ಕುದಿಯುವರು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ

Most read

ನಮ್ಮ ಅರಿವಿನ ನೆಲೆ ಇನ್ನೂ ಅದೇ ಪುರುಷ ನೆಲೆಯಿಂದ ಮೇಲೆ ಬಂದೇ ಇಲ್ಲ. ನಮ್ಮ ಸ್ವಾಯತ್ತ ಅನುಭವಗಳು ಪಕ್ವಗೊಂಡಿಲ್ಲ. ಪರ್ಯಾಯ ಅರಿವನ್ನು ಹೊಂದುವಲ್ಲಿ, ಸ್ತ್ರಿ ಪರವಾದ ಸಾಮಾಜಿಕ ನಿಲುವುಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವಲ್ಲಿ ಸಫಲರಾಗಿಲ್ಲ. ಚಿಂತನೆಗಳಲ್ಲಿ ಹೊಸತನ ತೋರುವಿಕೆ ಕೇವಲ  ಬರೆವಣಿಗೆ ಅಥವಾ ಭಾಷಣಗಳಿಗೆ ಸೀಮಿತವಾಗಿದೆ. ಬದುಕು ಅದೇ ಚಪ್ಪಲಿಯಡಿಯ ಚೇಳಿನಂತಿದೆ ನಾಗರೇಖಾ ಗಾಂವಕರ, ಉಪನ್ಯಾಸಕರು.

ತುಂಬಿದ ಸಭೆಗಳಲ್ಲಿ ಲಿಂಗ ಸಮಾನತೆಯ ಬಗ್ಗೆ ಆಗೀಗ ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲಾ ನನ್ನೊಳಗೊಂದು ತಪ್ಪಿತಸ್ಥ ಭಾವನೆ ಸದಾ ತುಡಿಯುತ್ತಲೇ ಇರುತ್ತದೆ. ಸ್ತ್ರೀ ಘನತೆಯನ್ನು ಸಮಾನ ಕಣ್ಣುಗಳಿಂದ ನೋಡಲಾಗುತ್ತಿದೆಯೇ? ನಾನೆಷ್ಟರ ಮಟ್ಟಿಗೆ ಈ ಸಮಾನತೆ ಎಂಬ ಜೀವರಸವನ್ನು ಕುಡಿಯುತ್ತಿದ್ದೇನೆ? ನನ್ನ  ಬದುಕಲ್ಲೇ ಎಷ್ಟೋ ಸಂದರ್ಭಗಳಲ್ಲಿ ಕೀಳರಿಮೆಯನ್ನು ಅನುಭವಿಸುತ್ತಿದ್ದೇನೆ. ಅಸಮಾನತೆಯ ಉರಿಯನ್ನು ಸೆರಗಿನಲ್ಲಿನ ಕೆಂಡವಾಗಿ ಕಟ್ಟಿಕೊಂಡಿದ್ದೇನೆ. ಹೀಗಿರುವಾಗ ನಿಜಕ್ಕೂ ನಮಗೆ ಈ ಅಸಮಾನತೆಯ ವಿರುದ್ಧ ಜಯ ಸಿಗುವುದೇ? ಸಮಾನ ಮನಸ್ಥಿತಿಯನ್ನು, ವ್ಯಕ್ತಿ ಗೌರವವನ್ನು ನಾನು ಅನುಭವಿಸಬಹುದೇ? ಇತ್ಯಾದಿ ಗೊಂದಲಗಳು. ಈ ವಿಚಾರಕ್ಕೆ ಪೂರಕವಾಗಿ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತೇನೆ.

