ಮೈಸೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಕೆಲವು ಗೊಂದಲುಗಳು ಇದ್ದ್ದು ನಿಜ. ಅವುಗಳನ್ನು ಹೈಕಮಾಂಡ್ ಪರಿಹರಿಸಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮಗಳ ಎದುರು ಮಾತನಾಡಬಾರದೆಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ. ಅದನ್ನು ಪಾಲಿಸುತ್ತೇನೆ ಎಂದರು.
ಸಿಎಂ ಬದಲಾವಣೆ ಕುರಿತು ಕೆಲವು ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳಿರಬಹುದು. ಆ ಹೇಳಿಕೆಗಳನ್ನು ಕುರಿತೂ ಸಭೆಯಲ್ಲಿ ಚರ್ಚೆಯಾಗಿದೆ. ಯಾವ ಶಾಸಕರ ಬೆಂಬಲ ಯಾರಿಗೆ ಇದೆ ಎಂಬ ಪ್ರಶ್ನೆ ಈಗೇಕೆ ಹುಟ್ಟಿಕೊಂಡಿದೆ ಎಂದು ಗೊತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತಿನ ರೀತಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದಿದ್ದಾರೆ. ರಾಜಕಾರಣದಲ್ಲಿ ಎಲ್ಲರಿಗೂ ಉನ್ನತ ಹುದ್ದೆಯ ಆಸೆ ಇರುತ್ತದೆ. ಆದರೆ ಯಾರಿಗೆ ಯಾವ ಹುದ್ದೆ ಕೊಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.
ಮೂರು ತಿಂಗಳಿಗೊಮ್ಮೆ ‘ಗೃಹಲಕ್ಷ್ಮಿ’ ಹಣ ಕೊಡುತ್ತಿದ್ದೇವೆ. ಕೆಲವು ತಾಂತ್ರಿಕ ಕಾರಣಗಳಿಂದ ರೂ. 1.20 ಲಕ್ಷ ಮಹಿಳೆಯರಿಗೆ ಹಣ ಸಂದಾಯವಾಗಿಲಿಲ್ಲ. ಅದರಲ್ಲಿ ಈಗ 58 ಸಾವಿರ ಮಂದಿಯ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಉಳಿದವರ ಸಮಸ್ಯೆಯನ್ನೂ ಶೀಘ್ರದಲ್ಲೇ ಬಗೆಹರಿಸುತ್ತೇವೆ. ಈ ಯೋಜನೆ ಜಾರಿಯಾದಾಗಿನಿಂದ ಗೃಹಲಕ್ಷ್ಮಿ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಪ್ರತಿ ತಿಂಗಳೂ ನೀಡುವುದಕ್ಕೆ ಕೆಲವು ತೊಡಕುಗಳಿವೆ ಎಂದು ಉತ್ತರಿಸಿದರು.