ನವದೆಹಲಿ: ಒಡಿಶಾದ ಕಾಲೇಜ್ ವೊಂದರ ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರೊಬ್ಬರ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿದು ಮಾತನಾಡಬೇಕು ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮೌನವಾಗಿ ಕುಳಿತಿದ್ದಾರೆ. ಆದರೆ ದೇಶದ ಹೆಣ್ಣುಮಕ್ಕಳು ಅಸುನೀಗುತ್ತಿದ್ದಾರೆ. ದೇಶದ ಜನತೆ ಪ್ರಧಾನಿಯವರ ಮೌನವನ್ನು ಬಯಸುತ್ತಿಲ್ಲ, ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಒಡಿಶಾದಲ್ಲಿ ವಿದ್ಯಾರ್ಥಿನಿ ಸಾವಿಗೆ ಬಿಜೆಪಿ ವ್ಯವಸ್ಥೆಯೇ ನೇರ ಕಾರಣ. ಆ ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದಳು. ಆದರೆ, ಆಕೆಗೆ ನ್ಯಾಯ ಒದಗಿಸುವ ಬದಲು ಪದೇ ಪದೇ ಬೆದರಿಕೆ, ಕಿರುಕುಳ ಮತ್ತು ಅವಮಾನ ಮಾಡಲಾಗಿದೆ ಎಂದು ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯನ್ನು ರಕ್ಷಿಸಬೇಕಾದವರೇ ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಿಜೆಪಿ ಮುಖಂಡರು ಈ ಬಾರಿಯೂ ಆರೋಪಿಗಳನ್ನು ರಕ್ಷಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಇದು ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ ಎಂದು ಅವರು ಆರೋಪಿಸಿದ್ದಾರೆ.
ಮೋದಿ ಅವರೇ ಒಡಿಶಾ ಅಥವಾ ಮಣಿಪುರ ಯಾವುದೇ ರಾಜ್ಯವಾಗಿರಲಿ, ಹೆಣ್ಣುಮಕ್ಕಳು ಸಾಯುತ್ತಿದ್ದಾರೆ. ಆದರೆ, ನೀವು ಮೌನವಾಗಿ ಕುಳಿತಿದ್ದೀರಿ. ದೇಶದ ಜನತೆ ನಿಮ್ಮ ಮೌನವನ್ನು ಬಯಸುವುದಿಲ್ಲ. ಬದಲಾಗಿ ಉತ್ತರಗಳನ್ನು ಬಯಸುತ್ತಿದ್ದಾರೆ. ಹೆಣ್ಣು ಮಕ್ಕಳು ಭದ್ರತೆ ಮತ್ತು ನ್ಯಾಯ ಬಯಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇ.95ರಷ್ಟು ಸುಟ್ಟ ಗಾಯಗಳಿಂದ ಮೂರು ದಿನ ಜೀವನ್ಮರಣ ಹೋರಾಟ ನಡೆಸಿದ ವಿದ್ಯಾರ್ಥಿನಿ ಭುವನೇಶ್ವರದ ಏಮ್ಸ್ ನಲ್ಲಿ ಅಸು ನೀಗಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೆಸರ್ ವಿರುದ್ಧ ಪ್ರಾಂಶುಪಾಲರು ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಮನನೊಂದ ವಿದ್ಯಾರ್ಥಿನಿ ಶನಿವಾರ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದರು.
ಭುವನೇಶ್ವರದ ಏಮ್ಸ್ ನ 5ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಷ್ಟ್ರಪತಿ ದೌಪದಿ ಮುರ್ಮು ಅವರು ನಿನ್ನೆ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ್ದರು.
ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್ಗೆ ದಾಖಲಿಸಲಾಗಿತ್ತು.
ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಪ್ರತಿಯೊಬ್ಬ ತಪ್ಪಿತಸ್ಥನನ್ನು ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ರೂ.20 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಸರ್ಕಾರದ ಎಲ್ಲಾ ಪ್ರಯತ್ನಗಳು ಮತ್ತು ತಜ್ಞ ವೈದ್ಯಕೀಯ ತಂಡದ ಅವಿಶ್ರಾಂತ ಪ್ರಯತ್ನಗಳ ಹೊರತಾಗಿಯೂ ಸಂತ್ರಸ್ತೆಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಬೇಕೆಂದು ಭಗವಾನ್ ಜಗನ್ನಾಥನನ್ನು ಬೇಡಿಕೊಳ್ಳುತ್ತೇನೆ ಎಂದು ಎಕ್ಸ್ ಪೋಸ್ಟ್ನಲ್ಲಿ ಮಾಝಿ ತಿಳಿಸಿದ್ದಾರೆ.