ಮತದಾರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಚುನಾವಣಾ ಆಯೋಗ ಪೌರತ್ವ ಸಮೀಕ್ಷೆಯ ಎನ್ ಆರ್ ಸಿ ನಡೆಸುತ್ತಿರುವ ಅನುಮಾನವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಆದರೆ ಪೌರತ್ವ ತಪಾಸಣೆ ನಡೆಸುವುದು ಕೇಂದ್ರ ಸರಕಾರದ ಗೃಹ ಇಲಾಖೆಯ ಕೆಲಸ. ಅದನ್ನು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳು ತೀವ್ರ ಕುತೂಲಕರವಾದದ್ದಾಗಲಿವೆ – ಶ್ರೀನಿವಾಸ ಕಾರ್ಕಳ.
ನಿಮ್ಮ ಹಿರಿಯರ ಅನೇಕ ತಲೆಮಾರುಗಳು ಇದೇ ದೇಶದಲ್ಲಿ ಹುಟ್ಟಿ ಬದುಕಿದವರು. ನೀವೂ ಇಲ್ಲಿಯೇ ಹುಟ್ಟಿ ದಶಕ ದಶಕಗಳಿಂದ ಇಲ್ಲಿ ವಾಸಿಸಿದವರು. ಅನೇಕ ಚುನಾವಣೆಗಳಲ್ಲಿ ಮಾತ್ರವಲ್ಲ, ಕಳೆದ ವರ್ಷವಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲೂ ನೀವು ಮತ ಚಲಾಯಿಸಿದ್ದೀರಿ. ಹೊಟ್ಟೆಪಾಡಿಗಾಗಿ ದೇಶದ ದೂರದ ಮೂಲೆಯಲ್ಲಿ ಈಗ ದಿನಗೂಲಿ ಕಾರ್ಮಿಕನಂತೆ ನೀವು ದುಡಿಯುತ್ತಿದ್ದೀರಿ.
ನಿಮ್ಮ ರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾರ ಪಟ್ಟಿ ಪರಿಷ್ಕರಿಸಲು ಹೊರಡುತ್ತದೆ. ಮತದಾರ ʼಪಟ್ಟಿ ಪರಿಷ್ಕರಿಸ ಹೊರಟರೆ ನನಗೇನು? ಏನೂ ಸಮಸ್ಯೆ ಇಲ್ಲʼ ಎಂದು ನೀವು ನಿಶ್ಚಿಂತೆಯಿಂದ ಇರುತ್ತೀರಿ. ಆಗ ʼನೀನು ಈ ಹಿಂದೆ ಮತ ಚಲಾಯಿಸಿರಬಹುದು, ಆದರೆ ನಾವು ಈಗ ವಿಶೇಷ ತೀವ್ರ ಪರಿಷ್ಕರಣೆ (Special Intensive Review) ಮಾಡುತ್ತಿರುವುದು, ಹಾಗಾಗಿ ನೀನು ಈ ದೇಶದ ಪ್ರಜೆ ಎಂದು ಸಾಬೀತುಪಡಿಸಬೇಕು, ಅದಕ್ಕಾಗಿ ದಾಖಲೆಗಳನ್ನು ಒದಗಿಸಬೇಕು, ಆಗ ಮಾತ್ರ ನೀನು ಮತದಾರ ಪಟ್ಟಿ ಸೇರಿ ಮತ ಚಲಾಯಿಸಬಹುದುʼ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆಗಲೂ ನಿಮಗೆ ಚಿಂತೆಯಾಗುವುದಿಲ್ಲ. ಯಾಕೆಂದರೆ ನಿಮ್ಮ ಬಳಿ ಆಧಾರ್ ಇದೆ, ಪಡಿತರ ಚೀಟಿ ಇದೆ, ನರೇಗಾ ಜಾಬ್ ಕಾರ್ಡ್ ಕೂಡಾ ಇದೆ, ಎಲ್ಲಕ್ಕಿಂತಲೂ ಮುಖ್ಯವಾಗಿ ಚುನಾವಣಾ ಆಯೋಗವೇ ಕೊಟ್ಟ ಮತದಾರ ಚೀಟಿ ಕೂಡಾ ಇದೆ. ಆಗ ಚುನಾವಣಾ ಆಯೋಗ ಹೇಳುತ್ತದೆ ʼಆ ಯಾವ ದಸ್ತಾವೇಜುಗಳೂ ಆಗುವುದಿಲ್ಲ, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸಹಿತ ನಾವು ಹೇಳುವ ಹನ್ನೊಂದು ದಾಖಲೆಗಳಲ್ಲಿ ಒಂದನ್ನಾದರೂ ನೀನು ಒದಗಿಸಬೇಕು, ಅದೂ ಮುಂದಿನ ಕೇವಲ ಹತ್ತು ದಿನಗಳಲ್ಲಿʼ. ಹೀಗೆ ಹೇಳಿದಾಗ ನಿಮ್ಮ ಪರಿಸ್ಥಿತಿ ಏನಾಗಬಹುದು? ಒಂದೆಡೆಯಲ್ಲಿ ಮತ ಚಲಾವಣೆಯ ಹಕ್ಕು ಕಳೆದುಕೊಂಡರೆ, ಇನ್ನೊಂದೆಡೆ ನೀವು ಈ ದೇಶದ ಪ್ರಜೆ ಅಲ್ಲ ಎಂದು ಸಾಬೀತಾದಾಗ ಉಂಟಾಗುವ ಸಮಸ್ಯೆಗಳು? ಅದೂ ದೇಶದ ಪ್ರಜೆಗಳಲ್ಲ ಎಂದು ಕಂಡುಬಂದವರನ್ನು ಹಿಂಸಿಸುವ, ಅಮಾನುಷವಾಗಿ ದೇಶದ ಗಡಿಯಿಂದ ಹೊರದಬ್ಬುವ ಕೆಲಸ ನಡೆಯುತ್ತಿರುವ ಹೊತ್ತಿನಲ್ಲಿ? ಬಿಹಾರದಲ್ಲಿ ನಡೆಯುತ್ತಿರುವುದು ಇದೇ. ಅಲ್ಲಿನ ಆತಂಕ ಮತ್ತು ಕೋಲಾಹಲಕ್ಕೂ ಇದೇ ಕಾರಣಕ್ಕೆ.
ದಿನಗೂಲಿ ಕಾರ್ಮಿಕನೂ ಆನ್ ಲೈನ್ ನಲ್ಲಿ ನೋಂದಣಿ ಮಾಡಬೇಕು?!
ನೀವು ಗಮನಿಸಿರಬಹುದು, ದೇಶದ ನಿನ್ನೆಯ ಬಹುತೇಕ ದಿನಪತ್ರಿಕೆಗಳ ಮುಖಪುಟದಲ್ಲಿ ದೇಶದ ಚುನಾವಣಾ ಆಯೋಗ ಒಂದು ಜಾಹೀರಾತು ಹೊರಡಿಸಿದೆ. ಬಿಹಾರದ ಒಂದು ಕೋಟಿಗೂ ಅಧಿಕ ಮತದಾರರು ಹೊರ ರಾಜ್ಯಗಳಲ್ಲಿ ದುಡಿಯುತ್ತಿರುವ ಹಿನ್ನೆಲೆಯಲ್ಲಿ ಈ ಜಾಹೀರಾತು. ʼನೀವು ಈ ಜಾಹೀರಾತಿನ ಕ್ಯೂ ಆರ್ ಕೋಡ್ ಬಳಸಿ, ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ, ಅದನ್ನು ತುಂಬಿಸಿ, ಸೂಕ್ತ ದಾಖಲೆಗಳ ಪ್ರತಿಯೊಂದಿಗೆ ಅಪ್ ಲೋಡ್ ಮಾಡಿʼ ಎಂದು ಅದರಲ್ಲಿ ಹೇಳಿದೆ.