ಅವಳು ವಿಚಲಿತಗೊಂಡಿದ್ದಳು. ಮಾತು ಹೊರಬರುತ್ತಿರಲಿಲ್ಲ. ಆದರೂ ತನ್ನ ಮುಂದೆ ಇಬ್ಬರು ಹಿರಿಯ ಹೆಣ್ಣುಗಳು ತನ್ನ ಬಗ್ಗೆಯೇ ಮಾತನಾಡುತ್ತಿರುವುದು ಅವಳಿಗೇನೋ ಕಿರಿಕಿರಿಯಾಗಿತ್ತು ಎಂಬುದನ್ನು ಅವಳ ಮುಖಭಾವವೇ ಹೇಳುತ್ತಿತ್ತು.  “ ಮೇಡಂ ನೋಡಿ! ಇವಳು ಹೀಗೆ ಯಾರ್ಯಾರ್ದೋ ಜೊತೆ ದೋಸ್ತಿ, ಮಸ್ತಿ ಅಂತಾ ಕೇಳದೇ ಕೇಳದೇ ಹೋಗೋದು ಸರಿನಾ,? ನಾವು ಇವಳಿಗೆ ಬೇಕಾದದ್ದೆಲ್ಲಾ ಕೊಡಿಸ್ತಿಲ್ವಾ? ಅಜ್ಜ ಅಜ್ಜಿ ಇವಳಿಗಾಗಿಯೇ ನಮ್ಮ ಜೊತೆ ಬಂದು ಉಳಿತಾ ಇಲ್ಲ. ಇಲ್ಲಾಂದ್ರೆ ನಾನು ನನ್ನ ಅಪ್ಪ ಅಮ್ಮನ ನನ್ನ ಜೊತೆ ನಮ್ಮೆನೇಲಿ ಇಟ್ಕೋತಿದ್ದೆ. ಆದರೆ ಅವರು ತಾಯಿ ತಂದೆ ಇಲ್ಲದ ಈ ತಬ್ಬಲಿನಾ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ, ಇವಳ ಸಲುವಾಗಿ ನಮ್ಮ ಜೊತೆ ಬಂದು ಇರ್ತಾ ಇಲ್ಲ. ಅವರಿಗೂ ವಯಸ್ಸಾಗಿದೆ.  ಇವಳು ನೋಡಿದ್ರೆ ಕೋಣೆ ಬಾಗಿಲ ಹಾಕ್ಕೊಂಡು ಗಂಟೆಗಟ್ಟಲೆ ಮೊಬೈಲ್‍ನಲ್ಲಿ ಮುಳುಗಿರ್ತಾಳಂತೆ. ನಿನ್ನೆ  ರಾತ್ರಿ ಒಂಬತ್ತು ಗಂಟೆಗೆ ಮನೆಗೆ ಬಂದಿದ್ದು, ನೀವೇ ಹೇಳಿ ಎಷ್ಟು ಗಂಟೆಗೆ ಕಾಲೇಜು ಬಿಟ್ಟಿತ್ತು ನಿನ್ನೆ?  ಎಲ್ಲಿ ಹೋಗಿದ್ದೆ ಅಂದ್ರೆ ಫ್ರೆಂಡ್  ಮನೆಗೆ ಅಂತಾಳೆ. ಆ ಫ್ರೆಂಡ್ ನಂಬರ್ ಕೇಳಿದ್ರೆ ತನ್ನಲ್ಲಿ ಇಲ್ಲ ಅಂತಿದ್ದಾಳೆ. ಇವಳನ್ನು ಪೂರಾ ನಂಬೋಕೇ ಆಗ್ತಾ ಇಲ್ಲ ನಮಗೆ “ ಹೀಗೆ ಆ ಹೆಣ್ಣು ಮಗಳು ಹೇಳುತ್ತಿದ್ದರೆ ನನ್ನೊಳಗೆ ಎರಡು ಮುಖ್ಯ ಪ್ರಶ್ನೆಗಳು ಮೂಡುತ್ತಿದ್ದವು. ಇಲ್ಲಿ ತಪ್ಪು ಹುಡುಗಿಯದಾ ಅಥವಾ ನಮ್ಮ ಮನಸ್ಥಿತಿಯದಾ? ಆ ಹುಡುಗಿ ನನ್ನ ವಿದ್ಯಾರ್ಥಿನಿ. ದ್ವಿತೀಯ ಪಿಯುಸಿ ಓದುವ ಹುಡುಗಿ.

