ನಾ ಕೇಳ್ಗ್ ಬಿದ್ದಾಗ ಕೈ ಹಿಡಿದು ಮೇಲಿತ್ತಿದ್ದ ವ್ಯಕ್ತಿ ಹೆಣ್ಣೋ, ಗಂಡೋ, ಏನು ಗೊತ್ತಿರಲಿಲ್ಲ ಯಾಕ ಅಂದ್ರೆ ಅವರ ಮುಕಾನೆ ನಾನು ನೋಡಿರಲಿಲ್ಲ, ಅವರ ಹೆಂಡತಿ ಬಂದು ಬೈದಾಗಲೇ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿ ಕೈ ಹಿಡಿದು ಎತ್ತಿದ್ದು ಅಂತ ತಿಳೀತು. ಇನ್ನೂ ಕನ್ನಡ ಭಾಷೆ ಬಾರದವರು ನೀರು ಗುಳಿಗೆ ಕೊಟ್ಟರು. ಅಪರಿಚಿತ ವ್ಯಕ್ತಿಯೊಬ್ಬರು ಸುಮಾರು ಹತ್ತು ತಾಸು ಜರ್ನಿಗೆ ನನಗ ಸೀಟ್ ಬಿಟ್ಟು ಕೊಟ್ಟು ನಿಂತೆ ಪ್ರಯಾಣಿಸಿ ನನ್ನ ನೋವಿಗೆ ಸ್ಪಂದಿಸಿದರು. ಆಗ ಅನಿಸಿದ್ದು ಮಾನವೀಯತೆಗೆ ಯಾವ ಧರ್ಮದ, ಭಾಷೆಯ ಹಂಗಿಲ್ಲ ಎಂದು– ರೇಣುಕಾ ಹನ್ನುರ್, ಕಲಬುರಗಿ.
ಹೊಟ್ಟೆಪಾಡಿಗೆಂದೋ, ದುಡಿಯುವ ಮನಗಳಿಗೆ ಶ್ರಮಕ್ಕೆ ತಕ್ಕ ಪ್ರತಿ ಫಲ ಸಿಗುತ್ತೆ ಎಂದೋ ಇದ್ದೂರಲ್ಲಿ ನೂರು ದುಡಿಯೋದೇ.. ದೊಡ್ಡ ಊರಲ್ಲಿ ಐನೂರು ದುಡಿದರೆ ಯಾವ, ಯಾವದಕ್ಕೂ ಮಾಡಿದ ಸಾಲ ತೀರಿಸಿ ನಾಲ್ಕು ದುಡ್ಡು ಹೆಚ್ಗೆ ಕೂಡಿಟ್ಟು, ಅದರಲ್ಲಿ ನಮ್ಮದು ಅನ್ನೋದ ಸೂರು ಮಾಡಕೋಬೇಕು.. ಹೀಗೆ ಇನ್ನೂ ಏನೇನೋ ಆಸಿ ಹೊತ್ತು ಹೆಣ್ಣು, ಗಂಡು ಎಂಬ ಬೇಧ, ಭಾವವಿಲ್ಲದೆ ಬರುವವರು ಸಿಲಿಕಾನ್ ಸಿಟಿಗೆ ಹಲವರು. ಅವರಗಳಲ್ಲಿ ನಾನೂ ಒಬ್ಬಾಕಿ..