ಉದಾಹರಣೆಗೆ, ಬಿಹಾರದಿಂದ ಕರ್ನಾಟಕಕ್ಕೆ ಬಂದು ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ, ಹೆಚ್ಚು ಓದಿಲ್ಲದ, ಇಂಟರ್ ನೆಟ್ ಬಳಸುವ ಸಾಧನವಾಗಲೀ ಅರಿವಾಗಲೀ ಇಲ್ಲದ ಒಬ್ಬ ವ್ಯಕ್ತಿ ಇದನ್ನೆಲ್ಲ ಮಾಡಬೇಕು?! ಈ ಅನೇಕರಲ್ಲಿ ಇರುವುದು ಸ್ಮಾರ್ಟ್ ಫೋನ್ ಅಲ್ಲ ಬೇಸಿಕ್ ಮೊಬೈಲ್! ಭಾರತದ ಚುನಾವಣಾ ಆಯೋಗ ನೆಲ ವಾಸ್ತವದ ಅರಿವಿಲ್ಲದೆ ಹೇಗೆ ಉದ್ಧಟತನದಿಂದ ವರ್ತಿಸುತ್ತಿದೆ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು. ಚುನಾವಣಾ ಆಯೋಗವು ದೇಶದ ಜನತಂತ್ರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ವಲಸಿಗರು, ಅಲೆಮಾರಿಗಳು ಹೀಗೆ ಪ್ರತಿಯೊಬ್ಬ ದೇಶದ ಪ್ರಜೆಯನ್ನೂ ಹುಡುಕಿ ಹೆಚ್ಚು ಹೆಚ್ಚು ಮಂದಿ ಮತ ಚಲಾಯಿಸುವಂತೆ ಮಾಡಬೇಕು. ಆದರೆ ನಿಜವಾದ ಮತದಾರರನ್ನೂ ಮತ ಚಲಾಯಿಸದಂತೆ ಮಾಡುವ ಮೂಲಕ ಚುನಾವಣಾ ಆಯೋಗ ಸಾಧಿಸಲು ಹೊರಟಿರುವುದಾದರೂ ಏನನ್ನು? ಆಯೋಗದ ನಡೆ ನೋಡುವಾಗ ದೇಶದ ಪ್ರಜಾತಂತ್ರ ಬಹುದೊಡ್ಡ ಹಿಂದೆಂದೂ ಕಂಡಿರದಂತಹ ಅಪಾಯ ಎದುರಿಸುತ್ತಿರುವಂತೆ ಅನಿಸುವುದಿಲ್ಲವೇ?
ಬಿಹಾರದ ವಾಸ್ತವ
ಅಸಲಿಗೆ, ಸಾಮಾನ್ಯ ಮತದಾರ ಪಟ್ಟಿ ಪರಿಷ್ಕರಣೆಗೆ ಭಿನ್ನವಾಗಿ, ಪೌರತ್ವ ಪರಿಶೀಲಿಸುವ ಇಂತಹ ವಿಶೇಷ ತೀವ್ರ ಸಮೀಕ್ಷೆಗೆ ಕೆಲವು ವರ್ಷಗಳೇ ಬೇಕಾಗುತ್ತದೆ (ಅಸ್ಸಾಂ ನಲ್ಲಿ ಎನ್ ಆರ್ ಸಿ ಮಾಡಲು ನಾಲ್ಕು ವರ್ಷ ತಗುಲಿತು. ಅಷ್ಟಾದ ಮೇಲೂ ಅದು ಪರಿಪೂರ್ಣವಾಗಲಿಲ್ಲ). ಅಲ್ಲದೆ ಬಿಹಾರದಂತಹ ರಾಜ್ಯದ ಪರಿಸ್ಥಿತಿಯೇ ಬೇರೆ.245 ವಿಧಾನಸಭಾ ಕ್ಷೇತ್ರ ಇರುವ, 2024 ರ ಅಂಕಿ ಅಂಶ ಪ್ರಕಾರ 7,64,33,329 ಅರ್ಹ ಮತದಾರರಿರುವ ದೊಡ್ಡ ರಾಜ್ಯ ಅದು. ಅಲ್ಲಿ ಸಾಕ್ಷರರ ಸಂಖ್ಯೆ ಕೇವಲ 74%.. ಬಹುತೇಕರ ಬಳಿ ಜನನ ಪ್ರಮಾಣ ಪತ್ರದಂತಹ ಅಧಿಕೃತ ದಾಖಲೆಗಳು ಇಲ್ಲ. ಲಕ್ಷಾಂತರ ಮಂದಿ ಹೊರ ರಾಜ್ಯಗಳಿಗೆ ವಲಸೆ ಹೋಗಿ ದುಡಿಯುತ್ತಿದ್ದಾರೆ. ಪ್ರವಾಹದಿಂದ ಸದಾ ಬಳಲುವ ರಾಜ್ಯ. ಇಂತಹ ರಾಜ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ,2.93 ಕೋಟಿ ಮತದಾರರು ತಮ್ಮ ಜನನ ದಿನಾಂಕ, ಜನನ ಸ್ಥಳದ ದಾಖಲೆ ಒದಗಿಸಬೇಕು, ಅಂದಾಜು 4.76 ಕೋಟಿ ಮಂದಿ ತಮ್ಮ ಪೌರತ್ವ ಸಾಬೀತು ಪಡಿಸುವ ದಾಖಲೆಪತ್ರ ಒದಗಿಸಬೇಕು?!
