ವಾಷಿಂಗ್ಟನ್: ವಾಣಿಜ್ಯ ಉದ್ದೇಶದ ಆಕ್ಸಿಯಂ -4 ಮಿಷನ್ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಇಂದು ಮಧ್ಯಾಹ್ನ 3.01ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊದಲ್ಲಿ ಬಂದಿಳಿದಿದ್ದಾರೆ.
ಶುಭಾಂಶು ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ತಜ್ಞರಾದ ಪೋಲೆಂಡ್ನ ಸ್ಲಾವೊಸ್ಜ್ ಉಜ್ನಾನ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರನ್ನು ಹೊತ್ತ ಡ್ರ್ಯಾಗನ್ ‘ಗ್ರೇಸ್’ ಬಾಹ್ಯಾಕಾಶ ನೌಕೆ ಸೋಮವಾರ ಸಂಜೆ 4:45ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟಿತ್ತು.18 ದಿನಗಳ ವಾಸ್ತವ್ಯದ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಟ ಗಗನಯಾನಿಗಳು 22.5 ಗಂಟೆಗಳ ಪ್ರಯಾಣ ಮಾಡಿ ಭೂಮಿಗೆ ತಲುಪಿದರು.
ಡ್ರ್ಯಾಗನ್ ಮತ್ತು ಆ್ಯಕ್ಸಿಯಂ ಸ್ಪೇಸ್ ಎಎಕ್ಸ್-4 ಸಿಬ್ಬಂದಿ ಸ್ಥಳೀಯ ಕಾಲಮಾನ ಬೆಳಗಿನ ಜಾವ 2:31ಕ್ಕೆ (ಭಾರತೀಯ ಕಾಲಮಾನ ಮಧ್ಯಾಹ್ನ 3.01) ಸ್ಯಾನ್ ಡಿಯಾಗೊ ಕರಾವಳಿಯಲ್ಲಿ ಇಳಿಯಲ್ಲಿ ಇಳಿದರು ಎಂದು ಸ್ಪೇಸ್ ಎಕ್ಸ್ ತಿಳಿಸಿದೆ.
ಗಗನಯಾನಿಗಳು ಇಳಿಯಲು ಪ್ಯಾರಾಚೂಟ್ಗಳನ್ನು ಎರಡು ಹಂತಗಳಲ್ಲಿ ನಿಯೋಜಿಸಲಾಗಿತ್ತು. ಮೊದಲನೆಯದ್ದನ್ನು ಸುಮಾರು 5.7 ಕಿ.ಮೀ ಎತ್ತರದಲ್ಲಿ ಸ್ಥಿರಗೊಳಿಸಲಾಯಿತು. ನಂತರ ಮುಖ್ಯ ಪ್ಯಾರಾಚೂಟ್ ಅನ್ನು ಸರಿ ಸುಮಾರು ಎರಡು ಕಿ.ಮೀ ದೂರದಲ್ಲಿ ತೆರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು.
ಶುಭಾಂಶು ಶುಕ್ಲಾ ಪೋಷಕರು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಿದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದ ಅಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿತ್ತು. 41 ವರ್ಷಗಳ ಹಿಂದೆ, ಭಾರತದ ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.