ಭಾವನಾ ಬೋಲ್ಡ್ ಹೆಜ್ಜೆ-ಸಾಧ್ಯವಾದರೆ ಮೆಚ್ಚೋಣ, ಇಲ್ಲವಾದರೆ ಸುಮ್ಮನಿರೋಣ

Most read



ಹೆಣ್ಣನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾದಷ್ಟೂ ಅವಳನ್ನು ಕಟ್ಟಿಹಾಕಲು, ಅಸಭ್ಯತನವನ್ನು ಪ್ರಯೋಗಿಸಲು ಹಿಂಜರಿಯದ ಪುರುಷ ಪ್ರಾಧಾನ್ಯ ತನ್ನ ಆಕ್ರಮಣ ಗುಣವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ಈಗ ಅಂತಹ ಆಕ್ರಮಣಕ್ಕೇ ಭಾವನಾ ಒಳಗಾಗಿರುವುದು. ಅದಕ್ಕಾಗಿ ಅವರೇನೂ ಹಿಂಜರಿದಂತಿಲ್ಲ. ತನಗೇನು ಬೇಕು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ – ಮಮತಾ ಅರಸೀಕೆರೆ, ಕವಿ.

ಭಾವನಾ ಪ್ರಬುದ್ಧ ಹೆಣ್ಣು ಮಗಳು. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ಗ್ಲಾಮರಸ್ ಜೊತೆಗೆ ಫ್ರೌಢ ಅಭಿನಯದೊಂದಿಗೂ ಕಂಡಿದ್ದರು. ತಮ್ಮ ಪ್ರತಿಭೆಗಾಗಿ ಪುರಸ್ಕಾರಗಳನ್ನೂ ಪಡೆದವರು. ತಮ್ಮ ಕ್ಷೇತ್ರದಲ್ಲಿನ ಕೆಟ್ಟ ಬೆಳವಣಿಗೆಗಳ ಬಗ್ಗೆಯೂ ನಿರ್ಭೀಡೆಯಿಂದ ಮಾತನಾಡಿ ನಿಷ್ಠೂರಕ್ಕೂ ಗುರಿಯಾದವರು. ಈಗ ಸದ್ಯಕ್ಕೆ ಸುದ್ದಿಯಾಗುತ್ತಿರುವುದು ತಮ್ಮ ವಿಶೇಷ ನಿಲುವಿನ ಕಾರಣಕ್ಕೆ. ಅಮ್ಮನಾಗುವ ಹಂಬಲ ಅವರನ್ನು ಕಾಡಿ ಆ ಬಗೆಯಲ್ಲಿ ಪ್ರಯತ್ನಿಸುತ್ತಿರುವುದಕ್ಕೆ.

ನಾನೊಮ್ಮೆ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರ ಪ್ರಬುದ್ಧ ಮಾತುಗಳನ್ನು ಕೇಳಿಸಿಕೊಂಡು ಮೆಚ್ಚುಗೆಯಾಗಿತ್ತು. ಚಲನಚಿತ್ರ ನಟ ನಟಿಯರ ಬಗ್ಗೆ ಅಷ್ಟೇನೂ ಆಸ್ಥೆ ಆಸಕ್ತಿ ತಳೆಯದ ನನಗೆ ಭಾವನಾ ವಿಶಿಷ್ಟವಾಗಿ ಕಂಡರು. ಕಾರ್ಯಕ್ರಮದ ಕುರಿತು ತಮ್ಮ ಮಾತುಗಳನ್ನಾಡಿದ ಅವರು ನಂತರ ಮಹಿಳೆ, ಮದುವೆ, ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಅವರ ಮಾತುಗಳು ಇಷ್ಟವಾಗಿದ್ದವು. ಕಾರ್ಯಕ್ರಮದ ಬಳಿಕ ಅವರೊಡನೆ ಕೆಲಹೊತ್ತು ವಿಚಾರಗಳನ್ನು ಹಂಚಿಕೊಂಡಿದ್ದೆ. ಸೆಲೆಬ್ರಿಟಿಗಳೆಂದರೆ ಬಿಗುಮಾನದವರು ಅಂದುಕೊಂಡಿದ್ದು ತಪ್ಪಾಗಿತ್ತು. ತಮ್ಮ ಬ್ಯುಸಿಯ ನಡುವೆಯೂ ಸ್ವಲ್ಪ ಹೊತ್ತು ನಿಂತು ಅದೆಷ್ಟು ಸರಳವಾಗಿ ಸಂಭಾಷಿಸಿದರು ಅಂದರೆ ನಾನು ಭಾವನಾ ಜೊತೆ ನಿಂತಿದ್ದೇನೆ ಅನ್ನುವುದನ್ನು ಮರೆಯುವಷ್ಟು. ಆಗ ಕೆಲವು ವಿಷಯಗಳಲ್ಲಿ ನಮ್ಮ ಸಮಾನ ನಿಲುವುಗಳು ಪ್ರಕಟವಾಗಿದ್ದವು.