ಕಲಿಕೆಗೆಂದು ಬಂದು ಕೆಲಸ ಅಂತ ಹುಡಕೊಂಡು ಈಗ ಸದ್ಯ ಬೆಂಗಳೂರು ನಿವಾಸಿ, ನಮ್ಮೂರಿಗೆ ಅತಿಥಿ ಆಗಿ ಮೂರು ವರ್ಷ ಆಯಿತು. ಆದ್ದರಿಂದ ಬೆಂಗಳೂರಿಗೆ ಕಲಿಕೆಗೆ, ಮತ್ತೆ ಕೆಲಸಕ್ಕೆ ಅಂತ ಬರುವ ಎಷ್ಟೋ ಜನರಿಗೆ ಇಲ್ಲಿನ ಊಟ, ಇಲ್ಲಿನ ವಾತಾವರಣ, ಮತ್ತೆ ಕೆಲಸಕ್ಕ ಎಲ್ಲ ಹೊಂದಕೊಂಡ ಇರೋದು ಒಂದ ಸವಾಲ್. ಇಲ್ಲಿಂದ ಹಬ್ಬ, ಹರಿದಿನ ಅಂತ ಊರಿಗೆ ಹೋಗಬೇಕಾದಾಗ ಮುಂಚಿತವಾಗಿ ರೈಲ್ವೆ ಟಿಕೆಟ್ ಬುಕ್ ಮಾಡಕ್ಕಾಗಲ್ಲ. ಒಂದ ವೇಳೆ ಮಾಡಿದ್ರು ಅಷ್ಟ್ ಆರಾಮಾಗಿ ಹೋಗುವ ಭಾಗ್ಯ ನಾವು ಮಾಡುವ ಕೆಲಸ ಒದಗಿಸಿ ಕೊಡುವುದಿಲ್ಲ. ಇನ್ನ KSRTC ಬಸ್ಸಿಗಿ ಹೋಗಾಮು, ಇಲ್ಲ ಬುಕ್ ಮಾಡಕೊಂಡ ಹೋಗಾಮು ಅಂದ್ರ ಆದು ಬರ್ತಿ ಹದನಾಲ್ಕ್, ಹದಿನೈದು ತಾಸ ಜರ್ನಿ. ಅದಕ್ಕ ಅಂತ ಸಿಟ್ ಸಿಗಲಿಲ್ಲ ಅಂದ್ರೆ ಇಲ್ಲ ಒದ್ದಾಡಿ ಕೊಂಡರೆ ಹೋಗಾಮು ಅಂತ ಜನರಲ್ ಭೋಗಿಗಿ ಹತ್ತಿ ನಮ್ಮ ಊರಿಗಿ ಹೋಗೋದು ಸಾಮಾನ್ಯ.
ಯಾವಾಗ್ಲೂ ಹೆಚ್ಚಾಗಿ ನಾನು ಕೆಎಸ್ಆರ್ಟಿಸಿ ಬಸ್ ಗೆ ಊರಿಗಿ ಹೋಗೋದು ಮತ್ ಬರೋದು. ಹದಿನೈದು ತಾಸ ಜರ್ನಿ ಆದರೆ ಆಗಲಿ ಅಂತ, ಆದರೆ ಈ ಸಲ ಸ್ವಲ್ಪ ಅರ್ಜೆಂಟ್ ಕೆಲಸ ಇದ್ದ ಕಾರಣ ಹಾಸನ್ ಸೋಲಾಪುರ್ ರೈಲ್ ಗೆ ಹೋದರೆ ಬೆಳಗ್ಗೆ ಬೇಗ ರೀಚ್ ಆಗಬಹುದು ಅಂತ ಆಫೀಸನಲ್ಲಿ ಕೆಲಸನು ಬೇಗ ಬೇಗ ಮುಗಿಸಿಕೊಂಡು ಇನ್ನೇನು ಮೆಟ್ರೋದಲ್ಲಿ ಹೋಗಿ ಟ್ರೈನಗೆ ಕಾಯ್ತಿದ್ದಂಗೆ ಆವತ್ತು ಟ್ರೈನ್ ಮಾಮೂಲಿ ಟೈಮಿಕ್ಕಿಂತ ತಡವಾಗಿ ಬಂತು. ಜನ ಅಂದ್ರ ಜನ ಹಂಗೋ, ಹಿಂಗೋ ಮಾಡಿ ಸೀಟ್ ಹಿಡಿದ್ರಾಯಿತು ಅಂತ ನನ್ನ ಜತಿಗಿನ ಸಹ ಪ್ರಯಾಣಿಕರಿಗೆ ನನಗು ಒಂದ ಸೀಟ್ ಹಿಡಿಯಿರಿ ಸಾಧ್ಯವಾದರೆ ಎಂದು ಕೇಳಕೊಂಡೆ. ಅವರು ಆದರೆ ನೋಡೋಣ ಅಂದ್ರು, ಹೀಗಾದಲ್ಲಿ ನಾ ರಾತ್ರಿಯಿಡಿ ನಿಲ್ಲಬೇಕಾದೇತು ಎಂದು ಕೊಂಡು ರೈಲು ನಿಲ್ಲುತ್ತಿದ್ದಂತೆ ಹತ್ತಲು ಅವಸರ ಮಾಡುವಾಗ ಎರಡು ಕಾಲು ಜಾರಿತು ಕೇಳ್ಗ ಬಿದ್ದೆ. ಅಷ್ಟ್ರಲ್ಲಿ ಒಂದಿಷ್ಟು ಜನ ನಾ ಬಿದ್ದಿದ್ದು ನೋಡಿ ಓಯ್, ಓಯ್, ಹೋ… ಅಂತ ಅನ್ನುವ ದ್ವನಿ ಕೇಳಿತು. ಕೆಲವರು ಬಿದ್ದ ನನ್ನನು ದಾಟಿ ಕೊಂಡೆ ಸೀಟ್ ಹಿಡಿಯಲು ಹವಣಿಸಿ ಓಡಿದರು, ಅದರಲ್ಲಿ ಯಾರೋ ಒಬ್ರು ನನ್ನ ಕೈ ಹಿಡಿದು ಮೇಲೆಬ್ಬಿಸಿದರು. ಆಡಲು ಹೋಗಿ ಬಿದ್ದ ಮಗುವಿನ ಹಾಗೆ ಸಾವರಿಸಿಕೊಂಡು ಎದ್ದು ಹೋದಂತೆ ನಾನು ರೈಲಿನೊಳಗಡೆ ಹೋಗಿ ಮೇಲಿನ ಸೀಟಿನಲ್ಲಿರುವ ವ್ಯಕ್ತಿಗಿ ನನಗು ಕೂಡಲಿಕೆ ಜಾಗ ಕೊಡಿ ಎಂದು ರಿಕ್ವೆಸ್ಟ್ ಮಾಡಿಕೊಂಡು ಹತ್ತಿ ಕುಳಿತೆ.
ಸ್ವಲ್ಪ ಹೊತ್ತಿಗೆ ಒಬ್ಬ ಮುಸ್ಲಿಂ ಆಂಟಿ ಒಳಗಡೆ ಬಂದು ಎ.. ಏನವ್ವ ಎಷ್ಟು ಹುಚ್ಚಿ ಇದ್ದಿ, ಏರೋರು ಏರಲಾಕ್ ಯಾಕ್ ಅಷ್ಟ್ ಅವಸರ ಮಾಡದಿ? ಭಾಳ ಅಂದ್ರೆ ಸೀಟ್ ಸಿಗದೇ ರಾತ್ರಿಯಿಡಿ ನಿಂತು ಹೋಗತಿದ್ದಿ. ನಿ ಬಿದ್ದಾಗ ಟ್ರೈನ್ ಹೋಗಲಾತಿತ್ತು ಅಂದ್ರ ನಿನ್ನ ಜೀವ ಬರ್ತಿತ್ತು ಏನ ತಂಗಿ. ನನ್ನ ಗಂಡ ಕೈ ಹಿಡಿದು ಮೇಲೆತ್ತಿದ ಚೊಲೋ ಆಯಿತು ಅಂದ್ರು. ಆಗ ಅರಿವು ಆಗಿದ್ದು ನನಗ ಕಾಲ ಜಾರಿ ಕೇಳ್ಗ್ ಬಿದ್ದಿದ್ದು, ಎರಡು ಕಡೆ ಮೊಳಕಾಲು ಪೆಟ್ಟಾಗಿ ಚರ್ಚಿ ಗಾಯ ಆಗಿದ್ದು, ಚೂಡಿದಾರಿನ ಪ್ಯಾಂಟ ಸಹ ಹರ್ದಿತ್ತು. ಅದನ್ನ ನೋಡಿಕೊಳ್ಳುತ್ತಿದ್ದಂಗೆ ಅನಿಸಿದ್ದು ಊರಿಗೆ ಹೋಗಾಕ್ ಅರ್ಜೆಂಟ್ ಅರ್ಜೆಂಟ್ ಮಾಡಿ ಮ್ಯಾಲೇನು ಅರ್ಜೆಂಟ್ ಆಗೇ ಟಿಕೆಟ್ ತಗೊಂಡ ಹೋಗತಿದ್ದ ಮತ್ ನಾಳಿ ಮುಂಜಾನೆ ಅನ್ನೋದಾರಾಗೆ ರಿಪ್ ಅಂತ ಎಲ್ಲರ ಸ್ಟೇಟಸ್ ನ್ಯಾಗ್ ಇರ್ತಿದ್ದೆ ಅಂತ ಎಲ್ಲಾ ಒಂದೊಂದಾಗಿ ನೆನಪಾಗಿ, ಮತ್ತೆ ಕಾಲು ನೋವು ಜಾಸ್ತಿಯಾಗಿ ಅಳೋಕ ಶುರುಮಾಡಿದೆ. ನನ್ನ ಅಳುವನ್ನು ಸುಮಾರು ಅರ್ಧ ತಾಸು ನೋಡಿದ ಕನ್ನಡ ಭಾಷೆ ಗೊತ್ತಿರದ ಸಹ ಪ್ರಯಾಣಿಕರು ಅವರಲ್ಲಿ ಇರುವ ಪೈನ್ ಕಿಲ್ಲರ್ ಟ್ಯಾಬ್ಲೆಟ್, ನೀರು ಕೊಟ್ರು, ಇನ್ನೊಬ್ಬರು ಮಲಮ್ ಹಚ್ಚು ಅಂತ ಕೊಟ್ಟರು. ಮೊದಲೇ ಸೀಟ್ ಬಿಟ್ಟ ಕೊಟ್ಟಿದ್ದ ವ್ಯಕ್ತಿ ಅಳತಿದಾರ ಕೂತಕೊಳ್ಳಕ್ ಆಗತಿಲ್ಲೇನೋ ಕಾಲು ನೋವಿನಿಂದ ಅಂತ ಮಲ್ಕೊಳ್ಳಲ್ಲಿ ಅಂತ ಪೂರ್ತಿ ಸಿಟ್ ಬಿಟ್ಟು ಕೇಳ್ಗ್ ಇಳಿದು ನಿಂತ್ರು.
ನಾ ಕೇಳ್ಗ್ ಬಿದ್ದಾಗ ಕೈ ಹಿಡಿದು ಮೇಲಿತ್ತಿದ್ದ ವ್ಯಕ್ತಿಯ ಹೆಣ್ಣೋ, ಗಂಡೋ, ಏನು ಗೊತ್ತಿರಲಿಲ್ಲ ಯಾಕ ಅಂದ್ರೆ ಅವರ ಮುಕಾನೆ ನಾನು ನೋಡಿರಲಿಲ್ಲ, ಅವರ ಹೆಂಡತಿ ಬಂದು ಬೈದಾಗಲೇ ಮುಸ್ಲಿಂ ಸಮುದಾಯದ ಒಬ್ಬ ವ್ಯಕ್ತಿ ಕೈ ಹಿಡಿದು ಎತ್ತಿದ್ದು ಅಂತ ತಿಳೀತು. ಇನ್ನೂ ಕನ್ನಡ ಭಾಷೆ ಬಾರದವರು ನೀರು ಗುಳಿಗೆ ಕೊಟ್ಟರು. ಅಪರಿಚಿತ ವ್ಯಕ್ತಿಯೊಬ್ಬರು ಸುಮಾರು ಹತ್ತು ತಾಸು ಜರ್ನಿಗೆ ನನಗ ಸೀಟ್ ಬಿಟ್ಟು ಕೊಟ್ಟು ನಿಂತೆ ಪ್ರಯಾಣಿಸಿ ನನ್ನ ನೋವಿಗೆ ಸ್ಪಂದಿಸಿದರು. ಆಗ ಅನಿಸಿದ್ದು ಮಾನವೀಯತೆಗೆ ಯಾವ ಧರ್ಮದ, ಭಾಷೆಯ ಹಂಗಿಲ್ಲ ಎಂದು.
ರೇಣುಕಾ ಹನ್ನುರ್, ಕಲಬುರಗಿ
ಯುವ ಲೇಖಕಿ
ಇದನ್ನೂ ಓದಿ- ಬಹುತ್ವ ಭಾರತ ಬಲಿಷ್ಠ ಭಾರತ- ಆಯ್ಕೆ ನಮ್ಮ ಮುಂದಿದೆ