ನವದೆಹಲಿ: ದಲಿತರು, ಆದಿವಾಸಿಗಳು, ರೈತರು ಮತ್ತು ಕಾರ್ಮಿಕರ ಪರ ಕೆಲಸ ಮಾಡುವುದು ದೇಶದ್ರೋಹವೇ ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.
ಭೂಸ್ವಾಧೀನ ಕಾನೂನಿನ ಅನುಷ್ಠಾನದ ಕುರಿತು ಪರಿಶೀಲಿಸುತ್ತಿದ್ದ ಸಂಸದೀಯ ಸಮಿತಿ ಸಭೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ಮೇಧಾ ಪಾಟ್ಕರ್ ಅವರನ್ನು ಕರೆಯಿಸಿದ್ದಕ್ಕೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದಿದ್ದರು. ಇದರಿಂದ ಜಂಟಿ ಸಂಸದೀಯ ಸಮಿತಿ ಸಭೆ ದಿಢೀರ್ ಆಗಿ ರದ್ದಾಗಿತ್ತು. ಸಭೆಯಿಂದ ಹೊರನಡೆಯುವಾಗ ಬಿಜೆಪಿಯ ಕೆಲವು ಸದಸ್ಯರು ಮೇಧಾ ಪಾಟ್ಕರ್ ಅವರನ್ನು ದೇಶವಿರೋಧಿ ಎಂದು ಕೂಗಿದ್ದರು.
ಬಿಜೆಪಿ ಸದಸ್ಯರ ವರ್ತನೆ ಕುರಿತು ಪ್ರತಿಕ್ರಿಯೆ ನೀಡಿರುವ ಮೇಧಾ ಅವರು ರಾಷ್ಟ್ರವಿರೋಧಿ ಎಂಬ ಪದದ ಅರ್ಥವೇನು? ದಲಿತರು, ಆದಿವಾಸಿಗಳು ಮತ್ತು ರೈತರ ಹಕ್ಕುಗಳನ್ನು ಕಾನೂನು ಹಾಗೂ ಸಂವಿಧಾನದ ಅಡಿಯಲ್ಲಿ ರಕ್ಷಿಸಲು ಹೋರಾಡುವುದು ದೇಶದ್ರೋಹವೆ? ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನಾವು ಹೇಳಿದ್ದರಲ್ಲಿ ತಪ್ಪು ಕಂಡುಬಂದರೆ ವಿರೋಧಿಸಬಹುದಾಗಿದೆ. ಆದರೆ, ನಮ್ಮನ್ನು ರಾಷ್ಟ್ರ ವಿರೋಧಿ ಅಥವಾ ನಗರ ನಕ್ಸಲರು ಎಂದು ಕರೆಯುವ ಅಧಿಕಾರ ಅವರಿಗಿಲ್ಲ ಎಂದು ಕಿಡಿ ಕಾರಿದ್ದಾರೆ.