ನಟಿ ಭಾವನಾ

ಈಗ ಪ್ರಸ್ತುತ ಭಾವನಾ ನೈಸರ್ಗಿಕವಾಗಿ ತಾಯಿಯಾಗಲು ಇರುವ ಮಾದರಿಯನ್ನು ಬಿಟ್ಟು ವಿಭಿನ್ನ ಮಾದರಿಯ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರನ್ನು ಬೆಂಬಲಿಸುವ, ಅವರು ತುಳಿದ ಹಾದಿಯನ್ನು ವಿರೋಧಿಸುವ ಎರಡೂ ಬಗೆಯ ವಾದವಿವಾದಗಳು ಶುರುವಾಗಿವೆ. ಅವರ ನೇರ ದಿಟ್ಟ ನಿರ್ಭೀತಿಯ ನಡೆಗಳು ಸಿದ್ಧಮಾದರಿಗಳ ಬೆಂಬಲಿಗರನ್ನು ಬೆಚ್ಚಿಸಿವೆ. ಟ್ರೋಲ್ ಶುರುವಾಗಿದೆ. ಕೆಲವು ಮಹಿಳೆಯರೂ ಕೂಡ ತಮಗೇ ಅರಿವಿಲ್ಲದಂತೆ ಈ ಟ್ರೋಲಿನ ಭಾಗವಾಗಿದ್ದಾರೆ. ಅಲ್ಲಿನ ಅಸಭ್ಯ, ಅಸಹ್ಯ ಕಾಮೆಂಟುಗಳು ಸಭ್ಯ ಸಮಾಜದ ಮುಖವಾಡವನ್ನು ಕಳಚಿದೆ. ಸಾಮಾಜಿಕ ನಿರ್ಬಂಧಗಳನ್ನು ದಾಟಿದರೆ ಎಂತಹ ‘ಚಿಕಿತ್ಸೆ’! ದಕ್ಕಬಹುದು ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಹಾಗಂತ ಎಲ್ಲರೂ ಈ ನಡೆಯನ್ನು ವಿರೋಧಿಸಿಲ್ಲ. ಸಂಪ್ರದಾಯವಾದಿಗಳೂ ಸೇರಿ ಆಧುನಿಕರೆಲ್ಲ ಬೆಂಬಲಿಸಿಯೇ ಇದ್ದಾರೆ. ಭಾವನಾರ ಹೆಣ್ಣಿನ ಸಹಜ ಆಸೆಗಳನ್ನು ಗೌರವಿಸಿದ್ದಾರೆ.

