ನ ತುಂಡು ತುಂಡಾಗಿ ಕತ್ತರಿಸಿದರೆ ನಮಗೆ ಆ ದೇಹದೊಳಗೆ ಹಲವಾರು ಅಂಗಾಂಗಗಳು ಸಿಗುತ್ತವೆ. ಕಿಡ್ನಿ, ಹೃದಯ, ಶ್ವಾಸಕೋಶ, ಯಕೃತ್, ಕರುಳು ಹೀಗೆ ಇನ್ನೂ ವಿವಿಧ ಅಂಗಾಂಗಗಳನ್ನು ನೋಡಬಹುದು. ಆದರೆ ದೇಹದ ಒಳಗಡೆ ಎಲ್ಲೂ ಆತ್ಮ ಎಂಬ ಅಂಗ ಇದುವರೆಗೂ ದೊರಕಿಲ್ಲ. ವೈದ್ಯ ಲೋಕದೊಳಗೆ ದೇಹದೊಳಗಿನ ಎಲ್ಲಾ ಅಂಗಾಂಗಗಳಿಗೂ ವಿಶೇಷ ವೈದ್ಯರಿದ್ದಾರೆ. ಆದರೆ ಯಾರು ಆತ್ಮದ ತಜ್ಞರಿಲ್ಲ. ಆದರೆ ಮನಸ್ಸಿನ ಬಗ್ಗೆ ಒಂದು ವಿಜ್ಞಾನ ಶಾಖೆ ಇದೆ. ಅದನ್ನ ಮನೋವಿಜ್ಞಾನ ಎಂದು ಕರೆಯುತ್ತಾರೆ.
ಆತ್ಮದ ಬಗ್ಗೆ ಈ ರೀತಿಯ ವಿಜ್ಞಾನವಿಲ್ಲ. ಆದರೂ ಕೆಲವು ಆಧ್ಯಾತ್ಮಿಕ ಗುರುಗಳು ಆತ್ಮ ಬಂಧನ, ದಿಗ್ಭಂಧನ, ಆತ್ಮದ ಜೊತೆಗೆ ಮಾತುಕತೆ ಹೀಗೆ ನಾನಾ ರೀತಿಯಲ್ಲಿ ತಮ್ಮ ಅನುಭವಗಳನ್ನ ಅವರ ನಂಬಿಕೆಗಳನ್ನ ಹೇಳುತ್ತಾರೆ ಬಿಟ್ಟರೆ ಅದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಪುರಾವೆಗಳು ಇಲ್ಲ. ಅದೊಂದು ಕೇವಲ ಧಾರ್ಮಿಕ ನಂಬಿಕೆಯಾಗಿಯೇ ಉಳಿಯುತ್ತದೆ.
ಬೌದ್ಧ ಧರ್ಮದಲ್ಲಿ ಆತ್ಮಕ್ಕೆ ಜಾಗವಿಲ್ಲ ಹಾಗಾಗಿ ಬುದ್ಧರನ್ನು ಅನಾತ್ಮವಾದಿ ಎಂದು ಕರೆಯುತ್ತಾರೆ. ಬೌದ್ಧ ಧರ್ಮದಲ್ಲಿ ಆತ್ಮವಿಲ್ಲ. ಹಾಗಾಗಿ ದೆವ್ವಗಳಿಗೂ ಭೂತಗಳಿಗೂ ಇಲ್ಲಿ ಜಾಗವಿಲ್ಲ. ನಮ್ಮೊಳಗಿನ ಮನೋವಿಕಾರಗಳೇ ಈ ಋಣಾತ್ಮಕ ಶಕ್ತಿಗಳೆಂದು ಕರೆಯಬಹುದು. ಬೌದ್ಧ ಧರ್ಮ ಒಂದು ವೈಜ್ಞಾನಿಕ ಮನೋಧರ್ಮ. ಇದು ಜನರ ಆಚರಣೆಯ ಮನೋಭೂಮಿಕೆಯಲ್ಲಿ ಚಿಗುರಿ ಬೆಳೆಯುವಂತದ್ದು. ಇದಕ್ಕೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ. ಹಾಗೆಯೇ ಪ್ರಜ್ಞಾಪೂರ್ವಕವಾಗಿ ಪಾಲಿಸುವವರ ಸಂಖ್ಯೆಯು ಜಾಸ್ತಿ ಆಗಬೇಕಿದೆ.
