ನವದೆಹಲಿ: ವ್ಯಾಪಾರ, ವಹಿವಾಟು ವಿಷಯವನ್ನು ಪ್ರಸ್ತಾಪಿಸಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷವನ್ನು ಶಮನಗೊಳಿಸಲಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಒತ್ತಿ ಹೇಳಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಏಕೆ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಎಕ್ಸ್ ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ತಾನೇ ಅಂತ್ಯ ಹಾಡಿದ್ದಾಗಿ ಕಳೆದ 59 ದಿನಗಳಲ್ಲಿ 21 ಬಾರಿ ಟ್ರಂಪ್ ಹೇಳಿದ್ದಾರೆ. ಈ ಯುದ್ಧ ನ್ಯೂಕ್ಲಿಯರ್ ಹಂತಕ್ಕೆ ಹೋಗುವ ಸಂಭವವಿತ್ತು ಎಂದೂ ಉಲ್ಲೇಖಿಸಿದ್ದಾರೆ. ವ್ಯಾಪಾರ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತು ಎಂಬ ಟ್ರಂಪ್ ಹೇಳಿಕೆಯನ್ನು ಅವರು ಪುನರುಚ್ಛರಿಸಿದ್ದಾರೆ.
ಟ್ರಂಪ್ ಹೇಳಿಕೆಯ ತಾತ್ಪರ್ಯ ಏನೆಂದರೆ ಯುದ್ಧವನ್ನು ಕೂಡಲೇ ನಿಲ್ಲಿಸಿ, ಇಲ್ಲವೇ ಅಮೆರಿಕದ ಮಾರುಕಟ್ಟೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕ ಶೀಘ್ರದಲ್ಲೇ ವ್ಯಾಪಾರ ಒಪ್ಪಂದವನ್ನು ಪ್ರಕಟಿಸಲಾಗುವುದು ಎಂದು ಘೋಷಿಸಿದ್ದಂತೆಯೇ ಈ ಹೇಳಿಕೆಯನ್ನು ಟ್ರಂಪ್ ನೀಡಿದ್ದಾರೆ. ಬಿಜೆಪಿಯ ಟ್ರಂಪ್ ಕಾರ್ಡ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯುವುದು ಯಾವಾಗ? ಎಂದು ಜೈರಅಮ್ ರಮೇಶ್ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಟ್ರಂಪ್ ಅವರು, ನಾವು ಹಲವು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅದರಲ್ಲಿ ಭಾರತ ಹಾಗಾ ಪಾಕಿಸ್ತಾನ ನಡುವಣ ಬಹಳ ದೊಡ್ಡ ಯುದ್ಧವನ್ನು ಶಮನಗೊಳಿಸಿದ್ದೇವೆ. ವ್ಯಾಪಾರದ ವಿಷಯವನ್ನು ಪ್ರಸ್ತಾಪಿಸಿ ನಾವು ಅದನ್ನು ನಿಲ್ಲಿಸಿದ್ದೇವೆ ಎಂದು ಹೇಳಿದ್ದರು.