ಇಲ್ಲಿ ಏನೋ ದುರುದ್ದೇಶವಿದೆ, ದೊಡ್ಡ ಸಂಖ್ಯೆಯಲ್ಲಿ ಪ್ರಜೆಗಳನ್ನು ಅದೂ ಬಡವರು, ದುರ್ಬಲವರ್ಗಗಳು ಮತ್ತು ಅಲ್ಪಸಂಖ್ಯಾತರನ್ನು ಮತ ಚಲಾವಣೆಯ ಹಕ್ಕಿನಿಂದ ವಂಚಿಸುವ ಹುನ್ನಾರವಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಬಹುತೇಕ ವಿಪಕ್ಷಗಳು ಮತ್ತು ನಾಗರಿಕ ಸಂಘಟನೆಗಳು ಚುನಾವಣಾ ಆಯೋಗದ ಈ ನಡೆಯನ್ನು ತೀವ್ರವಾಗಿ ವಿರೋಧಿಸಿವೆ.
ವಿಷಯ ಭಾರತದ ಸುಪ್ರೀಂ ಕೋರ್ಟ್ ಗೂ ಹೋಗಿ ಇತ್ತೀಚೆಗೆ ಜಸ್ಟಿಸ್ ಸುಧಾಂಶು ಧುಲಿಯಾ ಮತ್ತು ಜಸ್ಟಿಸ್ ಬಾಗ್ಚಿ ಪೀಠದಲ್ಲಿ ವಿಚಾರಣೆ ನಡೆದಿದೆ. ಪೌರತ್ವ ತಪಾಸಣೆ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆಯೇ? ವಿಧಾನ ಸಭಾ ಚುನಾವಣೆಗೆ ಇನ್ನೇನು ಮೂರು ತಿಂಗಳಿರುವಾಗ ಇಷ್ಟೊಂದು ಜಟಿಲ ಪರಿಷ್ಕರಣೆಯ ಉದ್ದೇಶ ಏನು (ಟೈಮಿಂಗ್)? ಬಹುತೇಕ ಯಾವುದೇ ಪ್ರಮಾಣ ಪತ್ರ ಪಡೆಯಲು, ಸರಕಾರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಬೇಕಾಗುವ ಆಧಾರ್, ಚುನಾವಣಾ ಆಯೋಗವೇ ನೀಡಿರುವ ಮತದಾರ ಗುರುತಿನ ಚೀಟಿ ಇವನ್ನೆಲ್ಲ ಈ ಪರಿಷ್ಕರಣೆಯ ಸಂದರ್ಭದಲ್ಲಿ ಪುರಾವೆಯಾಗಿ ಪರಿಗಣಿಸುವುದಿಲ್ಲ ಯಾಕೆ (ಪ್ರಕ್ರಿಯೆ)? ಎಂಬ ಪ್ರಶ್ನೆಗಳನ್ನು ಇರಿಸಿಕೊಂಡು ಕೋರ್ಟು ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಗುರುತು ಸಾಬೀತುಪಡಿಸಲು ಆಧಾರ್, ಪಡಿತರ ಚೀಟಿ ಮತ್ತು ಮತದಾರ ಗುರುತಿನ ಚೀಟಿಯನ್ನು ಪರಿಗಣಿಸುವಂತೆ ಸಲಹೆ ನೀಡಿದ ಅದು ಇದೇ ತಿಂಗಳ28 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಪ್ರಜಾತಂತ್ರ ವಿರೋಧಿ ನಡೆ ಪ್ರದರ್ಶಿಸುತ್ತಿರುವ ಆಯೋಗ