ದುಃಖ
ಬುದ್ಧರು ನಾಲ್ಕು ಅರಿಯ ಸತ್ಯಗಳನ್ನ ಬೋಧಿಸಿದ್ದಾರೆ. ಈ ಶ್ರೇಷ್ಠ ಸತ್ಯಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಇದಕ್ಕೆ ಯಾವುದೇ ಭೌಗೋಳಿಕ ಎಲ್ಲೆ ಇಲ್ಲ. ಮೇಲು ಕೀಳು ವರ್ಣ ವರ್ಗ ಲಿಂಗ ಯಾವುದೇ ಭೇದವಿಲ್ಲ. ಸೂರ್ಯ ಚಂದ್ರರಂತೆ, ನೀರು ಗಾಳಿ ಬೆಂಕಿಯಂತೆ ಸತ್ಯ ಸ್ವರೂಪದ್ದು. ಪ್ರಪಂಚದಲ್ಲಿ ದುಃಖದ ಅಸ್ತಿತ್ವವಿದೆ. ಈ ದುಃಖವನ್ನು ಹೇಗೆ ನಿವಾರಿಸಬೇಕೆಂಬುದೇ ಬೌದ್ಧ ಧರ್ಮದ ಏಕೈಕ ಗುರಿಯಾಗಿದೆ. ಇದನ್ನ ಬಿಟ್ಟು ಧರ್ಮವೇ ಇಲ್ಲ, ದುಃಖದ ಅಸ್ತಿತ್ವವನ್ನು ಗುರ್ತಿಸುವುದು ಮತ್ತು ದುಃಖ ನಿವಾರಣ ಮಾರ್ಗವನ್ನು ತೋರಿಸುವುದು ಬುದ್ಧ ಧರ್ಮದ ತಳಹದಿಯಾಗಿದೆ. ಇದನ್ನು ಗಣನೆಗೆ ತೆಗೆದುಕೊಳ್ಳದ ಧರ್ಮ ಧರ್ಮವೇ ಅಲ್ಲ.
ಬುದ್ಧರು ಕೇವಲ ದುಃಖದ ಅಸ್ತಿತ್ವದ ಬಗ್ಗೆ ಮಾತ್ರ ತಿಳಿಸಲಿಲ್ಲ. ಅದಕ್ಕೆ ಕಾರಣವನ್ನು ಅದರ ಉಗಮದ ಮೂಲಗಳನ್ನು ದುಃಖದ ಪರಿಣಾಮಗಳನ್ನು ಹಾಗೂ ಅದರ ನಿವಾರಣೆಯ ಮಾರ್ಗವನ್ನು ಬೋಧಿಸಿದ್ದಾರೆ. ಹಾಗಾಗಿಯೇ ಬೌದ್ಧ ಧರ್ಮವನ್ನು ಒಂದು ವೈಜ್ಞಾನಿಕ ಧರ್ಮವೆಂದು ಇಲ್ಲದೆ ಕೊಂಡಾಡುವುದು.