ಸಾಂದರ್ಭಿಕ ಚಿತ್ರ

ಅವಳು ಬಂದ ಅದೇ ಸಮಯಕ್ಕೆ ಅದೇ ವಯಸ್ಸಿನ ಹುಡುಗ ರಾತ್ರಿ  ಹೊತ್ತಲ್ಲಿ ಮನೆಗೆ ಬಂದಿದ್ದರೆ ಈಗ ಬಂದಂತೆ ಆ ಮಹಿಳೆ ಅಂದರೆ  ಹುಡುಗಿಯ ಅತ್ತೆ ನನ್ನಲ್ಲಿಗೆ  ಈ ದೂರು ಹೊತ್ತು ಬರುತ್ತಿದ್ದರೇ? ನಾನು ಅವಳ ಅತ್ತೆಯ ಮುಂದೆ ಆ ಹುಡುಗಿಗೆ “ನೀನು ಹೀಗೆಲ್ಲ ರಾತ್ರಿ ತಿರುಗುವುದು ತಪ್ಪು. ಎಲ್ಲಿ ಹೋದರೂ ಮನೆಯಲ್ಲಿ ತಿಳಿಸಿ ಹೋಗು, ನಾವುಗಳು ಎಷ್ಟೇ ಸಮಾನರು ಎಂದುಕೊಂಡರೂ ನಮ್ಮಲ್ಲಿನ ಜೈವಿಕ ಅಬಲತೆಯ ಕಾರಣ  ದುರುಪಯೋಗಕ್ಕೆ ಒಳಗಾಗದಂತೆ ಬದುಕಬೇಕಾದರೆ ಕೆಲವನ್ನು ಒಪ್ಪಿಕೊಂಡು ಹೋಗಬೇಕು” ಇತ್ಯಾದಿ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದು ಸರಿಯೇ? ಹುಡುಗಿಯಾದ ಕಾರಣ ಅವಳು ಹೇಗೋ ಹೇಗೋ ಬದುಕುವುದು, ಮನೆಗೆ ಕೆಟ್ಟ ಹೆಸರು ತರುವುದು  ಮತ್ತು ಅವಳ  ಮುಂದಿನ ಜೀವನದ ಪ್ರಶ್ನೆ ಇತ್ಯಾದಿ ಸಂಗತಿಗಳ ಮುಂದಿಟ್ಟು ನಾವು ಆ ಎಳೆಯ ಮನಸ್ಸುಗಳ ಅದೆಷ್ಟು ಹದ್ದುಬಸ್ತಿನಲ್ಲಿ ಇಡಲು  ಪ್ರಯತ್ನಿಸುತ್ತಿದ್ದೇವೆ. ಹೀಗೇಕೆ? ಯಾಕಾಗಿ? ಅಥವಾ ಹೆಣ್ಣು ಅಂದ ತಕ್ಷಣ ಹೀಗೆ ಇರಬೇಕು ಎಂಬ ಪ್ರಿಕನ್ಸಿವ್ಡ್ ನೋಷನ್ ಹೊತ್ತು  ಇರುವುದೇ ನಿಜವಾದ ಬದುಕಿನ ಹುರುಳೇ? ಬದುಕುವ ರೀತಿಗಳಲ್ಲಿ ನಮ್ಮ ನಡೆನುಡಿಗಳಲ್ಲಿ ಜೀವನ ವಿಧಾನಗಳಲ್ಲಿ ಸ್ತ್ರೀ ಪುರುಷ ಎಂಬ  ತರತಮ ಭಾವಗಳನ್ನು ತೋರದೇ ಎಲ್ಲವೂ ಮನುಷ್ಯರು‌, ಎಲ್ಲರೂ ಸಮಾನರು. ಸರ್ವಸಮಾನ ಬದುಕುವ ಹಕ್ಕನ್ನು ಇಂದಿಗೂ ಕೂಡಾ ಹೊಂದಲಾಗುತ್ತಿಲ್ಲ ಏಕೆ?

