ನವದೆಹಲಿ: ಯೂರಿಯಾ ಮತ್ತು ಡಿಎಪಿ ಸೇರಿದಂತೆ ಅಗತ್ಯ ರಸಗೊಬ್ಬರಗಳ ಕೊರತೆ ಅನುಭವಿಸುತ್ತಿರುವ ಕೃಷಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚೀನಾದಿಂದ ಆಮದು ಮಾಡಿಕೊಳ್ಳುವ ರಸಗೊಬ್ಬರಗಳ ಪೂರೈಕೆ ನಿಂತಿರುವುದರಿಂದ ಕೊರತೆ ಎದುರಾಗಿದೆ. ಒಂದು ಕಡೆ, ಪ್ರಧಾನಿ ನರೇಂದ್ರ ಮೋದಿ ಅವರು ರಸಗೊಬ್ಬರ ಚೀಲಗಳ ಮೇಲೆ ತಮ್ಮ ಫೋಟೋ ಮುದ್ರಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ರೈತರು ಮೇಡ್ ಇನ್ ಚೀನಾ ರಸಗೊಬ್ಬರದ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಭಾರತ ಕೃಷಿ ಪ್ರಧಾನ ದೇಶ. ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು. ಆದರೆ, ವಿದೇಶಗಳ ಮೇಲಿನ ಅವಲಂಬನೆಯಿಂದಾಗಿ ಈ ಬೆನ್ನೆಲುಬು ಬಾಗುತ್ತಿದೆ. ಭಾರತವು ಚೀನಾದಿಂದ ಶೇ. 80ರಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳುತ್ತದೆ. ಇದೀಗ ಚೀನಾ ಪೂರೈಕೆ ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೀನಾದಿಂದ ರಸಗೊಬ್ಬರ ಆಮದು ಯಾವುದೇ ಸಮಯದಲ್ಲಿ ನಿಲ್ಲಬಹುದು ಎಂಬ ಅರಿವಿದ್ದರೂ, ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಳ್ಳಲಿಲ್ಲ. ದೇಶದಲ್ಲೇ ಉತ್ಪಾದನೆಯನ್ನು ಹೆಚ್ಚಿಸುವ ವಿಫುಲ ಅವಕಾಶವಗಳಿದ್ದರೂ ಯಾವುದೇ ಯೋಜನೆಯನ್ನು ರೂಪಿಸಲಿಲ್ಲ ಎಂದು ಅವರು ಟೀಕಿಸಿದ್ದಾರೆ.