ರಂಗ ವಿಮರ್ಶೆ
‘ಧಿಕ್ಕಾರ’ ನಾಟಕದ ಆರಂಭದಿಂದ ಕೊನೆಯವರೆಗೂ ತುಂಬಿಕೊಂಡ ವರ್ತಮಾನ ಜಗತ್ತಿನ ಆಗುಹೋಗುಗಳು ಜೀವಂತ ಮನಸ್ಸಿಗೆ ಹುಟ್ಟಿಸಿದ ತಲ್ಲಣ, ತಳಮಳಗಳು ನಮ್ಮ ಎದೆಗೆ ತಾಕುತ್ತವೆ. ಅಲ್ಲೊಂದಿಷ್ಟು ಪುರಾಣವಿದೆ, ತಮಾಷೆಯಿದೆ, ವಿಡಂಬನೆಯಿದೆ, ಆಳದಿಂದ ಬಂದ ಪ್ರತಿಭಟನೆಯ ದನಿಯಿದೆ – ಡಾ.ಸರ್ಜಾಶಂಕರ ಹರಳಿಮಠ.
ಪಿ ಲಂಕೇಶ್ ಅವರು ಆರಂಭಿಸಿದ ಅವರದೇ ಹೆಸರಿನ ಪತ್ರಿಕೆ ರಾಜ್ಯದಲ್ಲಿ ಹೊಸ ಎಚ್ಚರವನ್ನು ಮೂಡಿಸಿತು. ಲಂಕೇಶ್ ಅವರಂತೆಯೇ ಸಮಾಜಮುಖಿ ಬದ್ಧತೆಯನ್ನು ಇಟ್ಟುಕೊಂಡ ಕೆಲವು ವಾರಪತ್ರಿಕೆಗಳು ರಾಜ್ಯದ ವಿವಿಧ ಪ್ರದೇಶಗಳಿಂದ ಪ್ರಕಟವಾಗಿವೆ. ಆದರೆ ಇಂತಹ ಬಹುತೇಕ ಪತ್ರಿಕೆಗಳ ಆಯಸ್ಸು ಕಡಿಮೆಯೆಂದೇ ಹೇಳಬಹುದು. ಆದರೆ ಸಾಗರದಿಂದ ಪ್ರಕಟವಾಗುತ್ತಿದ್ದ “ಮಣ್ಣಿನ ವಾಸನೆ” ಎರಡು ದಶಕಗಳ ಕಾಲ ಪ್ರಕಟವಾಯಿತು. ಸಾಗರ ತಾಲ್ಲೂಕಿನ ವಿದ್ಯಮಾನಗಳನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದ ಈ ಪತ್ರಿಕೆ ರಾಜ್ಯ ಮತ್ತು ದೇಶದ ಮುಖ್ಯವೆನಿಸಿದ ಸ್ಥಿತ್ಯಂತರಗಳನ್ನು ಒಳಗೊಳ್ಳುತ್ತಿತ್ತು. ಭ್ರಷ್ಟಾಚಾರ, ಮತೀಯವಾದ, ಖಾವಿಯ ಮುಸುಕಿನಲ್ಲಿ ಅನಾಚಾರ ಮಾಡುವ ಲಂಪಟ ಸ್ವಾಮಿಗಳು, ಪರಿಸರಕ್ಕೆ ಮಾರಕವಾದ ಗಣಿಗಾರಿಕೆ – ಸಮಾಜಕ್ಕೆ, ಜನಹಿತಕ್ಕೆ ಮಾರಕವಾದ ಸಂಗತಿಗಳ ವಿರುದ್ಧ ‘ಮಣ್ಣಿನ ವಾಸನೆ’ ನಿರಂತರ ಲೇಖನಿಯನ್ನು ಝಳಪಿಸಿತು. ಇಂತಹ ಪತ್ರಿಕೆಯನ್ನು ಸಂಪಾದಿಸಿ ತಮ್ಮ ಮಿತಿಯಲ್ಲಿ ತಮ್ಮೂರಿನ ಆರೋಗ್ಯವನ್ನು ಕಾಪಾಡುತ್ತಿದ್ದವರು ಅ.ರಾ ಶ್ರೀನಿವಾಸ ಅವರು. ಈ ಪತ್ರಿಕೆಯಲ್ಲಿ ನಾನು ಎರಡು ವರ್ಷಗಳ ಕಾಲ ‘ಜೀವದನಿ’ ಎಂಬ ಅಂಕಣ ಬರೆದೆ.
