ಭಾಗ – 2 : ಶಾಮರಾವ್ ಆಗಿ ಬದಲಾದ ಶಾಮಣ್ಣ..!
ಭಾರತೀಯ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ ಸ್ಥಾನಮಾನ, ಪ್ರಗತಿ ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ. ನಮ್ಮ ಸಮಾಜದಲ್ಲಿರುವ ಈ ಅಸಾಮಾನ್ಯ ಅಸಮತೋಲನದಿಂದ ನೊಂದು- ಬೆಂದು, ಬೆಂಡಾಗಿ ಕಡೆಗೆ ಈ ಅಸಮತೋಲನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡ ವ್ಯಕ್ತಿಯ ನೈಜ ಘಟನೆಯೊಂದಕ್ಕೆ ಅಕ್ಷರ ರೂಪ ನೀಡಿದ್ದಾರೆ ಗಂಗಾನಾಯ್ಕ್ಗೊಂದಿಯವರು . ಎರಡು ಕಂತುಗಳ ಈ ಬರಹದ ಕೊನೆಯ ಭಾಗ ಇಲ್ಲಿದೆ .
ಬೇಕರಿ ವ್ಯವಹಾರದ ನಷ್ಟಕ್ಕೆ ಕಾರಣವನ್ನು ಹುಡುಕಿಕೊಂಡಿದ್ದ ಶಾಮಣ್ಣ, ಅರಸೀಕೆರೆಗೆ ಬರುವಷ್ಟರಲ್ಲಿ ’ಶಾಮರಾವ್’ ಆಗಿ ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಎದೆ ಮೇಲೆ ಜನಿವಾರ, ಹೆಂಡತಿ, ಮಕ್ಕಳಿಗೆ ಬ್ರಾಹ್ಮಣ ಪದ್ಧತಿಯ ಊಟೋಪಚಾರದೊಂದಿಗೆ ಆಚಾರ- ವಿಚಾರಗಳನ್ನು ತೋರ್ಪಡಿಕೆಗೆ ಎಷ್ಟು ಬೇಕು ಅಷ್ಟು ಕಲಿಸಿದ್ದರು. ಅಂಗಡಿಗೂ ಶೂದ್ರ ಜಾತಿಯ ಹೆಸರು ಬದಲಾಗಿ ಬ್ರಾಹ್ಮಣರು ಬಳಸುವ ವೆಂಕಟೇಶ್ವರ, ಶ್ರೀನಿವಾಸ, ಅನ್ನಪೂರ್ಣೇಶ್ವರಿ, ಸತ್ಯನಾರಾಯಣ, ಅಯ್ಯಂಗಾರಿ ಇಂತಹ ಹೆಸರುಗಳನ್ನು ಆಯ್ಕೆ ಮಾಡಿಕೊಂಡು ವ್ಯವಹಾರ ಆರಂಭಿಸಿದರು. ಬೇಕರಿ ವೃತ್ತಿಯಲ್ಲಿ ನೈಪುಣ್ಯತೆ ಪಡೆದಿದ್ದ ಶಾಮರಾವ್ ಗೆ ವ್ಯವಹಾರ ಕೈಹಿಡಿಯಲು ಹೆಚ್ಚು ದಿನ ಬೇಕಾಗಲಿಲ್ಲ, ವ್ಯವಹಾರ ಚೆನ್ನಾಗಿರುವಾಗ ಅಂಗಡಿಗೆ ಹಾಗೂ ಮನೆಗೆ ಬ್ರಾಹ್ಮಣರು ಬಂದು ಹೋಗುತ್ತಿದ್ದರು, ತೋರ್ಪಡಿಕೆಗೆ ಒಂದಿಷ್ಟು ಆಚಾರ- ವಿಚಾರಗಳನ್ನು ಕಲಿತಿದ್ದ ಈ ಕುಟುಂಬದವರಿಗೆ ಬ್ರಾಹ್ಮಣರು ಅಥವಾ ಅವರ ಕುಟುಂಬದವರು ಮನೆಗೆ ಬಂದರೆ ಎಲ್ಲಿಲ್ಲದ ಸಂಕಟ ಶುರುವಾಗಿ ಬಿಡುತ್ತಿತ್ತು. ಮನೆಗೆ ಬಂದ ಅತಿಥಿಗಳನ್ನು ಹಾಗೂ ಹೀಗೂ ಮನೆಯಿಂದ ಕಳುಹಿಸುವಷ್ಟರಲ್ಲಿ ಎಲ್ಲರೂ ಸಾಕು ಸಾಕಾಗಿ ಹೋಗುತ್ತಿದ್ದರು, ಅಕಸ್ಮಾತ್ ಬ್ರಾಹ್ಮಣರ ಶುಭ ಕಾರ್ಯಗಳಿಗೆ ಏನಾದರೂ ಆಹ್ವಾನ ನೀಡಿದರೆ ಯಾರೂ ಮನೆಯಿಂದ ಹೊರ ಹೋಗುತ್ತಿರಲಿಲ್ಲ, ತನ್ನ ಮೂಲ ಜಾತಿಯ ಉಟೋಪಚಾರ, ಸಂಪ್ರದಾಯಗಳನ್ನು ಪಾಲಿಸಲು ಆಗದೆ, ತೋರ್ಪಡಿಕೆಗಾಗಿ ಅಷ್ಟಿಷ್ಟು ಕಲಿತಿದ್ದ ಬ್ರಾಹ್ಮಣರ ಸಂಪ್ರದಾಯವನ್ನು ಮೈಗೂಡಿಸಿಕೊಳ್ಳಲಾಗದೆ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ಆ ಹೊತ್ತಿಗಾಗಲೇ ಮತ್ತಿಬ್ಬರು ಗಂಡು ಮಕ್ಕಳು ಈ ಕುಟುಂಬದ ಸದಸ್ಯರಾಗಿದ್ದರಿಂದ ಆ ಮಕ್ಕಳಿಗೆ ಶಾಲೆಗೆ ಸೇರಿಸುವಾಗ ಶಾಮಣ್ಣ ಜಾತಿ ಕಾಲಂನಲ್ಲಿ ಬ್ರಾಹ್ಮಣರು ಎಂದು ಹೆಸರು ಬೇರೆ ಸೇರಿಸಿದ್ದರು.
ಭವಿಷ್ಯದ ದೃಷ್ಟಿಯಿಂದ ಇಬ್ಬರು ಮಕ್ಕಳಿಗೂ ಬ್ರಾಹ್ಮಣರ ಸಾಕಷ್ಟು ಸಂಪ್ರದಾಯವನ್ನು ಕಲಿಸಿ, ಜನಿವಾರ ಹಾಕಿದ್ದರು. ಆರ್ಥಿಕವಾಗಿ ಸದೃಢರಾಗಿದ್ದ ಶಾಮಣ್ಣರ ಕುಟುಂಬದಲ್ಲಿ ಒಂದು ಆಕಸ್ಮಿಕ ಅವಘಡ ನಡೆದೇ ಹೋಗಿತ್ತು. ಮನೆಯಲ್ಲಿ ಎಲ್ಲರಿಗೂ ಅತ್ಯಂತ ಪ್ರೀತಿ ಪಾತ್ರನಾಗಿದ್ದ ಚಿಕ್ಕ ಮಗ ಶಾಲೆಯಿಂದ ಮನೆಗೆ ಬರಲು ರಸ್ತೆ ದಾಟುವಾಗ ಬೇಕರಿ ಎದುರುಗಡೆಯೇ ರಸ್ತೆಯಲ್ಲಿಯೇ ಹೆಣವಾಗಿ ಹೋಗಿದ್ದ. ಈ ದೃಶ್ಯವನ್ನು ಕಣ್ಣಾರೆ ಕಂಡಿದ್ದ ಶಾಮಣ್ಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಬೇಕರಿಯ ಬಾಗಿಲು ತೆರೆದರೆ ಮಗನ ಅಪಘಾತದ ದೃಶ್ಯ ಕಣ್ಣೆದುರಿಗೆ ಬರುತ್ತಿದ್ದರಿಂದ, ಚೆನ್ನಾಗಿ ನಡೆಯುತ್ತಿದ್ದ ಬೇಕರಿಯನ್ನು ಬಂದ ದರಕ್ಕೆ ಮಾರಾಟ ಮಾಡಿ ಅರಸೀಕೆರೆ ಬಿಟ್ಟು ಜಾವಗಲ್ ಗೆ ಕುಟುಂಬ ಸಮೇತರಾಗಿ ವಲಸೆ ಹೋದರು. ಬೇಕರಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತರಲು ಜಾವಗಲ್ ನಿಂದ ಅರಸೀಕೆರೆಗೆ ಹೋಗಬೇಕಾಗಿದ್ದರಿಂದ ಅಲ್ಲಿ ಹೋದಾಗಲೆಲ್ಲ ಮಗನ ನೆನಪು ಕಾಡುತ್ತಿದ್ದರಿಂದ ಜಾವಗಲ್ ನಿಂದಲೂ ಜಾಗ ಖಾಲಿ ಮಾಡಿಕೊಂಡು ಕುಟುಂಬದೊಂದಿಗೆ ನೇರವಾಗಿ ಭದ್ರಾವತಿಗೆ ಬಂದರು.