ಒಂದೆರಡು ತಿಂಗಳ ಹಿಂದಿನ ಇನ್ನೊಂದು ಅನುಭವ. ಮಗಳ ಪರೀಕ್ಷೆಯ ಕಾರಣ ಅವಳನ್ನು ಶಾಲೆಯವರೆಗೂ ಬಿಟ್ಟು ಬರಲು ಹೋದೆ. ಮಗಳ ಬಲವಂತಕ್ಕೆ ಪರೀಕ್ಷಾ ಕೊಠಡಿಯ ಹತ್ತಿರವಲ್ಲದಿದ್ದರೂ ಕ್ಯಾಂಪಸ್ಸಿನ ಒಳ ಬಂದು ವಿಶ್ ಮಾಡಿ ಹೋಗುವಂತೆ ಅವಳ ಹಠ. ಒಳ ಹೋಗಬಹುದೇ ? ಅನುಮತಿ ಇದೆಯೇ? ಎಂದು ನಾನು ಮೀನಾಮೇಷ ಎಣಿಸುತ್ತಾ ನಿಂತಿದ್ದೆ. ಅಷ್ಟರಲ್ಲಿ ನನ್ನ ಮುಂದೆಯೇ ಪುರುಷ ಪಾಲಕನೊಬ್ಬ ಗೇಟು ದಾಟಿ ಒಳಹೋದದ್ದನ್ನು ಕಂಡ ನಾನು ಬಹುಶಃ ಒಳಗೆ ಪಾಲಕರಿಗೂ ಅನುಮತಿ ಇರಬಹುದೆಂದು ಗೇಟು ದಾಟಿದೆ. ತಡಮಾಡದೆ ಗೇಟು ಕಾಯುವ ಪುರುಷ ಧ್ವನಿ ನನಗೆ ಎಚ್ಚರಿಕೆ ನೀಡಿತು. “ ಒಳಗ್ ಹೊಗಂಗಿಲ್ರೀ. ಹುಡುಗ್ರನ್ನ ಮಾತ್ರ ಒಳಕ್ ಬಿಡ್ರಿ” ಎಂದಿತು. ಅರೇ! ಈಗಷ್ಟೇ ಕಣ್ಣಮುಂದೆ ಮಗನ ಜೊತೆ ಅಪ್ಪ ಹೋದದ್ದನ್ನು ಕಣ್ಣಾರೆ ಕಂಡ ನಾನು  ಕಕ್ಕಾಬಿಕ್ಕಿ. ಸಿಟ್ಟು ನೆತ್ತಿಗೇರಿತ್ತು. ಆದರೆ  ಅಲ್ಲೊಂದು ಸೀನ್ ನನ್ನಿಂದ ಉಂಟಾಗಬಾರದೆಂಬ ಸಾಮಾನ್ಯ ಪ್ರಜ್ಞೆ ನನ್ನನ್ನು ಮೌನಿಯಾಗಿಸಿತು.  ಯಾಕೆಂದರೆ ಪರೀಕ್ಷೆಗೆ ಬರುವ ಮುಗ್ಧ ಮಕ್ಕಳು ಇಂತಹ ಸಂಗತಿಗಳಿಂದ ವಿಚಲಿತರಾಗದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ ಕೂಡಾ. ಮಗಳಿಗೆ ಗೇಟ್ ಹೊರಗಿನಿಂದಲೆ ವಿಶ್ ಮಾಡಿ ಮನೆಗೆ ಬಂದೆ. ಹೆಣ್ಣಿನ ಘನತೆಯನ್ನು ಈ ರೀತಿಯಲ್ಲಿ ಕೀಳಾಗಿಸಿ ಗಂಡಸ್ತನ ಮೆರೆಯುವ ನಮ್ಮ ಸಮಾಜ ಎಂದಿಗೆ ಬದಲಾಗುವುದು ಎಂಬ ಪ್ರಶ್ನೆ ನನ್ನೊಳಗೆ ಒಂದು ಸಣ್ಣ ಜ್ವಾಲಾಮುಖಿಯಾಗಿಯೇ ಉರಿಯುತ್ತಿದೆ. ಇಂತಹ ಹಲವು ಅನುಭವಗಳು ನನಗಾಗಿವೆ.