ಲಂಕೇಶರಂತೆ ಈ ಪತ್ರಿಕೆಯ ಸಂಪಾದಕರು ನಾಟಕ ರಚನಾಕಾರರೂ ಹೌದು. ಇದರೊಂದಿಗೆ ನಿರಂತರ ನಾಟಕ ಪ್ರಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ರಂಗಕರ್ಮಿಗಳೂ ಹೌದು. ಇದುವರೆಗೆ ಶ್ರೀನಿವಾಸರ ನಾಲ್ಕು ನಾಟಕಗಳು ಮತ್ತು ಆರು ಲಘು ನಾಟಕಗಳು ಪ್ರಕಟವಾಗಿವೆ. ಈಗ ನಮ್ಮ ಮುಂದಿರುವುದು ‘ಧಿಕ್ಕಾರ’ ನಾಟಕ. ಈ ಲೇಖಕರ ಈ ಹಿಂದಿನ ಎರಡು ನಾಟಕಗಳ ಹೆಸರು ‘ಬೆಂಕಿ’ ಮತ್ತು ‘ವಿರುದ್ಧ”. ಶ್ರೀನಿವಾಸರು ಪತ್ರಕರ್ತರು, ಸಾಹಿತಿಗಳು ಮಾತ್ರವಲ್ಲ. ಅವರೊಳಗೊಬ್ಬ ಕ್ರಿಯಾಶೀಲ ಆ್ಯಕ್ಟಿವಿಸ್ಟ್ ಇದ್ದಾನೆ. ಹಾಗಾಗಿಯೇ ಬಹುಷಃ ನಾಟಕಗಳಿಗೆ ಇಂತಹ ಶೀರ್ಷಿಕೆಗಳು ಬಂದಿವೆ.
“ಧಿಕ್ಕಾರ” ಗಂಭೀರ ರಾಜಕೀಯ ಪ್ರಜ್ಞೆಯ ನಾಟಕ. ಈ ಸ್ವರೂಪದ ನಾಟಕಗಳನ್ನು ಗಮನಿಸುವುದಾದರೆ ಪುರಾಣ-ಚರಿತ್ರೆಯ ಕಥಾನಕ ಘಟನೆಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತದೆ. ಹೀಗೆ ಪುರಾಣ ಅಥವಾ ಚರಿತ್ರೆಯನ್ನು ಬಳಸಿಕೊಂಡರೂ ಅವುಗಳ ಉದ್ದೇಶ ಸಮಕಾಲೀನ ಸಂದರ್ಭವನ್ನು ಎದುರುಗೊಳ್ಳುವುದೇ ಆಗಿರುತ್ತದೆ. ಇದು ನಾಟಕ ಮಾತ್ರವಲ್ಲ, ಒಟ್ಟು ಸಾಹಿತ್ಯದ ರಚನಾತಂತ್ರಕ್ಕೂ ಅನ್ವಯಿಸುವ ಮಾತು. ಈ ತಂತ್ರವನ್ನು ಬ್ರಿಟೀಷರ ವಿರುದ್ಧ ಚಳುವಳಿಯನ್ನು ಕಟ್ಟುವ ಸಂದರ್ಭದಲ್ಲಿ, ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಸಂದರ್ಭದಲ್ಲಿ ಹೆಚ್ಚು ಬಳಸಿಕೊಳ್ಳಲಾಯಿತು. ಶ್ರೀನಿವಾಸರ ನಾಟಕಗಳಲ್ಲಿ ಹಿರಣ್ಯಕಶಿಪುವಿನ ಪ್ರತಿಮೆ ಮತ್ತೆ ಮತ್ತೆ ಬರುತ್ತದೆ. ‘ವಿರುದ್ಧ’ ನಾಟಕದಲ್ಲಿ ಇದು ಪುರಾಣದ ಪ್ರತಿಸೃಷ್ಟಿಯಂತೆ ಬಂದರೆ ‘ಧಿಕ್ಕಾರ’ ನಾಟಕದಲ್ಲಿ ಪುರಾಣದ ಹಿರಣ್ಯಕಶಿಪು ತನ್ನೆಲ್ಲ ರಾಜನ ಕಿರೀಟ ಪೋಷಾಕುಗಳನ್ನು ಕಳಚಿಕೊಂಡು ನಮ್ಮ ನಡುವಿನ ಅಧಿಕಾರಸ್ಥ ಸರ್ವಾಧಿಕಾರಿ ರಾಜಕಾರಣಿಯಾಗಿ ಪ್ರೇಕ್ಷಕರ ಪ್ರಜ್ಞೆಯಲ್ಲಿ ಕೂತುಬಿಡುತ್ತಾನೆ.
