ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದಿದ್ದ ಸೆಕ್ಯೂರಿಟಿಗಾರ್ಡ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಗಂಗಾ ಪೊಳೀಸ್ ಠಾಣೆ ಪೊಲೀಸರು ಇಬ್ಬರು ಹೆಡ್ ಕಾನ್‌ಸ್ಟೆಬಲ್ ಗಳು ಸೇರಿದಂತೆ ಐವರು ಪೊಲೀಸರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸೋಮವಾರ ತಡರಾತ್ರಿ ಪಳಯನೂರು ಮತ್ತು ಮನಮಧುರೈ ಪೊಲೀಸ್ ಠಾಣೆಗಳ ಹೆಡ್ ಕಾನ್‌ಸ್ಟೆಬಲ್ ಗಳಾದ ಕಣ್ಣನ್ ಮತ್ತು ಪ್ರಭು, ಕಾನ್‌ಸ್ಟೆಬಲ್‌ಗಳಾದ ಆನಂದ್ ಮತ್ತು ಶಂಕರ ಮಣಿಕಂದನ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಪೊಲೀಸ್ ಅಧಿಕಾರಿ ರಾಮಚಂದ್ರನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅಜಿತ್ ಕುಮಾರ್ ಲಾಕಪ್ ಡೆತ್ ಪ್ರಕರಣ ತಮಿಳುನಾಡಿನಲ್ಲಿ ಸಾಕಷ್ಟು ಸದ್ದು ಮಾಡಿತ್ತು.
2021ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ 24 ಲಾಕಪ್ ಡೆತ್ ಪ್ರಕರಣಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಅಜಿತ್ ಕುಮಾರ್ ಅವರು ಶಿವಗಂಗಾ ಜಿಲ್ಲೆಯ ತಿರುಪುವಣಂನಲ್ಲಿರುವ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ಬಾರಿ ಅಜಿತ್ ಕಾರಿನಲ್ಲಿ ತೆರಳುತ್ತಿದ್ದಾಗ ಇಬ್ಬರು ಮಹಿಳೆಯರು ಡ್ರಾಪ್ ಕೇಳಿದ್ದಾರೆ. ಅಜಿತ್, ಮಹಿಳೆಯರಿಗೆ ಸಹಾಯ ಮಾಡಿದ್ದರು. ನಂತರ ಆ ಮಹಿಳೆಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಮ್ಮ 10 ಪೌಂಡ್ ಚಿನ್ನ ಕಾಣೆಯಾಗಿದೆ ಎಂದು ತಾಯಿ ಮಗಳು ದೂರು ನೀಡಿದ್ದರು.
ಆಗ ಪೊಲೀಸರು ಅಜಿತ್ ಕುಮಾರ್, ಆತನ ಸಹೋದರ ನವೀನ್ ಕುಮಾರ್ ಮತ್ತು ಇತರ ಮೂವರನ್ನು ಜೂನ್ 27ರಂದು ಬಂಧಿಸಿ, ಬಿಡುಗಡೆ ಮಾಡಿದ್ದರು. ಆದರೆ, ಅಜಿತ್ ಕುಮಾರ್ ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಪೊಲೀಸರು ಚಿತ್ರಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.