ಸಾಂದರ್ಭಿಕ ಚಿತ್ರ

ಇನ್ನೊಮ್ಮೆ ಬಸ್ಸಿನಲ್ಲಿ ಬರುತ್ತಿದ್ದೆ. ಮಹಿಳೆಯರಿಗೆ ಸರಕಾರ ನೀಡಿದ ಉಚಿತ ಟಿಕೇಟು ನಾನೂ ಪಡೆದುಕೊಂಡೆ. ನನಗನ್ನಿಸುವ ಮಟ್ಟಿಗೆ ನಾನು ಉದ್ಯೋಗಸ್ಥ ಮಹಿಳೆಯೆಂದು ಹಣಕೊಟ್ಟು ಟಿಕೇಟು ಪಡೆದು ಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಸರಕಾರ ನೀಡಿದ ಎಲ್ಲ ಇನ್ನಿತರ ಸವಲತ್ತುಗಳನ್ನು, ಉದಾ: ಉಚಿತ ವಿದ್ಯುತ್  ಕುಟುಂಬ ಯೋಜನೆ ಸವಲತ್ತು, ರೈತರಿಗೆ ನೀಡುವ ಕೃಷಿ ಸಾಲ, ಸಬ್ಸಿಡಿಗಳು, ಇವೆಲ್ಲವನ್ನೂ ಪುರುಷರೂ ಎಲ್ಲರೂ ಪಡೆದುಕೊಳ್ಳುತ್ತಿರುವಾಗ  ಸರಕಾರಿ ನೌಕರಳಾದ ನಾನು ಅದನ್ನು ನಿರಾಕರಿಸಿ ಹಣ ಕೊಟ್ಟು ಟಿಕೇಟು ಪಡೆದು, ನನ್ನ ಅಂತಸ್ತನ್ನು ಮೆರೆಯುವ ಅಗತ್ಯತೆ, ಅನಿವಾರ್ಯತೆ ಎರಡೂ ಇರಲಿಲ್ಲ. ಮತ್ತು ಬಸ್ಸಿನಲ್ಲಿದ್ದ ಇನ್ನಿತರ ಮಹಿಳೆಯರಿಗೆ ಮುಜುಗರ ಉಂಟುಮಾಡುವ ಇರಾದೆ ಇರಲಿಲ್ಲ. ಯಾಕೆಂದರೆ ಇಂತಹ ಸಂದರ್ಭಗಳಲ್ಲಿ ಗಂಡಿನ ಹಂಗಿನಲ್ಲಿ ಬದುಕುವ ಹೆಣ್ಣು ಮಕ್ಕಳು ಸರಕಾರ ನೀಡಿದ ಈ ಭದ್ರತೆಯನ್ನು ತಮ್ಮ ಹಕ್ಕೆಂಬಂತೆ ಅನುಭವಿಸುತ್ತಿರುವುದನ್ನು ನಾನು ನೋಡಿದ್ದೇನೆ ಮತ್ತು ಖುಷಿ ಪಟ್ಟಿದ್ದೇನೆ. ಯಾಕೆಂದರೆ ಜಗತ್ತಿನ ಅರ್ಧದಷ್ಟಿರುವ ಹೆಣ್ಣು ಮಕ್ಕಳು ಪುರುಷ ಪ್ರಧಾನ ಜಗತ್ತಿನಲ್ಲಿ ಕಲಿತ ಹೆಣ್ಣು ಮಕ್ಕಳೂ  ಸೇರಿದಂತೆ ಅವರ ಮನೆಗೆಲಸದ ದುಡಿಮೆಗೆ ಕವಡೆ ಕಾಸಿನ ಬೆಲೆಯಿಲ್ಲ. ಎಲ್ಲಾದರೂ ಹೋಗಬೇಕೆಂದರೆ ಗಂಡನಲ್ಲಿ ಕೈಯೊಡ್ಡಿ ನಿಲ್ಲಬೇಕು. ಇಂತಹ ಸಾಮಾಜಿಕ ನೆಲೆಗಟ್ಟಿನ ನೆಲದಲ್ಲಿ ಸರಕಾರ ನೀಡಿದ ಈ ಸವಲತ್ತು ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿದೆ. ತಮಗಾಗಿ ಹಣ ಉಳಿಸಿಕೊಳ್ಳುವ ಇಲ್ಲ ದುಡಿಯುವ ಹೆಣ್ಣುಮಕ್ಕಳು, ತರಕಾರಿ, ಹಣ್ಣುಹಂಪಲು ಮಾರಿ ಬದುಕುವ ಹಲವು ಮಹಿಳೆಯರು ಈ ಸವಲತ್ತಿನಿಂದ ಖುಷಿ ಪಟ್ಟಿರುವುದನ್ನು ನೋಡಿದ್ದೇನೆ.  ಆದರೆ ಪುರುಷ ಮನಸ್ಥಿತಿಗೆ ಇದು ಪಥ್ಯವಾಗದ ಸಂಗತಿ. ನಾನು ಉಚಿತ ಟಿಕೇಟು ಪಡೆದ ಮರುಗಳಿಗೆ ನನ್ನ  ಪಕ್ಕದಲ್ಲಿ ಕುಳಿತ ಅರೆಮುಪ್ಪಿನ  ಪುರುಷ  ಈ ಆಧಾರ ಕಾರ್ಡಿನ ಉಚಿತ ಟಿಕೇಟಿನ ಪ್ರಶ್ನೆ ಎತ್ತಿ ತನ್ನ ಜೊತೆಗಾರನೊಂದಿಗೆ ಮಾತಿಗಿಳಿದ. ಹೆಣ್ಣು ಮಕ್ಕಳಿಗೆ ಹೀಗೆ ಎಲ್ಲರಿಗೂ ಉಚಿತ ಟಿಕೇಟು ನೀಡಿರುವುದು ತಪ್ಪೆಂದು ಸರಕಾರದ ಕಾರ್ಯವೈಖರಿಯನ್ನು ಮನಸ್ಸಿಗೆ ಬಂದಂತೆ ತೆಗಳಿದ. ಆದರೆ ಅದೇ ವ್ಯಕ್ತಿ ತನ್ನ ಟಿಕೇಟು ಪಡೆಯುವಾಗ  ಸರಕಾರದ್ದೆ ಸವಲತ್ತಾದ ಹಿರಿಯರ ಕಾರ್ಡು ತೋರಿಸಿ ಪರ್ಸೆಂಟೇಜ್ ಸವಲತ್ತು ಪಡೆಯಲು ಮರೆಯಲಿಲ್ಲ. ಇಂತಹ  ಕೊಂಕು, ಕೊಳಕು  ಹೆಣ್ಣು ಮಕ್ಕಳ ವಿಚಾರದಲ್ಲೇಕೆ ಎಂಬುದೇ ಯಕ್ಷಪ್ರಶ್ನೆ?