ಇದು ನಾಟಕವೋ, ನಾಟಕದ ರಿಹರ್ಸಲ್ಲೋ, ಅಥವಾ ನಿಜದೃಶ್ಯವೋ ಎನ್ನುವ ಕುತೂಹಲದಲ್ಲಿ “ಧಿಕ್ಕಾರ” ನಾಟಕ ತೆರೆದುಕೊಳ್ಳುತ್ತದೆ. ಇಡೀ ಭೂಮಂಡಲವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬಯಸುವ ಹಿರಣ್ಯಾಕ್ಷ ಮತ್ತು ತನ್ನನ್ನು ದೇವರು, ಅಜೈವಿಕ (ನಾನ್ ಬಯಾಲಾಜಿಕಲ್) ಎನ್ನುವ ಪೌಂಡ್ರಿಕ ಇಬ್ಬರೂ ಇಲ್ಲಿ ಒಂದಾಗುತ್ತಾರೆ. ಈ ಕಾರಣದಿಂದಲೇ ಪುರಾಣದ ಹಿರಣ್ಯಾಕ್ಷನಿಗಿಂತ, ಹಿರಣ್ಯಾಕ್ಷನ ವ್ಯಕ್ತಿತ್ವ ಹೊಂದಿದ ತನ್ನನ್ನು ತಾನೇ ದೇವರೆಂದುಕೊಳ್ಳುವ ಪೌಂಡ್ರಿಕ ದೇಶಕ್ಕೆ ಹೆಚ್ಚು ಅಪಾಯಕರ ಎಂದು ನಾಟಕ ಎಚ್ಚರಿಸುತ್ತದೆ. ದೇಶ ಪೌಂಡ್ರಿಕನಂತಹ ಸರ್ವಾಧಿಕಾರಿಯಿಂದ ನಲುಗುತ್ತಿರುವಾಗ ಇದಕ್ಕೆ ಬೆನ್ನುಹಾಕಿ ಬರೆಯುವ ಸಾಹಿತಿಗಳ ವಿರುದ್ಧ, ಅಧಿಕಾರಸ್ಥರ ಬಾಲಂಗೋಚಿಗಳಾದ ಮಾಧ್ಯಮದವರ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಅಂತಿಮವಾಗಿ ಸಾಹಿತಿ ಇದಕ್ಕೆ ಸ್ಪಂದಿಸಲೇಬೇಕಾದ ಅನಿವಾರ್ಯತೆಯನ್ನು ಜನಚಳುವಳಿಗಳು ಸೃಷ್ಟಿಸುತ್ತವೆ ಎಂಬ ಆಶಾಭಾವನೆಯನ್ನು ನಾಟಕ ಹೊಂದಿದೆ.
ಇಂದು ನಮ್ಮ ರಾಜಕೀಯ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂದರೆ “ಧಿಕ್ಕಾರ” ಎನ್ನುವ ಪದವೇ ಯಾರನ್ನು ಬೇಕಾದರೆ ಜೈಲಿನ ಕಂಬಿ ಎಣಿಸುವಂತೆ ಮಾಡುತ್ತದೆ. ಈಗ “ಧಿಕ್ಕಾರ” ಎನ್ನುವುದು “ದೇಶದ್ರೋಹ”. ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ, ಕಾನೂನುಗಳ ವಿರುದ್ಧ “ಧಿಕ್ಕಾರ” ಕೂಗಿದವರನ್ನು ವಿಚಾರಣೆಯಿಲ್ಲದೆ ಯುಎಪಿಎ ಕಾನೂನಿನಡಿ ಹಲವು ವರ್ಷಗಳಿಂದ ಜೈಲುಗಳಲ್ಲಿ ಕೊಳೆಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಜನಪರವಾಗಿ ಯೋಚಿಸುವ ಪತ್ರಕರ್ತರು, ಲೇಖಕರು, ಕಲಾವಿದರ ಪಾಲಿಗೆ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯ ಅಮಾನತ್ತಿನಲ್ಲಿದೆ. ಸಮಾಜಕ್ಕೆ ಕನ್ನಡಿ ಹಿಡಿಯುವ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪೋಲಿಸ್ ಕಾವಲಿದೆ. ಹಾಗಾಗಿ ಕುನಾಲ್ ಕಾಮ್ರಾ ಇಲ್ಲಿ ಕಾಮಿಡಿ ಮಾಡುವಂತಿಲ್ಲ. ಗುಜರಾತಿನ ಗಲಭೆಯನ್ನು ಎಂಪುರಾನ್ ಸಿನಿಮಾದಲ್ಲಿ ತೋರಿಸುವಂತಿಲ್ಲ. ಹಾಗೆ ಮಾಡಿದ ತಕ್ಷಣ ಕಾಮ್ರಾ ಮೇಲೆ ಪೋಲಿಸ್ ಕೇಸುಗಳು ದಾಖಲಾಗುತ್ತವೆ. ಸಿನಿಮಾ ನಿರ್ಮಾಪಕರ ಮೇಲೆ ಇ.ಡಿ ದಾಳಿಗಳಾಗುತ್ತವೆ. ಚೋದ್ಯದ ಸಂಗತಿಯೆಂದರೆ ಈಗ ಅಭಿವ್ಯಕ್ತಿ ಸ್ವಾತಂತ್ರ್ಯದ ಪೂರ್ಣಪ್ರಮಾಣದ ಫಲಾನುಭವಿಗಳು ಅಲ್ಪಸಂಖ್ಯಾತರ ಮೇಲೆ ಹೀನಾಯವಾಗಿ ಮಾತನಾಡುವ ರಾಜಕಾರಣಿಗಳು ಮತ್ತು ಖಾವಿತೊಟ್ಟ ಸ್ವಾಮಿಗಳು. ಇವರು ರಾಜಾರೋಷವಾಗಿ ದ್ವೇಷಕಾರುವ ಮಾತನಾಡಿದರೂ ಯಾವುದೇ ಕಾನೂನುಗಳು ಇವರನ್ನು ತಡೆಯುವುದಿಲ್ಲ.
ಸೂತ್ರಧಾರನ ಮೂಲಕ ನಾಟಕದ ಆರಂಭವಾಗುತ್ತದೆ. ಇಲ್ಲಿ ಮೊದಲೇ ಪ್ರಸ್ತಾಪಿಸಿದಂತೆ ಕನ್ನಡ ರಂಗಪ್ರಯೋಗಗಳನ್ನು ಪ್ರಭಾವಿಸಿದ ಪುರಾಣದ ಸಂಗತಿಗಳನ್ನು ಸಮಕಾಲೀನ ವಾಸ್ತವದೊಟ್ಟಿಗೆ ಇಟ್ಟು ನಾಟಕ ಕಟ್ಟುವ ತಂತ್ರವನ್ನು ಯಶಸ್ವಿಯಾಗಿ ಬಳಸಲಾಗಿದೆ. ಆದರೆ ಈ ನಾಟಕತಂತ್ರದ ಬಗ್ಗೆಯೇ ನಾಟಕದೊಳಗೆ ವಿಡಂಬನೆಯಿರುವುದು ವೈರುಧ್ಯವೆನಿಸುತ್ತದೆ. ಪ್ರಸಿದ್ಧ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಬಳಸುವ ‘ಏಲಿನೇಷನ್’ ಮತ್ತು ‘ನಾಟಕದೊಳಗೊಂದು ನಾಟಕ’ ತಂತ್ರವನ್ನು ಮೊದಲಾರ್ಧದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ನಾಟಕದೊಳಗಿನ ಕೆಲವು ಸಂಭಾಷಣೆಗಳು ವಾಚ್ಯಸ್ವರೂಪದಲ್ಲಿರುವುದು ಒಂದು ಮಿತಿ. ಇಲ್ಲಿನ ಮುಖ್ಯಪಾತ್ರಗಳು ರಂಗಕ್ಕೆ ಬಂದ ತಕ್ಷಣ ಅವು ವಾಸ್ತವ ಜಗತ್ತಿನ ನಿಜ ವ್ಯಕ್ತಿತ್ವಗಳೆಂದು ನೋಡುಗನಿಗೆ ಅನಿಸುವುದು ನಾಟಕದ ತಂತ್ರದ ಯಶಸ್ಸೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಈ ಪಾತ್ರಗಳು ಕೊಂಚ ಢಾಳಾದರೆ ತೊಡಕನ್ನುಂಟು ಮಾಡುವ ಸಾಧ್ಯತೆಯಿದೆ. ‘ಧಿಕ್ಕಾರ’ ಸ್ವಲ್ಪಮಟ್ಟಿಗೆ ಈ ಅಪಾಯವನ್ನು ಎದುರಿಸುತ್ತಿದೆ.
