Monday, July 14, 2025

ನಾಳೆಯಿಂದ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನ ರಾಷ್ಟ್ರ ಮಟ್ಟದ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆ

Most read

ಬೆಂಗಳೂರು: ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು, ಕಾರ್ಯತಂತ್ರವನ್ನು ರೂಪಿಸಲು ರಚಿಸಲಾದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಲಹಾ ಮಂಡಳಿ ರಚಿಸಲಾಗಿದೆ. ಈ ಸಮಿತಿಯ ಮೊದಲ ಸಭೆ  ಬೆಂಗಳೂರಿನಲ್ಲಿ  ನಾಳೆ ಮತ್ತು ನಾಡಿದ್ದು ನಡೆಯಲಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ರಾಜ್ಯಗಳ ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜತೆಗೆ ವಿವಿಧ ರಾಜ್ಯಗಳ ಹಾಲಿ ಮತ್ತು ಮಾಜಿ ಸಚಿವರು, ಸಂಸದರು ಪಾಲ್ಗೊಳ್ಳಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಾಳೆ ಸಂಜೆ 5 ಗಂಟೆಗೆ ಹಾಗೂ ನಾಡಿದ್ದು, ಬುಧವಾರ ಹೋಟೆಲ್ ಶಾಂಗ್ರಿಲಾದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ನಡೆಯಲಿದೆ.

ಈ ಸಮಿತಿಯಲ್ಲಿ  ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ  ಅವರಿಗೂ ಸ್ಥಾನ ನೀಡಲಾಗಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಈ ಸಭೆಯ ಆಹ್ವಾನ ನೀಡಲಾಗಿದೆ. ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮುಂದಿನ ಕಾರ್ಯಯೋಜನೆ, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಈ ಸಲಹಾ ಮಂಡಳಿಯು ಸಲಹೆಗಳನ್ನು ನೀಡಲಿದೆ.  ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಎಐಸಿಸಿ ಈ ಮಂಡಳಿ ರಚಿಸಿದೆ ಎನ್ನಲಾಗುತ್ತಿದೆ.

ಮಂಡಳಿಯಲ್ಲಿ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ವಿ ನಾರಾಯಣಸ್ವಾಮಿ, ಸಚಿನ್ ಪೈಲಟ್, ಗುರುದೀಪ್ ಸಿಂಗ್ ಸಪ್ಪಲ್, ಅರುಣ್ ಯಾದವ್, ವಿಜಯ್ ನಾಮದೇವರಾವ್ ವಡೆತ್ತಿವಾರ್, ವಿ ಹನುಮಂತ ರಾವ್, ಅಮಿತ್ ಚಾವ್ಡಾ, ಮಹೇಶ್ ಕುಮಾರ್ ಗೌಡ್, ಪೊನ್ನಂ ಪ್ರಭಾಕರ್, ಎಸ್ ಜೋತಿಮಣಿ, ಶ್ರೀಕಾಂತ್ ಜೆನ, ಕಮಲೇಶ್ವರ್ ಪಟೇಲ್, ಅಜಯ್ ಕುಮಾರ್ ಲುಲ್ಲು, ಸುಭಾಷಿಣಿ ಯಾದವ್, ಅದೂರ್ ಪ್ರಕಾಶ್ ಧಾನೇಂದ್ರ ಸಾಹು, ಹೀನಾ ಕಾವ್ರೆ, ಡಾ.ಅನಿಲ್ ಜೈಹಿಂದ್ ಇದ್ದಾರೆ. ಸಲಹಾ ಮಂಡಳಿಯ ಸಂಚಾಲಕರಾಗಿ ಡಾ ಅನಿಲ್ ಜೈಹಿಂದ್ ಮತ್ತು ಕಾರ್ಯದರ್ಶಿಯಾಗಿ ಜಿತೇಂದರ್ ಬಘೇಲ್ ಅವರನ್ನು ನೇಮಕ ಮಾಡಲಾಗಿದೆ.

ಸಚಿವರಾದ ಮಧು ಬಂಗಾರಪ್ಪ, ಸಂತೋಷ್‌ ಲಾಡ್‌, ಎನ್‌ ಎಸ್‌ ಬೋಸರಾಜು, ಮಂಕಾಳ್‌ ವೈದ್ಯ ಮತ್ತು ಸುರೇಶ್‌ ಭೈರತಿ ವಿಶೇಛ ಆಹ್ವಾನಿತರಾಗಿರುತ್ತಾರೆ.

More articles

Latest article