ಭಾವನಾ ಅಮ್ಮನಾಗಲು ಸಹಜ ವಿಧಾನ ಹೊರತುಪಡಿಸಿ ಆಧುನಿಕ ಪದ್ಧತಿಯನ್ನು ಅವಲಂಬಿಸಿ ಅದು ಫಲ ನೀಡಿದ ಬಳಿಕ ವಿಚಾರವನ್ನು ತಿಳಿಸಲು ಸುದ್ದಿ ಮಾಧ್ಯಮದ ಮುಂದೆ ಬಂದಿದ್ದಾರೆ. ಐ.ವಿ.ಎಫ್. ಚಿಕಿತ್ಸೆಯ ಮೂಲಕ ಆರೇಳು ತಿಂಗಳ ಗರ್ಭಿಣಿಯಾಗಿರುವ ಫೋಟೊವನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಸುದ್ದಿ ತಿಳಿದ ವಿಷುವಲ್ ಮೀಡಿಯಾದವರೂ ಸಹ ಅವರನ್ನು ಸಂದರ್ಶನ ಮಾಡಿದ್ದಾರೆ. ಅಲ್ಲಿ ಭಾವನಾ ಬೋಲ್ಡ್ ಆಗಿ ಉತ್ತರಿಸಿರುವ ಪರಿ ಕೂಡ ಮೆಚ್ಚುಗೆ ಮೂಡಿಸುವಂತಿವೆ. ತಮ್ಮ ನಿಲುವು, ತಾವು ತೆಗೆದುಕೊಂಡ ನಿರ್ಣಯ, ಈ ನಿರ್ಧಾರದ ಆಗುಹೋಗುಗಳು ಎಲ್ಲದರ ಕುರಿತು ಅವರಿಗೆ ಸ್ಪಷ್ಟ ಅರಿವಿದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರಗಳೂ, ಸಹಾಯವೂ ಅವರಿಗೆ ದಕ್ಕಿದಂತಿದೆ. ಕೃತಕವಾಗಿ ತಾಯಿಯಾಗುವ ಪ್ರಕ್ರಿಯೆ ಸುಲಭವೇನಲ್ಲ. ಅದರಲ್ಲೂ ಬಹುಶಃ 45 ವರ್ಷ ದಾಟಿದಂತಿರುವ ಅವರ ದೇಹ ಆ ಸಂಕಷ್ಟಗಳನ್ನೆಲ್ಲಾ ತಡೆಯಬೇಕಾಗುತ್ತದೆ. 30 ವರ್ಷದ ನಂತರ ತಾಯಿಯಾಗುವ ಪ್ರಕ್ರಿಯೆ ತುಂಬಾ ಕಷ್ಟ ಹಾಗೂ ಅಪಾಯಕಾರಿಯಾದದ್ದು ಎಂಬುದಾಗಿ ವೈದ್ಯಕೀಯ ಪರಿಭಾಷೆ ಹೇಳುತ್ತದೆ. ಮಗುವೂ ಕೂಡ ಆರೋಗ್ಯಕರವಾಗಿ ಜನಿಸಲಾರದು ಅಂತಲೂ ಮಾತಿದೆ. ಹಾಗಾಗಿ ಭಾವನಾ ಈ ಸಮಯದಲ್ಲಿ ಬಹಳಷ್ಟು ರಿಸ್ಕ್ ತೆಗೆದುಕೊಂಡು ಮಗುವನ್ನು ತಮ್ಮಿಂದಲೇ ಪಡೆಯುವ ಅನಿಸಿಕೆಗೆ ಒಡ್ಡಿಕೊಂಡಿದ್ದಾರೆ.

ಭಾವನಾ

ಈ ನಿರ್ಣಯ ಅವರ ಸ್ವಂತ ಅನಿಸಿಕೆ. ಅವರ ವೈಯಕ್ತಿಕ ವಿಷಯ. ಅದರ ಆಗುಹೋಗುಗಳಿಗೆಲ್ಲ ಅವರೇ ಸ್ವತಃ ಜವಾಬ್ದಾರರು. ಏನೇ ತೊಂದರೆಯೊ, ಅನುಕೂಲವೊ ಎದುರಾದರೆ ಅವರೇ ಬಾಧ್ಯಸ್ಥರು. ಅವರ ನಿರ್ಧಾರದಿಂದ ಜಗತ್ತಿಗೇನೂ ನಷ್ಟವಿಲ್ಲ. ಅಷ್ಟಕ್ಕೂ ಈ ಪ್ರಕ್ರಿಯೆ ತುಂಬಾ ವೆಚ್ಚದಾಯಕವಾದದ್ದು. ಆದ್ದರಿಂದ ಎಲ್ಲಾ ವರ್ಗದವರಿಗೂ ಈ ಸೌಲಭ್ಯ ಕೈಗೆಟಕುವುದಿಲ್ಲ. ಐ ವಿ ಎಫ್ ಕ್ರಿಯೆಯೂ ಕೂಡ ಕೆಲವೊಮ್ಮೆ ಯಶಸ್ವಿಯೂ ಆಗಬಹುದು, ವಿಫಲತೆಯನ್ನೂ ಎದುರಿಸಬಹುದು. ಯಶಸ್ವಿಯಾದರೂ ನಂತರದ ಪರಿಣಾಮಗಳು ಅನೇಕ. ಹೀಗಾಗಿ ಈ ಎಲ್ಲಾ ವಿಧಿಗಳ ಎಲ್ಲಾ ಫಲಿತಾಂಶವನ್ನೂ ಸ್ವತಃ ಅವರೇ ಎದುರಿಸಬೇಕಾದದ್ದು. ಅವರ ತೀರಾ ಖಾಸಗಿ ವಿಷಯವದು. ಅವರಷ್ಟಕ್ಕೆ ಅವರನ್ನು ಬಿಡೋಣವಲ್ಲವಾ? ಅದು ಬಿಟ್ಟು ಅನಗತ್ಯವಾಗಿ ವಿವಾದ ಮಾಡುವ, ವಿರೋಧಿಸುವ ಅಗತ್ಯವೇನಿದೆಯೋ ಕಾಣದು.