ದುಃಖ ಎಂದರೆ ಸಂಕಟ ನೋವು ಅಶಾಂತಿ ಅತೃಪ್ತಿ ಅಸಂತೋಷ ಆರಾಮದಾಯಕವಲ್ಲದ ಹೀಗೆ ನಾನಾ ಶಬ್ದಗಳನ್ನು ಬಳಸುತ್ತಾರೆ. ನೀವು ನನ್ನ ಧರ್ಮವನ್ನು ನಿರಾಶಾವಾದ ಎಂದು ಕರೆಯುವ ಸಾಧ್ಯತೆ ಇದೆ. ಯಾಕೆಂದರೆ ಅದು ದುಃಖದ ಇರುವಿಕೆಯ ಕಡೆಗೆ ನಿಮ್ಮ ಗಮನವನ್ನು ಸೆಳೆಯುತ್ತದೆ. ಆದರೆ ನನ್ನ ಧರ್ಮದ ಬಗೆಗಿನ ಅಂಥ ಅಭಿಪ್ರಾಯ ತಪ್ಪು ಎಂದು ನಾನು ಹೇಳುತ್ತೇನೆ. ನನ್ನ ಧಮ್ಮ ದುಃಖದ ಇರುವಿಕೆಯನ್ನು ಅಷ್ಟೇ ಗುರುತಿಸಿಲ್ಲ ಅದು ದುಃಖ ನಿವಾರಣೆಗೆ ಹೆಚ್ಚು ಒತ್ತು ಕೊಡುತ್ತದೆ. ನನ್ನ ಧಮ್ಮಕ್ಕೆ ಭರವಸೆ ಮತ್ತು ಧ್ಯೇಯ ಎರಡು ಇವೆ. ಅದರ ಗುರಿ ಅಜ್ಞಾನವನ್ನ ನಿವಾರಿಸುವುದು ಅದು ಭರವಸೆಯನ್ನು ಕೊಡುತ್ತದೆ. ಏಕೆಂದರೆ ಮಾನವನ ನೋವುಗಳನ್ನು ಕೊನೆಗಾಣಿಸುವ ಮಾರ್ಗವನ್ನು ಅದು ತೋರಿಸುತ್ತದೆ. ಇವು ದುಃಖದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿರುವವರಿಗೆ ಬುದ್ಧರ ಉತ್ತರವಾಗಿದೆ.
ಪ್ರಪಂಚದ ಇತಿಹಾಸದಲ್ಲಿ ಇದುವರೆಗೂ ಯಾವ ಧರ್ಮ ಸ್ಥಾಪಕನೂ ಮಾನವನ ದುಃಖವನ್ನು ಗುರುತಿಸುವುದೇ ಧರ್ಮದ ನಿಜವಾದ ತಳಹದಿ ಎಂದು ಹೇಳಿರಲಿಲ್ಲ. ವಿಶ್ವದ ಇತಿಹಾಸದಲ್ಲೇ ಯಾವ ಧರ್ಮ ಸಂಸ್ಥಾಪಕನೂ ದುಃಖ ನಿವಾರಣೆಯೇ ಧರ್ಮದ ನಿಜವಾದ ಗುರಿ ಎಂದು ಬೋಧಿಸಿರಲಿಲ್ಲ ಎಂದು ಬಾಬಾ ಸಾಹೇಬರು ತಮ್ಮ ಬುದ್ದ ಮತ್ತು ಆತನ ಧರ್ಮ ಕೃತಿಯಲ್ಲಿ ಹೇಳಿದ್ದಾರೆ.
ವಿಶ್ವದ ಇತಿಹಾಸದಲ್ಲಿಯೇ ಇದುವರೆಗೂ ಯಾರೂ ದಿವ್ಯ ಜ್ಞಾನವನ್ನು ಒಳಗೊಂಡ ಸಾಮಾಜಿಕ ಪರಿವರ್ತನಾ ಚಳುವಳಿಯ ರೂಪದಲ್ಲಿ ಧಾರ್ಮಿಕತೆಯನ್ನು ಮತ್ತು ಪರಮಾತ್ಮನ ಆದೇಶಗಳಿಲ್ಲದ ಮಾನವನ ಪ್ರಯತ್ನದಿಂದ ಈ ಜನ್ಮದಲ್ಲಿ ಈ ಭೂಮಿಯ ಮೇಲೆಯೆ ಅರ್ಹಂತನಾಗುವ ಅವಕಾಶವನ್ನ ಹೇಳಿರಲಿಲ್ಲ. ಅಂತಹ ಒಂದು ಅವಕಾಶವನ್ನು ಬೋಧನೆಯನ್ನು ಸಮ್ಮಾಸಂ ಬುದ್ಧರು ನಮಗೆ ಕೊಟ್ಟಿದ್ದಾರೆ.
