ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕ್ರಿಮಿನಲ್ ಕಾನೂನುಗಳು ನಿಷ್ಪ್ರಯೋಜಕವಾಗಿದ್ದು, ನ್ಯಾಯಾಧೀಶರು, ವಕೀಲರು ಮತ್ತು ಪೊಲೀಸರಲ್ಲಿ ಗೊಂದಲ ಮೂಡಿಸುತ್ತವೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಮೂರು ಹೊಸ ಕಾನೂನುಗಳು ಸ್ವಾತಂತ್ರೋತ್ತರ ಭಾರತದ ಅತೀ ದೊಡ್ಡ ಸುಧಾರಣೆಗೆ ನಾಂದಿ ಹಾಡಿವೆ ಎಂದು ಹೇಳಿಕೆ ನೀಡಿದ್ದಾರೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳು ದೇಶದಲ್ಲಿನ ಅತಿ ದೊಡ್ಡ ಸುಧಾರಣೆ ಎಂದು ಬಿಂಬಿಸಲು ಕೇಂದ್ರ ಸರ್ಕಾರ ಪದೇ ಪದೇ ಪ್ರಯತ್ನಿಸುತ್ತಿದೆ. ಆದರೆ ಈ ಕಾನೂನುಗಳಲ್ಲಿ ಏನೇನೂ ಇಲ್ಲ ಎಂದಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಹೊಸ ಮೂರು ಕಾನೂನುಗಳ ಜೊತೆ ಹೋಲಿಕೆ ಮಾಡಿ ಭಿನ್ನ ನಿಲುವಿನ ಟಿಪ್ಪಣಿ ಸಿದ್ಧಪಡಿಸಿದ್ದೇನೆ. ಐಪಿಸಿಯ ಶೇಕಡ 90ರಿಂದ ಶೇ 95ರಷ್ಟು, ಸಿಆರ್‌ಪಿಸಿಯ ಶೇ 95ರಷ್ಟು ಮತ್ತು ಸಾಕ್ಷ್ಯ ಕಾಯ್ದೆಯ ಶೇ 99ರಷ್ಟು ಸೆಕ್ಷನ್ ಗಳನ್ನು ಕತ್ತರಿಸಿ ಹೊಸ ಕಾಯ್ದೆಗಳಲ್ಲಿ ಸೇರಿಸಲಾಗಿದೆ. ಕೆಲವಷ್ಟೇ ಹೊಸ ಅಂಶಗಳಿವೆ ಎಂದು ತಿಳಿಸಿದ್ದಾರೆ.