ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ನಗರದ ಔಷಧ ಕಾರ್ಖಾನೆಯಲ್ಲಿ ನಿನ್ನೆ ಸಂಭವಿಸಿದ್ದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್ ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಯ ನಂತರವಷ್ಟೇ ಕಾರಣ ತಿಳಿದು ಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕಾರ್ಖಾನೆಯ ಡ್ರೈಯಿಂಗ್ ಘಟಕದಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟ ಸಂಭವಿಸಿರಬಹುದು ಎಂದು ಎಂದು ತೆಲಂಗಾಣ ರಾಜ್ಯ ವಿಕೋಪ ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ನಿರ್ದೇಶಕ ವೈ.ನಾಗಿ ರೆಡ್ಡಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಸೋಮವಾರ ಬೆಳಿಗ್ಗೆ 9.30ರ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ 150 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಸುಮಾರು 90 ಮಂದಿ ಸ್ಫೋಟ ಸಂಭವಿಸಿದ ಸ್ಥಳದ ಹತ್ತಿರದಲ್ಲೇ ಇದ್ದರು. ಮೃತಪಟ್ಟವರಲ್ಲಿ ಕೆಲವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿ ಎನ್ ಎ ಪರೀಕ್ಷೆ ನಡೆಸಲಾಗುವುದು ಎಂದು ಐಜಿಪಿ ವಿ.ಸತ್ಯನಾರಾಯಣ ಹೇಳಿದ್ದಾರೆ.
ಅಗ್ನಿಶಾಮಕ ದಳದ 10 ವಾಹನಗಳನ್ನು ಬಳಸಿ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಸ್ಫೋಟದಿಂದ ಬೆಂಕಿ ಹಾಗೂ ದಟ್ಟ ಹೊಗೆ ಎದ್ದಿದ್ದು, ಸ್ಫೋಟದ ಸದ್ದು 5 ಕಿ.ಮೀ. ದೂರದವರೆಗೂ ಕೇಳಿಸಿದೆ. ಕಾರ್ಖಾನೆಯ ಒಂದು ಭಾಗ ಕುಸಿದುಬಿದ್ದಿದೆ. ಸ್ಥಳೀಯ ಪೊಲೀಸರು, ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50 ಸಾವಿರ ನಗದು ಪರಿಹಾರ ಘೋಷಿಸಲಾಗಿದೆ.