ಮಹಿಳಾ ಲೋಕ ಎನ್ನುವುದು ಪ್ರತ್ಯೇಕ ಜಗತ್ತೇ? ಎಂಬುದು ನಮ್ಮ ಮುಂದಿನ ಬಹು ದೊಡ್ಡ  ಪ್ರಶ್ನೆ. ಸ್ತ್ರೀ ಸಂವೇದನೆ, ಸ್ತ್ರೀ ಅಸ್ಮಿತೆ, ಸ್ತ್ರೀ ಪ್ರಜ್ಞೆ, ಮಹಿಳಾ ಸಬಲೀಕರಣ ಇಂತಹ ಪದಗಳನ್ನು ಜಗತ್ತು ಇಂದು ವ್ಯಾಪಕವಾಗಿ  ಬಳಸುತ್ತಿದೆ.. ಮಹಿಳೆಯರನ್ನು ಮಹಿಳಾ ಹೋರಾಟಗಾರರನ್ನು, ಮಹಿಳಾ ಬರಹಗಾರರನ್ನು  ಅವರ ಹೋರಾಟ, ಅನುಭವ, ಓದು, ಇತ್ಯಾದಿ ಗುರುತಿಸಿ ಮುನ್ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರಯತ್ನಗಳು ಅನಿವಾರ್ಯ ಅನ್ನುವುದಕ್ಕಿಂತ ಅಗತ್ಯ ಅಷ್ಟೇ.