ಭದ್ರಾವತಿ 60-70 ರ ದಶಕದಲ್ಲಿ ತುಂಬಾ ಉಚ್ಛ್ರಾಯ ಸ್ಥಿತಿಯಲ್ಲಿದ್ದಂತಹ ದಿನಗಳವು. ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ತುಂಬಾ ಸಮೃದ್ಧವಾಗಿದ್ದರಿಂದ ಅವಳಿ ಕಾರ್ಖಾನೆಗಳಲ್ಲಿರುವ ಕಾರ್ಮಿಕರು, ದಿನಗೂಲಿ ಕಾರ್ಮಿಕರು, ಅಧಿಕಾರಿ ವರ್ಗದ ಕುಟುಂಬದಿಂದ ಭದ್ರಾವತಿ ಜನಜಂಗುಳಿಯಾಗಿತ್ತು. ಹಾಗಾಗಿ ಮಾರ್ವಾಡಿಗಳು, ಶೆಟ್ಟರು, ಮುಸ್ಲಿಮರು ಬೇರೆ ರಾಜ್ಯಗಳಿಂದ ವಲಸೆ ಬಂದು ಭದ್ರಾವತಿಯ ವ್ಯಾಪಾರ- ವಹಿವಾಟಿನ ಮೇಲೆ ಹಿಡಿತ ಸಾಧಿಸಿದ್ದರು. ಜನಸಂದಣಿ ಇರುವೆಡೆ ವ್ಯಾಪಾರ ವಹಿವಾಟು ಇದ್ದೇ ಇರುತ್ತದೆ ಎಂಬ ಸತ್ಯ ಅರಿತಿದ್ದ ಶಾಮಣ್ಣ ಕಾರ್ಮಿಕ ನಗರ ಭದ್ರಾವತಿಯ ಪೇಪರ್ ಟೌನಿನಲ್ಲಿ ಠಳಾಯಿಸಿದರು. ಅಲ್ಪಸ್ವಲ್ಪ ಬಂಡವಾಳದೊಂದಿಗೆ ಬಾಡಿಗೆ ಮನೆ ಪಡೆದು, ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಟೆಂಟ್ ಹಾಕಿ ಬೇಕರಿ ಪ್ರಾರಂಭಿಸಿದರು. ಅವರ ವ್ಯಾಪಾರದ ಕೌಶಲ ಹಾಗೂ ರುಚಿಗೆ ಬಹುಬೇಗ ಜನಪ್ರಿಯ ರಾಗಿ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿತ್ತು. ಕೈಯಲ್ಲಿ ಹಣಕಾಸಿನ ವಹಿವಾಟು ಚೆನ್ನಾಗಿ ನಡೆಯುತ್ತಿದ್ದರಿಂದ ಹೊಸಮನೆ ಏರಿಯಾದಲ್ಲಿ ಸ್ವಂತ ಮನೆ ಖರೀದಿಸಲು ಹೋಗಿ ಮೋಸಕ್ಕೆ ಒಳಗಾದರು. ಮನೆಯೂ ಇಲ್ಲದೆ, ಹಣವೂ ಇಲ್ಲದೆ ಮತ್ತೆ ಬರಿಗೈ ಆದರು. ಧೃತಿಗೆಡದೆ ಇಡೀ ಕುಟುಂಬವನ್ನು ಬೇಕರಿ ಕೆಲಸಕ್ಕೆ ತೊಡಗಿಸಿಕೊಂಡರು. ಅದಾಗಲೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ತಂದೆಗೆ ಸಹಕಾರ ನೀಡುತ್ತಿದ್ದ ಹಿರಿಯ ಮಗ ಸಂತೋಷ, ಇಡೀ ಕುಟುಂಬದವರೆಲ್ಲ ಸೇರಿ ತಯಾರು ಮಾಡುತ್ತಿದ್ದ ಉತ್ಕೃಷ್ಟ ಹಾಗೂ ಸ್ವಾದಿಷ್ಟ ಬೆಣ್ಣೆ ಬಿಸ್ಕತ್ತುಗಳನ್ನು ಸೈಕಲ್‌ನಲ್ಲೇ3-4 ಡಬ್ಬಗಳಲ್ಲಿ ಹಾಕಿಕೊಂಡು ಪಟ್ಟಣದಲ್ಲಿರುವ ಕಿರಾಣಿ ಅಂಗಡಿಗಳಿಗೆ ವ್ಯಾಪಾರ ಮಾಡಿ ಬರುತ್ತಿದ್ದರು. ಪ್ರತಿದಿನ ಸುಮಾರು 20ಸಾವಿರಕ್ಕೂ ಹೆಚ್ಚು ಬೆಣ್ಣೆ ಬಿಸ್ಕತ್ತುಗಳು ಮಾರಾಟವಾಗುತ್ತಿದ್ದವು ಎಂದರೆ ಈ ಬಿಸ್ಕತ್ತಿನ ಸ್ವಾದಿಷ್ಟತೆ ಯಾವ ಪ್ರಮಾಣದಾಗಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಹೀಗೆಯೆ ಈ ಬಿಸ್ಕತ್ತಿನ ಮಾರಾಟ ಹಳ್ಳಿಗಳಿಗೂ ವ್ಯಾಪಿಸಿತ್ತು. ವ್ಯಾಪಾರ ಜೋರಾದಂತೆ ಜಾತಿಯ ಕಾವು ಕಡಿಮೆಯಾಗುತ್ತಾ ಹೋಗಿತ್ತು. ಕಾರ್ಮಿಕ ನಗರದಲ್ಲಿ ದುಡಿಮೆಗೆ ಹೆಚ್ಚಿನ ಮಹತ್ವ ಇದ್ದುದರಿಂದ ಜಾತಿಯ ಕೇಡಿಗೆ ಅವಕಾಶ ಇರಲಿಲ್ಲ. ಹೀಗಾಗಿ ಶಾಮಣ್ಣನವರ ಕುಟುಂಬ ಎಲ್ಲರ ಜೊತೆಗೆ ಬೆರೆಯಲು ಪ್ರಾರಂಭಿಸಿತು. ಬ್ರಾಹ್ಮಣ ವೇಷಧಾರಿಯಾಗಿದ್ದರೂ ಬ್ರಾಹ್ಮಣರ ಆಚಾರ- ವಿಚಾರಗಳನ್ನು ಒಳಗೊಳಗೆ ಬಹಳ ದ್ವೇಷಿಸುತ್ತಿದ್ದರು. ಜಾತಿಯ ವಿಷ ವರ್ತುಲದಲ್ಲಿ ನೊಂದು, ಬೆಂದು ಹೈರಾಣಾಗಿದ್ದ ಶಾಮಣ್ಣ ವಯೋ ಸಹಜ ಕಾಯಿಲೆಯಿಂದ ಕಾಲನ ವಶವಾದರು.
ಕೈಹಿಡಿದ ಐತಾಳರು
ಶಾಮಣ್ಣ ಮೃತರಾದ ನಂತರ ಇಡೀ ಕುಟುಂಬದ ಜವಾಬ್ದಾರಿ ಸಂತೋಷನ ಹೆಗಲಿಗೆ ಬದಲಾಗಿತ್ತು. ತಂದೆಯ ವೃತ್ತಿಯನ್ನು ಸಾಕಷ್ಟು ಕಲಿತಿದ್ದ ಸಂತೋಷ ಅಲ್ಲಿಯೇ ಬೇಕರಿ ಮುಂದುವರೆಸಿದರು. ಅಷ್ಟೊಂದು ಸುಸಜ್ಜಿತ ಜಾಗದಲ್ಲಿ ಬೇಕರಿ ಇರಲಿಲ್ಲವಾದ್ದರಿಂದ ಬೇಕರಿ ತಿನಿಸುಗಳ ವಾಸನೆಗೆ ಇಲಿ- ಹೆಗ್ಗಣಗಳು ಬಿಲ ಕೊರೆಯುತ್ತಿದ್ದವು. ಮಳೆಗಾಲದಲ್ಲಿ ಈ ಬಿಲಗಳ ಮೂಲಕ ಬೇಕರಿಯಲ್ಲಿ ನೀರು ಆಗಾಗ ತುಂಬಿಕೊಳ್ಳುತ್ತಿದ್ದರಿಂದ ಎಲ್ಲವೂ ಅಸ್ತವ್ಯಸ್ತ ವಾಗುತ್ತಿತ್ತು, ಅಲ್ಲಲ್ಲಿ ಕಾಣಸಿಗುತ್ತಿದ್ದ ಇಲಿ, ಹೆಗ್ಗಣಗಳನ್ನು ಬೇಟೆಯಾಡಲು ಬೇಕರಿಯೊಳಗೆ ನಾಗರಹಾವು ಆಗಾಗ ಬಂದು ಹೋಗುತ್ತಿತ್ತು. ಇದು ಇಡೀ ಕುಟುಂಬದ ಗಾಬರಿಗೆ ಕಾರಣವೂ ಆಗಿತ್ತು. ಪದೇ ಪದೇ ಹಾವು ಬೇಕರಿಯಲ್ಲಿ ಕಾಣಿಸುತ್ತಿದ್ದರಿಂದ ಭಯಗೊಂಡು ಈ ಬೇಕರಿಯನ್ನೇ ಮುಚ್ಚಿ ಭದ್ರಾವತಿಯ ಹೊಸಮನೆ ಏರಿಯಾದಲ್ಲಿ ಸುಸಜ್ಜಿತ ಮನೆ ಬಾಡಿಗೆಗೆ ಪಡೆದು ಅಲ್ಲಿಯೇ ಬೇಕರಿ ಆರಂಭಿಸಿದರು.
