ಹುಬ್ಬಳ್ಳಿ: ಕಳೆದ 11 ವರ್ಷಗಳಿಂದ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ತಾನು ನಡೆಸಿದ ಭ್ರಷ್ಟಾಚಾರ ಹಾಗೂ ಹಾಗೂ ದುರಾಡಳಿತ ದೇಶದ ಜನತೆಗೆ ತಿಳಿಯಬಾರದು ಎಂದು, ಸ್ಥಳೀಯ ಸಮಸ್ಯೆಗಳನ್ನೇ ದೊಡ್ಡದಾಗಿ ಬಿಂಬಿಸುವ ಯತ್ನ ಮಾಡುತ್ತಿದೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಖುರ್ಚಿಗೆ ಜಗಳವಾಡುತ್ತಿದ್ದಾರೆ ಎನ್ನುವ ವಿಷಯ ಅವರಿಗೆ ಸಂಬಂಧ ಪಟ್ಟಿಲ್ಲ. ನಾವು ನಮ್ಮ ಪಕ್ಷದೊಳಗೆ ಏನು ಬೇಕಾದರೂ ಮಾಡಿಕೊಳ್ಳುತ್ತೇವೆ. ಆಡಳಿತದಲ್ಲಿ ಎಲ್ಲಿಯಾದರೂ ತಪ್ಪಾಗಿದ್ದರೆ ಮಾತ್ರ ಅವರು ಪ್ರಶ್ನಿಸಬಹುದು ಎಂದರು.
ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದಾಗ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ತಾರು ಬಾರಿ ಹೇಳುತ್ತಾ ಭಾರತಕ್ಕೆ ಅವಮಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 90 ದೇಶಗಳಿಗೆ ಪ್ರವಾಸ ಮಾಡಿದ್ದರೂ 83 ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಗುಜರಾತಿನಲ್ಲಿ ಎರಡು ಕೋಟಿ ಮಕ್ಕಳು ಶಾಲೆಗೆ ಹೋಗದೆ ಹೊರಗುಳಿದಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ಮಾಡಿದರೆ ಕೂಲಿ ಸಿಗುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ 800ಕ್ಕೂ ಹೆಚ್ಚು ಮಹಿಳೆಯರು ಗರ್ಭಕೋಶ ತೆಗೆಸಿಕೊಂಡಿದ್ದಾರೆ. ಇಂತಹ ಗಂಭೀರ ವಿಷಯಗಳನ್ನು ಮುನ್ನೆಲೆಗೆ ತಂದರೆ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ ಕುರಿತು ಮಾತನಾಡುತ್ತಾರೆ ಎಂದು ಟೀಖಿಸಿದರು.
ಮುನಿರಾಬಾದ್ ಬಂದರಿನಲ್ಲಿ ದೊರೆತ ಮಾದಕ ವಸ್ತುಗಳು ಪಹಲ್ಗಾಮ್ ದಾಳಿ ನಡೆಸಿದ ಉಗ್ರರ ಚಟುವಟಿಕೆಯಲ್ಲಿ ಬಳಕೆಯಾಗಿದೆ. ರೂ.1.14 ಸಾವಿರ ಕೋಟಿ ಮೌಲ್ಯದ ನಕಲಿ ನೋಟುಗಳು ಹಾಗೂ ಹಿಂಪಡೆದಿರುವ ರೂ.2,000 ಮುಖಬೆಲೆಯ ನೋಟಗಳು ಈಗಲೂ ದೇಶಾದ್ಯಂತ ಚಲಾವಣೆಯಾಗುತ್ತಿವೆ ಎಂದು ಆರ್ ಬಿ ಐ ಹೇಳಿದೆ. ಇಂತಹ ಲೋಪಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಕಾಂಗ್ರೆಸ್ ಪ್ರಶ್ನಿಸಬಾರದೆ? ಬಿಜೆಪಿಯವರು ಮಹಾತ್ಮ ಗಾಂಧೀಜಿ ಅವರನ್ನು ಲೇವಡಿ ಮಾಡುವುದು ಸರಿಯೇ ಎಂದು ಲಾಡ್ ಪ್ರಶ್ನಿಸಿದರು.