ನವದೆಹಲಿ: ಡಾಬರ್ ಚ್ಯವನ್ ಪ್ರಾಶ್ ವಿರುದ್ಧ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಪತಂಜಲಿ ಸಂಸ್ಥೆಗೆ ದೆಹಲಿ ಹೈಕೋರ್ಟ್ ಇಂದು ನಿರ್ಬಂಧ ಹೇರಿದೆ. ಪತಂಜಲಿ ಸಂಸ್ಥೆ ತನ್ನ ವಿರುದ್ಧ ದಾರಿ ತಪ್ಪಿಸುವ ಹಾಗೂ ಅವಹೇಳನಕಾರಿ ಜಾಹೀರಾತುಗಳ ಪ್ರಸಾರಕ್ಕೆ ತಡೆ ನೀಡಬೇಕು ಎಂದು ಕೋರಿ ಡಾಬರ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ನೇತೃತ್ವದ ಪೀಠ, ಮನವಿಯನ್ನು ಮಾನ್ಯ ಮಾಡಿರುವುದಾಗಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ಮುಂದೂಡಿದೆ.
ಪತಂಜಲಿ ಸಂಸ್ಥೆಯು ಜಾಹೀರಾತಿನಲ್ಲಿ ಆಯುರ್ವೇದ ಗ್ರಂಥಗಳು ಮತ್ತು ಶಾಸ್ತ್ರೀಯ ಗ್ರಂಥಗಳ ಪ್ರಕಾರ ಚ್ಯವನ್ ಪ್ರಾಶ್ ತಯಾರಿಸಿದ ಏಕೈಕ ಸಂಸ್ಥೆ ಎಂದು ಹೇಳಿಕೊಂಡಿತ್ತು. ಜತೆಗೆ ಡಾಬರ್ ನಂತಹ ಇತರ ಬ್ರ್ಯಾಂಡ್ ಗಳಿಗೆ ಅಧಿಕೃತ ಜ್ಞಾನದ ಕೊರತೆಯಿದೆ ಎಂದೂ ಹೇಳಲಾಗಿತ್ತು. ಈ ಜಾಹೀರಾತುಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು ಹಾಗೂ ಬ್ರ್ಯಾಂಡ್ ನ ಖ್ಯಾತಿಗೆ ಉಂಟಾದ ಹಾನಿಗೆ ಪರಿಹಾರವಾಗಿ 2 ಕೋಟಿ ರೂ.ಗಳನ್ನು ನೀಡುವಂತೆ ಕೋರಿತ್ತು.