ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ: ಬಿಜೆಪಿ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ

Most read

ತಿರುವನಂತಪುರ: ಸಂಘ ಪರಿವಾರದ ಸರ್ಕಾರ ಅರ್ಥಾತ್‌ ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರವು ಸಂವಿಧಾನವನ್ನು ಹೊಸಕಿಹಾಕಲು ಪ್ರಯತ್ನಿಸುತ್ತಿರುವುದರಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಾಗ್ದಾಳಿ ನಡೆಸಿದ್ದಾರೆ.

ಸಿಪಿಐ(ಎಂ) ಮುಖವಾಣಿ ‘ದೇಶಾಭಿಮಾನಿ’ಯಲ್ಲಿ ಪ್ರಕಟವಾದ ತುರ್ತು ಪರಿಸ್ಥಿತಿಯ ಕುರಿತು ಬರೆದಿರುವ ಲೇಖನದಲ್ಲಿ ಅವರು ದೇಶವು ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದಿರಾ ಗಾಂಧಿ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರೆ, ಇಂದು ಸಂಘ ಪರಿವಾರದ ಸರ್ಕಾರ ಸಂವಿಧಾನವನ್ನೇ ತೆಗೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಕೇವಲ ಇತಿಹಾಸದ ಪಾಠವಲ್ಲ, ಬದಲಾಗಿ ಕರಾಳ ನೆನಪಾಗಿ ಉಳಿದಿದೆ. ತುರ್ತು ಪರಿಸ್ಥಿತಿ ಅವಧಿಯ ನೆನಪುಗಳನ್ನು ಭವಿಷ್ಯದ ಹೋರಾಟಗಳಿಗೆ ಸ್ಫೂರ್ತಿಯ ಮೂಲವಾಗಿ ತೆಗೆದುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಈ ಸಂದೇಶ ರವಾನಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿಜಯನ್ ಅವರನ್ನು ಕೇರಳದಲ್ಲಿ ಭೂಗತ ರಾಜಕೀಯ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ 18 ತಿಂಗಳು ಜೈಲಿನಲ್ಲಿರಿಸಲಾಗಿತ್ತು.

1975ರಲ್ಲಿ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿತ್ತು. ಈ ಕರಾಳ ಅಧ್ಯಾಯ ಅರ್ಧ ಶತಮಾನವನ್ನು ಪೂರೈಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

More articles

Latest article