ಬೆಂಗಳೂರು: ನಗರದ ಇನ್ಫೋಸಿಸ್ ಕಚೇರಿಯ ಶೌಚಾಲಯದೊಳಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆರೋಪದ ಮೇಲೆ ಅದೇ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ ಸ್ವಪ್ನಿಲ್ ನಾಗೇಶ್ ಮಲಿ (28) ಎಂಬಾತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈತ ಇನ್ಫೋಸಿಸ್ ಕಂಪನಿಯ ಹೀಲೀಕ್ಸ್ ಡಿಪಾರ್ಟ್‌ಮೆಂಟ್ ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪುರುಷ ಶೌಚಾಲಯದ ಕಮೋಡ್ ಮೇಲೆ ನಿಂತುಕೊಂಡು ನಾಗೇಶ್ ಶೌಚಾಲಯದಲ್ಲಿದ್ದ ಮಹಿಳಾ ಉದ್ಯೋಗಿಯ ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈತ ನಿಂತಿರುವುದರ ನೆರಳು ಬಾಗಿಲ ಮೇಲೆ ಮೂಡಿದೆ. ಆಗ ಯುವತಿ ಕಿರುಚಿಕೊಂಡಿದ್ದಾಳೆ.
ಆಗ ನಾಗೇಶ್ ಮಹಿಳಾ ಉದ್ಯೋಗಿಯ ಕ್ಷಮೆ ಕೇಳಿದ್ದಾನೆ. ಈತನ ಮೊಬೈಲ್ ನಲ್ಲಿ ಸುಮಾರು 30ಕ್ಕೂ ಅಧಿಕ ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ. ಮಹಿಳಾ ಉದ್ಯೋಗಿ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ನಾಗೇಶ್ ನನ್ನು ಬಂಧಿಸಿದ್ದಾರೆ.