ಬೇಕರಿ ಕಾಯಕದಲ್ಲಿ ಪ್ರಾಮಾಣಿಕವಾಗಿ ವ್ಯವಹಾರ ನಡೆಸುತ್ತಿದ್ದ ಸಂತೋಷ, ತರೀಕೆರೆ ರಸ್ತೆಯಲ್ಲಿ ಬ್ರಾಹ್ಮಣರ ಸಮುದಾಯದ ಐತಾಳರ ಹೋಟೆಲಿಗೂ ನೀಡುತ್ತಿದ್ದರು. ಸಂತೋಷನ ಕಾಯಕ ನಿಷ್ಠೆಯನ್ನು ಪ್ರಶಂಸಿಸುತ್ತಿದ್ದ ಐತಾಳರು ಸಂಪ್ರದಾಯಸ್ಥರಾಗಿದ್ದರೂ ಅಷ್ಟೊಂದು ಜಾತಿವಾದಿ ಆಗಿರಲಿಲ್ಲದ ಕಾರಣಕ್ಕೆ ಸಂತೋಷ ಅವರೊಂದಿಗೆ ಒಂದಷ್ಟು ಸಲಿಗೆ ಬೆಳೆಸಿಕೊಂಡಿದ್ದರು. ಹೀಗಾಗಿ ಅಕ್ಕಂದಿರ ಮದುವೆಗೆ ಸಾಲ ಪಡೆದು ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದರು. ಇದು ಐತಾಳರಿಗೆ ಸಂತೋಷನ ಮೇಲೆ ಮತ್ತಷ್ಟು ಭರವಸೆ ಮೂಡಲು ಕಾರಣವಾಯಿತು. ಹೀಗೆ ಸೈಕಲ್- ಲೂನಾದ ಮೇಲೆ ತಿನಿಸು ಮಾರಾಟ ಮಾಡುವುದರ ಬದಲಾಗಿ ಪೇಟೆಯ ಮುಖ್ಯ ರಸ್ತೆಯಲ್ಲಿ ಒಂದು ಮಳಿಗೆ ನೋಡು, ಅದಕ್ಕೆ ಬೇಕಾಗುವ ಬಂಡವಾಳವನ್ನು ನಾನು ಕೊಡುತ್ತೇನೆ ಎಂದು ಹೇಳಿ, 80ರ ದಶಕದಲ್ಲಿ ಸುಮಾರು 35 ಸಾವಿರ ಸಾಲ ನೀಡಿ ಐತಾಳರು ಅಂಗಡಿ ಹಾಕಿಸಿ ಕೊಟ್ಟರು. ಅಂದಿನಿಂದ ಸಂತೋಷ ವ್ಯವಹಾರದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಬೇಕರಿ ಉದ್ಯಮ ಚೆನ್ನಾಗಿ ಕುದುರಿದ್ದ ಕಾರಣಕ್ಕೆ ಎರಡೆರಡು ಬೇಕರಿಗಳನ್ನು ನಡೆಸುತ್ತಾ ಯಶಸ್ವಿ ಉದ್ಯಮಿಯಾಗಿದ್ದಾರೆ.