ಸೋಷಿಯಲ್ ಮೀಡಿಯಾ ಹದಗೆಟ್ಟಂತೆ ಕಾಣಿಸುವುದು ಈ ರೀತಿಯ ಅಸಹ್ಯ ಮಾರ್ಗ ಹಿಡಿದಾಗ. ಯಾರದೇ ಖಾಸಗಿ ವಿಷಯಗಳನ್ನು ಅನಗತ್ಯ ಟ್ರೋಲ್ ಮಾಡುವುದೇಕೆಂದೇ ಅರ್ಥವಾಗುವುದಿಲ್ಲ. ಹೆಣ್ಣೂ ಗಂಡೂ ಸಮಾನವಾಗಿ ಈ ವಿಷಯದಲ್ಲಿ ಕೆಟ್ಟದಾಗಿ ಭಾಷೆ ಬಳಸಿ ದಾಳಿ ಮಾಡಲು ತೊಡಗುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಸ್ವಂತ ಆಲೋಚನೆ, ಸ್ವಂತಿಕೆ ಉಪಯೋಗಿಸದೆ ಜೊತೆ ಜೊತೆಯಾಗಿಯೇ ಕೆಟ್ಟ ಪ್ರತಿರೋಧ ತೋರಿಸತೊಡಗುತ್ತಾರೆ. ಅಲ್ಲಿ ಟ್ರೋಲ್ ಗೆ ಒಳಗಾಗುವವರು ತೀರಾ ದಿಗ್ಭ್ರಮೆಗೊಳಗಾಗುವಂತೆ ದಾಳಿಯಾಗುತ್ತದೆ. ಅವರನ್ನು ಬಗ್ಗುಬಡಿಯಲು ಏನು ಬೇಕೊ ಎಲ್ಲಾ ಅಸ್ತ್ರಗಳನ್ನು ಉಪಯೋಗಿಸಲಾಗುತ್ತದೆ. ಅವರ ಚಾರಿತ್ರ್ಯದ ಮೇಲೆ, ಅವರ ಕುಟುಂಬದ ಮೇಲೆ, ಅವರ ಹಿನ್ನೆಲೆ, ಇಲ್ಲೀವರೆಗಿನ ಅವರ ಕೆಲಸಗಳು ಎಲ್ಲವನ್ನೂ ಬಳಸಿ ಕೆಟ್ಟದಾಗಿ ಭಾಷೆ ಬಳಸಿ ಹಿಂಸಿಸುವಂತೆ ಆಕ್ರಮಣ ಮಾಡಲಾಗುತ್ತದೆ. ಇದು ತೀರಾ ಅಸಹ್ಯ ಹಾಗೂ ಅಸಹನೀಯ ವಿಷಯ.

ನಮಗೆ ತಲೆ ಕೆಡಿಸಿಕೊಳ್ಳಲು ಸಾಕಷ್ಟು ವಿಷಯಗಳಿವೆ. ಪ್ರತಿಭಟಿಸಲು ವಿಚಾರಗಳಿವೆ. ದಿನಕ್ಕೆ ಅದೆಷ್ಟೊ ಹೆಣ್ಣು ಮಕ್ಕಳ ಅತ್ಯಾಚಾರವಾಗುತ್ತದೆ. ಎಷ್ಟೋ ಮಂದಿ ಅಸಹಜವಾಗಿ ಸಾವನ್ನಪ್ಪುತ್ತಾರೆ. ಮಹಿಳೆಯರ ಮೇಲೆ ಅನಗತ್ಯವಾಗಿ ದೌರ್ಜನ್ಯಗಳಾಗುತ್ತಿರುತ್ತವೆ. ಎಳೆ ಮಕ್ಕಳು ಲೈಂಗಿಕವಾಗಿ ಬಳಕೆಯಾಗುತ್ತವೆ, ಬಾಲ ಕಾರ್ಮಿಕರಾಗಿ ಬಳಕೆಯಾಗುತ್ತಾರೆ, ಶೋಷಣೆ ಅದೆಷ್ಟೊ ವಿಧಗಳಲ್ಲಿ ಬಳಕೆಯಾಗುತ್ತಿದೆ. ಅಂತವನ್ನೆಲ್ಲ ಬಿಟ್ಟು ಈ ರೀತಿ ತಮಗೆ ಸಂಬಂಧಿಸಿದ್ದಲ್ಲದ ವಿಷಯಕ್ಕೆ ಸಮಯ ವಿನಿಯೋಗಿಸಿ ದಾಳಿ ಮಾಡುವುದು ವಿಕೃತಿಯ ಪರಮಾವಧಿ.