ಉತ್ತಮ ಸಾಹಿತ್ಯ ಕೃತಿಯೊಂದು ಆಳವಾದ ಚಿಂತನೆ, ಬದುಕನ್ನು ಗ್ರಹಿಸುವ ತಾಯ್ತನದ ನೋಟ, ಮನುಕುಲದ ಭವಿಷ್ಯದ ಕುರಿತ ಕಾಳಜಿಗಳೆಲ್ಲದರಿಂದ ಹುಟ್ಟಿ ಬರಬಹುದು. ಇದರ ಜೊತೆಗೆ ವರ್ತಮಾನದ ತಲ್ಲಣಗಳಿಗೆ ಕಲಾರೂಪ ಕೊಟ್ಟಾಗಲೂ ಒಳ್ಳೆಯ ಕೃತಿಯೊಂದು ಮೂಡಿ ಬರುತ್ತದೆ. ಇಂತಹ ಸಾಹಿತ್ಯ ಕೃತಿಗಳಲ್ಲಿ ಆಧುನಿಕ ಸಾಹಿತ್ಯ ಬಯಸುವ ಕೆಲವು ಪರಿಕರಗಳು ಗೈರಾಗಿರಬಹುದು. ಹೊಸ ಪರಿಕರಗಳು ಸೇರಿಕೊಂಡಿರಬಹುದು. ಇಂತಹ ಗೈರುಹಾಜರಿ ಮತ್ತು ಸೇರ್ಪಡೆಗಳೇ ಅವುಗಳನ್ನು ಬೇರೆ ರೀತಿ ನೋಡುವಂತೆ ನಮ್ಮನ್ನು ಪ್ರೇರೇಪಿಸುತ್ತವೆ. ಸಿದ್ದಲಿಂಗಯ್ಯನವರ ‘ಇಕ್ರಲಾ, ವದೀರ್ಲಾ’ ಕಾವ್ಯವಾಗುವುದು ಹೀಗೆ ವರ್ತಮಾನ ತಲ್ಲಣಗಳಿಗೆ ಮಾತು ಕೊಟ್ಟಾಗ.
‘ಧಿಕ್ಕಾರ’ ನಾಟಕದ ಆರಂಭದಿಂದ ಕೊನೆಯವರೆಗೂ ತುಂಬಿಕೊಂಡ ವರ್ತಮಾನ ಜಗತ್ತಿನ ಆಗುಹೋಗುಗಳು ಜೀವಂತ ಮನಸ್ಸಿಗೆ ಹುಟ್ಟಿಸಿದ ತಲ್ಲಣ, ತಳಮಳಗಳು ನಮ್ಮ ಎದೆಗೆ ತಾಕುತ್ತವೆ. ಅಲ್ಲೊಂದಿಷ್ಟು ಪುರಾಣವಿದೆ, ತಮಾಷೆಯಿದೆ, ವಿಡಂಬನೆಯಿದೆ, ಆಳದಿಂದ ಬಂದ ಪ್ರತಿಭಟನೆಯ ದನಿಯಿದೆ. ಇವುಗಳೆಲ್ಲದರ ಆಳದಲ್ಲಿ ದೇಶ ತನ್ನೆಲ್ಲ ಮಿತಿಗಳ ನಡುವೆಯೂ ಕಾದುಕೊಂಡು ಬಂದ ಸಹಬಾಳ್ವೆಯ ಅಂತಃಸತ್ವದ ತಿಳಿಜಲದಲ್ಲಿ ಅಧಿಕಾರಕ್ಕಾಗಿ ಏನನ್ನೂ ಮಾಡಲು ಹಿಂಜರಿಯದ ಜನರು ವಿಷಪ್ರಾಷನ ಮಾಡುತ್ತಿದ್ದಾರಲ್ಲ ಎಂಬ ಆಕ್ರೋಶವಿದೆ, ಗಾಢ ವಿಷಾದವಿದೆ. ಇಂತಹ ಬೆಳವಣಿಗೆಯ ವಿರುದ್ಧ ಜನಸಮುದಾಯವನ್ನು ಜಾಗೃತಗೊಳಿಸುವ ಹಂಬಲವಿದೆ. ಇಂತಹ ಹಂಬಲದ ಮಹತ್ವಾಕಾಂಕ್ಷಿ ನಾಟಕ ರಚಿಸಿರುವ ಹಿರಿಯ ರಂಗಕರ್ಮಿಗಳಾದ ಶ್ರೀನಿವಾಸರನ್ನು ಅಭಿನಂದಿಸುತ್ತೇನೆ.
ಡಾ.ಸರ್ಜಾಶಂಕರ ಹರಳಿಮಠ
ಹಿರಿಯ ಸಾಹಿತಿಗಳು
ಇದನ್ನೂ ಓದಿ- http://ರಂಗಭೂಮಿ | “ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ” https://kannadaplanet.com/still-i-choose-to-love/