ಸಂಕಟ ಎಂದರೆ ಅವರ ತಂದೆ ಶಾಮಣ್ಣನವರು ಒಂದು ಡೈರಿಯಲ್ಲಿ ಬರೆದಿರುವ ರೆಸಿಪಿಗಳಲ್ಲಿ ಕೇವಲ 10% ಸಹ ಬಳಕೆ ಮಾಡಿಕೊಳ್ಳಲು ಇದುವರೆಗೂ ಸಂತೋಷನಿಗೆ ಸಾಧ್ಯವಾಗಿಲ್ಲ. ಜಾತಿಯ ಕಾರಣಕ್ಕೆ ಅವರ ಶ್ರಮ ನಶಿಸಿ ಹೋಯಿತಲ್ಲಾ ಎಂಬ ದುಃಖ ಸದಾ ನನ್ನನ್ನು ಕಾಡುತ್ತಿದೆ ಎಂದು ಸಂತೋಷ ಬೇಸರ ವ್ಯಕ್ತಪಡಿಸುತ್ತಾರೆ.
ಜಾತಿ ಕಾಲಂನಲ್ಲಿರುವ ಬ್ರಾಹ್ಮಣ ಹೆಸರು ತೆಗೆದುಬಿಡಿ..!
ಬದುಕು ಕಟ್ಟಿಕೊಳ್ಳಲು ಬ್ರಾಹ್ಮಣ ವೇಷಧಾರಿಯಾಗಿದ್ದ ಶಾಮಣ್ಣ ಜಾತಿಯ ವಿಷವರ್ತುಲ ಈ ಸಮಾಜದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸಮಯ ಸಂದರ್ಭಗಳು ಬಂದಾಗ ಮಕ್ಕಳಿಗೆ ತಿಳಿ ಹೇಳುತ್ತಿದ್ದರು. ಹಾಗಾಗಿ ಮಕ್ಕಳೆಲ್ಲರೂ ಬ್ರಾಹ್ಮಣ, ಬ್ರಾಹ್ಮಣಿಕೆಯನ್ನು ಧಿಕ್ಕರಿಸಿ ಅಂತರ್ಜಾತಿ ಮದುವೆಯಾದರು. ಸಂತೋಷನ ಶಾಲಾ ದಾಖಲಾತಿಯಲ್ಲಿ ಬ್ರಾಹ್ಮಣ ಎಂದಿದ್ದರೂ ಮದುವೆಯಾಗಿದ್ದು ಅಂತರ್ಜಾತಿ ಹುಡುಗಿಯನ್ನ. ಆ ದಂಪತಿಗೆ ಹುಟ್ಟಿದ ಇಬ್ಬರೂ ಗಂಡು ಮಕ್ಕಳಿಗೆ ತಂದೆಯ ಜಾತಿಯೇ ಇರಬೇಕೆಂದು ಶಾಲಾ ದಾಖಲಾತಿ ಸಂದರ್ಭದಲ್ಲಿ ಹೇಳಿದ್ದರಿಂದ ಮಕ್ಕಳ ಜಾತಿ ಕಾಲಂನಲ್ಲಿ ಬ್ರಾಹ್ಮಣರು ಎಂದು ನಮೂದಿಸಿದ್ದಾರೆ. ಹೇಗಾದರೂ ಮಾಡಿ ಜಾತಿ ಕಾಲಂನಲ್ಲಿರುವ ಬ್ರಾಹ್ಮಣ ಹೆಸರನ್ನು ತೆಗೆದುಹಾಕಿ ನಮ್ಮ ಮೂಲ ಜಾತಿಯ ಹೆಸರು ಸೇರಿಸಲು ಅವಕಾಶ ಇದ್ದರೆ ದಯಮಾಡಿ ತಿಳಿಸಿ ಎಂದು ಸ್ನೇಹಿತರಲ್ಲಿ ಸಂತೋಷ ಅರಿಕೆ ಮಾಡಿಕೊಳ್ಳುತ್ತಾರೆ. ಈ ಸಮಾಜಕ್ಕೆ ಬೇಕಾಗಿರುವುದು ಇಂತಹ ಮನಸ್ಥಿತಿಯ ಜನರೇ ಹೊರತು ಜಾತಿವಾದಿ- ಮನುವಾದಿಗಳಲ್ಲ.
ಗಂಗಾನಾಯ್ಕ್‌ಗೊಂದಿ (ಜಿಎನ್‌ಜಿ)
ಪತ್ರಕರ್ತರು
ಭಾಗ ಒಂದು ಓದಿದ್ದೀರಾ? ಬೇಕರಿಗೊಂದು ಜಾತಿ ಇದೆಯೇ?