ಅದೆಷ್ಟು ಮಕ್ಕಳು ಕಸದ ತೊಟ್ಟಿಯೊಳಗೆ ಸಿಕ್ಕಿಲ್ಲ. ವಿವಾಹವಾಗದೆ ಮಹಿಳೆಯರು ಮಕ್ಕಳನ್ನು ಹೆತ್ತು ಬೀದಿಯೊಳಗೆ ಬಿಸಾಕಿಲ್ಲ. ಅದೆಷ್ಟು ಮಕ್ಕಳು ಬೇರೆ ಬೇರೆ ಕಾರಣಕ್ಕೆ ಅನಾಥರಾಗಿಲ್ಲ. ಅಷ್ಟಕ್ಕೂ ಮನೆಯಲ್ಲಿ ಮಕ್ಕಳು ಬೆಳೆಯುವುದು ತಾಯಿಯ ಮಡಿಲಲ್ಲಿಯೆ ಹೆಚ್ಚು. ತಂದೆ ಅನಿಸಿಕೊಂಡವರೂ ಸಹ ತಮ್ಮ ಮಕ್ಕಳ ಬಗ್ಗೆ ಕಾಳಜಿ ಮಾಡುತ್ತಾರೆ ನಿಜ. ಆದರೆ ಶೇಕಡಾವಾರು ಗಮನಿಸಿದರೆ ಜವಾಬ್ದಾರಿಯುತ ತಂದೆ ಅನಿಸಿಕೊಳ್ಳುವವರು ಕಡಿಮೆಯೆ. ಮಕ್ಕಳ ಎಲ್ಲಾ ಆಗುಹೋಗುಗಳು, ಸುಖದುಃಖಗಳು, ಏಳುಬೀಳುಗಳು ತಾಯಿಯ ಕೈಯಾರೆ ನಿಭಾಯಿಸಲ್ಪಡುವುದೇ ಜಾಸ್ತಿ. ಆರಂಭದಲ್ಲಿ ಹಾಲು ಕುಡಿಸುವುದರಿಂದ ಹಿಡಿದು, ತೊದಲಾಡಿದಾಗ, ನಡೆಯಲು ಕಲಿವಾಗ, ತುತ್ತು ತಿನ್ನಿಸುವಾಗ, ಹೊಸಿಲು ದಾಟುವಾಗ, ಬಾಲ್ಯದಲ್ಲಿ, ಯೌವನದಲ್ಲಿ, ಕೆಲವೊಮ್ಮೆ ಪ್ರೌಢರಾದಾಗಲೂ ಅಮ್ಮನ ಸೆರಗಿನ ಆಸರೆಯೇ ಬೇಕು. ಅಪ್ಪನ ಪ್ರಭಾವ ಇರುತ್ತದೆ ಕೂಡ. ಅದು ಕೆಲವೇ ಮನೆಗಳಲ್ಲಿ ಸಾಧ್ಯ. ತಮ್ಮ ಜವಾಬ್ದಾರಿ ಅರಿತ ಅಪ್ಪಂದಿರು ಮಕ್ಕಳ ಎಲ್ಲಾ ಬಗೆಯ ಬೆಳವಣಿಗೆಯಲ್ಲಿ ಪಾಲುದಾರರಾಗುವುದನ್ನು ತಳ್ಳಿ ಹಾಕಲಾಗದು. ಆದರೆ ಎಷ್ಟು ಮನೆಗಳಲ್ಲಿ ಈ ದೃಶ್ಯ ಕಾಣಸಿಗುತ್ತದೆ?