ಇಷ್ಟಾದ ಮೇಲೂ ಆಯೋಗ ಈ ದಾಖಲೆಪತ್ರಗಳ ಬಗ್ಗೆ ಏನನ್ನೂ ಹೇಳದೆ ತನ್ನ ಕೆಲಸ ಮುಂದುವರಿಸಿದೆ. ಅದಕ್ಕೆ ಈಗ ಮುಖ ಉಳಿಸಿಕೊಳ್ಳಬೇಕಾಗಿದೆ. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಅರ್ಜಿ ನಮೂನೆಗಳನ್ನು ಸಲ್ಲಿಸುತ್ತಿದ್ದಾರೆ, ಪರಿಷ್ಕರಣೆ ಬಹುತೇಕ ಪೂರ್ತಿಯಾಗಿದೆ ಎಂದೆಲ್ಲ ಹೇಳುತ್ತಿದೆ. ಆದರೆ ನೆಲವಾಸ್ತವ ಬೇರೆಯೇ ಇದೆ. ಪತ್ರಕರ್ತ ಅಜಿತ್ ಅಂಜುಂ ನಂತಹ ಯೂಟ್ಯೂಬರ್ ಗಳು, ಟಿವಿ ಪತ್ರಕರ್ತ ರಾಜೀವ್ ರಂಜನ್ ಮೊದಲಾದವರು ಬಿಹಾರದ ಹಳ್ಳಿಗಳಲ್ಲಿ ಸುತ್ತುತ್ತಾ ಅಲ್ಲಿ ಆಯೋಗ ಹೇಳಿಕೊಳ್ಳುತ್ತಿರುವ ಯಾವ ಕೆಲಸವೂ ಸರಿಯಾಗಿ ನಡೆಯದಿರುವುದನ್ನು, ಮತದಾರರಿಗೆ ಪಾವತಿ (acknowledgement) ಕೊಡಲಾಗುತ್ತದೆ ಎಂದು ಆಯೋಗ ಹೇಳಿದ್ದರೂ ಅದನ್ನು ಕೊಡದಿರುವುದನ್ನು, ಸೂಕ್ತ ದಾಖಲೆ ಪತ್ರಗಳಿಲ್ಲದೆ ಅರ್ಜಿ ನಮೂನೆ ಸ್ವೀಕರಿಸುತ್ತಿರುವುದನ್ನು ವರದಿ ಮಾಡುತ್ತಿದ್ದಾರೆ (ಈ ಸತ್ಯ ಹೇಳಿದ್ದಕ್ಕೆ ಹಿರಿಯ ಪತ್ರಕರ್ತ ಅಜಿತ್ ಅಂಜುಂ ಮೇಲೆ ಎಫ್ ಐ ಆರ್ ಕೂಡಾ ಆಗಿದೆ!). ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಚುನಾವಣಾ ಆಯೋಗದ ಸುಳ್ಳುಗಳನ್ನು ನಿತ್ಯವೂ ಬಯಲಿಗೆಳೆಯುತ್ತಾ ಆಯೋಗಕ್ಕೆ ಸವಾಲನ್ನೇ ಹಾಕಿದ್ದಾರೆ. ಸರಕಾರದ ಸೇವೆಯನ್ನೇ ಜರ್ನಲಿಸಂ ಎಂದು ಅಂದುಕೊಂಡಿರುವ ಗೋದಿ ಮೀಡಿಯಾ ಸತ್ಯ ಹೇಳಲು ನಿರಾಕರಿಸಿದರೂ ಯೂಟ್ಯೂಬರ್ ಗಳು ಮತ್ತು ದಿ ಹಿಂದೂ, ದೈನಿಕ ಭಾಸ್ಕರ್ ಮೊದಲಾದ ಮುಖ್ಯವಾಹಿನಿ ದಿನ ಪತ್ರಿಕೆಗಳು ಬಿಹಾರದ SIR ವಾಸ್ತವಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಡುತ್ತಲೇ ಇವೆ.
