ಅಧಿಕಾರ ಹಂಚಿಕೆ ಇಲ್ಲ, 5 ವರ್ಷ ನಾನೇ ಮುಖ್ಯಮಂತ್ರಿ; ಸಿದ್ದರಾಮಯ್ಯ ಪುನರುಚ್ಚಾರ

Most read

ನವದೆಹಲಿ: ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನವದೆಹಲಿಯಲ್ಲಿ ಮತ್ತೆ  ಪುನರುಚ್ಚರಿಸಿದ್ದಾರೆ.

ಇಲ್ಲಿ ಮಾತನಾಡಿದ ಅವರು 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ. ಈ ವಿಚಾರವನ್ನು ನಾನು ಈಗಾಗಲೇ ಸ್ಪಷ್ಟಪಡಿಸಿದ್ದು ಜುಲೈ 2 ರಂದೇ ಈ ಹೇಳಿಕೆಯನ್ನು ನೀಡಿದ್ದೇನೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೂ ಇದನ್ನೇ ಹೇಳಿದ್ದಾರೆ ಎಂದರು.

ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆ ಎಂದು ಅಧಿಕಾರ ಹಂಚಿಕೆಯಾಗಿಲ್ಲ. ನಮ್ಮದು ಹೈಕಮಾಂಡ್‌ ಅಧಾರಿತ ಪಕ್ಷ. 2023ರ ಸಭೆಯಲ್ಲಿ ಎರಡೂವರೆ ವರ್ಷಗಳ ಅಧಿಕಾರಿ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅನುಸರಿಸಬೇಕೆಂದು ಹೈಕಮಾಂಡ್‌ ಹೇಳಿತ್ತು. ಅವರು ಏನೇ ಹೇಳಿದರೂ, ನಾವು ಅದನ್ನು ಅನುಸರಿಸಬೇಕು. ನಾನೂ ಅನುಸರಿಸುತ್ತೇನೆ, ಮತ್ತು ಡಿಕೆ ಶಿವಕುಮಾರ್ ಕೂಡ ಅನುಸರಿಸುತ್ತಾರೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರಲ್ಲ ಎಂದರು.

ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಕ್ರಾಂತಿ ಇಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಬೇಕು. ರಾಹುಲ್ ಗಾಂಧಿ ಭೇಟಿಯಾಗಲ್ಲ. ಸಂಜೆ ಸುರ್ಜೇವಾಲಾ ಭೇಟಿ ಮಾಡುತ್ತೇನೆ.  ಗಾಳಿ ಸುದ್ದಿಗೆ ಮಹತ್ವ ಕೊಡಬೇಕಿಲ್ಲ. ಶಾಸಕರು ವೈಯಕ್ತಿಕ ಅಭಿಪ್ರಾಯ ಹೇಳ್ತಾರೆ. ಶಾಸಕರ ವೈಯಕ್ತಿಕ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ. ರಾಹುಲ್ ಗಾಂಧಿ, ಖರ್ಗೆ, ವೇಣುಗೋಪಾಲ್ ಹೇಳಬೇಕು ಎಂದರು.

ನಾನೇ ಮುಂದುವರಿಯಬೇಕೆಂದು ಶಾಸಕರು ಹೇಳುತ್ತಿದ್ದಾರೆ. ನಾಯಕತ್ವ ಬದಲಾವಣೆ ಏಕೆ ಆಗಬೇಕು..? ನಾಯಕತ್ವ ಬದಲಾವಣೆ ಊಹಾಪೋಹ ಅಷ್ಟೇ. ಸೆಪ್ಟೆಂಬರ್ ನಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಹೇಳಿದರು.

More articles

Latest article