ತಮ್ಮ ಬಾಧ್ಯತೆ ಮರೆತ ಅಪ್ಪಂದಿರು ಬಹಳಷ್ಟು ಮನೆಗಳಲ್ಲಿ ಕಾಣಸಿಗುತ್ತಾರೆ. ಕುಡಿತದಿಂದ, ಚಟಗಳಿಂದ, ಬೇಜವಾಬ್ದಾರಿತನದಿಂದ ಸಂಸಾರವನ್ನು ಹೆಣ್ಣಿನ ತಲೆಗೆ ಕಟ್ಟಿ ಪಲಾಯನ ಮಾಡುವವರೆ ಹೆಚ್ಚು. ಹೆಣ್ಣು ಮನೆಯನ್ನು ಸಂರಕ್ಷಿಸುವಾಗ ಅಲ್ಲಿನ ಬಹಳಷ್ಟು ಆಗುಹೋಗುಗಳಿಗೆ ಅವಳೇ ಬಾಧ್ಯಸ್ಥಳೂ ಕೂಡ.

ಈ ಜೀವ ಜಗತ್ತಿನಲ್ಲಿ ಸಾವಿರಾರು ವರ್ಷಗಳಲ್ಲಿ ಅನೇಕ ಪ್ರಯೋಗಗಳು ನಡೆದಿವೆ. ಇದೇನು ಹೊಸದಲ್ಲ. ಪ್ರಯೋಗಗಳು ನಡೆಯುತ್ತಲೇ ಇರುತ್ತವೆ ಕೂಡ. ಅದರ ಸಾಧಕ ಬಾಧಕಗಳಿಗೆ ಅವರವರೇ ಹೊಣೆಗಾರರು. ಪ್ರಯೋಗಗಳು ಯಶಸ್ವಿಯಾದರೆ ಅದರ ಮುಂದುವರೆಯುವಿಕೆ ಸಾಧ್ಯವಾಗುತ್ತದೆ. ಪ್ರಕೃತಿ ತನಗೇನು ಬೇಕೊ ಅದನ್ನು ಆರಿಸಿಯೇ ಆರಿಸಿಕೊಳ್ಳುತ್ತೆ. ಆಧುನಿಕತೆಗೆ ತಕ್ಕಂತೆ ವಿಜ್ಞಾನದ ಅಂಶಗಳು ಮುಂಚೂಣಿಗೆ ಬರುತ್ತವೆ. ಸಾಮಾಜಿಕವಾಗಿಯೂ ಬದಲಾವಣೆ ಕಾಣುತ್ತದೆ. ಆಧುನಿಕವಾಗಿ ಬದಲಾಗುವ ಭೌತಿಕ ಸಾಮಗ್ರಿಗಳಿಗೆ ಹೊಂದಿಕೊಂಡಂತೆ, ಲೌಕಿಕವಾಗಿಯೂ ಹೊಂದಿಕೊಳ್ಳಬೇಕು. ಸ್ವಾಗತಿಸಬೇಕು. ಎಲ್ಲಕೂ ಮಿಗಿಲಾಗಿ ಮನಸ್ಸು ವಿಶಾಲವಿರಬೇಕು.

ಮತ್ತೊಮ್ಮೆ ಹೇಳಬೇಕೆಂದರೆ ಭಾವನಾರ ನಿಲುವು ಅವರ ಸ್ವಂತದ್ದು. ಖಾಸಗಿ ಹಾಗೂ ವೈಯಕ್ತಿಕ. ಕಾನೂನಾತ್ಮಕವಾಗಿಯೂ ಸೂಕ್ತವಾದದ್ದು. ಇದರಲ್ಲಿ ಯಾರೂ ತಲೆ ತೂರಿಸಬೇಕಾಗಿಲ್ಲ. ಸಾಧ್ಯವಾದರೆ ಅವರನ್ನು ಮೆಚ್ಚೋಣ. ಇಲ್ಲದಿದ್ದರೆ ನಮ್ಮಷ್ಟಕ್ಕೆ ನಾವು ಸುಮ್ಮನಿರೋಣ ಅಷ್ಟೆ.

ಮಮತಾ ಅರಸೀಕೆರೆ

ಕವಿಗಳು, ವಿಜ್ಞಾನ, ರಂಗಭೂಮಿ, ಸಾಹಿತ್ಯ, ಸಂಘಟನೆ ಇತ್ಯಾದಿಗಳಲ್ಲಿ ಆಸಕ್ತರು.

ಇದನ್ನೂ ಓದಿ- ವಿವಾಹವಾಗದೆ ತಾಯಿಯಾಗುತ್ತಿರುವ ಚಿತ್ರನಟಿ ಭಾವನಾ ರಾಮಣ್ಣ; ನನ್ನ ಜೀವನದಲ್ಲಿ ಹೊಸ ಅಧ್ಯಾಯ… ಭಾವನಾತ್ಮಕ ಬರಹ

More articles

Latest article