ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ. ಬಂಧಿತರನ್ನು ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಶ್ತ್ರ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಗೆ ಹತ್ತಿರವಾಗಿದ್ದ. ನಂತರ ಹಂತ ಹಂತವಾಗಿ ಮೊಬೈಲ್ ನಲ್ಲಿ ಚಾಟ್ ಮಾಡುವ ಮೂಲಕ ಸಲುಗೆ ಬೆಳೆಸಿಕೊಂಡಿದ್ದ. ಆಕೆ ಬೆಂಗಳೂರಿಗೆ ಬಂದ ನಂತರವೂ ಸಂಪರ್ಕವನ್ನು ಬಿಟ್ಟಿರಲಿಲ್ಲ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ.
ನರೇಂದ್ರನ ನಂತರ ಮತ್ತೊಬ್ಬ ಉಪನ್ಯಾಸಕ ಸಂದೀಪ್ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ಸಂದರ್ಭದಲ್ಲಿ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಆಗ ಆತ ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವಿಡಿಯೋ ನನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ತೋರಿಸುವೆ ಎಂದು ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ.
ವಿದ್ಯಾರ್ಥಿನಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ ಕೊಠಡಿ ಅನೂಪ್ ಎಂಬಾತನಿಗೆ ಸೇರಿತ್ತು. ಆತನೂ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ ನೀನು ನನ್ನ ರೂಮ್ ಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ.
ನಂತರ ಸಮಸ್ಯೆ ಹೆಚ್ಚಾದಾಗ ಈ ಕೃತ್ಯ ಕುರಿತು ಪೋಈಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡಿದ ನಂತರ ದೂರು ನೀಡಲಾಗಿದೆ.
ಮೂವರು ಆರೋಪಿಗಳನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಉಪನ್ಯಾಸಕರು ಈ ಹಿಂದೆಯೂ ಕೆಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.