ಕೆಲವು ತಿಂಗಳ ಹಿಂದೆ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ನಾಡಿನ ಹೆಸರಾಂತ  ಸಾಹಿತಿಯೋರ್ವರು  ನಾಡಿನ ಹೆಣ್ಣು ಮಕ್ಕಳು  ಈಗೀಗ ಗಟ್ಟಿದನಿ ಎತ್ತುತ್ತಿದ್ದಾರೆ, ಅವರಿಗೆ ಅವಕಾಶಗಳನ್ನು ಕೊಡಬೇಕು, ಅವರೂ ಬೆಳೆದರೆ ಮುಂದೆ ಸಮಾಜ ಬೆಳೆಯುತ್ತದೆ ಎಂಬಿತ್ಯಾದಿ ವಿಚಾರಗಳ ಎತ್ತಿದರು. ಆದರೆ ನನ್ನಲ್ಲಿ ಪ್ರಶ್ನೆಯೊಂದು ಉಳಿದುಹೋಯಿತು. ಹೆಣ್ಣು ಮಕ್ಕಳಿಗೆ ಅವಕಾಶ ನೀಡುವವರು, ಅವರನ್ನು ಬೆಳೆಸುವವರು ಹಾಗಾದರೆ ಪುರುಷರೇ? ಆ ಪಟ್ಟಭಧ್ರ ಮನಸ್ಥಿತಿಯಿಂದ ಮಹಾನ್ ಸಮಾನತೆಯ ಪ್ರತಿಪಾದಕರೆನ್ನಿಸಿಕೊಳ್ಳುವ ನಾವು ಇನ್ನೂ ಈ ಕಕೂನ್‍ನಿಂದ  ಹೊರಬಂದಿಲ್ಲವೇ?

ನಮ್ಮ ಅರಿವಿನ ನೆಲೆ ಇನ್ನೂ ಅದೇ ಪುರುಷ ನೆಲೆಯಿಂದ ಮೇಲೆ ಬಂದೇ ಇಲ್ಲ. ನಮ್ಮ ಸ್ವಾಯತ್ತ ಅನುಭವಗಳು ಪಕ್ವಗೊಂಡಿಲ್ಲ. ಪರ್ಯಾಯ ಅರಿವನ್ನು ಹೊಂದುವಲ್ಲಿ, ಸ್ತ್ರಿ ಪರವಾದ ಸಾಮಾಜಿಕ ನಿಲುವುಗಳನ್ನು ಮುಂದಿನ ಜನಾಂಗಕ್ಕೆ ದಾಟಿಸುವಲ್ಲಿ ಸಫಲರಾಗಿಲ್ಲ. ಚಿಂತನೆಗಳಲ್ಲಿ ಹೊಸತನ ತೋರುವಿಕೆ ಕೇವಲ  ಬರೆವಣಿಗೆ ಅಥವಾ ಭಾಷಣಗಳಿಗೆ ಸೀಮಿತವಾಗಿದೆ. ಬದುಕು ಅದೇ ಚಪ್ಪಲಿಯಡಿಯ ಚೇಳಿನಂತಿದೆ.

ನಾಗರೇಖಾ ಗಾಂವಕರ

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಬರಹಗಾರರೂ ಅನುವಾದಕರೂ ಮತ್ತು ಅಂಕಣಕಾರರೂ ಆಗಿದ್ದಾರೆ.

ಇದನ್ನೂ ಓದಿ- ನೋಡಬಾರದೇ ಚೀಲದೊಳಗನು..

More articles

Latest article