ಬುದ್ಧರು ಇಷ್ಟು ಪ್ರಾಮಾಣಿಕವಾದ ಧರ್ಮವನ್ನು ಬೋಧಿಸಿ ಮಾನವ ಕಲ್ಯಾಣವನ್ನು ಬಯಸಿದ್ದರೂ ಭಾರತ ದೇಶದಲ್ಲಿಯೇ ಬುದ್ಧ ಧರ್ಮವನ್ನು ಇಲ್ಲದಂತೆ ಮಾಡಿದರು. ಬೌದ್ಧ ವಿಹಾರಗಳನ್ನು ಸ್ಥೂಪಗಳನ್ನು ನಾಶ ಮಾಡಿದರು. ಅವರಿಗೆ ಅನುಕೂಲವಾಗುವಂತೆ ವಿಚಾರಗಳನ್ನು ಪರಿವರ್ತನೆ ಮಾಡಿಕೊಂಡರು. ಬೌದ್ಧ ಬಿಕ್ಕುಗಳನ್ನು ಹುಡುಕಿ ಹುಡುಕಿ ಕೊಂದರು. ಬೋಧಿಸತ್ವರ ಬುದ್ಧರ ಮೂರ್ತಿಗಳನ್ನು ದೇವರ ವಿಗ್ರಹಗಳನ್ನಾಗಿ ಪರಿವರ್ತಿಸಿದರು. ಬೌದ್ಧ ಉಪಾಸಕರುಗಳಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಮತಾಂತರವಾಗುವಂತೆ ಮಾಡಿದರು. ಹಾಗಾಗಿ ಭಾರತದಲ್ಲಿ ಹುಟ್ಟಿ ಬೆಳೆದ ಜಗತ್ತಿನ ಧರ್ಮವಾಗಿರುವ ಬೌದ್ಧ ಧರ್ಮ ಸಾವಿರಾರು ವರ್ಷಗಳಿಂದ ಭಾರತದ ಒಳಗಡೆ ದಬ್ಬಾಳಿಕೆಗೆ ಅಸಡ್ಡೆಗೆ ತುತ್ತಾಗಬೇಕಾಯಿತು. ಆದರೆ ಸತ್ಯಮೇವ ಜಯತೆ ಎಂಬ ಅಶೋಕನ ವಾಣಿಯಂತೆ ಅಕ್ಟೋಬರ್ 14, 1956 ರಲ್ಲಿ ಬೋಧಿಸತ್ವ ಬಾಬಾ ಸಾಹೇಬರು ಬುದ್ಧಧಮ್ಮ ಸ್ವೀಕಾರ ಮಾಡಿದ ಕಾರಣದಿಂದ ಇಂದು ಕೋಟ್ಯಾಂತರ ಜನರು ಮರಳಿ ಧಮ್ಮದೆಡೆಗೆ ಬರುತ್ತಿದ್ದಾರೆ. ಆದಷ್ಟು ಬೇಗ ಎಲ್ಲ ಶೋಷಿತರು ಬೌದ್ಧ ಧರ್ಮದಡಿಯಲ್ಲಿ ಒಂದಾಗಿ ಈ ರೋಗಗ್ರಸ್ತ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಶಪಥ ಮಾಡಬೇಕು. ಈ ಜಾತಿ ಒಳಜಾತಿಗಳ ಸಂಚಿನಿಂದ ಆದಷ್ಟು ಬೇಗ ಬಿಡುಗಡೆ ಪಡೆಯಬೇಕು.
ಡಾ ನಾಗೇಶ್ ಮೌರ್ಯ
ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಬೆಂಗಳೂರು.
ಇದನ್ನೂ ಓದಿ- ಬೌದ್ಧರ ಜೀವನ ಕ್ರಮ- ಪರಿಯೆತ್ತಿ ಪಟಿಪತ್ತಿ ಪಟಿವೇದ