ನವದೆಹಲಿ: ಮುಂಜಾನೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ನಡುವೆ ಹೊರಡುವ ರೈಲುಗಳಿಗೆ ಸೀಟು ಕಾಯ್ದಿರಿಸಿದ ಪಟ್ಟಿಯನ್ನು ಹಿಂದಿನ ದಿನ ರಾತ್ರಿ 9 ಗಂಟೆಗೆ ಮತ್ತು ಇತರ ಅವಧಿಯಲ್ಲಿ ಸಂಚರಿಸುವ ರೈಲುಗಳಿಗೆ 8 ಗಂಟೆಗಳಿಗೂ ಮುನ್ನ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
2015ರಿಂದಲೂ ರೈಲು ಹೊರಡುವ ಸಮಯಕ್ಕೂ ನಾಲ್ಕು ಗಂಟೆಗಳ ಮುನ್ನ ಸೀಟು ಕಾಯ್ದಿರಿಸಿದ ಮೊದಲ ಪಟ್ಟಿಯು ಪ್ರಕಟಿಸಲಾಗುತ್ತಿತ್ತು. ಇದೀಗ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಲಾಖೆಯು ವಲಯಗಳ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ ಯಾವತ್ತಿನಿಂದ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿಲ್ಲ.
ಪಟ್ಟಿ ಬಿಡುಗಡೆಯಾದ ಬಳಿಕವೂ ಸೀಟುಗಳು ಖಾಲಿ ಉಳಿದಿದ್ದರೆ, ಹಾಲಿ ಬುಕಿಂಗ್ ಸೌಲಭ್ಯ ಬಳಸಿಕೊಂಡು ಸೀಟುಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.