ದಿನಗಳೆದಂತೆ ಭಾರತದ ಚುನಾವಣಾ ಆಯೋಗ ಮಾತ್ರವಲ್ಲ, ಭಾರತೀಯ ಜನತಾ ಪಕ್ಷ ಕೂಡಾ ಈ ವಿಚಾರದಲ್ಲಿ ಮುಜುಗರ ಅನುಭವಿಸುತ್ತಿದೆ. ಈ ಲೇಖನ ಪ್ರಕಟವಾಗುವ ಒಂದು ದಿನ ಮೊದಲಷ್ಟೇ ಎನ್ ಡಿ ಎ ಮೈತ್ರಿಕೂಟದ ಅಂಗ ಪಕ್ಷ ತೆಲುಗು ದೇಶಂ ಪಕ್ಷದ (TDP) ನಿಯೋಗವು ಚುನಾವಣಾ ಆಯೋಗವನ್ನು ಭೇಟಿಯಾಗಿ, ವಿಶೇಷ ತೀವ್ರ ಪರಿಷ್ಕರಣೆಯ ತನ್ನ ವ್ಯಾಖ್ಯೆಯನ್ನು ಆಯೋಗ ಸ್ಪಷ್ಟ ಪಡಿಸಬೇಕು, ನಾಗರಿಕತೆ ಪರಿಶೀಲಿಸುವ ಕೆಲಸವನ್ನು ಆಯೋಗ ಮಾಡಬಾರದು, ಚುನಾವಣೆಗೆ ಆರು ತಿಂಗಳ ಮುಂಚೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಮುಗಿಸಬೇಕು, ಮತದಾರ ಪಟ್ಟಿಯಲ್ಲಿ ಹೆಸರಿರುವ ಮತ್ತು ಮತದಾರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಅಧಿಕಾರ ಇರಬೇಕು, ಮತದಾರ ಪಟ್ಟಿಯ ಆಡಿಟಿಂಗ್ ಅನ್ನು ಮೂರನೇ ಸಂಸ್ಥೆ ಮಾಡಬೇಕು ಎಂದೆಲ್ಲ ಆಗ್ರಹಿಸಿದೆ.
ಕುತೂಹಲ ಕೆರಳಿಸಿರುವ ಮುಂದಿನ ವಿಚಾರಣೆ
ಒಂದಂತೂ ಸತ್ಯ, ಚುನಾವಣಾ ಆಯೋಗದ ಸದರಿ ಕಾರ್ಯ ಸದುದ್ದೇಶದ್ದಂತೂ ಅಲ್ಲ. ಅಲ್ಲದೆ ಇಷ್ಟೊಂದು ಸಂಕೀರ್ಣ ಕೆಲಸವನ್ನು ಅದೂ ಬಿಹಾರದಂತಹ ರಾಜ್ಯದಲ್ಲಿ ತಿಂಗಳ ಅವಧಿಯಲ್ಲಿ ಮಾಡುವುದು ಸಾಧ್ಯವೂ ಇಲ್ಲ. ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಅದು ಪೌರತ್ವ ಸಮೀಕ್ಷೆಯ ಎನ್ ಆರ್ ಸಿ ನಡೆಸುತ್ತಿರುವ ಅನುಮಾನವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಆದರೆ ಪೌರತ್ವ ತಪಾಸಣೆ ನಡೆಸುವುದು ಕೇಂದ್ರ ಸರಕಾರದ ಗೃಹ ಇಲಾಖೆಯ ಕೆಲಸ. ಅದನ್ನು ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ಇದನ್ನು ಸುಪ್ರೀಂ ಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಂದಿನ ಕೆಲ ದಿನಗಳು ತೀವ್ರ ಕುತೂಲಕರವಾದದ್ದಾಗಲಿವೆ. ಯಾಕೆಂದರೆ ಮತದಾರ ಪಟ್ಟಿಯನ್ನು ಪ್ರಕಟಪಡಿಸುವಾಗ ಚುನಾವಣಾ ಆಯೋಗ ಅನೇಕ ಪ್ರಶ್ನೆಗಳನ್ನು ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಜುಲೈ 28 ರಂದು ಸುಪ್ರೀಂ ಕೋರ್ಟ್ ನಲ್ಲಿ ಎರಡನೆ ಹಂತದ ವಿಚಾರಣೆ ನಡೆಯುವಾಗ ಅನೇಕ ಕಠಿಣ ಸವಾಲುಗಳನ್ನು ಅದು ಎದುರಿಸಬೇಕಾಗುತ್ತದೆ. ಆ ದಿನ ಭಾರತದ ಚುನಾವಣಾ ಪ್ರಜಾತಂತ್ರದ ಮಟ್ಟಿಗೆ ಐತಿಹಾಸಿಕವಾದರೂ ಅಚ್ಚರಿಯಿಲ್ಲ.
ಶ್ರೀನಿವಾಸ ಕಾರ್ಕಳ