ಹಾಸನ : ಕಬ್ಬಿಣದ ಪೈಪ್ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ ಸಂಭವಿಸಿದ್ದು ಸ್ಥಳದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದು ಮತ್ತೋರ್ವ ಯುವಕನಿಗೆ ಗಂಭೀರ ಗಾಯವಾಗಿದೆ.
ಗುಲ್ಬರ್ಗಾ ಜಿಲ್ಲೆಯ ಚಿಂಚೋಳ್ಳಿ ತಾಲ್ಲೂಕಿನ ನಿಂಗದಳ್ಳಿ ಗ್ರಾಮದ ಪ್ರಕಾಶ (30) ಎಂಬುವರು ಮೃತಪಟ್ಟಿದ್ದಾರೆ. ಮತ್ತೋರ್ವ ರಾಜು (20) ಎಂಬುವರು ವಿದ್ಯುತ್ ಶಾಕ್‌ನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯೂ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಆಲುಹಳ್ಳಿ-ಕದಡರವಳ್ಳಿ ಬಳಿ ನಡೆದಿದೆ. ಜಿವಿಪಿಆರ್ ಕಂಪನಿಯಿಂದ ಎತ್ತಿನಹೊಳೆ ಯೋಜನೆಯ ಪ್ಯಾಕೇಜ್-04 ರ ಕಾಮಗಾರಿ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಪೈಪ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕ್ರೇನ್ ಮೂಲಕ ಪೈಪ್‌ಗಳನ್ನು ಇಡುತ್ತಿದ್ದಾಗ ವಿದ್ಯುತ್ ಲೈನ್‌ಗಳಿಗೆ ತಗುಲಿದ ಕಬ್ಬಿಣದ ಪೈಪ್ ನಿಂದ ವಿದ್ಯುತ್ ಶಾಕ್ ಹೊಡೆದಿದೆ.
ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮೃತ ಪ್ರಕಾಶ ಎಂಬುವರ ಶವವನ್ನು ಇಡಲಾಗಿದೆ. ಪರಿಹಾರ ನೀಡುವವರೆಗೆ ಶವ ಕೊಂಡೊಯ್ಯುವುದಿಲ್ಲ ಎಂದು ಮೃತನ ಪತ್ನಿ ಸುನೀತಾ ಹಾಗೂ ಸಂಬಂಧಿಕರ ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.