ʼಹಿಂದಿ ಮತ್ತು ಹಿಂದು’ ಎಂದು ಭಾಷಣ ಮಾಡುವ ಬಿಜೆಪಿ ನಾಯಕರಿಗೆ ದೇಶದ ಜನತೆ ಉತ್ತರ ನೀಡಬೇಕು :ಅಖಿಲೇಶ್ ಯಾದವ್

Most read

ಲಖನೌ:  ಸಮಾಜವಾದಿ ಪಕ್ಷವು ಸದಾ ಭಾರತೀಯ ಭಾಷೆಗಳ ಪರವಾಗಿದ್ದು, ಎಲ್ಲಾ ಭಾರತೀಯ ಭಾಷೆಗಳನ್ನೂ ಗೌರವಿಸಬೇಕು ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಮರಾಠಿ ಅಸ್ಮಿತೆಯನ್ನು ಕಾಪಾಡಲು 2 ದಶಕಗಳ ನಂತರ ರಾಜ್‌ ಮತ್ತು ಉದ್ಧವ್ ಠಾಕ್ರೆ ಒಂದಾಗಿರುವುದು ಮತ್ತು ವಿವಿಧ ರಾಜ್ಯಗಳಲ್ಲಿ ಭಾಷಾ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದೊಂದಿಗೆ ಮರಾಠಾ ಜನರ ಸಂಬಂಧ ಹಿಂದಿನಿಂದಲೂ ಇದೆ. ಇದಕ್ಕೊಂದು ಭವ್ಯ ಇತಿಹಾಸವೂ ಇದೆ. ಸಮಾಜವಾದಿಗಳು ಸದಾ ಭಾರತೀಯ ಭಾಷೆಗಳ ಪರವಾಗಿದ್ದವರು. ಎಲ್ಲಾ ಭಾಷೆಗಳನ್ನು ನಾವು ಗೌರವಿಸಬೇಕು. ಎಲ್ಲಾ ಭಾಷೆಯ ಜನರಂತೆ ಉತ್ತರ ಪ್ರದೇಶದವರು ಸದಾ ಹಿಂದಿಯ ಪರವಾಗಿದ್ದಾರೆ. ನೌಕರಿ ಕೈತಪ್ಪಿದ್ದು ಸೇರಿದಂತೆ ಹಿಂದೆ ಭಾಷೆಯಿಂದಲೇ ಹಲವು ಸಂಗತಿಗಳು ನಡೆದಿವೆ. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಭಾಷೆಯನ್ನೇ ಇಂದು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿರುವುದರಿಂದ ಭಾಷಾ ವಿವಾದಗಳು ಉದ್ಭವಿಸುತ್ತಿವೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಎಲ್ಲಾ ಭಾಷೆಗಳಿಗೂ ಅನುದಾನ ಮೀಸಲಿಡಬೇಕು. ಎಲ್ಲ ಭಾಷೆಗಳಿಗೂ ಗರಿಷ್ಠ ಅನುದಾನ ನೀಡುವ ಮೂಲಕ ಭಾಷೆಗಳನ್ನು ಉತ್ತೇಜಿಸಬೇಕು. ಜಯಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಮರಾಠಿ, ತಮಿಳು, ಕನ್ನಡ ಹಾಗೂ ಉರ್ದು ಭಾಷೆಗಳ ಅಧ್ಯಯನಕ್ಕೆ ಮಹಡಿಗಳನ್ನು ಮೀಸಲಿಡಬೇಕು. ಹಿಂದಿಯೊಂದಿಗೆ ಇತರ ಭಾಷೆಗಳ ಅಧ್ಯಯನಕ್ಕೂ ಜಾಗ ಸಿಗುವಂತಾಗಬೇಕು. ಆಗ ಭಾಷೆಗಳ ಜತೆಗೆ ಸಂಸ್ಕೃತಿಯ ಪರಿಚಯವೂ ಆಗಲಿದೆ. ಆಹಾರ, ವಸ್ತ್ರ, ಆಭರಣ ಇತ್ಯಾದಿಗಳ ಪರಿಚಯ, ವಿನಿಮಯಗಳಿಗೂ ವೇದಿಕೆ ಕಲ್ಪಿಸಿದಂತಾಗಲಿದೆ ಎಂದು ಅಖಿಲೇಶ್ ಹೇಳಿದ್ದಾರೆ.

 ‘ಹಿಂದಿ ಮತ್ತು ಹಿಂದು’ ಎಂದು ಹೇಳಿರುವ ಬಿಜೆಪಿ ಜನರಿಗೆ ಉತ್ತರ ನೀಡಬೇಕು. ಬಿಜೆಪಿ ನಾಯಕರು ಕೇವಲ ಘೋಷಣೆಗಳನ್ನು ನೀಡುತ್ತಾರೆ ಅಷ್ಟೇ. ಒಂದು ವೇಳೆ ಎಲ್ಲಾ ಭಾಷೆಗಳ ಅಧ್ಯಯನಕ್ಕೂ ವೇದಿಕೆ ಕಲ್ಪಿಸಿದ್ದರೆ, ವ್ಯಾಪಾರ ಹಾಗೂ ವ್ಯವಹಾರಗಳೂ ಉತ್ತಮವಾಗುತ್ತಿದ್ದವು. ಜನರು ಪರಸ್ಪರ ಪರಿಚಿತರಾಗುತ್ತಿದ್ದರು. ಒಬ್ಬರನ್ನೊಬ್ಬರು ಅರಿತು ಪರಸ್ಪರ ಗೌರವ ನೀಡುತ್ತಿದ್ದರು ಎಂದು ಅಖಿಲೇಶ್ ಅಭಿಪ್ರಾಯಪಟ್ಟಿದ್ದಾರೆ.

More articles

Latest article